ಒಂದು ವೇಳೆ ಅಹ್ಮದ್ ಆ ಧೈರ್ಯ ತೋರ್ಪಡಿಸದೇ ಇರುತ್ತಿದ್ದರೇ…

0
375

✍️ ಏಕೆಕೆ

ಒಂದುವೇಳೆ ಅಹ್ಮದ್ ಅಲ್ ಅಹ್ಮದ್ ಎಂಬ 43 ವರ್ಷದ ವ್ಯಕ್ತಿ ಆ ಸಾಹಸವನ್ನು ಮಾಡದೆ ಇರುತ್ತಿದ್ದರೆ ಆಸ್ಟ್ರೇಲಿಯಾದಲ್ಲಿ ನಡೆದ ಭಯೋತ್ಪಾದನಾ ಕೃತ್ಯವನ್ನು ಭಾರತೀಯ ಮೀಡಿಯಾಗಳು ಹೇಗೆಲ್ಲ ವ್ಯಾಖ್ಯಾನಿಸ್ತಾ ಇದ್ದುವು? ಭಾರತೀಯ ಮುಸ್ಲಿಮರಿಗೆ ಅದರ ಹೊಣೆಗಾರಿಕೆಯನ್ನು ಹೇಗೆಲ್ಲಾ ದಾಟಿಸ್ತಾ ಇದ್ದುವು? ಕುರ್‌ಆನಿನ ಯಾವೆಲ್ಲ ವಚನಗಳು ಭಯೋತ್ಪಾದನೆಗೆ ಪ್ರೇರಣೆ ಎಂದು ಎಷ್ಟೆಲ್ಲ ನಾಯಕರು ಮೀಡಿಯಾದ ಮುಂದೆ ಹೇಳಿಕೆ ನೀಡುತ್ತಿದ್ದರು? ಇಷ್ಟೆಲ್ಲಾ ಆಗಿಯೂ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳುಗಳ ಪ್ರಚಾರ ಕಡಿಮೆಯಾಗಿಲ್ಲ. ಭಯೋತ್ಪಾದಕನನ್ನು ಹೆಡೆಮುರಿ ಕಟ್ಟಿದವ ಯಹೂದಿ ಯುವಕ ಎಂದು ಕೆಲವರು ಪೋಸ್ಟ್ ಮಾಡಿದ್ದಾರೆ. ಅವರು ಉದ್ದಕ್ಕೂ ಆಳುವ ಕೇಂದ್ರ ಸರಕಾರದ ಬೆಂಬಲಿಗರು ಅನ್ನುವುದಕ್ಕೆ ಅವರ ಈ ಹಿಂದಿನ ಪೋಸ್ಟುಗಳೇ ಸಾಕ್ಷಿ.

ಈ ದಾಳಿಯ ಬೆನ್ನಿಗೆ ಕೆಲವು ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ. ಆಸ್ಟ್ರೇಲಿಯಾದಲ್ಲಿ ಭಯೋತ್ಪಾದನಾ ದಾಳಿ ಯಾಕಾಯಿತು? ಅಲ್ಲಿ ಮೋದಿ ಇದ್ದಾರಾ? ಬಿಜೆಪಿ ಇದೆಯಾ? ಚುನಾವಣೆ ಇದೆಯಾ? ಇದು ಪ್ರಶ್ನೆಯ ಒಂದು ಮುಖವಾದರೆ ಇನ್ನೊಂದು ಬಗೆಯ ಸಮರ್ಥನೆಯೂ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸುತ್ತಿದೆ. ಗಾಝಾದ ಮೇಲೆ ಇಸ್ರೇಲ್ ನಡೆಸಿರುವ ದೌರ್ಜನ್ಯಕ್ಕೆ ಪ್ರತಿಯಾಗಿ ಈ ಕೃತ್ಯವನ್ನು ಎಸಗಲಾಗಿದೆ ಎಂಬುದೇ ಈ ಸಮರ್ಥನೆ. ಸುಮಾರು 20 ಸಾವಿರ ಮಕ್ಕಳನ್ನು ಕೊಂದಿರುವ ಇಸ್ರೇಲ್‌ನ ಮೇಲಿನ ಆಕ್ರೋಶದ ಭಾಗವಾಗಿ ಇದನ್ನು ಸಮರ್ಥಿಸುವುದೂ ನಡೆಯುತ್ತಿದೆ.

ಆಸ್ಟ್ರೇಲಿಯಾದ ಭಯೋತ್ಪಾದನಾ ಕೃತ್ಯದ ವಿಡಿಯೋವನ್ನು ನೀವು ವೀಕ್ಷಿಸಿದ್ದಿದ್ದರೆ ನಿಮ್ಮಲ್ಲೂ ಒಂದು ಪ್ರಶ್ನೆ ಎದುರಾಗಬಹುದು. ಅಹ್ಮದ್ ಎಂಬ ವ್ಯಕ್ತಿ ಆ ಭಯೋತ್ಪಾದಕನನ್ನು ತಡೆದದ್ದು ಏಕೆ? ಆತನಿಂದ ಬಂದೂಕನ್ನು ಕಸಿದದ್ದು ಏಕೆ? ಆತ ಕೊಲ್ಲುತ್ತಿದ್ದು ಯಹೂದ್ಯರನ್ನು. ಗಾಝಾದಲ್ಲಿ ಎಪ್ಪತ್ತು ಸಾವಿರಕ್ಕಿಂತಲೂ ಅಧಿಕ ಮುಸ್ಲಿಮರನ್ನು ಕೊಂದದ್ದು ಯಹೂದಿ ದೇಶವಾದ ಈಸ್ರೇಲ್. ಹೀಗಿರುವಾಗ ಈತ ತಡೆಯಲು ಹೋದದ್ದು ಏಕೆ? ಒಂದು ವೇಳೆ ಗುರುತು ಸಿಗದೇ ಭಯೋತ್ಪಾದಕ ತನ್ನನ್ನು ಹತ್ಯೆ ಮಾಡಬಹುದು ಎಂಬ ಭಯ ಆತನಿಗೆ ಇದ್ದಿದ್ದೇ ಆಗಿದ್ದರೆ ಅವರು ಎದ್ದು ನಿಂತು ತನ್ನ ಹೆಸರನ್ನು ಹೇಳಬಹುದಿತ್ತು. ಅಲ್ಲಾಹು ಅಕ್ಬರ್ ಎಂದು ಹೇಳುತ್ತಿದ್ದರೂ ಭಯೋತ್ಪಾದಕ ಇವರ ಗುರುತು ಪತ್ತೆ ಹಚ್ಚುತ್ತಿದ್ದ. ಆದರೆ ಈ ಎರಡೂ ಅವಕಾಶವನ್ನು ಕೈ ಬಿಟ್ಟು ಅಪಾಯಕಾರಿ ಸಾಹಸಕ್ಕೆ ಈ ಅಹ್ಮದ್ ಇಳಿದರೇಕೆ? ಯಹೂದಿಯರನ್ನು ರಕ್ಷಿಸುವುದಕ್ಕಾಗಿ ಅವರು ಪ್ರಾಣದ ಹಂಗನ್ನೂ ತೊರೆದು ಹೋರಾಡಿದರೇಕೆ?

ಈ ಪ್ರಶ್ನೆಯನ್ನು ಸ್ವಯಂ ಕೇಳಿಕೊಂಡರೆ ಧರ್ಮಕ್ಕೂ ಭಯೋತ್ಪಾದನೆಗೂ ಸಂಬಂಧ ಇದೆ ಎಂದು ಹೇಳುವವರೆಗೆ ಚಾಟಿ ಏಟಿನಂತಹ ಉತ್ತರ ಸಿಗುತ್ತದೆ. ಧರ್ಮ ಆ ಭಯೋತ್ಪಾದಕನ ಜೊತೆ ಇರಲಿಲ್ಲ. ಆದರೆ ಈ ಅಹ್ಮದ್‌ರ ಜೊತೆ ಇತ್ತು. ಆದ್ದರಿಂದಲೇ ಅವರು ತನ್ನ ಜೀವವನ್ನು ಪಣಕ್ಕಿಟ್ಟು ಭಯೋತ್ಪಾದಕನ ವಿರುದ್ಧ ಹೋರಾಡಿದರು. ಆ ಕಾರಣದಿಂದ ತನ್ನ ಕೈಗೆ ಮತ್ತು ತೋಳಿಗೆ ಎರಡು ಗುಂಡುಗಳನ್ನು ಹೊಡೆಸಿಕೊಂಡರು. ಈ ಮೂಲಕ ಭಯೋತ್ಪಾದನೆಗೆ ಧರ್ಮದ ಜೊತೆಗೆ ಸಂಬಂಧ ಇಲ್ಲ ಎಂಬುದನ್ನು ಈ ಅಹ್ಮದ್ ಸಾಬೀತುಪಡಿಸಿದರು.

ನಿಜವಾಗಿ ಗಾಂಧಿಗೆ ಗೋಡ್ಸೆ ಗುಂಡಿಕ್ಕುವಾಗ ಬಿಜೆಪಿ ಇರಲಿಲ್ಲ. ನರೇಂದ್ರ ಮೋದಿಯವರು ಪ್ರಧಾನಿಯೂ ಆಗಿರಲಿಲ್ಲ. ಭಯೋತ್ಪಾದನೆಗೆ ನಿರ್ದಿಷ್ಟ ಪಕ್ಷ, ನಿರ್ದಿಷ್ಟ ವ್ಯಕ್ತಿ ವೈರಿಯಲ್ಲ. ಅದು ಮಾನವ ಕುಲದ ವೈರಿ. ಪೆಹಲ್‌ಗಾಮ್‌ನಲ್ಲಿ ನಿಷ್ಪಾಪಿ ಪ್ರವಾಸಿಗರನ್ನು ಹತ್ಯೆ ಮಾಡಿದ ಭಯೋತ್ಪಾದಕರೇ ತಾವು ಮಾನವಕುಲದ ವೈರಿಗಳು ಎಂಬುದನ್ನು ಸಾಬೀತುಪಡಿಸಿದ್ದಾರೆ. ಆಗ ಈ ದೇಶದ ಮುಸ್ಲಿಂ ಸಮುದಾಯ ಒಕ್ಕೊರಳಿನಿಂದ ಆ ಕ್ರೌರ್ಯವನ್ನು ಖಂಡಿಸಿತ್ತು. ಪಾಕಿಸ್ತಾನದ ವಿರುದ್ಧ ಯುದ್ಧ ಸಾರಿದ ಮೋದಿ ಸರಕಾರವನ್ನು ಬೆಂಬಲಿಸಿತ್ತು. ಜಗತ್ತಿನ ವಿವಿಧ ರಾಷ್ಟ್ರಗಳಿಗೆ ಪಾಕಿಸ್ತಾನದ ಭಯೋತ್ಪಾದನೆಯನ್ನು ತಿಳಿಸುವುದಕ್ಕಾಗಿ ಕೇಂದ್ರ ಸರಕಾರ ಕಳುಹಿಸಿದ ಸಂಸದರ ನಿಯೋಗಗಳ ಪೈಕಿ ಒಂದು ನಿಯೋಗವಾದ ಅಧ್ಯಕ್ಷತೆಯನ್ನು ಸ್ವತಃ ಅಸದುದ್ದೀನ್ ಓವೈಸಿ ಅವರೇ ವಹಿಸಿಕೊಂಡಿದ್ದರು. ಆದರೆ ಇಷ್ಟೆಲ್ಲ ಆಗಿಯೂ ಭಯೋತ್ಪಾದಕರಲ್ಲಿ ಧರ್ಮವನ್ನು ಹುಡುಕುವ ಪ್ರಯತ್ನಗಳು ನಡೆಯುತ್ತಲೇ ಇವೆ.

ಇಲ್ಲೊಂದು ತಮಾಷೆಯೂ ಇದೆ. ಗಾಝಾದ ಬಗ್ಗೆ ಭಾರತೀಯ ಮುಸ್ಲಿಂ ಸಮುದಾಯ ಪ್ರತಿಭಟಿಸಿದಾಗ ಮತ್ತು ಅಲ್ಲಿಯ ಕ್ರೌರ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಿದಾಗ ಇದೇ ಆಳುವ ವರ್ಗದ ಬೆಂಬಲಿಗರು ಅದನ್ನು ಪ್ರಶ್ನಿಸುತ್ತಿದ್ದರು. ಭಾರತವನ್ನು ಬಿಟ್ಟು ದೂರದ ಗಾಝಾದ ಬಗ್ಗೆ ನಿಮಗೇಕೆ ಇಷ್ಟು ಚಿಂತೆ ಎಂದು ಕೇಳ್ತಾ ಇದ್ರು. ನಿಮ್ಮ ನಿಷ್ಠೆ ಭಾರತಕ್ಕಿಲ್ಲ ಎಂದು ತಗಾದೆ ತೆಗೀತಾ ಇದ್ರು. ಆದರೆ ಇದೀಗ ಅದೇ ಮಂದಿ ಆಸ್ಟ್ರೇಲಿಯಾದಲ್ಲಿ ನಡೆದ ಭಯೋತ್ಪಾದನಾ ಕೃತೃದ ಬಗ್ಗೆ ಪುಂಖಾನು ಪುಂಖ ಮಾತಾಡುತ್ತಾ ಇದ್ದಾರೆ. ಖಂಡನೆ ವ್ಯಕ್ತಪಡಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬರಹದ ಮೇಲೆ ಬರಹ ಬರೆಯುತ್ತಾ ಇದ್ದಾರೆ. ವಿಡಿಯೋಗಳನ್ನು ಮಾಡ್ತಾ ಇದ್ದಾರೆ.

ಟಿವಿ ಚಾನೆಲ್‌ಗಳಲ್ಲೂ ಚರ್ಚೆಗಳ ಮೇಲೆ ಚರ್ಚೆ ನಡೀತಾ ಇದೆ. ಅಂದ್ರೆ. ಗಾಝಾದ ಮೇಲೇ ನಡೆಯುತ್ತಾ ಇರುವ ಕ್ರೌರ್ಯವನ್ನು ಪ್ರಶ್ನಿಸಿದರೆ ಅದರಿಂದಾಗಿ ಇಸ್ರೇಲ್ ಕಟ-ಕಟೆಯಲ್ಲಿ ನಿಲ್ಲುತ್ತದೆ. ಅದರ ಬಾಂಬುಗಳು ಚರ್ಚೆಯಾಗುತ್ತದೆ. ಅದು ಪ್ರತಿದಿನ ನಡೆಸುತ್ತಿರುವ ಹತ್ಯಾಕಾಂಡ ಮುನ್ನೆಲೆಗೆ ಬರುತ್ತದೆ. ಹಾಗೆ ಆಗದಂತೆ ತಡೆಯುವುದೇ ಇವರ ಉದ್ದೇಶವಾಗಿತ್ತು. ಆದರೆ ಇದೀಗ ಆಸ್ಟ್ರೇಲಿಯಾದಲ್ಲಿ ನಡೆದ ಭಯೋತ್ಪಾದನಾ ಕೃತ್ಯಕ್ಕೆ ಸಾಜಿದ್ ಮತ್ತು ನವೀದ್ ಎಬ್ಬಿಬ್ಬರು ಕಾರಣ ಅನ್ನುವುದು ಬಹಿರಂಗವಾಗಿದೆ. ಆದ್ದರಿಂದ ಅವರ ಬಗ್ಗೆ ಬರೆದಷ್ಟೂ ಸಾಕಾಗುವುದಿಲ್ಲ. ಗಾಝಾದ ಬಗ್ಗೆ ಯಾಕೆ ಬರೀತಾ ಇದ್ದೀರಿ ಎಂದು ಪ್ರಶ್ನಿಸಿದವರೇ ಇದೀಗ ಆಸ್ಟ್ರೇಲಿಯಾದ ಬಗ್ಗೆ ಬರೀತಾ ಇದ್ದಾರೆ. ಯಾಕೆಂದರೆ ಇವರ ಬಗ್ಗೆ ಬರೆಯುವುದರಿಂದ ಮುಸ್ಲಿಂ ಸಮುದಾಯವನ್ನು ಕಟ ಕಟೆಯಲ್ಲಿ ನಿಲ್ಲಿಸಬಹುದಲ್ಲ.

ಭಯೋತ್ಪಾದನೆಯನ್ನು ಯಾವ ಕಾರಣಕ್ಕೂ ಸಮರ್ಥಿಸಲೇಬಾರದು. ಅದು ಯಹೂದ್ಯರ ಮೇಲಾದರೂ ಹಿಂದುಗಳ ಮೇಲಾದರೂ ಮುಸ್ಲಿಮರ ಮೇಲಾದರೂ ಭಯೋತ್ಪಾದನೆ ಭಯೋತ್ಪಾದನೆಯೇ. ಓರ್ವ ವ್ಯಕ್ತಿಯನ್ನು ಅನ್ಯಾಯವಾಗಿ ಕೊಂದರೆ ಇಡೀ ಮಾನವಕುಲವನ್ನೇ ಕೊಂದ ಪಾಪವಿದೆ ಎಂದು ಕುರ್‌ಆನ್ ಹೇಳುತ್ತದೆ. ಇಷ್ಟೊಂದು ಸ್ಪಷ್ಟ ವಚನ ಇದ್ದೂ ಯಾರಾದರೂ ಭಯೋತ್ಪಾದನೆಗೆ ಇಳಿಯುತ್ತಾರೆಂದರೆ ಅವರ ಕೃತ್ಯಕ್ಕೂ ಧರ್ಮಕ್ಕೂ ಯಾವ ಸಂಬಂಧವೂ ಇಲ್ಲ. ಆದ್ದರಿಂದಲೇ 43 ವರ್ಷದ ಅಹ್ಮದ್ ಹೀರೋ ಆಗಿದ್ದಾರೆ. ಯಹೂದಿಯರನ್ನು ಹತ್ಯೆ ಮಾಡಿದ ಸಾಜಿದ್ ಮತ್ತು ನವೀದ್ ವಿಲನ್ ಆಗಿದ್ದಾರೆ. ನಾವು ಹೀರೋನ ಬಗ್ಗೆ ಹೆಚ್ಚು ಮಾತಾಡೋಣ. ಅವರ ಸಾಹಸವನ್ನು ಶ್ಲಾಘಿಸೋಣ. ಆ ಮುಖಾಂತರ ಸಮಾಜಕ್ಕೆ ಪಾಸಿಟಿವ್ ಸಂದೇಶ ರವಾನಿಸೋಣ.