ಬೆಂಗಳೂರು, ಜು.4: ಬಿಜೆಪಿಯ ಸದ್ದಿಲ್ಲದ ಆಪರೇಷನ್ ಕಮಲ ಟುಸ್ಸಾಗುವ ಸಾಧ್ಯತೆ ಗೋಚರಿಸುತ್ತಿದೆ. ಸೋಮವಾರದಂದು ಬಹಳ ಅವಸವಸರವಾಗಿ ನೀಡಿದ ಇಬ್ಬರ ರಾಜಿನಾಮೆ ಕಾಂಗ್ರೆಸ್ ಪಾಳಯದಲ್ಲಿ ಮಿಂಚಿನ ಸಂಚಾರ ಸೃಷ್ಟಿಸಿದೆ. ರಾಜಿನಾಮೆ ನೀಡಿದ ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ಸದ್ದಿಲ್ಲದೆ ಮಾಡಬೇಕಾಗಿದ್ದ ಬಿಜೆಪಿಯ ಆಪರೇಷನ್ ಕಮಲವನ್ನು ಸುದ್ದಿಯಾಗುವಂತೆ ಮಾಡಿತು. ಇದು ಬಿಜೆಪಿಯಲ್ಲಿ ಅಸಮಾಧಾನ ಸೃಷ್ಟಿಸಿದೆ ಎನ್ನಲಾಗುತ್ತಿದೆ.
ಇನ್ನೊಂದೆಡೆ ಶಾಸಕ ಸ್ಥಾನಕ್ಕೆ ಆನಂದ್ ಸಿಂಗ್ ರಾಜೀನಾಮೆ ಕೊಟ್ಟದ್ದು ಅತೃಪ್ತರ ಪಟ್ಟಿಯಲ್ಲಿದ್ದವರಲ್ಲಿಯೂ ಅಸಮಾಧಾನ ತರಿಸಿದೆ. ಆನಂದ್ಸಿಂಗ್ ಏನು ಮಾಡಲಿದ್ದಾರೆ ಎಂದು ಕಾಂಗ್ರೆಸ್ನ ಕೈಬಿಡುವ ಸಿದ್ಧತೆಯಲ್ಲಿದ್ದ ಅತೃಪ್ತರಿಗೆ ಮಾಹಿತಿ ಇಲ್ಲ. ಆನಂದ್ ಸಿಂಗ್ ರಾಜೀನಾಮೆ ತಿಳಿಯುತ್ತಿದ್ದಂತೆ ರಮೇಶ್ ಜಾರಕಿ ಹೊಳಿ ತನ್ನ ರಾಜೀನಾಮೆ ಪತ್ರದೊಂದಿಗೆ ಮಾಧ್ಯಮಗಳನ್ನು ಭೇಟಿಯಾಗಿ ಅವರಿಗೆ ನೀಡಿದರು. ಅವರು ಸ್ಪೀಕರ್ ಗೆ ರಾಜೀನಾಮೆ ಸಲ್ಲಿಸಿಲ್ಲ. ಜೊತೆಗೆ ಅತೃಪ್ತ ಶಾಸಕರಲ್ಲೇ ಬಂಡಾಯದ ಕುರಿತು ಸ್ಪಷ್ಟ ನಿಲುವು ಇಲ್ಲ. ಬಿಜೆಪಿ ನಾಯಕರು ಒಮ್ಮತಕ್ಕೆ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಅತೃಪ್ತಿಯಲ್ಲಿರುವ ಬಿಸಿ ಪಾಟೀಲ, ರಮೇಶ್ ಜಾರಕಿಹೊಳಿ, ನಾಗೇಂದ್ರರ ನಡುವೆ ಸಾಮರಸ್ಯದ ಕೊರತೆಯೂ ತಲೆದೋರಿದೆ.












