✍️ ಶಮೀಮಾ
ಉಮ್ರಾ ಯಾತ್ರೆಗೆ ಹೋಗುವವರ ಸಂಖ್ಯೆ ಹೆಚ್ಚಾಗ್ತಾ ಇದೆ. ಹಾಗೆಯೇ ಏಜೆನ್ಸಿಗಳ ಸಂಖ್ಯೆಯೂ ಹೆಚ್ಚಾಗ್ತಾ ಇದೆ. ಏಜೆನ್ಸಿಗಳ ಸಂಖ್ಯೆ ಹೆಚ್ಚಾಗುವುದೆಂದರೆ ಪ್ಯಾಕೇಜ್ ನಲ್ಲಿ ಪೈಪೋಟಿ ನಡೆಯುತ್ತದೆ ಎಂದು ಅರ್ಥ. ಒಂದು ಏಜೆನ್ಸಿಗಿಂತ ಕಡಿಮೆ ದರದಲ್ಲಿ ಇನ್ನೊಂದು ಏಜೆನ್ಸಿ ತನ್ನ ಉಮ್ರಾ ಪ್ರಯಾಣ ದರವನ್ನು ಪ್ರಕಟಿಸುತ್ತದೆ. ಇದರಿಂದ ಉಮ್ರಾ ಯಾತ್ರಿಕರಿಗೆ ಲಾಭವಾಗುತ್ತದೆ ಎಂಬುದು ನಿಜ ಆದರೆ ಕೆಲವೊಮ್ಮೆ ಇಂತಹ ಏಜೆನ್ಸಿಗಳು ಯಾತ್ರಿಕರನ್ನು ಪಡಬಾರದ ಸಂಕಷ್ಟಕ್ಕೂ ದೂಡುತ್ತದೆ. ಸೌದಿಗೆ ಕರೆದುಕೊಂಡು ಹೋದ ಬಳಿಕ ಅವು ಅತ್ಯಂತ ನಿರ್ಲಕ್ಷತನದಿಂದ ನಡೆದುಕೊಳ್ಳುತ್ತದೆ. ಈ ಹಿಂದೆ ನಮ್ಮದೇ ರಾಜ್ಯದಲ್ಲಿ ಇಂಥದ್ದೇ ಒಂದು ಸಮಸ್ಯೆ ಎದುರಾಗಿತ್ತು. ಉಮ್ರಕ್ಕೆ ಕರೆದುಕೊಂಡು ಹೋದ ಟ್ರಾವೆಲ್ ಏಜೆನ್ಸಿ ಮರಳಿ ಕರೆ ತರುವ ಸಮರ್ಪಕ ವ್ಯವಸ್ಥೆಯನ್ನು ಮಾಡದೆ ಚರ್ಚೆಗೆ ಗ್ರಾಸವಾಗಿತ್ತು.
ಇದೀಗ ತನ್ನ ಯಾತ್ರಿಕರ ಬಗ್ಗೆ ಇಂಥದ್ದೇ ನಿರ್ಲಕ್ಷ ತಾಳಿ ಆ ಕುಟುಂಬವನ್ನು ಸಂಕಷ್ಟಕ್ಕೆ ದೂಡಿದ ಬೆಳವಣಿಗೆ ಕೇರಳದಲ್ಲಿ ನಡೆದಿದೆ.
ಉಮ್ರ ನಿರ್ವಹಿಸಿ ಮದೀನದಿಂದ ರಿಯಾದ್ ವರೆಗೆ ಬಸ್ಸಿನಲ್ಲಿ ಬಂದ 38 ಸದಸ್ಯರ ತಂಡ ಟ್ರಾವೆಲ್ ಏಜೆನ್ಸಿ ನೀಡಿರುವ ಡಮ್ಮಿ ಅಥವಾ ನಕಲಿ ಟಿಕೆಟ್ ನ ಕಾರಣಕ್ಕಾಗಿ 24 ಗಂಟೆ ರಿಯಾದ್ ವಿಮಾನ ನಿಲ್ದಾಣದಲ್ಲೇ ಉಳಿದ ಆಘಾತಕಾರಿ ಘಟನೆ ಇದು.
ಕೇರಳದ ಟ್ರಾವೆಲ್ ಏಜೆನ್ಸಿಯ ಮೂಲಕ 45 ಮಂದಿಯ ತಂಡ ಉಮ್ರಾ ನಿರ್ವಹಣೆಗೆಂದು ಮಕ್ಕಾಕ್ಕೆ ತಲುಪಿತ್ತು ಇದರಲ್ಲಿ ವೃದ್ಧರು ಮಕ್ಕಳು ಕೂಡ ಇದ್ರು. ಉಮ್ರಾ ನಿರ್ವಹಿಸಿ ಮದೀನಾಕ್ಕೆ ಭೇಟಿ ನೀಡಿದ ಈ ಗುಂಪು ರಿಯಾದ್ ನಿಂದ ಭಾರತಕ್ಕೆ ಮರಳುವ ವಿಮಾನ ಹತ್ತಬೇಕು ಎಂದು ಏಜೆನ್ಸಿ ಹೇಳಿತು. ಮದೀನದಿಂದ ರಿಯಾದ್ ವಿಮಾನ ನಿಲ್ದಾಣಕ್ಕೆ 1200 ಕಿಲೋಮೀಟರ್ ದೂರ ಇದೆ. ಹೀಗೆ ವೃದ್ಧರು ಮಕ್ಕಳು ಮಹಿಳೆಯರನ್ನೆಲ್ಲ ಒಂದು ಬಸ್ಸಿನಲ್ಲಿ ರಿಯಾದ್ ಗೆ ಕರೆದುಕೊಂಡು ಹೋಗಲಾಯಿತು.
ಇದೇ ವೇಳೆ ಮದೀನಾದಲ್ಲೂ ಈ ತಂಡ ಸುಖವಾಗಿರಲಿಲ್ಲ. 45 ಮಂದಿ ಇದ್ದ ಈ ತಂಡವನ್ನು ಎರಡು ಸಣ್ಣ ಸಣ್ಣ ರೂಮುಗಳಲ್ಲಿ ಉಳಿದುಕೊಳ್ಳುವಂತೆ ಮಾಡಲಾಗಿತ್ತು. ಒಂದು ರೂಂನಲ್ಲಿ 23 ಮಂದಿ ತಂಗಿದ್ದರು . ಮರಳಿ ಕೇರಳಕ್ಕೆ ಹೋಗುವ ಬಗ್ಗೆ ಅನಿಶ್ಚಿತತೆ ಇದ್ದ ಕಾರಣ ಈ 45 ಮಂದಿಯ ತಂಡದಿಂದ ಏಳು ಮಂದಿ ಬೇರ್ಪಟ್ಟಿದ್ದರು ಮತ್ತು ತಮ್ಮ ಸ್ವಂತ ಖರ್ಚಿನಲ್ಲಿ ಕೇರಳಕ್ಕೆ ಪ್ರಯಾಣಿಸಿದ್ದರು.
ಉಳಿದ 38 ಮಂದಿ ಬಸ್ಸಿನಲ್ಲಿ ರಿಯಾದ್ ಗೆ ಪ್ರಯಾಣಿಸಿದರು ಈ ತಂಡದ ಅಮೀರ್ ಕೂಡ ಇವರ ಜೊತೆಗೆ ಪ್ರಯಾಣಿಸಿದರು. ರಿಯಾ ದ್ ನಿಂದ ಮುಂಬೈ ಮೂಲಕ ಕನೆಕ್ಟೆಡ್ ವಿಮಾನದಲ್ಲಿ ಕೇರಳಕ್ಕೆ ಪ್ರಯಾಣಿಸುವುದಕ್ಕೆ ಟಿಕೇಟು ನೀಡಲಾಗಿತ್ತು.
ಬೋರ್ಡಿಂಗ್ ಪಾಸ್ ಗಾಗಿ ಕ್ಯು ನಿಲ್ಲುವಾಗ ಈ ಗುಂಪಿನ ಏಳು ಮಂದಿಯ ಕೈಯಲ್ಲಿರುವ ಟಿಕೇಟು ಡಮ್ಮಿ ಅಥವಾ ನಕಲಿ ಎಂಬುದು ಗೊತ್ತಾಯಿತು. ಈ ಮೂಲಕ ಪ್ರಯಾಣ ಅನಿಶ್ಚಿತವಾಯಿತು. ಈ ಗುಂಪಿನಲ್ಲಿದ್ದ ಒಂದು ಪುಟ್ಟ ಮಗುವಿನ ಟಿಕೆಟ್ ಕೂಡ ನಕಲಿಯಾದ ಕಾರಣ ಲಗೆಜ್ ಅನ್ನು ಅದಾಗಲೇ ವಿಮಾನಕ್ಕೆ ತುಂಬಿಸಿದ್ದ ಮಗುವಿನ ಹೆತ್ತವರು ಕಂಗಾಲಾದ್ರು. ಅವರು ಕೂಡ ಈ ಗುಂಪಿನೊಂದಿಗೆ ಸೇರಿಕೊಂಡರು. ಇದರೊಂದಿಗೆ ಒಟ್ಟು 12 ಮಂದಿಯ ಪ್ರಯಾಣ ಅನಿಶ್ಚಿತವಾಯಿತು. ಉಳಿದ 26 ಮಂದಿ ಮುಂಬೈಗೆ ಪ್ರಯಾಣಿಸಿದರು. ಆದರೆ ಅವರು ಮುಂಬೈಗೆ ತಲುಪಿದರೂ ಕನೆಕ್ಟೆಡ್ ವಿಮಾನ ಸಿಗದೇ ಅವರು ಮತ್ತಷ್ಟು ಸಂಕಷ್ಟ ಎದುರಿಸಿದರು.
ರಿಯಾದ್ ವಿಮಾನ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕುಳಿತ ಈ 12 ಮಂದಿ ತಂಡಕ್ಕೆ ಏನು ಮಾಡುವುದೆಂದೇ ಗೊತ್ತಿರಲಿಲ್ಲ ಕೊನೆಗೆ ರಿಯಾದ್ ನಲ್ಲಿರುವ ಸಮಾಜ ಕಾರ್ಯಕರ್ತರು ಇವರ ನೆರವಿಗೆ ಬಂದ್ರು. ಕೇರಳದ ಟ್ರಾವೆಲ್ ಏಜೆನ್ಸಿಯನ್ನು ಇವರು ಸಂಪರ್ಕಿಸಿದ್ರು. ಆರಂಭದಲ್ಲಿ ಟ್ರಾವೆಲ್ ಏಜೆನ್ಸಿಯವರು ನೆರವಾಗಲು ಒಪ್ಪಲಿಲ್ಲ. ಆದರೆ ಸೌದಿ ಪೊಲೀಸರಿಗೆ ಮತ್ತು ನುಸು ಅಪ್ಲಿಕೇಶನ್ ಮೂಲಕ ದೂರು ಸಲ್ಲಿಸಲಾಗುವುದು ಎಂದು ಹೇಳಿದ ಬಳಿಕ ಟ್ರಾವೆಲ್ ಏಜೆನ್ಸಿ ಮೆತ್ತಗಾದರು. ಈ 12 ಮಂದಿಗೆ ರಿಯಾದ್ ಹೋಟೆಲ್ ನಲ್ಲಿ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿದರು. ಮಾತ್ರ ಅಲ್ಲ ಎಲ್ಲರಿಗೂ ಹೊಸ ಟಿಕೆಟ್ ವ್ಯವಸ್ಥೆಯನ್ನು ಮಾಡಿದ್ರು.
ಹೀಗೆ 24 ಗಂಟೆ ಕಳೆದ ಬಳಿಕ ಈ 12 ಮಂದಿಯ ತಂಡ ಭಾರತಕ್ಕೆ ಪ್ರಯಾಣಿಸಿತು.
ಆದ್ದರಿಂದ ಕಡಿಮೆ ಮೊತ್ತದ ಪ್ಯಾಕೇಜ್ ಮೂಲಕ ಉಮ್ರಾ ನಿರ್ವಹಣೆಗೆಂದು ಹೊರಡುವವರು ಎಲ್ಲವನ್ನೂ ಕೂಲಂಕಷ ಪರಿಶೀಲನೆ ನಡೆಸಬೇಕಾಗಿದೆ ಪ್ಯಾಕೇಜ್ ನ ಮೂಲಕ ಸಿಗುವ ಸೌಲಭ್ಯಗಳು ಏನೇನು, ಟಿಕೆಟ್ ಎಷ್ಟು ಸರಿ ಇದೆ, ಎಷ್ಟು ನಕಲಿ ಇದೆ, ಮಕ್ಕ ಮತ್ತು ಮದೀನಾದಲ್ಲಿ ವಾಸ ಸೌಲಭ್ಯ ಹೇಗಿದೆ ಇತ್ಯಾದಿಗಳನ್ನು ಪರಿಶೀಲಿಸಿಯೇ ಪ್ರಯಾಣಿಸಬೇಕು ಎಂಬುದಾಗಿ ಹೇಳಲಾಗಿದೆ.












