ಢಾಕ, ಜು.4: ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾರ ಮೇಲೆ 25 ವರ್ಷ ಹಿಂದೆ ಹಲ್ಲೆ ನಡೆಸಲು ಯತ್ನಿಸಿದ ಪ್ರಕರಣದಲ್ಲಿ ಒಂಬತ್ತು ಮಂದಿ ಬಿಎನ್ಪಿ ಬೆಂಬಲಿಗರಿಗೆ ಮರಣದಂಡನೆ ವಿಧಿಸಿ ಕೋರ್ಟು ತೀರ್ಪು ನೀಡಿದೆ. ಹಸೀನಾ ಪ್ರತಿಪಕ್ಷ ನಾಯಕಿಯಾಗಿದ್ದಾಗ ದೇಶದಾದ್ಯಂತ ರಾಲಿ ನಡೆಸಿದ್ದರು. 1994 ಸೆಪ್ಟಂಬರ್ 23ಕ್ಕೆ ಪಬ್ನ ಜಿಲ್ಲೆಯ ಇಷ್ವರ್ದಿಯಲ್ಲಿ ಹಸೀನಾ ಪ್ರಯಾಣಿಸುತ್ತಿದ್ದ ರೈಲಿನಲ್ಲಿ ಹಲ್ಲೆ ಯತ್ನ ನಡೆಸಲಾಗಿತ್ತು ಎಂದು ಆರೋಪಿಸಿ ಬಾಂಗ್ಲಾದೇಶ್ ನ್ಯಾಶನಲ್ ಪಾರ್ಟಿ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆಗ ಖಾಲಿದಾ ಝಿಯ ಪ್ರಧಾನಿಯಾಗಿದ್ದರು.
ಪ್ರಕರಣದಲ್ಲಿ 25 ಮಂದಿಗೆ ಜೀವಾವಾಧಿ ಶಿಕ್ಷೆ, 13 ಮಂದಿಗೆ ಹತ್ತು ವರ್ಷ ಜೈಲು ಶಿಕ್ಷೆಯನ್ನು ಪಬ್ನಾ ಜಿಲ್ಲಾ ಕೋರ್ಟಿನ ಅಡಿಶನಲ್ ಸೆಶನ್ಸ್ ಜಡ್ಜ್ ರುಸ್ತಂ ಅಲಿ ತೀರ್ಪು ನೀಡಿದ್ದಾರೆ. 135 ಮಂದಿಯ ವಿರುದ್ಧ ರೈಲ್ವೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಬಿಎನ್ಪಿ ಸರಕಾರದ ಕಾಲದ ಪ್ರಕರಣ ಕುಂಟುತ್ತಾ ಮುಂದುವರಿದಿತ್ತು. ಹಸೀನಾರ ಅವಾಮಿ ಲೀಗ್ ಅಧಿಕಾರಕ್ಕೆ ಬಂದ ಬಳಿಕ 53 ಮಂದಿಯನ್ನು ಆರೋಪಿಯಾಗಿ ಹೆಸರಿಸಿ ಪೊಲೀಸರು ಹೊಸ ಆರೋಪ ಪಟ್ಟಿಯನ್ನು ಕೋರ್ಟಿಗೆ ಸಲ್ಲಿಸಿದ್ದರು.












