ಇಂದುಗಿರಿ, ಜು. 8: ಸ್ವಯಂಘೋಷಿತ ದೇವಮಾನವನ ಸೂಚನೆಯಂತೆ ಮೂರು ವರ್ಷದ ಹೆಣ್ಣು ಮಗುವಿನ ಬಲಿ ನೀಡಲು ಸಜ್ಜಾಗಿದ್ದ ಕುಟುಂಬವನ್ನು ಪೊಲೀಸರು ಮತ್ತು ಊರವರು ತಡೆದಿದ್ದಾರೆ. ಅಸ್ಸಾಮ್ ನ ಇಂದುಗಿರಿಯಲ್ಲಿ ಘಟನೆ ನಡೆದಿದ್ದು ಶಾಲಾ ಅಧ್ಯಾಪಕ ಮತ್ತು ಕುಟುಂಬ ಮೂರು ವರ್ಷದ ಮಗುವನ್ನು ಬಲಿನೀಡಲು ಸಿದ್ಧವಾಗಿತ್ತು.
ವಿಜ್ಞಾನ ಅಧ್ಯಾಪಕ ಜಾದಬ್ ಸಹಾರಿಯ ಮನೆಯಲ್ಲಿ ವಿಶೇಷ ಧ್ವನಿ ಮತ್ತು ಹೊಗೆಯನ್ನು ಕಂಡ ಊರವರು ಪೊಲೀಸರು ಮತ್ತು ಪತ್ರಕರ್ತರಿಗೆ ತಿಳಿಸಿದ್ದರು. ನಂತರ ಪೊಲೀಸರು ಮನೆಗೆ ದಾಳಿ ಮಾಡಿ ಬಲಿಪೀಠದಲ್ಲಿ ಕುಳ್ಳಿರಿಸಿದ್ದ ಮಗುವನ್ನು ರಕ್ಷಿಸಿದ್ದಾರೆ. ಮಹಿಳೆ ಸಹಿತ ಕುಟುಂಬ ಸದಸ್ಯರನ್ನು ನಗ್ನಗೊಳಿಸಿ ಮಂತ್ರ ಜಪಿಸಲಾಗುತ್ತಿತ್ತು. ಮಗುವನ್ನು ಬಲಿನೀಡಲು ತಲವಾರಿನೊಂದಿಗೆ ದೇವಮಾನವ ಮನೆಯೊಳಗೆ ಸಿದ್ಧನಾಗಿ ನಿಂತಿದ್ದ. ಊರವರು ಮತ್ತು ಪೊಲೀಸರು ಮಗುವನ್ನು ರಕ್ಷಿಸಲು ಮುಂದಾದಾಗ ಕುಟುಂಬದವರು ಹಲ್ಲೆ ನಡೆಸಿದ್ದಾರೆ. ಕಲ್ಲುಗಳು, ಪಾತ್ರೆಗಳನ್ನು ಪೊಲೀಸರಿಗೆ ಎಸೆದಿದ್ದಾರೆ. ಮನೆಯ ಕಾರು ಬೈಕ್ ಟಿವಿ ಪ್ರಿಡ್ಜ್ ಸುಟ್ಟಿದ್ದಾರೆ. ಕೊನೆಗೆ ಪೊಲೀಸರು ಆಕಾಶಕ್ಕೆ ಐದು ಸುತ್ತು ಗುಂಡು ಹಾರಿಸಿದರು. ಅಧ್ಯಾಪಕ, ಅವರ ಪುತ್ರ ಮತ್ತು ಸ್ಥಳದಲ್ಲಿದ್ದ ಪತ್ರಕರ್ತರಿಗೆ ಸುಟ್ಟಗಾಯಗಳಾಗಿವೆ. ಮಗು ಅಧ್ಯಾಪಕನ ಸಹೋದರಿಯದ್ದಾಗಿದ್ದು ದೇವ ಮಾನವನ ನಿರ್ದೇಶ ಪ್ರಕಾರ ಬಲಿ ನೀಡಲು ಸಿದ್ಧತೆ ನಡೆಸಲಾಗಿತ್ತು. ಮಗುವಿನ ಹೆತ್ತವರು ಕೂಡ ಅಲ್ಲಿದ್ದರು. ಮೂರು ವರ್ಷ ಮೊದಲು ಕುಟುಂಬದ ಓರ್ವ ಬಾಲಕಿ ಮನೆಯೊಳಗೆ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಅದರ ನಂತರ ದೇವಮಾನವನಿಂದ ಅಧ್ಯಾಪಕನ ಕುಟುಂಬ ಮನೆಯಲ್ಲಿ ಪೂಜಾ ಕರ್ಮಗಳನ್ನು ಮಾಡಿಸುತ್ತಿದ್ದಾನೆ ಎಂದು ಊರವರು ತಿಳಿಸಿದ್ದಾರೆ. ದೇವಮಾನವ ಮತ್ತು ಕೆಲವು ಕುಟುಂಬ ಸದಸ್ಯರನ್ನು ಪೊಲೀಸರು ಬಂಧಿಸಿ ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.












