ನಿತೀಶ್‌ಗೆ ದಿಟ್ಟ ಉತ್ತರ ನೀಡಿದ ನುಸ್ರತ್ ಪರ್ವಿನ್

0
535

✍️ ಅರಫಾ ಮಂಚಿ

ಸರಕಾರಿ ಕಾರ್ಯಕ್ರಮವೊಂದರಲ್ಲಿ ನಕಾಬ್ ಎಳೆಯಲು ಪ್ರಯತ್ನಿಸಿದ್ದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಂತಾರಾಷ್ಟ್ರೀಯವಾಗಿಯೂ ಇಂದು ನಾಚಿಕೆಗೆಟ್ಟು ನಿಂತಿದ್ದಾರೆ. ಮಧ್ಯಪೂರ್ವದ ಜನಪ್ರಿಯ ಚ್ಯಾನೆಲ್ ಅಲ್ ಜಝೀರದಲ್ಲಿ ನಿತೀಶ್ ಕುಮಾರ್‌ರ ಈ ಘಟನೆ ವರದಿಯಾಗಿದೆ. ಸೌದಿ ಅರೆಬಿಯದ ಚ್ಯಾನೆಲ್ ಅಲ್ ಅರೇಬಿಯದಲ್ಲಿಯೂ ವರದಿಯಾಗಿದೆ. ಅದು ಈ ವರ್ತನೆಗೆ ರಾಜಕೀಯ ನಾಯಕರು ಮತ್ತು ಸಾರ್ವಜನಿಕರಿಂದ ತೀವ್ರ ಟೀಕೆಗೆ ಗುರಿಯಾಗಿದ್ದು ಅನುಚಿತ ಮತ್ತು ಅವಮಾನಕರ ಎಂದು ಬಣ್ಣಿಸಿದ್ದಾರೆ ಎಂದಿದೆ. ನೋಡಿ, ಪ್ರಧಾನಿ ಮೋದಿಯವರು ಜೋರ್ಡಾನ್, ಯಮನ್ ನಂತಹ ಗಲ್ಫ್ ದೇಶಗಳಿಗೆ ಭೇಟಿ ನೀಡುತ್ತಿರುವ ಹೊತ್ತಿಗೆ ನಿತೀಶ್ ಅಲ್ಲೆಲ್ಲ ಮುಸ್ಲಿಂ ವೈದ್ಯೆಯ ಹಿಜಾಬ್ ಎಳೆದದ್ದಕ್ಕಾಗಿ ನೆಗೆಟಿವ್ ಆಗಿ ಚರ್ಚೆ ಆಗುತ್ತಿದ್ದಾರೆ.

ಇವೆಲ್ಲ ಇರಲಿ. ನಿತೀಶ್ ಹಾಗೇಕೆ ಮಾಡಿದರು? ಬಿಜೆಪಿ ನಂಟು ಹೀಗೂ ಮಾಡಿಸುತ್ತಾ? ಹೌದು, ಕಟ್ಟಾ ಸಮಾಜವಾದಿಯಾಗಿದ್ದ ನಿತೀಶ್ ಈಗ ದೇಶ ವಿದೇಶದಲ್ಲಿಯೂ ಜನಾಂಗೀಯವಾದಿ ಕೋಮುಕ್ರಿಮಿಯಾಗಿ ಗುರುತಿಸುತ್ತಿದ್ದಾರೆ.

ನಿತೀಶ್‌ರ ವೋಟು ಬ್ಯಾಂಕಿನಲ್ಲಿ ಮುಸ್ಲಿಮರು ಗಣನೀಯವಾಗಿದ್ದಾರೆ. ನಿತೀಶ್ ಇರುವುದರಿಂದ ಬಿಹಾರದಲ್ಲಿ ಎನ್‌ಡಿಎಗೆ ಮುಸ್ಲಿಮರು ವೋಟು ಕೊಡುವುದು ಎಂಬ ಮಾತಿದೆ. ಈವರೆಗೂ ಬಿಹಾರ ರಾಜಕೀಯದಲ್ಲಿ ಮಹಿಳೆಯರ ಪರ ರಾಜಕಾರಣ ಮಾಡುತ್ತಾರೆ ಎಂಬ ಹೆಗ್ಗಳಿಕೆ ಕೂಡ ಅವರಿಗಿತ್ತು. ಈಗ ದೇಶ ವಿದೇಶಗಳಲ್ಲಿಯೂ ಈ ಹೆಗ್ಗಳಿಕೆ ಹೀಗಳಿಕೆಯಾಯಿತು. ಅಲ್ಲ, ಈ ನಿತೀಶ್ ಮಹಿಳೆಯರಿಗಾಗಿ ಪಾನ ನಿರೋಧ ತಂದರು. ಸ್ಥಳೀಯಾಡಳಿತದಲ್ಲಿ ಮಹಿಳಾ ಮೀಸಲಾತಿ ತಂದರು. ಸಾಲದ್ದಕ್ಕೆ ಮಹಿಳೆಯರಿಗೆ ತಲಾ ಹತ್ತು ಸಾವಿರ ರೂಪಾಯಿ ಕೊಟ್ಟರು. ಆದರೆ…

ಸರಿಯಾದ ವ್ಯಾಖ್ಯಾನ ನೀಡಿದ ಆರ್‌ಜೆಡಿ.

ಮುಸ್ಲಿಮ್ ಮಹಿಳಾ ವೈದ್ಯೆಯ ನಕಾಬನ್ನೂ ಎಳೆದಿದ್ದನ್ನು ಮೊದಲು ಸಾರ್ವಜನಿಕರ ಗಮನಕ್ಕೆ ತಂದ ಆರ್‌ಜೆಡಿ, ನಿತೀಶ್ ಮಾನಸಿಕ ಸಂತುಲನೆ ಕಳಕೊಂಡಿದ್ದಾರೆ ಅಥವಾ ಬಿಜೆಪಿಯೊಂದಿಗೆ ಸೇರಿ ಪೂರ್ಣ ಸಂಘಿ ಆಗಿದ್ದಾರೆ ಎಂದಿದೆ. ಈ ಘಟನೆಯ ವೀಡಿಯೊದೊಂದಿಗೆ ಆರ್‌ಜೆಡಿ ಮೊತ್ತ ಮೊದಲು ಪೋಸ್ಟ್ ಹಾಕಿತು. ಸಂಘಿಗಳನ್ನು ಮೆಚ್ಚಿಸಲು ನಿತೀಶ್ ಏನೂ ಮಾಡಬಲ್ಲರು ಎಂಬುದನ್ನು ಸಾರ್ವಜನಿಕವಾಗಿ ಅದು ತೆರೆದಿಟ್ಟಿತು.

ಆದರೆ, ಬಿಜೆಪಿ ಮತ್ತು ಸಂಘಪರಿವಾರನ್ನು ಮೆಚ್ಚಿಸುವುದಕ್ಕಾಗಿ ಮುಸ್ಲಿಮ್ ಮಹಿಳೆಯರ ಹಿಜಾಬ್ ಎಳೆಯುವ ವರೆಗೂ ನಿತೀಶ್ ಮುಂದಾಗುತ್ತಾರೆಂದು ಯಾರೂ ಊಹಿಸಿರಲಿಕ್ಕಿಲ್ಲ. ಪ್ರಸ್ತುತ ಘಟನೆಯಿಂದಲೇ ನಿತೀಶ್‌ರಂತಹ ವಯೋವೃದ್ಧ ರಾಜಕಾರಣಿಗೆೆ ಬಿಜೆಪಿ ಸಹವಾಸ ಇಂತಹ ಸ್ಥಿತಿಯನ್ನು ತಂದಿಟ್ಟಿದೆ ಅಥವಾ ಅನಿವಾರ್ಯತೆ ಸೃಷ್ಟಿದೆ ಎಂಬುದು ಕೂಡಾ ಸಾಬೀತಾಗಿದೆ.

ಆರ್‌ಜೆಡಿ ಹೇಳಬೇಕೆಂದಿಲ್ಲ, ಸಂಘಪರಿವಾರಕ್ಕೆ ಮುಸ್ಲಿಮರು, ಮುಸ್ಲಿಮ್ ಮಹಿಳೆಯರ ಹಿಜಾಬ್ ಎಂದರೆ ಆಗುವುದಿಲ್ಲ. ಎರಡೂವರೆ ವರ್ಷದ ಹಿಂದೆ ಕರ್ನಾಟಕದ ಉಡುಪಿಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ ಕಿತ್ತು ಹಾಕುವ ಪ್ರಯತ್ನ ನಡೆಯಿತು. ಹಿಜಾಬ್ ಅನ್ನು ದೇಶವಿಡೀ ಇಶ್ಯೂ ಮಾಡಲು ಹೋಗಿ ಅವರೇ ವ್ಯಾಪಕ ಛೀಮಾರಿಗೊಳಗಾಗಿದ್ದಾರೆ. ನಿತೀಶ್ ಇಂತಹದ್ದೇ ಕೃತ್ಯಕ್ಕಿಳಿದು ಈಗ ಲಜ್ಜೆಗೆಟ್ಟರು.

ನೋಡಿ ಶಂಕರಾಚಾರ್ಯ ಅವದೇಶಾನಂದ ಸರಸ್ವತಿಯವರು ಈ ಘಟನೆಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದು ಹೀಗೆ, ಮೊದಲು ನಿತೀಶ್ ಒಳ್ಳೆಯವರಿದ್ದರು. ಈಗ ಅವರು ಮಾನಸಿಕ ಸಮತೋಲನ ಕೆಳಕೊಂಡವರಂತೆ ವರ್ತಿಸುತ್ತಿದ್ದಾರೆ. ಅವರು ಮುಖ್ಯಮಂತ್ರಿ ಹುದ್ದೆಯನ್ನು ಬೇರೆಯವರಿಗೆ ವಹಿಸಿಕೊಡುವುದು ಉತ್ತಮ.

ಘಟನೆ ಹೇಗೆ ನಡೆಯಿತು?:

ಬಿಹಾರದಲ್ಲಿ ಹೊಸದಾಗಿ ನೇಮಕಗೊಂಡ ಆಯುಷ್ ವೈದ್ಯರಿಗೆ ನೇಮಕಾತಿ ಆದೇಶ ಪತ್ರವನ್ನು ನೀಡಲಾಗುತ್ತಿತ್ತು. ಮುಖ್ಯಮಂತ್ರಿಯ ಸಂವಾದ್ ಕಾರ್ಯಕ್ರಮ ಅದು. ಸಾವಿರಕ್ಕೂ ಹೆಚ್ಚು ಆಯುಷ್ ವೈದ್ಯರಿಗೆ ನೇಮಕಾತಿ ನೀಡಲಾಗಿತ್ತು. 685 ಆಯುರ್ವೇದ, 393 ಹೊಮಿಯೊ ಮತ್ತು 205 ಯುನಾನಿ ವೈದ್ಯರಿಗೆ ಕೆಲಸ ಸಿಕ್ಕಿತ್ತು. ಇವರಿಂದ ಹತ್ತು ಮಂದಿಯನ್ನು ಆಯ್ದು ವೇದಿಕೆಗೆ ಕರೆಯಲಾಗಿತ್ತು. ನಿತೀಶ್ ಕುಮಾರ್ ನೇಮಕಾತಿ ಪತ್ರ ವಿತರಿಸುತ್ತಿದ್ದರು.

ನುಸ್ರತ್ ಪರ್ವೀನ್ ಕೂಡ ನೇಮಕಾತಿ ಪತ್ರವನ್ನು ಪಡೆಯಲು ವೇದಿಕೆ ಹತ್ತಿದ್ದಾರೆ. ಈ ಸಂದರ್ಭದಲ್ಲಿ ನಿತೀಶ್ ಕುಮಾರ್ ಯೆ ಕ್ಯಾ ಹೈ ಎನ್ನುತ್ತಾ ಹಠಾತ್ತನೆ ವೈದ್ಯೆಯ ನಕಾಬನ್ನು ಎಳೆದಿದ್ದಾರೆ. ಯಾವ ಮಹಿಳೆ ಈ ಅಧಿಕ ಪ್ರಸಂಗವನ್ನು ಸಹಿಸಿಯಾಳು? ನಿತೀಶ್‌ರ ಅನಿರೀಕ್ಷಿತ ವರ್ತನೆ ನುಸ್ರತ್ ಪರ್ವೀನ್ ಮಟ್ಟಿಗೆ ಆಘಾತ ಕೊಟ್ಟಿದೆ. ಅವರೇ ಹೇಳಿರುವ ಪ್ರಕಾರ ಅವರಿಗೆ ಆಗ ಹೆದರಿಕೆಯೂ ಆಗಿದೆ. ಒಬ್ಬ ಮುಖ್ಯಮಂತ್ರಿಗೆ ಸೂಕ್ತವಲ್ಲದ ಮಾನಸಿಕತೆಯನ್ನು ನಿತೀಶ್ ಪ್ರದರ್ಶಿಸಿದರು.

ನಿಜಕ್ಕೂ ನಿತೀಶ್ ಎಳೆದದ್ದು ವೈದ್ಯೆಯ ನಕಾಬನ್ನಲ್ಲ. ಅವರ ಇಸ್ಲಾಮೀ ಅಸ್ಮಿತೆಯನ್ನೇ ನಿತೀಶ್ ಎಳೆಯಲು ಪ್ರಯತ್ನಿಸಿದ್ದು. ಸಾರ್ವಜನಿಕವಾಗಿ ಅಪಮಾನವಾದ್ದರಿಂದ ಕೆಲಸಕ್ಕೆ ಹೋಗಲು ತನ್ನ ತಂಗಿ ಹಿಂದೇಟು ಹಾಕುತ್ತಿದ್ದಾರೆ ಎಂದು ನುಸ್ರತ್ ಪರ್ವೀನ್‌ರ ಸಹೋದರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕೇಂದ್ರ ಸಚಿವ ಗಿರಿರಾಜ್ ಸಿಂಗ್ ನಿತೀಶ್‌ರನ್ನು ಸಮರ್ಥಿಸಿ ಕೆಲಸಕ್ಕೆ ಹೋಗದಿದ್ದರೆ ಆಕೆ ನರಕಕ್ಕೆ ಹೋಗಲಿ ಎಂದು ಪ್ರತಿಕ್ರಿಯಿಸಿ
ದ್ದಾರೆ. ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲ ಘಟನೆಯನ್ನು ಖಂಡಿಸಿ ತಾನು ಹಿಂದೂ ಮಹಿಳೆಯರ ನಿಕಾಬ್ ಎತ್ತಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂದು ಪ್ರಶ್ನಿಸಿದ್ದಾರೆ. ಯಾರು ಏನೇ ಹೇಳಿದರೂ ಖಂಡಿತ ಮುಸ್ಲಿಂ ವಿರೋಧಿಗಳ ಸಂಘದಿಂದ ನಿತೀಶ್‌ರಲ್ಲಿ ತಿಳಿಗೇಡಿತನ ಸೃಷ್ಟಿಯಾಗಿದೆ. ವಿವೇಕ ಹರಿದು ಚಿಂದಿಯಾಗಿದೆ. 2014ರಲ್ಲಿದ್ದ ನಿತೀಶ್ 2025ರಲ್ಲಿಲ್ಲ ಎಂಬುದು ಅವರ ಕೆಲವು ನಡೆಗಳಿಂದ ಸಾಬೀತಾಗುತ್ತಿದೆ.

ಬಿಜೆಪಿ ಬದಲಿಸದ್ದು ಯಾವುದಿದೆ:

ಹಾಗೆ ಹೇಳುವುದಿದ್ದರೆ ನಿತೀಶ್‌ರೇ ಯಾಕೆ? ಇಡೀ ಭಾರತವನ್ನು ಮತ್ತು ಭಾರತದ ಇತಿಹಾಸವನ್ನು ಬದಲಿಸಲು ಹೊರಟವರು ಬಿಜೆಪಿಯಲ್ವಾ? ಅವರ ಸಂಘದಲ್ಲಿ ನಿತೀಶ್ ಸಮಾಜವಾದಿಯಿಂದ ಅತಿರೇಕವಾದಿಯಾಗಿ ಬದಲಾದರೆ ಅಚ್ಚರಿಯಾಗ ಬೇಕಿಲ್ಲ. ಮನ್ಮೋಹನ್ ಸರಕಾರ ಜಾರಿಗೆ ತಂದ ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನೇ ಬಿಜೆಪಿ ಬದಲಿಸಿಲ್ವಾ? ಸಂಸತ್ತಿನಲ್ಲಿ ಇದರ ಹೆಸರನ್ನು ಜಿರಾಮ್‌ಜಿಯಾಗಿ ಬದಲಿಸುವ ಹೊತ್ತಿಗೆ ಅದೇ ಸಂಸತ್ತಿನಲ್ಲಿ ನಿತೀಶ್‌ರ ಜೆಡಿಯುನ ಸಂಸದರಿದ್ದರು. ಆ ರಾಷ್ಟ್ರಪಿತ ಮಹಾತ್ಮಾಗಾಂಧಿ ಹೆಸರು ಉಳಿಸಿಕೊಳ್ಳಲು ಅವರು ನೋಡಲಿಲ್ಲ. ಬಿಜೆಪಿ ಸಂಘ ಅಷ್ಟರವರೆಗೂ ಅವರನ್ನು ಬದಲಿಸಿದೆ. ಬಿಜೆಪಿಯ ಇಂತಹ ಎಲ್ಲ ಕೃತ್ಯಗಳಿಗೆ ನಿತೀಶ್ ಮತ್ತು ಅವರ ಪಾರ್ಟಿ ಬೆಂಬಲ ನೀಡಿದೆ. ಪಾರ್ಟಿಯ ಅಸ್ತಿತ್ವ ಉಳಿಸಿಕೊಳ್ಳಲು ಅವರು ಯಾವ ಮಟ್ಟಕ್ಕೂ ಹೋಗಬಲ್ಲರು. ನಕಾಬ್ ಎಳೆದದ್ದಕ್ಕೂ ಇದಕ್ಕೂ ಏನು ಸಂಬಂಧ ಎಂದು ನೀವು ಪ್ರಶ್ನಿಸಬಹುದು. ನಕಾಬನ್ನು ಕಿತ್ತಂತೆ ರಾಷ್ಟ್ರಪಿತನ ಹೆಸರನ್ನೂ ಸಂಸತ್ತಿನಲ್ಲೇ ಮಸೂದೆಯ ಮೂಲಕ ಕಿತ್ತು ಹಾಕುತ್ತಿದೆ ಅಲ್ವಾ. ಹಿಂದಿನದ್ದನ್ನು ಕಿತ್ತು ತಮ್ಮದನ್ನು ಹೇರುವ ಕೆಲಸ ಬಿಜೆಪಿ ಮಾಡಿದ್ದು.

ನಿತೀಶ್ 2014ರಲ್ಲಿ ಹೇಗಿದ್ದರು?:

ನರೇಂದ್ರ ಮೋದಿಯ ಹೆಸರು ಪ್ರಧಾನಿಯ ಹುದ್ದೆಗೆ ಕೇಳಿ ಬಂದಾಗ ನಿತೀಶ್ ಕುಮಾರ್ ಪ್ರತಿಭಟಿಸಿದರು. ತನ್ನ ವೈಚಾರಿಕ ಬದ್ಧತೆಯಡಿಯಲ್ಲಿ ಎನ್‌ಡಿಎ ಸಖ್ಯದಿಂದಲೇ ಅವರು ಹೊರ ಬಂದರು. ಪ್ರತ್ಯೇಕಗೊಂಡು ಆರ್‌ಜೆಡಿ ಜೊತೆಗೂಡಿ ಚುನಾವಣೆಗೆ ಹೋದರು. ಗುಜರಾತ್ ಗಲಭೆಯ ಹಿನ್ನೆಲೆಯಲ್ಲಿ ಮೋದಿಗೆ ಅಮೆರಿಕ ಕೂಡ ವೀಸಾ ನಿರಾಕರಿಸಿದ್ದ ಕಾಲ ಅದಾಗಿತ್ತು. ಅಂತಹ ನಿತೀಶ್‌ರನ್ನು ಬಿಜೆಪಿ ಈಗ ಹೇಗೆಲ್ಲ ಬಳಸುತ್ತಿದೆ? ಅವರಿಂದ ಅವರ ವೈಚಾರಿಕ ಆತ್ಮವನ್ನು ಅದು ಯಶಸ್ವಿಯಾಗಿ ಕಳಚಿ ಹಾಕಿದೆ.

ಬಿಜೆಪಿ ಮತ್ತು ಸಂಘ ಸಮಾಜವಾದ ಗಾಂಧಿವಾದ ಜಾತ್ಯತೀತವಾದದ ಒಂದೊಂದೇ ಗುರುತುಗಳನ್ನು ಬಗ್ಗು ಬಡಿಯುತ್ತಿರುವಾಗಲೂ ಹೆಸರುಗಳನ್ನು ಕಿತ್ತು ಹಾಕುತ್ತಿರುವಾಗಲೂ ಅವರು ಸುಮ್ಮನಿದ್ದಾರೆ. ಅವರ ಜೆಡಿಯು ಏನನ್ನೂ ಮಾಡುವುದಿಲ್ಲ. ಇಂತಹದ್ದೆ ಒಂದು ಉದಾಹರಣೆ ನರೇಗಾದ ಹೆಸರು ಬದಲಾವಣೆಯಲ್ಲಿಯೂ ಎತ್ತಿಕೊಳ್ಳ ಬಹುದು. ಬಿಜೆಪಿಯನ್ನು ಓಲೈಸಲು ಯಾವ ಮಟ್ಟಕ್ಕೂ ಹೋಗಬಲ್ಲ ನಿತೀಶ್ ರನ್ನು ನೀವು ನೋಡಬಹುದು. ಈ ಹಿಂದೆ ವಕ್ಫ್ ಮಸೂದೆ ಬಂದಾಗ ಮುಸ್ಲಿಮರಿಗೆ ಮಾತು ಕೊಟ್ಟಂತೆ ವಿರೋಧಿಸಲಿಲ್ಲ. ಬೆಂಬಲಿಸಿದರು. ಪೌರತ್ವ ತಿದ್ದುಪಡಿ ಮಸೂದೆಯ ವೇಳೆಯೂ ಹೀಗೆಯೇ ವರ್ತಿಸಿದರು. ಮುಸ್ಲಿಮರಿಗೆ ದೋಖಾ. ಈಗ ಮುಸ್ಲಿಂ ವೈದ್ಯೆಯ ನಕಾಬನ್ನೇ ಎಳೆದು ಹಾಕುವ ಹಂತಕ್ಕೆ ಅವರ ವೈಚಾರಿಕ ದಿವಾಳಿತನ ಬಂದು ತಲುಪಿದೆ.

ಆರಂಭದಲ್ಲಿ ಕೆಲಸ ಬೇಡ ಎಂದಿದ್ದ ನುಸ್ರತ್ ಅಂತಿಮವಾಗಿ ಕೆಲಸಕ್ಕೆ ಸೇರಿಯೇ ತನ್ನ ಹಿಜಾಬನ್ನು ಉಳಿಸಿಕೊಳ್ಳುವ ತೀರ್ಮಾನ ಮಾಡಿದ್ದಾರೆ. ಅವರ ಧೈರ್ಯಕ್ಕೆ ಶಹಬ್ಬಾಸ್ ಎನ್ನೋಣ.