ಸನ್ಮಾರ್ಗ ವಾರ್ತೆ
ಜಮಾಅತೆ ಇಸ್ಲಾಮಿ ಹಿಂದ್ ಹೈದರಾಬಾದ್ ಘಟಕವು ಜನವರಿ 18ರಿಂದ 30ರವರೆಗೆ ರಾಜ್ಯಾದ್ಯಂತ ಡ್ರಗ್ ವಿರೋಧಿ ಅಭಿಯಾನವನ್ನು ಹಮ್ಮಿಕೊಂಡಿದ್ದು ಹೈದರಾಬಾದ್ ಸಿಟಿ ಕಮಿಷನರ್ ಈ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಜಮಾಅತ್ ನಿಯೋಗವು ಕಮಿಷನರ್ ಅವರನ್ನು ಭೇಟಿಯಾದಾಗ ಅವರು ಈ ಅಭಯಾನದ ಜೊತೆಗೆ ಸೇರುವುದಾಗಿಯೂ ಒಳ್ಳೆಯ ಉದ್ದೇಶದ ಅಭಿಯಾನವನ್ನು ಮುಂದುವರಿಸುವಂತೆಯೂ ಹೇಳಿದ್ದಾರೆ.
ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಅಧ್ಯಕ್ಷ ಮೊಹಮ್ಮದ್ ಅಝರುದ್ದೀನ್, ನಗರಾಧ್ಯಕ್ಷ ಡಾಕ್ಟರ್ ಮುಬಶೀರ್ ಅಹ್ಮದ್ ಮತ್ತು ಕಾರ್ಯದರ್ಶಿ ಅಬ್ದುಲ್ ಖಾದರ್ ಮುಂತಾದವರ ನಿಯೋಗವು ಡ್ರಗ್ಸ್ ತಡೆಗಟ್ಟುವ ಕುರಿತಂತೆ ಯೋಜನೆಯನ್ನು ಕಮಿಷನರ್ ಮುಂದೆ ಇರಿಸಿದೆ.
ಡ್ರಗ್ಸ್ ವಿರೋಧಿ ಅಭಿಯಾನದಲ್ಲಿ ಯುವಕರೊಂದಿಗೆ ಸಂವಾದ ನಡೆಸುವುದು, ಅವರ ಸಬಲೀಕರಣಕ್ಕಾಗಿ ಕಾರ್ಯಯೋಜನೆಯನ್ನು ಕೈಗೊಳ್ಳುವುದು, ವೈದ್ಯರ ತಂಡದ ಮೂಲಕ ಉಚಿತ ಆರೋಗ್ಯ ಶಿಬಿರಗಳನ್ನು ಏರ್ಪಡಿಸುವುದು, ಮಾನಸಿಕ ಆರೋಗ್ಯ ಸವಾಲುಗಳು ಮತ್ತು ಭಾವನಾತ್ಮಕ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆಪ್ತ ಸಮಾಲೋಚನೆಯನ್ನು ಮಾಡುವುದು ಇತ್ಯಾದಿಗಳು ಒಳಗೊಂಡಿವೆ.
ವ್ಯಸನ ಮುಕ್ತ ಕೇಂದ್ರಗಳಿಗೆ ಭೇಟಿ ನೀಡಿ ವ್ಯಸನಗಳಿಂದ ಚೇತರಿಸಿಕೊಳ್ಳುವವರಿಗೆ ನೈತಿಕ ಬೆಂಬಲವನ್ನು ಅಭಿಯಾನದ ಮೂಲಕ ನೀಡಲಾಗುತ್ತದೆ. ಅವರಿಗೆ ಬೇಕಾದ ನೆರವನ್ನು ಕೂಡ ನೀಡಲು ಅಭಿಯಾನದ ಮೂಲಕ ಪ್ರಯತ್ನಿಸಲಾಗುತ್ತದೆ ಎಂದು ಜಮಾ ಅತ್ ನ ಅಧ್ಯಕ್ಷರು ತಿಳಿಸಿದ್ದಾರೆ.












