ಸನ್ಮಾರ್ಗ ವಾರ್ತೆ
ಹಿಂದೂ ಧರ್ಮವು ಸುಪ್ರೀಂ ಅಥವಾ ಸರ್ವೋಚ್ಚವಾಗಿದ್ದು ಭಾರತೀಯ ಮುಸ್ಲಿಮರು ಸೂರ್ಯನನ್ನು ಮತ್ತು ಇಲ್ಲಿಯ ನದಿಗಳನ್ನು ಪೂಜಿಸಬೇಕು ಎಂದು ಆರ್ಎಸ್ಎಸ್ ನಾಯಕ ದತ್ತಾತ್ರೇಯ ಹೊಸ ಬಾಳೆ ಕರೆ ಕೊಟ್ಟಿದ್ದಾರೆ. ಉತ್ತರಪ್ರದೇಶದ ಸಂತ್ ಕಬೀರ್ ನಗರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಈ ಕರೆ ನೀಡಿದ್ದಾರೆ.
ಹೀಗೆ ಪೂಜಿಸುವುದರಲ್ಲಿ ಯಾವ ತಪ್ಪು ಇಲ್ಲ. ನನ್ನ ಮುಸ್ಲಿಂ ಸಹೋದರರು ಸೂರ್ಯ ನಮಸ್ಕಾರ ಮಾಡಿದರೆ ಅದರಲ್ಲಿ ಅವರಿಗೆ ತೊಂದರೆ ಏನಿದೆ? ಹಾಗೆ ಮಾಡುವುದೆಂದರೆ ಅವರನ್ನು ಮಸೀದಿಗೆ ಹೋಗದಂತೆ ತಡೆಯುವುದು ಎಂದು ಅರ್ಥವಲ್ಲ. ನಮ್ಮ ಹಿಂದೂ ಧರ್ಮ ಸುಪ್ರೀಂ ಆಗಿದೆ. ಅದು ಎಲ್ಲರ ಬಗ್ಗೆಯೂ ಮಾತಾಡುತ್ತದೆ ಎಂದು ಅವರು ಹೇಳಿದ್ದಾರೆ.
ಸೂರ್ಯ ನಮಸ್ಕಾರ ಎಂಬುದು ಯೋಗದ ಒಂದು ಭಾಗವಾಗಿದೆ. ಇದು ವೈಜ್ಞಾನಿಕವಾದ ಮತ್ತು ಆರೋಗ್ಯ ಪರವೂ ಆದ ಅಭ್ಯಾಸವಾಗಿದೆ. ಇದನ್ನು ಮಾಡುವುದರಿಂದ ಮುಸ್ಲಿಮರಿಗೆ ತೊಂದರೆ ಏನಿದೆ? ನೀವು ಪ್ರಾಣಾಯಾಮ ಮಾಡಿ ಎಂದು ಹೇಳುವುದು ಅಪರಾಧವ? ನೀವು ಸೂರ್ಯ ನಮಸ್ಕಾರ ಮಾಡುವುದಾದರೆ ನಮಾಜ್ ಮಾಡಬಾರದು ಎಂದು ನಾವು ಹೇಳುತ್ತಿಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಹೊಸ ಬಾಳೆಯವರ ಹೇಳಿಕೆಯನ್ನು ರಾಹುಲ್ ಗಾಂಧಿ ಖಂಡಿಸಿದ್ದಾರೆ. ಆರ್ ಎಸ್ ಎಸ್ ನ ಮುಖ ಮತ್ತೊಮ್ಮೆ ಬಹಿರಂಗಕ್ಕೆ ಬಂದಿದೆ. ಅದಕ್ಕೆ ಸಂವಿಧಾನ ಪ್ರತಿಪಾದಿಸುವ ಸಮಾನತೆ ಜಾತ್ಯತೀತತೆ ಮತ್ತು ಸಮಾನ ನ್ಯಾಯ ಕಿರಿಕಿರಿಯನ್ನು ಉಂಟು ಮಾಡುತ್ತಿದೆ. ಆರ್ ಎಸ್ ಎಸ್ ಮತ್ತು ಬಿಜೆಪಿ ಮನುಸ್ಮೃತಿಯನ್ನು ಬಯಸುತ್ತಿದೆ ಎಂದವರು ಹೇಳಿದ್ದಾರೆ.












