ತಮಿಳುನಾಡು ಚುನಾವಣೆ: BJP ಅಭ್ಯರ್ಥಿಗಳ ಪಟ್ಟಿ ಪ್ರಕಟ, ಅಣ್ಣಾಮಲೈಗೆ ಇಲ್ಲ ಅವಕಾಶ

0
458

ಸನ್ಮಾರ್ಗ ವಾರ್ತೆ

ತಮಿಳುನಾಡು ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷವು ಶುಕ್ರವಾರ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಒಟ್ಟು 27 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ, ರಾಜ್ಯದ ಒಟ್ಟು 234 ಸ್ಥಾನಗಳ ಪೈಕಿ ಈ 27 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಈ ಬಾರಿ ಪ್ರಮುಖವಾಗಿ ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಅಣ್ಣಾಮಲೈ ಅವರಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಲಭ್ಯವಾಗಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.

ಕೇಂದ್ರ ಸಚಿವ ಎಲ್.ಮುರುಗನ್ ಅವರು ಅವನಶಿ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದರೆ, ತೆಲಂಗಾಣದ ಮಾಜಿ ರಾಜ್ಯಪಾಲೆ ತಮಿಳ್‌ಇಸೈ ಸೌಂದರರಾಜನ್ ಅವರು ಮೈಲಾಪುರ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಸೀಟು ಹಂಚಿಕೆಯ ಪ್ರಕ್ರಿಯೆಯಲ್ಲಿ ಬಿಜೆಪಿಗೆ ಈ ಬಾರಿ ತಿರುನಲ್ವೇಲಿ ಹಾಗೂ ಕೊಯಮತ್ತೂರು ದಕ್ಷಿಣ ಕ್ಷೇತ್ರಗಳು ಒಲಿದಿಲ್ಲ. ಈ ಕಾರಣದಿಂದಾಗಿ, 2021ರ ಚುನಾವಣೆಯಲ್ಲಿ ತಿರುನಲ್ವೇಲಿಯಲ್ಲಿ ಜಯಗಳಿಸಿದ್ದ ಬಿಜೆಪಿ ಘಟಕದ ಅಧ್ಯಕ್ಷ ನೈನಾರ್ ನಾಗೇಂದ್ರನ್ ಹಾಗೂ ಕೊಯಮತ್ತೂರು ದಕ್ಷಿಣ ಕ್ಷೇತ್ರದಲ್ಲಿ ಕಮಲ್ ಹಾಸನ್‌ ಅವರನ್ನು ಸೋಲಿಸಿದ್ದ ಮಹಿಳಾ ಮೋರ್ಚಾ ಅಧ್ಯಕ್ಷೆ ವನತಿ ಶ್ರೀನಿವಾಸನ್ ಅವರು ಅನಿವಾರ್ಯವಾಗಿ ಬೇರೆ ಕ್ಷೇತ್ರಗಳತ್ತ ಮುಖ ಮಾಡುವಂತಾಗಿದೆ.

ಈ ಹೊಸ ಬದಲಾವಣೆಯಂತೆ ವನತಿ ಶ್ರೀನಿವಾಸನ್ ಅವರು ಈಗ ಕೊಯಮತ್ತೂರು (ಉತ್ತರ) ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇನ್ನುಳಿದಂತೆ ಮೊಡಕುರಿಚಿಯಿಂದ ಕೀರ್ತಿಕಾ ಶಿವಕುಮಾರ್, ವಿಲವಂಕೋಡ್‌ನಿಂದ ಎಸ್. ವಿಜಯಧರಣಿ ಮತ್ತು ತಳ್ಳಿ ಕ್ಷೇತ್ರದಿಂದ ನಾಗೇಶ್ ಕುಮಾರ್ ಅವರ ಹೆಸರನ್ನು ಅಭ್ಯರ್ಥಿಗಳಾಗಿ ಪಕ್ಷವು ಅಂತಿಮಗೊಳಿಸಿದೆ. ತಮಿಳುನಾಡು ವಿಧಾನಸಭೆಗೆ ಏಪ್ರಿಲ್ 23ರಂದು ಮತದಾನ ನಡೆಯಲಿದ್ದು, ಚುನಾವಣಾ ಫಲಿತಾಂಶವು ಮೇ 4ರಂದು ಪ್ರಕಟವಾಗಲಿದೆ.