✍️ ಅನ್ಶುಲ್ ತ್ರಿವೇದಿ
ಎಪ್ಸ್ಟೀನ್ ಫೈಲ್ಗಳು (The Epstein Files) ಪ್ರಪಂಚದಾದ್ಯಂತ ರಾಜಕೀಯ ಭೂಕಂಪವನ್ನು ಉಂಟುಮಾಡಿವೆ. ಭಾರತದಲ್ಲೂ ಇದರ ಕಂಪನಗಳು ಗೋಚರಿಸಿವೆ. ಈ ಬಹಿರಂಗಪಡಿಸುವಿಕೆಗಳು ಬೆಳಕಿಗೆ ಬಂದಾಗಿನಿಂದ ಭಾರತೀಯ ರಾಜಕೀಯ ರಂಗವು ಅಭೂತಪೂರ್ವ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಸಂಸತ್ತಿನಲ್ಲಿ ಚರ್ಚೆಯಿಲ್ಲದೆ ಅಥವಾ ಸ್ವಂತ ಸಚಿವ ಸಂಪುಟದೊಂದಿಗೆ ಪ್ರಾಥಮಿಕ ಸಮಾಲೋಚನೆಯೂ ಇಲ್ಲದೆ ಪ್ರಧಾನ ಮಂತ್ರಿಗಳು ಇಂಡೋ-ಯುಎಸ್ ವ್ಯಾಪಾರ ಒಪ್ಪಂದವನ್ನು ಅವಸರದಲ್ಲಿ ಅಂಗೀಕರಿಸಿದರು. ನಂತರ ಅವರು ಈ ‘ಐತಿಹಾಸಿಕ’ ಒಪ್ಪಂದದ ಅಂಗೀಕಾರಕ್ಕಾಗಿ ಸ್ವಯಂ-ಅಭಿನಂದನಾ ಸಮಾರಂಭವನ್ನು ಆಯೋಜಿಸಿದರು; ಟ್ರಂಪ್ ಆಡಳಿತವು ಪರಿಣಾಮಕಾರಿಯಾಗಿ ಹೆಚ್ಚಿಸಿದ ಸುಂಕಗಳ ಹೇರಿಕೆಯನ್ನು ದೊಡ್ಡ ಸಾಧನೆಯೆಂದು ಬಿಂಬಿಸಲು ಅವರು ಪ್ರಯತ್ನಿಸಿದರು.
ಇಂಡೋ-ಯುಎಸ್ ವ್ಯಾಪಾರ ಒಪ್ಪಂದವು ನಮ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಹಾಗೂ ರೈತರ ಹಿತಾಸಕ್ತಿಗಳಿಗೆ ಹಾನಿಕಾರಕ ಮಾತ್ರವಲ್ಲ; ಅದಕ್ಕಿಂತ ಮುಖ್ಯವಾಗಿ, ಇದು ನಮ್ಮ ಇಂಧನ ಭದ್ರತೆಯನ್ನು ಅಪಾಯಕ್ಕೆ ಸಿಲುಕಿಸುತ್ತದೆ ಮತ್ತು ಆ ಮೂಲಕ ನಮ್ಮ ರಾಷ್ಟ್ರದ ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತದೆ. ಹುರ್ಮುಝ್ ಜಲ ಸಂಧಿಯನ್ನು ಮುಚ್ಚಿದ ನಂತರ ರಷ್ಯಾದ ತೈಲವನ್ನು ಖರೀದಿಸಲು ಭಾರತಕ್ಕೆ ‘ತಾತ್ಕಾಲಿಕ ವಿನಾಯಿತಿ’ ನೀಡಲಾಗಿದೆ ಎಂದು ತಿಳಿಸಿದ ಯುಎಸ್ ಹಣಕಾಸು ಕಾರ್ಯದರ್ಶಿಯ ಸಂದೇಶವು ಇದನ್ನು ಖಚಿತಪಡಿಸಿದೆ. ಬದಲಾಗುತ್ತಿರುವ ಜಗತ್ತು ಮತ್ತು ಟ್ರಂಪ್ ಆಡಳಿತದ ವಿಭಿನ್ನ ಶೈಲಿಯನ್ನೇ ನೆಪ ಮಾಡಿಕೊಂಡ ಸರ್ಕಾರ, ಈ ಸೋಲನ್ನು `ಹೊಸ ಸಹಜ ಸ್ಥಿತಿ’ ಎಂದು ಕರೆದು ಹಗುರವಾಗಿ ಕಾಣಲು ಪ್ರಯತ್ನಿಸಿತು.
ಒಂದು ದುರಂತ ವ್ಯಂಗ್ಯ
ನಾವು ವಿಶ್ವ ವ್ಯವಸ್ಥೆಯ ಕ್ಷಿಪ್ರ ರೂಪಾಂತರಕ್ಕೆ ಸಾಕ್ಷಿಯಾಗುತ್ತಿದ್ದೇವೆ ಎಂಬುದು ನಿಜ, ಆದರೆ ಅನೇಕ ವಿಶ್ವ ನಾಯಕರು ವಿಭಿನ್ನವಾಗಿ ಕಾರ್ಯ ನಿರ್ವಹಿಸಲು ಆಯ್ಕೆ ಮಾಡಿಕೊಂಡಿದ್ದಾರೆ; ಉದಾಹರಣೆಗೆ, ಬ್ರೆಜಿಲ್ ಮತ್ತು ಸ್ಪೇನ್ನ ಸಮಾಜವಾದಿ ಅಧ್ಯಕ್ಷರಾದ ಲೂಲಾ ಡಾ ಸಿಲ್ವಾ ಮತ್ತು ಪೆಡ್ರೊ ಸ್ಯಾಂಚೆಜ್ ಅಂತಹ ಬೆದರಿಕೆಗಳ ವಿರುದ್ಧ ಧೈರ್ಯವಾಗಿ ನಿಂತಿದ್ದಾರೆ. ಇನ್ನು ಕೆನಡಾದ ಪ್ರಧಾನಿ ಮಾರ್ಕ್ ಕಾರ್ನೆ ಅವರಂತಹವರು ನಿಯಮ ಆಧಾರಿತ ಅಂತರರಾಷ್ಟ್ರೀಯ ವ್ಯವಸ್ಥೆಯನ್ನು ಯುನೈಟೆಡ್ ಸ್ಟೇಟ್ಸ್ ವ್ಯವಸ್ಥಿತವಾಗಿ ದುರ್ಬಲ ಗೊಳಿಸುತ್ತಿರುವುದನ್ನು ತೀವ್ರವಾಗಿ ಟೀಕಿಸಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಮೋದಿರವರು ಭಾರತೀಯ ಜನರ ಮೇಲೆ ಹೇರಲಾಗುತ್ತಿರುವ ಅನ್ಯಾಯದ ಒಪ್ಪಂದವನ್ನು ಮೌನವಾಗಿ ಒಪ್ಪಿಕೊಂಡಿದ್ದಾರೆ.
ನಮ್ಮ ದೇಶೀಯ ರಾಜಕೀಯ ಚರ್ಚೆಗಳಲ್ಲಿ ರಾಷ್ಟ್ರವಾದವು ತನ್ನ ಶಕ್ತಿಯ ಉತ್ತುಂಗದಲ್ಲಿರುವ ಸಮಯದಲ್ಲಿ, ಭಾರತದ ರಾಷ್ಟ್ರೀಯ ಶಕ್ತಿ ಮತ್ತು ಪ್ರತಿಷ್ಠೆಯು ಅದರ ತಳಮಟ್ಟಕ್ಕೆ ಕುಸಿದಿರುವುದು ಒಂದು ದುರಂತ ವ್ಯಂಗ್ಯವಾಗಿದೆ. ಇನ್ನೂ ಮುಖ್ಯವಾಗಿ, ಮೋದಿ ಆಡಳಿತದ ಬೆಂಬಲಿಗರನ್ನು ಹೊರತುಪಡಿಸಿ ಉಳಿದೆಲ್ಲರಿಗೂ ಭಾರತದ ಸಾರ್ವಭೌಮತ್ವವು ಕ್ಷೀಣಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ರಾಷ್ಟ್ರೀಯ ಪ್ರತಿಷ್ಠೆಯ ಅವನತಿಯ ನಡುವೆಯೂ; ಸ್ವಘೋಷಿತ ರಾಷ್ಟ್ರವಾದಿಗಳು ಈ ರಾಷ್ಟ್ರೀಯ ಅವಮಾನದ ಮುಂದೆ ಮೌನವಾಗಿದ್ದಾರೆ. ಆದಾಗ್ಯೂ, ಅವರ ಮೌನವು ತಾಂತ್ರಿಕವಾದುದಲ್ಲ (tactical), ಬದಲಾಗಿ ರಾಷ್ಟ್ರೀಯ ಹಿತಾಸಕ್ತಿ ಎಂದು ಅವರು ಯಾವುದನ್ನು ಪರಿಗಣಿಸುತ್ತಾರೋ ಅದರ ತಿಳುವಳಿಕೆಯಿಂದ ಅದು ಬಂದಿದೆ ಎಂಬುದನ್ನು ಒತ್ತಿಹೇಳಬೇಕು.
ರಾಷ್ಟ್ರವಾದ ಮತ್ತು ರಾಷ್ಟ್ರೀಯ ಹಿತಾಸಕ್ತಿ
ರಾಷ್ಟ್ರೀಯ ಹಿತಾಸಕ್ತಿಯನ್ನು ವಿಶಾಲವಾಗಿ ರಾಷ್ಟ್ರ-ರಾಜ್ಯ(Nation-state)ದ ರಾಜಕೀಯ, ಆರ್ಥಿಕ ಮತ್ತು ಮಿಲಿಟರಿ ಸಾಮರ್ಥ್ಯಗಳ ಸಂರ ಕ್ಷಣೆ ಮತ್ತು ವಿಸ್ತರಣೆ ಎಂದು ವ್ಯಾಖ್ಯಾನಿಸಲಾಗುತ್ತದೆ. ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಪ್ರಮುಖ ಮತ್ತು ಅಮುಖ್ಯ ಘಟಕಗಳಿವೆ; ಪ್ರಮುಖ ಹಿತಾಸಕ್ತಿಗಳು ರಾಷ್ಟ್ರ-ರಾಜ್ಯದ ಅಸ್ತಿತ್ವಕ್ಕೆ ಸಂಬಂಧಿಸಿದ್ದರೆ, ಅಮುಖ್ಯ ಘಟಕಗಳು ಸಂಧಾನ ಮಾಡಿ ಕೊಳ್ಳಬಹುದಾದವುಗಳಾಗಿರುತ್ತವೆ.
ವಿದೇಶಾಂಗ ನೀತಿಯ ಪರಮ ಉದ್ದೇಶ ರಾಷ್ಟ್ರೀಯ ಹಿತಾಸಕ್ತಿಯ ರಕ್ಷಣೆ; ವಾಸ್ತವವಾಗಿ, ವಿದೇಶಾಂಗ ನೀತಿಯು ಸೈದ್ಧಾಂತಿಕ ಒಲವುಗಳಿಂದ ಮುಕ್ತವಾಗಿರಬೇಕು ಎಂಬುದು ವ್ಯಾಪಕವಾಗಿ ಒಪ್ಪಿತವಾಗಿದೆ. ಆದಾಗ್ಯೂ, ಪ್ರಾಯೋಗಿಕವಾಗಿ ದೇಶಗಳು ಸಾಮಾಜಿಕ-ರಾಜಕೀಯ ಶೂನ್ಯತೆಯಲ್ಲಿ ಕಾರ್ಯನಿರ್ವಹಿಸದ ಕಾರಣ, ನೀತಿಯನ್ನು ಆಲೋಚನೆಗಳಿಂದ ಸಂಪೂರ್ಣವಾಗಿ ಬೇರ್ಪಡಿಸಲು ಸಾಧ್ಯವಿಲ್ಲ. ರಾಷ್ಟ್ರೀಯ ಹಿತಾಸಕ್ತಿಗಳನ್ನು ವ್ಯಾಖ್ಯಾನಿಸುವಲ್ಲಿ ಮತ್ತು ಅದರ ಪ್ರಮುಖ ಹಾಗೂ ಅಮುಖ್ಯ ಘಟಕಗಳನ್ನು ಚಿತ್ರಿಸುವಲ್ಲಿ ರಾಷ್ಟ್ರವಾದದ ಆಲೋಚನೆಗಳು ಪ್ರಮುಖ ಪಾತ್ರವಹಿಸುತ್ತವೆ.
ಸ್ವಾತಂತ್ರ್ಯ ಬಂದಾಗಿನಿಂದ, ಭಾರತವು ರಾಷ್ಟ್ರವಾದದ ಎರಡು ವ್ಯತಿರಿಕ್ತ ವಿಚಾರಧಾರೆಗಳಿಂದ ಆಳಲ್ಪಟ್ಟಿದೆ. ವಸಾಹತುಶಾಹಿ ವಿರೋಧಿ ರಾಷ್ಟ್ರ ವಾದವು ಭಾರತವನ್ನು ಬಹುಸಂಸ್ಕೃತಿಯ ಸಮಾಜವೆಂದು ಕಂಡಿತು, ಇದು ವಸಾಹತುಶಾಹಿಯಿಂದಾಗಿ ಹಿಂದುಳಿದಿರುವಿಕೆ ಮತ್ತು ಬಡತನಕ್ಕೆ ತಳ್ಳಲ್ಪಟ್ಟಿದೆ ಎಂದು ಭಾವಿಸಿತು. ಆದ್ದರಿಂದ, ಸ್ವಾತಂತ್ರ್ಯೋತ್ತರ ಭಾರತದ ಸಾರ್ವಭೌಮತ್ವವನ್ನು ರಕ್ಷಿಸುವುದು ರಾಷ್ಟ್ರೀಯ ಹಿತಾಸಕ್ತಿಗೆ ಅತ್ಯಗತ್ಯವೆಂದು ಪರಿಗಣಿಸಲಾಯಿತು. ಅಲಿಪ್ತ ನೀತಿಯನ್ನು ಅನು ಸರಿಸುವ ಮೂಲಕ; ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸಲು ಸರ್ಕಾರಿ ನೇತೃತ್ವದ ಕೈಗಾರಿಕೀಕರಣವನ್ನು ಕೈಗೊಳ್ಳುವ ಮೂಲಕ ಮತ್ತು ಭಿನ್ನಾಭಿಪ್ರಾಯಗಳನ್ನು ಸಾಂಸ್ಥಿಕಗೊಳಿಸುವ ಮೂಲಕ ಕೋಮು ಸೌಹಾರ್ದತೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಇದನ್ನು ಸಾಧಿಸಲು ಪ್ರಯತ್ನಿಸಲಾಯಿತು.
ಮತ್ತೊಂದೆಡೆ, ಜನಾಂಗೀಯ ರಾಷ್ಟ್ರವಾದವು ಭಾರತವನ್ನು ಒಂದು ಹಿಂದೂ ರಾಷ್ಟ್ರವೆಂದು ಕಂಡಿತು, ಇದು ಮುಸ್ಲಿಮ್ ‘ಇತರರಿಂದ’ ಅಸ್ಥಿರಗೊಂಡಿದೆ ಮತ್ತು ಅವನತಿ ಹೊಂದಿದೆ ಎಂದು ಭಾವಿಸಿತು. ಹಿಂದೂಗಳು ಮತ್ತೊಮ್ಮೆ ತಮ್ಮ ಸ್ವಂತ ಭೂಮಿಯಲ್ಲಿ ಯಜಮಾನರಾದಾಗ ಮಾತ್ರ ರಾಷ್ಟ್ರವು ಅಭಿವೃದ್ಧಿ ಹೊಂದಲು ಸಾಧ್ಯ ಎಂಬುದು ಇವರ ವಾದ. ಆದ್ದರಿಂದ, ರಾಜಕೀಯ ಮತ್ತು ಸಾಂಸ್ಕೃತಿಕ ಅಂಚಿನಲ್ಲಿಡುವ ಮೂಲಕ ಆ ‘ಇತರರನ್ನು’ ಎದುರಿಸುವುದು ರಾಷ್ಟ್ರದ ಉಳಿವಿಗೆ ಅಗತ್ಯವೆಂದು ಮತ್ತು ನಮ್ಮ ರಾಷ್ಟ್ರೀಯ ಹಿತಾಸಕ್ತಿಗೆ ಪ್ರಮುಖವೆಂದು ಪರಿಗಣಿಸಲಾಯಿತು. ಈ ಪ್ರಾಥಮಿಕ ಉದ್ದೇಶವನ್ನು ಪೂರೈ ಸಲು ಮಾತ್ರ ಆರ್ಥಿಕ ಮತ್ತು ಮಿಲಿಟರಿ ಸಾಮರ್ಥ್ಯಗಳನ್ನು ಹೆಚ್ಚಿಸಬೇಕೆಂದು ಇವರು ನಂಬುತ್ತಾರೆ.
ರಾಷ್ಟ್ರವಾದದ ಸೋಗಿನ ವಿರುದ್ಧ ಜಾಗ್ರತೆ
ರಾಷ್ಟ್ರೀಯ ಹಿತಾಸಕ್ತಿಯ ಈ ವ್ಯಾಖ್ಯಾನವೇ ಮೋದಿ ಆಡಳಿತದ ನಡವಳಿಕೆ ಮತ್ತು ಅದರ ‘ರಾಷ್ಟ್ರವಾದಿ’ ಬೆಂಬಲಿಗರ ಮೌನವನ್ನು ವಿವರಿಸುತ್ತದೆ; ಏಕೆಂದರೆ, ಅವರು ‘ಆಂತರಿಕ ಪ್ರಾಬಲ್ಯವನ್ನು ಖಚಿತಪಡಿಸಿಕೊಳ್ಳಲು ಬಾಹ್ಯ ಅಧೀನತೆಯನ್ನು ಒಪ್ಪಿಕೊಳ್ಳುವುದು’ ಎಂಬ ತತ್ವದಿಂದ ಮಾರ್ಗದರ್ಶಿಸಲ್ಪಡುತ್ತಾರೆ. ಅಂದರೆ, ಅವರು ತಮ್ಮ ಸ್ವಂತ ರಾಷ್ಟ್ರದಲ್ಲಿ ಯಜಮಾನರಾಗಿ ಉಳಿಯಲು ಮತ್ತು ಇತರ ಸಮುದಾಯದವರ ಮೇಲೆ ಪ್ರಾಬಲ್ಯ ಸಾಧಿಸಲು ಅವಕಾಶ ವಿರುವವರೆಗೆ ಸಾರ್ವಭೌಮತ್ವದ ದುರ್ಬಲಗೊಳಿಸುವಿಕೆಯು ಅವರಿಗೆ ಸ್ವೀಕಾರಾ ರ್ಹವಾಗಿದೆ. ವಸಾಹತುಶಾಹಿ ಅಧೀನದ ಪರಿಸ್ಥಿತಿಯಲ್ಲೂ ಕೋಮು ಹೆಮ್ಮೆಯನ್ನು ಹೆಚ್ಚಿಸಬಹುದು ಎಂಬ ಕಾರಣಕ್ಕಾಗಿ ಅವರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸದಿರುವುದನ್ನು ಕೂಡ ಇದು ವಿವರಿಸುತ್ತದೆ.
ತನ್ನ ಪ್ರಖ್ಯಾತ ಗ್ರಂಥವಾದ ‘ನೇಷನ್ಸ್ ಅಂಡ್ ನ್ಯಾಶನಲಿಸಂ’ನಲ್ಲಿ (Nations and Nationalism), ಅರ್ನೆಸ್ಟ್ ಗೆಲ್ನರ್ ಅವರು ರಾಷ್ಟ್ರವಾದದ ಹಕ್ಕುಗಳನ್ನು ಯಥಾವತ್ತಾಗಿ ಒಪ್ಪಿಕೊಳ್ಳುವ ಬಗ್ಗೆ ನಮಗೆ ಎಚ್ಚರಿಕೆ ನೀಡುತ್ತಾರೆ. ಏಕೆಂದರೆ, “ರಾಷ್ಟ್ರವಾದವು ಹೊರನೋಟಕ್ಕೆ ಕಾಣುವಂತಿಲ್ಲ, ಮತ್ತು ಮುಖ್ಯವಾಗಿ ಅದು ತನ್ನನ್ನು ತಾನು ಹೇಗೆ ಅಂದುಕೊಂಡಿದೆಯೋ ಹಾಗೆಯೂ ಇಲ್ಲ.” ಸಂಘಪರಿವಾರ ಮತ್ತು ಅದರ ಬೆಂಬಲಿಗರ ಮೌನವು ಹಿಂದೂ ರಾಷ್ಟ್ರವಾದದ ಸೋಗನ್ನು ಬಯಲು ಮಾಡಿದೆ; ಏಕೆಂದರೆ ಅವರು ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುತ್ತೇವೆ ಎಂದು ಹೇಳಿಕೊಂಡರೂ, ವಾಸ್ತವವಾಗಿ ಅವರು ಕೇವಲ ಕೋಮು ಹಿತಾಸಕ್ತಿಗಳನ್ನು ರಕ್ಷಿಸುತ್ತಿದ್ದಾರೆ.
ಇತಿಹಾಸವು ನಮ್ಮ ಮುಂದೆ ಒಂದು ಕಠಿಣ ಆಯ್ಕೆಯನ್ನು ಇಟ್ಟಿದೆ – ನಮ್ಮ ರಾಷ್ಟ್ರವು ಜನಾಂಗೀಯ ಪ್ರತಿಷ್ಠೆಯಿಂದ ಮಾರ್ಗದರ್ಶಿಸಲ್ಪಡಬೇಕೇ ಅಥವಾ ಸ್ವಾಭಿಮಾನದಿಂದಲೇ ಎಂಬುದನ್ನು ನಾವು ಆರಿಸಿಕೊಳ್ಳಬೇಕಿದೆ. ನಮ್ಮ ರಾಷ್ಟ್ರವನ್ನು, ಅದರ ಸಾರ್ವಭೌಮತ್ವವನ್ನು ಸ್ವಾತಂತ್ರ್ಯ ಸಮಾನತೆ, ಭ್ರಾತೃತ್ವ ಮತ್ತು ಸ್ವಾಭಿಮಾನದ ತತ್ವಗಳ ಆಧಾರದ ಮೇಲೆ ರಾಷ್ಟ್ರವಾದವನ್ನು ಮರುಸ್ಥಾಪಿಸುವ ಮೂಲಕ ರಕ್ಷಿಸುವ ಸಮಯ ಇದಾಗಿದೆ.
ಕೃಪೆ: thewire.in












