ಆಲಿಯಾ ಅರೆಬಿಕ್ ಕಾಲೇಜಿಗೆ ತನ್ನ ಬದುಕನ್ನೇ ಸಮರ್ಪಿಸಿದ್ದ ಹೈದರ್ ಉಸ್ತಾದ್

0
434

✍️ ಸಲೀಮ್ ಬೋಳಂಗಡಿ

ಸ್ಮರಣೆ

ಕೇರಳದ ಕಾಸರಗೋಡಿನ ಆಲಿಯಾ ಅರೆಬಿಕ್ ಕಾಲೇಜಿನ ಕಳೆದ ಐದು ದಶಕಗಳಿಗಿಂತಲೂ ಹೆಚ್ಚಿನ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಕೆ.ಎಂ. ಹೈದರ್(78) ಕಳೆದ 2025 ನವೆಂಬರ್ 28ರಂದು ನಿಧನರಾದರು. ಹೈದರ್ ಉಸ್ತಾದ್ ಎಂದೇ ಚಿರಪರಿಚಿತರಾಗಿದ್ದ ಈ ಗುರುವರ‍್ಯರ ನಿಧನದ ಬಗ್ಗೆ ಸನ್ಮಾರ್ಗದಲ್ಲಿ ಸುದ್ದಿ ಪ್ರಕಟವಾಗಿದ್ದರೂ ಅವರು ಆಲಿಯಾ ಕಾಲೇಜಿಗಾಗಿ ಸಲ್ಲಿಸಿದ್ದ ಅಮೋಘವಾದ ಸೇವೆಯ ಕುರಿತು ಬರೆಯಲೇ ಬೇಕಾದ ಅನಿವಾರ್ಯತೆ ಕಂಡು ಈ ಬರಹಕ್ಕೆ ಮುಂದಾಗಿರುವೆನು. ನನ್ನ ಪತ್ನಿ ಹಾಗೂ ಪುತ್ರನ ಗುರುವರ‍್ಯರಾಗಿರುವ ಇವರು ಹಲವಾರು ವರ್ಷಗಳಿಂದ ಚಿರಪರಿಚಿತರು. ಕಾಲೇಜಿಗೆ ಭೇಟಿ ನೀಡಿದಾಗಲೆಲ್ಲಾ ಮಂದಹಾಸ ಬೀರಿ ಕುಶಲೋಪರಿ ವಿಚಾರಿಸಿ ನಮ್ಮವರಾಗುತ್ತಿದ್ದರು.

ಅವರ ಬಗ್ಗೆ ಬಂದಂತಹ ಪ್ರಬೋಧನಮ್ ವಾರ ಪತ್ರಿಕೆಯ ಬರಹಗಳನ್ನು ಕ್ರೋಡೀಕರಿಸಿದ ಲೇಖನ ಇದು.

ಮಂಗಳೂರಿನ ಕುದ್ರೋಳಿಯ ಹಸನಬ್ಬ ಮತ್ತು ಬೀಫಾತಿಮ ದಂಪತಿಗಳ ಮಗನಾಗಿ 1947ರಲ್ಲಿ ಜನಿಸಿದರು. ಅನಾಚಾರ ಮತ್ತು ಕಂದಾಚಾರಗಳಿಂದ ಕೂಡಿದ ಅಂದಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಸ್ಲಾಮೀ ಆಂದೋಲನದ ಕಂಪನ್ನು ಬೀರಿ ಪಸರಿಸಿದ ಕೇರಳದ ವಿದ್ವಾಂಸ ಕೆ. ಮೊಯಿದು ಮೌಲವಿಯವರು ಹೊಸ ಕ್ರಾಂತಿಗೆ ನಾಂದಿ ಹಾಡಿದ್ದರು. ಆಗ ಹೊಸ ಕ್ರಾಂತಿ ಸೃಷ್ಟಿಸಿದ ಆ ತಂಡದಲ್ಲಿ ಹೈದರ್ ಉಸ್ತಾದ್ ರವರ ತಂದೆ ಹಸನಬ್ಬ ಕುದ್ರೋಳಿಯವರು ಸೇರಿದ್ದರು. ಈ ಆಂದೋಲನದ ಹೊಸ ನಂಟು ಇಸ್ಲಾಮೀ ಜ್ಞಾನವನ್ನು ಕರಗತ ಮಾಡಿಕೊಳ್ಳಲು ಹೈದರ್‌ರವರನ್ನು ಕಾಸರಗೋಡಿನ ಆಲಿಯಾ ಅರೆಬಿಕ್ ಕಾಲೇಜಿನ ವ್ಯಾಸಂಗಕ್ಕೆ ಪ್ರೇರೇಪಿಸಿತು. ವಿಧ್ಯಾರ್ಥಿಯಾಗಿ ಬಂದವರು ಖತೀಬ್ ಆಗಿ ಬೆಳೆದರು.

ಆಲಿಯಾ ಕಾಲೇಜಿನಲ್ಲಿ ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿದ ಬಳಿಕ ಎರಡು ವರ್ಷಗಳ ಕಾಲ ಶಾಂತಪುರಮ್ ಇಸ್ಲಾಮಿಯಾ ಕಾಲೇಜಿನಲ್ಲಿ ಉನ್ನತ ವ್ಯಾಸಂಗ ಮಾಡಿದರು. ನಂತರ ದಕ್ಷಿಣ ಕನ್ನಡದ ಉಪ್ಪಿನಂಗಡಿ ಮತ್ತು ಪಾಣೆಮಂಗಳೂರಿನ ಬೋಳಂಗಡಿಯ ಇಸ್ಲಾಮಿಯಾ ಮದ್ರಸದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು ಎಂಬುದನ್ನು ಅವರ ಹಳೆಯ ವಿದ್ಯಾರ್ಥಿಗಳು ಇಂದಿಗೂ ಸ್ಮರಿಸುತ್ತಿದ್ದಾರೆ. ನಂತರ ಆಲಿಯಾ ಕಾಲೇಜಿನಲ್ಲಿ ಅಧ್ಯಾಪಕ ಹುದ್ದೆಗಾಗಿ ನೇಮಕಗೊಂಡರು. ಆಲಿಯಾ ಸೇರಿದ ನಂತರ ಅವರು ಹಿಂದಿರುಗಿ ನೋಡಲೇ ಇಲ್ಲ. ಆಲಿಯಾ ಸಂಸ್ಥೆಯ ಪ್ರತೀ ಬೆಳ ವಣಿಗೆಯಲ್ಲಿ ತನ್ನದೇ ಆದ ಪಾತ್ರ ವಹಿಸಿ ಅದರ ಅವಿಭಾಜ್ಯ ಅಂಗವಾಗುವಷ್ಟರ ಮಟ್ಟಿಗೆ ಬೆಳೆದರು. ಆಲಿಯಾ ಕಾಲೇಜು ಎಂದ ಕೂಡಲೇ ಥಟ್ಟನೆ ಹೈದರ್ ಉಸ್ತಾದ್‌ರವರು ನೆನಪಿಗೆ ಬರುತ್ತಾರೆ. ತನ್ನ ಬದುಕಿನ ಆಯಸ್ಸಿನ ಹೆಚ್ಚಿನ ಭಾಗವನ್ನು ಆಲಿಯಾಗೆ ಮೀಸಲಿಟ್ಟ ಗುರುವರ‍್ಯರು.

ಅಂದು ಆಲಿಯಾದ ಪ್ರಾಂಶುಪಾಲರಾಗಿದ್ದ ಕೆ. ಎಂ. ಅಬೂಬಕ್ಕರ್ ಉಮ್ರಿಯವರ ಜೊತೆ ಬರಹಗಾರರಾಗಿ ಕಂಪ್ಯೂಟರ್ ಇಲ್ಲದ ಸಂದರ್ಭದಲ್ಲಿ ಕಂಪ್ಯೂಟರ್ ಆಗಿ ನೆರಳಿನಂತೆ ಜೊತೆಗಿದ್ದರು. ಸಂಸ್ಥೆಯ ದಶಕಗಳಷ್ಟು ಹಿಂದಿನ ಯಾವುದೇ ಫೈಲ್ ಬೇಕಿದ್ದರೂ ತಕ್ಷಣ ತೆಗೆದುಕೊಡುತ್ತಿದ್ದ ಅವರ ಸ್ಮರಣ ಶಕ್ತಿ ಅಪಾರವಾದದ್ದು ಎಂದು ಅವರ ಸಹೋದ್ಯೋಗಿಗಳು ಸ್ಮರಿಸುತ್ತಾರೆ. ಐವತ್ತು ವರ್ಷಗಳಲ್ಲಿ ಆ ಸಂಸ್ಥೆಯಲ್ಲಿ ಕೇರಳ ಮತ್ತು ಕರ್ನಾಟಕದಿಂದ ಬಂದ ಪ್ರತೀ ವಿದ್ಯಾರ್ಥಿಗಳ ಹೆಸರು ವಿಳಾಸವೂ ಅವರ ಸ್ಮರಣೆಯಲ್ಲಿತ್ತು. ಕುರ್‌ಆನ್ ಹದೀಸ್, ಇತಿಹಾಸ ಉರ್ದು ಮುಂತಾದ ವಿಷಯಗಳಲ್ಲಿ ಸರಳವಾದ ಶೈಲಿಯಲ್ಲಿ ಬೋಧಿಸುತ್ತಿದ್ದರು. ವಾರೀಸು ಸೊತ್ತಿನ ಹಕ್ಕುಗಳ ಬಗ್ಗೆ ಹೆಚ್ಚಿನ ಅರಿವು ಇದ್ದ ಕಾರಣ ಹಿರಿಯ ವಿದ್ಯಾರ್ಥಿಗಳಿಗೆ ತರಗತಿ ನೀಡುತ್ತಿದ್ದರು. ಅಧ್ಯಾಪಕ ಹುದ್ದೆಯಿಂದ ನಿವೃತ್ತಗೊಂಡ ಬಳಿಕವೂ ಕಾಲೇಜಿನ ಲೈಬ್ರೆರಿಯ ಹೊಣೆಗಾರಿಕೆಯನ್ನು ನಿಭಾಯಿಸುತ್ತಾ ಕಾಲೇಜಿನಲ್ಲೇ ಇದ್ದರು.

ಶೈಕ್ಷಣಿಕ ವರ್ಷಾರಂಭದಲ್ಲಿ ಹೊಸ ವಿದ್ಯಾರ್ಥಿಗಳನ್ನು ಕಾಲೇಜಿಗೆ ಸೇರ್ಪಡೆಗೊಳಿಸುವಾಗ ಅವರ ಇಂಟರ್ ವ್ಯೂನ ಜವಾಬ್ದಾರಿಕೆ, ತರಗತಿಯ ಟೈಂ ಟೇಬಲ್ ಸಿದ್ಧ ಪಡಿಸುವಿಕೆ, ಪರೀಕ್ಷಾ ಕೊಠಡಿಯ ಜವಾಬ್ದಾರಿಕೆ, ಕೊನೆಯಲ್ಲಿ ನಡೆಯುವ ವಿದ್ಯಾರ್ಥಿ ಮತ್ತು ಶಿಕ್ಷಕರ ಸಭೆಯಲ್ಲಿ ವಿದ್ಯಾರ್ಥಿಗಳ ಹೆಸರು ವಾಚಿಸಿ ಫಲಿತಾಂಶ ಪ್ರಕಟಿಸುವುದು. ರಮಝಾನ್ ಸಂದರ್ಭದಲ್ಲಿ ಹಣ ಸಂಗ್ರಹಕ್ಕಾಗಿ ರಶೀದಿಗಳನ್ನು ಸಿದ್ಧಪಡಿಸಿ ಸ್ವತಃ ರಂಗಕ್ಕಿಳಿಯುತ್ತಿದ್ದರು. ಅಲ್ಲಿ ದೊರೆಯುತ್ತಿದ್ದ ಸಣ್ಣ ಮೊತ್ತದ ವೇತನದಿಂದ ತನ್ನ ಒಂಬತ್ತು ಮಂದಿಯ ಕುಟುಂಬದ ಜೀವನ ನಿರ್ವಹಣೆ ನಡೆಸುತ್ತಿದ್ದರು. ಕ್ಯಾಂಪಸ್‌ನಿಂದ ಒಂದು ಕಿಮೀ ದೂರದಲ್ಲಿ ಒಂದು ತೆಂಗಿನ ತೋಟದ ಬದಿಯ ಗುಡಿಸ ಲೊಂದರಲ್ಲಿ ವಿದ್ಯುತ್ ಇಲ್ಲದ ಕಾಲದಲ್ಲಿ ಸೀಮೆ ಎಣ್ಣೆಯ ದೀಪದಲ್ಲಿ ಆ ಮಕ್ಕಳೆಲ್ಲಾ ಬೆಳೆದು ದೊಡ್ಡವರಾಗಿದ್ದರು. ಆಲಿಯಾ ಕಾಲೇಜಿನಲ್ಲಿ ರಾತ್ರಿ ಹತ್ತು ಗಂಟೆಯ ವರೇಗೆ ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚಿನ ಸಮಯ ವ್ಯಯಿಸಿ ಪ್ರಾಂಶುಪಾಲ ಕೆ.ವಿ. ಉಸ್ತಾದ್ ಮನೆಗೆ ತೆರಳುತ್ತಿದ್ದರು. ಆ ಬಳಿಕವೇ ಹೈದರ್ ಉಸ್ತಾದ್ ಮನೆಗೆ ಮರಳುತ್ತಿದ್ದರು.

ಜಮಾಅತೆ ಇಸ್ಲಾಮಿಯಲ್ಲಿ ಆರಂಭ ಕಾಲದಿಂದಲೂ ಸಕ್ರಿಯವಾಗಿದ್ದ ಹೈದರ್ ಉಸ್ತಾದ್ ಸಂಘಟನೆ ಮತ್ತು ಸಂಸ್ಥೆಯ ನಡುವಿನ ನಿಕಟ ಒಡನಾಡಿಯಾಗಿದ್ದರು. ಪರವನಡುಕ್ಕಮ್‌ನ ಸ್ಥಾನೀಯ ಅಧ್ಯಕ್ಷರಾಗಿದ್ದರು. ರಮಝಾನಿನಲ್ಲಿ ಶಾಖೆಯ ದೇಣಿಗೆ ಸಂಗ್ರಹದ ಜೊತೆಗೆ ಆಲಿಯಾ ಮತ್ತು ಶಾಂತಪುರಮ್ ಕಾಲೇಜಿನ ರಶೀದಿ ಪುಸ್ತಕಗಳೂ ಅವರ ಬಳಿಯಲ್ಲಿದ್ದುವು. 2024ರಲ್ಲಿ ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿದಾಗ ಫೋನ್ ಮೂಲಕ ಕಾಲೇಜ್‌ಗೆ ದೇಣಿಗೆ ಸಂಗ್ರಹಿಸಿ ನೀಡಿದ್ದರು. ಹಾಗೆ ಅವರು ಲಕ್ಷಾಂತರ ರೂಪಾಯಿಗಿಂತಲೂ ಹೆಚ್ಚಿನ ಮೊತ್ತ ಸಂಗ್ರಹಿಸಿದ್ದರು. ಹೀಗೆ ಆಲಿಯಾ ಕಾಲೇಜಿನಲ್ಲಿ ಕಳೆದ ಐವತ್ತಕ್ಕೂ ಹೆಚ್ಚಿನ ವರ್ಷಗಳ ಕಾಲದಲ್ಲಿ ವಿದ್ಯಾರ್ಥಿಯಾಗಿ ನಂತರ ಅಧ್ಯಾಪಕರಾಗಿ ಪೋಷಕರಾಗಿ ಅನುಪಮ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿತ್ವದ ಹೈದರ್ ಉಸ್ತಾದ್‌ರವರ ಎಲ್ಲಾ ಸೇವೆಗಳನ್ನು ಸ್ವೀಕರಿಸಿ ಅಲ್ಲಾಹನು ಸ್ವರ್ಗೋದ್ಯಾನದಲ್ಲಿ ಸೇರಿಸಲಿ.