ಫೌಝಾನ್ ಆಲವಿ ಅವರ ಮಾಂಸ ರಫ್ತು ಕಂಪನಿಯಿಂದ ಬಿಜೆಪಿಗೆ 30 ಕೋಟಿ ರೂಪಾಯಿ ದೇಣಿಗೆ

0
338

ಸನ್ಮಾರ್ಗ ವಾರ್ತೆ

ಮಾಂಸ ರಫ್ತಿನಲ್ಲಿ ಪ್ರಥಮ ಸ್ಥಾನದಲ್ಲಿರುವ ಅಲ್ಲಾನ ಸನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಬಿಜೆಪಿಗೆ 30 ಕೋಟಿ ರೂಪಾಯಿಯನ್ನು ದೇಣಿಗೆ ನೀಡಿರುವುದು ಬಹಿರಂಗವಾಗಿದೆ. 2024 – 25ನೇ ಆರ್ಥಿಕ ವರ್ಷದಲ್ಲಿ ಭಾರತದ ಅತಿ ದೊಡ್ಡ ಮಾಂಸ ರಫ್ತು ಕಂಪನಿಯಾದ ಅಲ್ಲಾನ ಸನ್ಸ್ ಪ್ರೈವೇಟ್ ಲಿಮಿಟೆಡ್ ಈವರೆಗೆ ನೀಡಿದ ದೇಣಿಕೆಗಳಲ್ಲಿ ಅತಿ ಹೆಚ್ಚು ದೇಣಿಗೆಯನ್ನು ಬಿಜೆಪಿಗೆ ನೀಡಿದೆ.

2024ರಲ್ಲಿ ಈ ಕಂಪನಿಯು ಬಿಜೆಪಿಗೆ ಎರಡು ಕೋಟಿ ರೂಪಾಯಿಯನ್ನು ದೇಣಿಗೆಯಾಗಿ ನೀಡಿತ್ತು. ಇದೇ ವೇಳೆ 2018ರ ಬಳಿಕ ಮೊಟ್ಟಮೊದಲ ಬಾರಿ ಈ ಕಂಪನಿ 10000 ಕೋಟಿ ರೂಪಾಯಿಯ ಆದಾಯವನ್ನು ತೋರಿಸಿದೆ.

ಮೋದಿ ಸರಕಾರದ ಅಡಿಯಲ್ಲಿ ಪಾಸಿಟಿವ್ ಬದಲಾವಣೆಗಳು ಆದ ಕಾರಣವೇ ಈ ಬಾರಿ ಪ್ರಮಾಣದಲ್ಲಿ ಆದಾಯ ಪಡೆಯುವುದಕ್ಕೆ ಕಾರಣವಾಗಿದೆ ಎಂದು ಈ ಕಂಪನಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಫೌಸಾನ್ ಆಲವಿ ಸ್ಕ್ರೋಲ್ ಡಾಟ್ ಇನ್ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಮೋದಿ ಸರಕಾರದ ನೀತಿಯಿಂದಾಗಿ ಮಲೇಶಿಯಾ ಈಜಿಪ್ಟ್ ಗಳಿಗೆ ಮಾಂಸವನ್ನು ರಫ್ತು ಮಾಡುವುದಕ್ಕೆ ಸಾಧ್ಯವಾಗಿರುವುದು ಈ ಆದಾಯದ ಏರಿಕೆಗೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

2014ರಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅಲ್ಲಾನ ಗ್ರೂಪ್ ಮುಖ್ಯ ಮಾಂಸ ಸಂಸ್ಕರಣಾ ಘಟಕದ ವಿರುದ್ಧ ಉತ್ತರ ಪ್ರದೇಶ ಮುಂತಾದ ರಾಜ್ಯಗಳಲ್ಲಿ ಸಂಘ ಪರಿವಾರದಿಂದ ತೊಂದರೆ ಎದುರಾಗಿತ್ತು. ಮಾಂಸ ರಫ್ತು ಮಾಡುತ್ತಿದ್ದಾರೆ ಎಂದು ಹೇಳಿ ಇವುಗಳ ಮೇಲೆ ದಾಳಿಯನ್ನು ನಡೆಸಲಾಗಿತ್ತು. 2019ರಲ್ಲಿ ಅಲ್ಲಾನ ಗ್ರೂಪ್ ಗೆ ಸಂಬಂಧಿಸಿ 100 ಕ್ಕೂ ಅಧಿಕ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ರೇಡ್ ಮಾಡಿದ್ದರು. 2000 ಕೋಟಿ ರೂಪಾಯಿ ತೆರಿಗೆಯನ್ನು ವಂಚಿಸಿದ್ದಾರೆ ಎಂಬ ಆರೋಪವನ್ನು ಆಗ ಹೊರಿಸಲಾಗಿತ್ತು. ಅದರ ಬಳಿಕ ಕಂಪನಿಯು 7 ಕೋಟಿ ರೂಪಾಯಿಯ ಎಲೆಕ್ಟ್ರಾಲ್ ಬಾಂಡನ್ನು ಖರೀದಿಸಿತ್ತು. ಈ ಬೆಳವಣಿಗೆಯ ಬಳಿಕ ರಾಜಕೀಯ ಪಕ್ಷಕ್ಕೆ ಭಾರಿ ಪ್ರಮಾಣದಲ್ಲಿ ದೇಣಿಗೆಯನ್ನು ಕೊಡತೊಡಗಿತು.