ಸನ್ಮಾರ್ಗ ವಾರ್ತೆ
ಹೊಸ ದೆಹಲಿ: ಭಾರತ ಮತ್ತು ಕೆನಡಾ ದೇಶಗಳು ಈ ವರ್ಷದ ಅಂತ್ಯದೊಳಗೆ ಮುಕ್ತ ವ್ಯಾಪಾರ ಒಪ್ಪಂದವನ್ನು (Free trade pact) ಪೂರ್ಣಗೊಳಿಸುವ ಗುರಿ ಹೊಂದಿವೆ ಎಂದು ಕೆನಡಾ ಪ್ರಧಾನಿ ಮಾರ್ಕ್ ಕಾರ್ನೆ ಸೋಮವಾರ ತಿಳಿಸಿದರು. ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಘರ್ಷಗಳನ್ನು ಬದಿಗಿಟ್ಟು, ಆರ್ಥಿಕ ಸಂಬಂಧಗಳನ್ನು ಮರಳಿ ಹಳಿಗೆ ತರುವ ಪ್ರಯತ್ನವಾಗಿ ಅವರು ಮೊದಲ ಬಾರಿಗೆ ನವದೆಹಲಿಗೆ ಭೇಟಿ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾರ್ನೆ, 2024-25ರಲ್ಲಿ ಸುಮಾರು 9 ಬಿಲಿಯನ್ ಡಾಲರ್ ಇದ್ದ ದ್ವಿಪಕ್ಷೀಯ ವ್ಯಾಪಾರವನ್ನು 2030ರ ವೇಳೆಗೆ 50 ಬಿಲಿಯನ್ ಡಾಲರ್ಗೆ ಹೆಚ್ಚಿಸಲು ನವದೆಹಲಿ ಮತ್ತು ಒಟಾವಾ ಆಶಿಸಿವೆ ಎಂದು ಹೇಳಿದರು.
ಸಮಗ್ರ ಆರ್ಥಿಕ ಪಾಲುದಾರಿಕೆಯ ಕುರಿತಾದ ನಿಯಮಾವಳಿಗಳಿಗೆ (terms of reference) ಉಭಯ ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಅಲ್ಲದೆ, ಉಭಯ ರಾಷ್ಟ್ರಗಳು 2.6 ಬಿಲಿಯನ್ ಡಾಲರ್ ಮೌಲ್ಯದ ಯುರೇನಿಯಂ ಒಪ್ಪಂದಕ್ಕೆ ಸಹಿ ಹಾಕಿವೆ ಮತ್ತು ಸಣ್ಣ ಪ್ರಮಾಣದ ಮಾಡ್ಯುಲರ್ ಪರಮಾಣು ರಿಯಾಕ್ಟರ್ಗಳು ಹಾಗೂ ಸುಧಾರಿತ ರಿಯಾಕ್ಟರ್ಗಳ ನಿರ್ಮಾಣಕ್ಕಾಗಿ ಒಟ್ಟಾಗಿ ಕೆಲಸ ಮಾಡಲಿವೆ ಎಂದು ತಿಳಿಸಿವೆ. “ನಾಗರಿಕ ಪರಮಾಣು ಇಂಧನ ಕ್ಷೇತ್ರದಲ್ಲಿ, ಯುರೇನಿಯಂನ ದೀರ್ಘಾವಧಿ ಪೂರೈಕೆಗಾಗಿ ನಾವು ಒಂದು ಐತಿಹಾಸಿಕ ಒಪ್ಪಂದವನ್ನು ಮಾಡಿಕೊಂಡಿದ್ದೇವೆ” ಎಂದು ಪ್ರಧಾನಿ ಮೋದಿ ಹೇಳಿದರು.
ಭಾರತದ ಪರಮಾಣು ಮಹತ್ವಾಕಾಂಕ್ಷೆಗಳನ್ನು ಬೆಂಬಲಿಸಲು ಮತ್ತು ಸ್ವಚ್ಛ ಹಾಗೂ ವಿಶ್ವಾಸಾರ್ಹ ವಿದ್ಯುತ್ ಶಕ್ತಿಯತ್ತ ಸಾಗಲು ಭಾರತ ಸರ್ಕಾರ ಮತ್ತು ಕೆನಡಾದ ಕ್ಯಾಮೆಕೊ (Cameco) ಸಂಸ್ಥೆಯು ಯುರೇನಿಯಂ ಪೂರೈಕೆ ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ಕಾರ್ನೆ ತಿಳಿಸಿದರು.
ಕೆನಡಾದ ಸಿಖ್ ಪ್ರತ್ಯೇಕತಾವಾದಿಯ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಅಂದಿನ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ ನಂತರ 2023 ರಲ್ಲಿ ಭಾರತ ಮತ್ತು ಕೆನಡಾ ನಡುವಿನ ಸಂಬಂಧವು ತೀವ್ರವಾಗಿ ಹದಗೆಟ್ಟಿತ್ತು. ಈ ಆರೋಪಗಳನ್ನು ನವದೆಹಲಿಯು “ಅಸಂಬದ್ಧ” ಎಂದು ತಳ್ಳಿಹಾಕಿತ್ತು.
ಈ ವಿವಾದವು ಮತ್ತಷ್ಟು ತೀವ್ರಗೊಂಡು, ರಾಜತಾಂತ್ರಿಕರ ಉಚ್ಛಾಟನೆ ಮತ್ತು ವ್ಯಾಪಾರ ಮಾತುಕತೆಗಳ ಸ್ಥಗಿತಕ್ಕೆ ಕಾರಣವಾಗಿತ್ತು.












