ಸನ್ಮಾರ್ಗ ವಾರ್ತೆ
ಗಾಝಾದಲ್ಲಿ ಇಸ್ರೇಲ್ ನಡೆಸಿರುವ ಜನಾಂಗ ಹತ್ಯೆಯ ಕೃತ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದೇಶಿ ನಾಗರಿಕರು ಭಾಗಿಯಾಗಿದ್ದಾರೆ ಎಂಬ ಬೆಚ್ಚಿ ಬೀಳಿಸುವ ವರದಿ ಬಹಿರಂಗವಾಗಿದೆ. ಇಸ್ರೇಲಿ ಸೇನೆಯಲ್ಲಿರುವ 50,000 ಕ್ಕಿಂತಲೂ ಅಧಿಕ ಯೋಧರು ಇನ್ನೊಂದು ರಾಷ್ಟ್ರದ ಪೌರತ್ವವನ್ನು ಹೊಂದಿದವರಾಗಿದ್ದಾರೆ ಎಂದು ಇಸ್ರೇಲಿನ ಸಂಘಟನೆಯಾದ ಹಟ್ಲಾಚ್ ಬಹಿರಂಗಪಡಿಸಿದೆ.
ಈ ಯೋಧರಲ್ಲಿ ಹೆಚ್ಚಿನವರು ಅಮೆರಿಕ ಅಥವಾ ಯುರೋಪಿಯನ್ ರಾಷ್ಟ್ರಗಳ ಪಾಸ್ಪೋರ್ಟ್ ಅನ್ನು ಹೊಂದಿದವರಾಗಿದ್ದಾರೆ.
ಯುದ್ಧಾಪರಾಧದಲ್ಲಿ ಭಾಗಿಯಾದ ವಿದೇಶಿ ನಾಗರಿಕರನ್ನು ಪತ್ತೆಹಚ್ಚಬೇಕು ಮತ್ತು ಅವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಾಗತಿಕ ಮಾನವ ಹಕ್ಕು ಸಂಘಟನೆಗಳು ಪ್ರಯತ್ನಿಸುತ್ತಿರುವುದರ ನಡುವೆಯೇ ಈ ಮಾಹಿತಿ ಬಹಿರಂಗವಾಗಿದೆ.
ಈ ಯೋಧರಲ್ಲಿ ಅನೇಕರು ತಾವು ನಡೆಸಿರುವ ಭೀಭತ್ಸ ಕೃತ್ಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ ಇದೀಗ ಅವರ ವೈಯಕ್ತಿಕ ಮಾಹಿತಿಗಳು ಬಹಿರಂಗವಾಗುತ್ತಿವೆ.
ಇಸ್ರೇಲಿ ಸೇನೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿರುವ ವಿದೇಶಿ ನಾಗರಿಕರಲ್ಲಿ ಅಮೆರಿಕದವರು ಮುಂದಿದ್ದಾರೆ. ಇಸ್ರೇಲಿ ಸೇನೆಯಲ್ಲಿ 12,135 ಅಮೆರಿಕದ ಪೌರತ್ವವನ್ನು ಹೊಂದಿದವರು ಇದ್ದಾರೆ. 6100ರಷ್ಟು ಮಂದಿ ಫ್ರಾನ್ಸ್ ನ ಪೌರತ್ವವನ್ನು ಹೊಂದಿದವರು ಇದ್ದಾರೆ. ರಷ್ಯಾದ ಪೌರತ್ವವನ್ನು ಪಡೆದ 5000 ಮಂದಿ, ಯೂಕ್ರೇನಿನ 3900 ಮಂದಿ, ಜರ್ಮನಿಯ 1668 ಮಂದಿ ಇಸ್ರೇಲ್ ಸೇನೆಯಲ್ಲಿದ್ದು ಗಾಝಾದ ನರಮೇಧದಲ್ಲಿ ಭಾಗಿಯಾಗಿದ್ದಾರೆ.
ವಿಶೇಷ ಏನೆಂದರೆ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಲ್ಲಿ ಇಸ್ರೇಲಿನ ವಿರುದ್ಧ ಜನಾಂಗ ಹತ್ಯೆಯ ಪ್ರಕರಣವನ್ನು ದಾಖಲಿಸಿರುವ ದಕ್ಷಿಣ ಆಫ್ರಿಕಾದ 589 ಮಂದಿ ನಾಗರಿಕರು ಇಸ್ರೇಲ್ ಸೇನೆಯಲ್ಲಿ ಕೆಲಸ ಮಾಡಿದ್ದು ಗಾಝಾ ದಾಳಿಯಲ್ಲಿ ಭಾಗಿಯಾಗಿದ್ದಾರೆ.
ಇಸ್ರೇಲಿನ ನಾಗರಿಕತ್ವದ ಜೊತೆಗೆ 686 ಮಂದಿಗೆ ಬ್ರೆಜಿಲ್ ನ ನಾಗರಿಕತ್ವವು ಇದೆ. ಅರ್ಜೆಂಟೀನಾದ 69 ಮಂದಿ, ಕೆನಡಾದ 55 ಮಂದಿ, ಕೊಲಂಬಿಯಾದ 112 ಮಂದಿ, ಮ್ಯಾಕ್ಸಿಕೊದ 181 ಮಂದಿ ನಾಗರಿಕರು ಇಸ್ರೇಲ್ ಸೇನೆಯಲ್ಲಿ ಸಕ್ರಿಯರಾಗಿದ್ದಾರೆ.












