ಸನ್ಮಾರ್ಗ ವಾರ್ತೆ
ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿತ್ತು. ಸ್ಕೂಟರಿಗೆ ದಾರಿ ಬಿಟ್ಟು ಕೊಟ್ಟಿಲ್ಲ ಎಂದು ಹೇಳಿ ಹಿರಿಯರಾದ ಮೂವರು ಮುಸ್ಲಿಮರಿಗೆ ಯುವಕನೋರ್ವ ಥಳಿಸುವ ಮತ್ತು ತುಳಿಯುವ ದೃಶ್ಯ ವಿಡಿಯೋದಲ್ಲಿತ್ತು.
ಉತ್ತರಪ್ರದೇಶದ ಬುಧೌನ್ ಎಂಬಲ್ಲಿ ಈ ಘಟನೆ ನಡೆದಿತ್ತು. ಫೆಬ್ರವರಿ 15ರಂದು ನಡೆದ ಈ ಘಟನೆಯ ಬಗ್ಗೆ ನಾಲ್ಕು ದಿನಗಳ ಬಳಿಕ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇವರ ಕೆನ್ನೆಗೆ ಬಾರಿಸುವುದು ತುಳಿಯುವುದು ಮಾತ್ರ ಅಲ್ಲ ಬೆನ್ನಟ್ಟಿ ಹೊಡೆಯುವುದು ಕೂಡ ವಿಡಿಯೋದಲ್ಲಿ ಕಾಣಬಹುದಾಗಿದೆ. ಹೀಗೆ ದೌರ್ಜನ್ಯ ಎಸಗಿದವನ ಹೆಸರು ಅಕ್ಷಯ್ ಎಂದಾಗಿದ್ದು ಪೊಲೀಸರು ಈತನನ್ನು ಬಂಧಿಸಿದ್ದಾರೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಜುಡಿಷಿಯಲ್ ರಿಮಾಂಡ್ ವಿಧಿಸಲಾಗಿದೆ ಎಂದು ಸ್ಟೇಷನ್ ಹೌಸ್ ಆಫೀಸರ್ ಉದಯ್ ವೀರ ಸಿಂಗ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಈತ ನಿರುದ್ಯೋಗಿ ಎಂದು ಕೂಡ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.
ನಾವು ಕೆಲಸವನ್ನು ಹುಡುಕುತ್ತಾ ಕಸಬಾ ರುದಯಾನ್ ಎಂಬ ಪ್ರದೇಶದಲ್ಲಿ ಹೋಗ್ತಾ ಇದ್ದೆವು. ಈ ಸಂದರ್ಭದಲ್ಲಿ ನಮ್ಮ ಮೇಲೆ ಆತ ಹಲ್ಲೆ ನಡೆಸಿದ್ದಾನೆ. ಥಳಿಸಿದ್ದಾನೆ. ತುಳಿದಿದ್ದಾನೆ. ಬೆನ್ನಟ್ಟಿದ್ದಾನೆ. ನಾವು ರಸ್ತೆಯಲ್ಲಿ ನಡೆಯುತ್ತಿರುವಾಗ ಆತ ಹಾರ್ನ್ ಮಾಡಿದ. ಆತ ಸ್ಕೂಟರಿನಲ್ಲಿದ್ದ. ಆ ಬಳಿಕ ಆತ ನಮ್ಮನ್ನು ಥಳಿಸಿದ. ನನಗೆ ಯಾಕೆ ದಾರಿ ಬಿಟ್ಟು ಕೊಡಲಿಲ್ಲ ಎಂದು ಕೇಳಿದ. ಅತ್ಯಂತ ಕೆಟ್ಟ ಭಾಷೆಯಲ್ಲಿ ಬೈಗುಳವನ್ನು ಸುರಿಸಿದ ಅದನ್ನು ನಾವು ಪ್ರಶ್ನಿಸಿದಾಗ ದೌರ್ಜನ್ಯವನ್ನು ಇನ್ನಷ್ಟು ತೀವ್ರ ಗೊಳಿಸಿದ ಎಂದು ದೂರುದಾರರಾದ ಅಬ್ದುಲ್ ಸಲೀಂ ಪೊಲೀಸರಿಗೆ ತಿಳಿಸಿದ್ದಾರೆ.
ಮುಸ್ಲಿಮರ ವಿರುದ್ಧ ದೇಶಾದ್ಯಂತ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ ಎಂಬ ಆರೋಪದ ಬೆನ್ನಲ್ಲೇ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಪ್ರತಿಕ್ರಿಯೆಗೆ ಕಾರಣವಾಗಿತ್ತು.
ಈ ದೇಶದಲ್ಲಿ ಮುಸ್ಲಿಮರನ್ನು ಹೀನಾಯವಾಗಿ ಕಾಣಲಾಗ್ತಾ ಇದೆ ಮತ್ತು ಅವರ ವಿರುದ್ಧ ದೌರ್ಜನ್ಯಗಳು ಮಿತಿ ಮೀರ್ತಾ ಇವೆ ಎಂಬ ಅಭಿಪ್ರಾಯ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿದೆ












