ಸನ್ಮಾರ್ಗ ವಿಶೇಷ ಸಂಪಾದಕೀಯ
ಮುದ್ರಣ ಮಾಧ್ಯಮ ತನ್ನ ಅಸ್ತಿತ್ವವನ್ನು ಕಳಕೊಳ್ಳುತ್ತಿದೆ ಮತ್ತು ಡಿಜಿಟಲ್ ಜಗತ್ತಿನ ಆವಿಷ್ಕಾರಗಳು ಓದುವ ಆಸಕ್ತಿಯನ್ನು ಕಡಿಮೆಗೊಳಿಸುತ್ತಿವೆ ಎಂಬ ಅಭಿಪ್ರಾಯ ಸುದ್ದಿ ಮನೆಯ ಒಳಗೂ ಹೊರಗೂ ವ್ಯಕ್ತವಾಗುತ್ತಿರುವುದರ ನಡುವೆಯೇ ಸನ್ಮಾರ್ಗ ಪತ್ರಿಕೆ ಬಹುಮುಖ್ಯ ಪರಿವರ್ತನೆಗೆ ಸಿದ್ಧವಾಗಿದೆ. ಎಪ್ರಿಲ್ 7ರಂದು ಬಿಡುಗಡೆಗೊಳ್ಳುವ ಸಂಚಿಕೆಯೊಂದಿಗೆ ಸನ್ಮಾರ್ಗಕ್ಕೆ 48 ವರ್ಷಗಳು ತುಂಬುತ್ತವೆ. ಎಪ್ರಿಲ್ 14ರಂದು 49ನೇ ವರ್ಷದ ಪ್ರಥಮ ಸಂಚಿಕೆ ಬಿಡುಗಡೆಯಾಗುತ್ತದೆ. ಆದರೆ ಈ ಸಂಚಿಕೆ ಎಪ್ರಿಲ್ 7ರಂದು ಬಿಡುಗಡೆಗೊಂಡ ಸನ್ಮಾರ್ಗ ಪತ್ರಿಕೆಯ ಆಕಾರದಲ್ಲಿ ಇರುವುದಿಲ್ಲ. ರೂಪ, ವಿನ್ಯಾಸ, ವಿಷಯ, ವಿಶ್ಲೇಷಣೆ ಇತ್ಯಾದಿ ಎಲ್ಲದರಲ್ಲೂ ಆಮೂಲಾಗ್ರ ಬದಲಾವಣೆಯೊಂದಿಗೆ ಪುಸ್ತಕ ರೂಪದಲ್ಲಿ ಸನ್ಮಾರ್ಗ ನಿಮ್ಮ ಕೈ ಸೇರಲಿದೆ.
1978 ಎಪ್ರಿಲ್ 23ರಂದು ಬಿಡುಗಡೆಯಾದ ಪ್ರಥಮ ಸಂಚಿಕೆಯಿಂದ ಪ್ರಾರಂಭವಾಗಿ ಈ ಸಂಚಿಕೆಯ ವರೆಗೆ ಸನ್ಮಾರ್ಗ ಉದ್ದಕ್ಕೂ ಟ್ಯಾಬ್ಲಾಯ್ಡ್ ಆಕಾರದಲ್ಲಿ ಪ್ರಕಟವಾಗುತ್ತಾ ಬಂದಿದೆ. ಆರಂಭದ ಒಂದು ವರ್ಷದ ಕಾಲ 1/4 ಡೆಮಿ ಆಕಾರದಲ್ಲಿ ಪ್ರಕಟವಾಗಿರುವುದನ್ನು ಬಿಟ್ಟರೆ, ಉಳಿದಂತೆ ಸನ್ಮಾರ್ಗ ತನ್ನ ಆಕಾರದಲ್ಲಿ ಬದಲಾವಣೆಯನ್ನು ಮಾಡಿಕೊಂಡದ್ದಿಲ್ಲ. ರಮಝಾನ್, ಈದ್, ಸೀರತ್ ವಿಶೇಷಾಂಕಗಳು ಮತ್ತು ವಿಶೇಷ ಸಂದರ್ಭದ ಸಂಚಿಕೆಗಳನ್ನು ಮಾತ್ರ ಈವರೆಗೆ ಸನ್ಮಾರ್ಗ ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಾ ಬಂದಿದೆ. ನಿಜವಾಗಿ,
ಸನ್ಮಾರ್ಗಕ್ಕೆ ಸವಾಲುಗಳು ಹೊಸತಲ್ಲ. 1978 ಎಪ್ರಿಲ್ 23ರಂದು ಸನ್ಮಾರ್ಗದ ಮೊದಲ ಸಂಚಿಕೆ ಬಿಡುಗಡೆಗೊಳಿಸುವಾಗಲೂ ಸವಾಲಿತ್ತು. ಆದರೆ ಆಗಿನ ಸವಾಲು ಈಗಿನಂತೆ ಡಿಜಿಟಲ್ ಯುಗದ ಸವಾಲಾಗಿರಲಿಲ್ಲ. ಹುಟ್ಟಿಕೊಂಡ ಪತ್ರಿಕೆಯೊಂದು ವರ್ಷವನ್ನು ಪೂರ್ತಿಗೊಳಿಸುವುದೇ ಸಾಧನೆ ಎಂಬಂತಿದ್ದ ಕಾಲದಲ್ಲಿ ಸನ್ಮಾರ್ಗ ಹುಟ್ಟಿಕೊಂಡಿತ್ತು. ಆ ಕಾಲದಲ್ಲಿ ಸಾಪ್ತಾಹಿಕ, ಪಾಕ್ಷಿಕ ಪತ್ರಿಕೆಗಳು ಇದ್ದುವಾದರೂ ಅವು ಹುಟ್ಟಿಕೊಂಡಷ್ಟೇ ಬೇಗ ಸಾಯುತ್ತಲೂ ಇದ್ದುವು. 6 ತಿಂಗಳು, ಒಂದು ವರ್ಷ, ಒಂದೂವರೆ ವರ್ಷ… ಹೀಗೆ ಕೆಲವು ಸಮಯ ಬಾಳಿ, ಒಂದು ದಿನ ಅಚಾನಕ್ಕಾಗಿ ಇವೆಲ್ಲ ಮರೆಯಾಗುತ್ತಿದ್ದ ಕಾರಣದಿಂದ ಸನ್ಮಾರ್ಗ ಪತ್ರಿಕೆಯ ಆರಂಭವನ್ನು ಜನರು ಅನುಮಾನದಿಂದ ನೋಡಿದ್ದರು. ಇದರ ಆಯುಷ್ಯವನ್ನು ಲೆಕ್ಕ ಹಾಕಿದವರೂ ಇದ್ದರು. ಅಷ್ಟಕ್ಕೂ,
ಇಂದಿನಂತೆ ಸಾರಿಗೆ ಸಂಪರ್ಕ ಇಲ್ಲದ ಮತ್ತು ಇಂಟರ್ನೆಟ್ ಕ್ರಾಂತಿ ಆಗಿಲ್ಲದ ಕಾಲದಲ್ಲಿ ಸನ್ಮಾರ್ಗ ಎಂಬ ಹೊಸ ಪತ್ರಿಕೆಯನ್ನು ಜನರ ಬಳಿಗೆ ತಲುಪಿಸುವುದು ಮತ್ತು ಜನರಿಗೆ ಮನವರಿಕೆ ಮಾಡಿಸುವುದು ಸುಲಭದ ಕೆಲಸವೂ ಆಗಿರಲಿಲ್ಲ. ಜನರನ್ನು ಮುಖತಃ ಭೇಟಿಯಾಗಬೇಕಿತ್ತು. ರಾಜ್ಯದ ಅಷ್ಟೂ ಜಿಲ್ಲೆಗಳಿಗೆ ಪ್ರಯಾಣಿಸಬೇಕಿತ್ತು. ಅಲ್ಲದೇ, ಇದು ಉದ್ಯಮ ಅಲ್ಲದೇ ಇರುವುದರಿಂದ ಮತ್ತು ಲಾಭದ ಉದ್ದೇಶವನ್ನಿಟ್ಟುಕೊಂಡು ಈ ಪತ್ರಿಕೆಯನ್ನು ಪ್ರಾರಂಭಿಸಿಲ್ಲವಾದ್ದರಿಂದ ಹಣ ಹೊಂದಿಸುವುದು ಬಹುದೊಡ್ಡ ಸವಾಲಾಗಿತ್ತು. ಆದರೆ,
ಈ ಎಲ್ಲ ಸವಾಲುಗಳನ್ನು ಸಕಾರಾತ್ಮಕವಾಗಿಯೇ ಸ್ವೀಕರಿಸಲು ಸನ್ಮಾರ್ಗ ಮುಂದಾಯಿತು. ಸ್ಥಾಪಕ ಸಂಪಾದಕ ಇಬ್ರಾಹೀಮ್ ಸಈದ್ರಿಂದ ಹಿಡಿದು ಪತ್ರಿಕೆಯ ಚಂದಾದಾರಿಕೆಗಾಗಿ ತಿಂಗಳುಗಟ್ಟಲೆ ಊರೂರು ಸುತ್ತಿದ್ದ ಮಹಾನುಭಾವರ ವರೆಗೆ, ಎಲ್ಲರೂ ಈ ಪತ್ರಿಕೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಹಗಲಿರುಳು ಪ್ರಯತ್ನಿಸಿದರು. ನಿಧಾನಕ್ಕೆ ಸನ್ಮಾರ್ಗ ಜನರ ಮನೆ, ಮನ ತಲುಪತೊಡಗಿತು. ಸನ್ಮಾರ್ಗದ ಆಯುಷ್ಯದ ಬಗ್ಗೆ ಕಣಿ ಹೇಳಿದವರೇ ಅಭಿಮಾನದಿಂದ ಪತ್ರಿಕೆಯನ್ನು ಮೆಚ್ಚಿಕೊಳ್ಳುವಂಥ ವಾತಾವರಣವನ್ನು ಈ ಎಲ್ಲರೂ ಸೇರಿ ಸೃಷ್ಟಿಸಿದರು. ಹೀಗೆ, 48 ವರ್ಷಗಳ ಹಿಂದಿನ ಸಾಮಾಜಿಕ ವಾತಾವರಣ, ಜನರ ಮನಸ್ಥಿತಿ ಮತ್ತು ಸೀಮಿತ ಸೌಕರ್ಯಗಳಿಗೆ ಸಂಬಂಧಿಸಿ ಹೇಳುವುದಾದರೆ, ಅಸಾಧ್ಯವೆಂದು ಅಂದುಕೊಳ್ಳಲಾಗಿದ್ದ ಕೆಲಸವನ್ನು ಸನ್ಮಾರ್ಗ ಸೃಷ್ಟಿಕರ್ತನ ಅನುಗ್ರಹದಿಂದ ಸಾಧ್ಯವಾಗಿಸಿ ತೋರಿಸಿತು. ಹಾಗಂತ,
ಅಂದಿನಿಂದ ಇಂದಿನ ವರೆಗೆ ಸನ್ಮಾರ್ಗ ಆರ್ಥಿಕವಾಗಿ ಪರಮಸುಖಿ ಎಂಬ ಸುಸ್ಥಿತಿಗೆ ಎಂದೂ ತಲುಪಿಲ್ಲ. ಮೌಲ್ಯವನ್ನೇ ಮಾಧ್ಯಮ ಮಾನದಂಡವಾಗಿ ಆಯ್ದುಕೊಂಡಿರುವ ಸನ್ಮಾರ್ಗಕ್ಕೆ ಆರ್ಥಿಕ ಸುಸ್ಥಿತಿ ಸುಲಭವೂ ಅಲ್ಲ. ಸನ್ಮಾರ್ಗ ಅನೇಕ ವಿಷಯಗಳನ್ನು ತನ್ನ ಪಾಲಿಗೆ ಸ್ವಯಂ ನಿಷೇಧಿಸಿಕೊಂಡಿದೆ. ಬಡ್ಡಿ, ಮದ್ಯ, ತಂಬಾಕು, ಜ್ಯೋತಿಷ್ಯ… ಇತ್ಯಾದಿಗಳ ಜಾಹೀರಾತನ್ನು ಸನ್ಮಾರ್ಗ ಪ್ರಕಟಿಸುವುದಿಲ್ಲ. ನೈತಿಕ ಚೌಕಟ್ಟು ಮೀರಿದ ಸಿನಿಮಾಗಳ ಜಾಹೀರಾತಿಗೂ ಸನ್ಮಾರ್ಗದಲ್ಲಿ ಜಾಗ ಇಲ್ಲ. ಅಶ್ಲೀಲ ಎಂಬ ಪದದೊಳಗೆ ಬರುವ ಯಾವ ಚಿತ್ರವನ್ನೂ ಪ್ರಕಟಿಸುವುದಿಲ್ಲ. ಹೀಗೆ ತನಗೆ ತಾನೇ ನೈತಿಕತೆಯ ಬೇಲಿ ಹಾಕಿಕೊಂಡ ಪತ್ರಿಕೆಯು ದೊಡ್ಡಮಟ್ಟದಲ್ಲಿ ಜಾಹೀರಾತಿನ ಆದಾಯವನ್ನು ನಿರೀಕ್ಷಿಸುವಂತೆಯೂ ಇಲ್ಲ. ಹೀಗಿದ್ದೂ ಸನ್ಮಾರ್ಗ ಕಳೆದ 48 ವರ್ಷಗಳಿಂದ ನಿರಂತರವಾಗಿ ಪ್ರಕಟವಾಗುತ್ತಾ ಬಂದಿದೆ. ಹೀಗಿರುವಾಗಲೇ,
2000ನೇ ಇಸವಿಯಲ್ಲಿ ಅನುಪಮ ಎಂಬ ಮಹಿಳಾ ಮಾಸಿಕವನ್ನು ಪ್ರಕಟಿಸುವ ನಿರ್ಧಾರವನ್ನೂ ತಾಳಲಾಯಿತು. ರಾಜ್ಯದಲ್ಲಿಯೇ ಮೊಟ್ಟಮೊದಲ ಬಾರಿ ಮಹಿಳೆಯರೇ ಸೇರಿ ಪತ್ರಿಕೆ ನಡೆಸುವ ಐತಿಹಾಸಿಕ ಶಿಕ್ಷಣಕ್ಕೆ ಕನ್ನಡಿಗರು ಸಾಕ್ಷಿಯಾದರು.
2019ರಲ್ಲಿ ಸನ್ಮಾರ್ಗ ಮತ್ತೊಂದು ಸಾಹಸಕ್ಕಿಳಿಯಿತು. ಸನ್ಮಾರ್ಗ ವೆಬ್ ಪೋರ್ಟಲನ್ನು ಪ್ರಾರಂಭಿಸುವ ಮೂಲಕ ಡಿಜಿಟಲ್ ಜಗತ್ತಿನ ಬದಲಾವಣೆಗೆ ತನ್ನನ್ನು ಅರ್ಪಿಸಿಕೊಂಡಿತು. 2020ರಲ್ಲಿ ಪ್ರಾರಂಭವಾದ ಸನ್ಮಾರ್ಗ ನ್ಯೂಸ್ ಎಂಬ ಡಿಜಿಟಲ್ ಚಾನೆಲ್ ಅಂತೂ ಸನ್ಮಾರ್ಗದ ಈವರೆಗಿನ ಪಯಣದಲ್ಲಿ ಗಮನಾರ್ಹ ಮೈಲುಗಲ್ಲಾಗಿ ಗುರುತಿಗೀಡಾಯಿತು. ಸ್ವತಂತ್ರ ಟಿವಿ ಚಾನೆಲ್ ಬೇಕೆಂಬ ಓದುಗರು, ಹಿತೈಷಿಗಳ ಬಹುಕಾಲದ ಬೇಡಿಕೆಗೆ ತಕ್ಕಮಟ್ಟಿಗೆ ಸ್ಪಂದಿಸಲು ಈ ಡಿಜಿಟಲ್ ಚಾನೆಲ್ನಿಂದ ಸಾಧ್ಯವಾಯಿತು. ಇದೀಗ ಸನ್ಮಾರ್ಗ ಪತ್ರಿಕೆಯೇ ಪರಿವರ್ತನೆಗೆ ಸಿದ್ಧ ವಾಗಿದೆ. 48 ವರ್ಷಗಳ ಹಿಂದಿನ ಆಕಾರವನ್ನು ಮತ್ತು ನಿರೂಪಣಾ ಶೈಲಿ ಹಾಗೂ ವಿಷಯ ವಿಶ್ಲೇಷಣೆಯನ್ನು ಬದಲಿಸಿಕೊಂಡು ಹೊಸ ರೀತಿಯಲ್ಲಿ ಓದುಗರನ್ನು ತಲುಪಲು ಪತ್ರಿಕೆ ನಿರ್ಧರಿಸಿದೆ. ಹಾಗಂತ,
ಇಂಟರ್ನೆಟ್ ಕ್ರಾಂತಿಯ ಈ ಕಾಲದಲ್ಲಿ ಪತ್ರಿಕೆ ನಡೆಸುವುದು ಸುಲಭ ಅಲ್ಲ. ಮಾತ್ರವಲ್ಲ, ಓದುಗರನ್ನು ಹಿಡಿದಿಟ್ಟುಕೊಳ್ಳುವುದೂ ಸುಲಭ ಅಲ್ಲ. ಅಂದಹಾಗೆ, ಪತ್ರಿಕೆಗಳಿಗೆ ಓದುಗರು ಮತ್ತು ಖರೀದಿದಾರರು ಕಡಿಮೆಯಾಗುತ್ತಿದ್ದಾರೆ ಎಂಬ ಅಭಿಪ್ರಾಯಗಳೇನೇ ಇರಲಿ, ಕಳೆದ 48 ವರ್ಷಗಳಿಂದ ಸನ್ಮಾರ್ಗ ಒಂದು ನಿರ್ದಿಷ್ಟ ಓದುಗ ಮತ್ತು ಅಭಿಮಾನಿ ವರ್ಗವನ್ನು ಸೃಷ್ಟಿಸಿದೆ. ಪತ್ರಿಕೆ 48 ವರ್ಷಗಳ ಬಳಿಕವೂ ಉಳಿದು ಕೊಂಡಿದ್ದರೆ ಮತ್ತು ಹೊಸ ಬದಲಾವಣೆಯೊಂದಿಗೆ ಪ್ರಕಟವಾಗಲು ನಿರ್ಧರಿಸಿದ್ದರೆ, ಅದಕ್ಕೆ ಈ ಓದುಗ ವರ್ಗದ ಪ್ರೀತಿ ಮತ್ತು ಅಭಿಮಾನವೇ ಕಾರಣ. ಇದರ ಜೊತೆಗೇ, ಪತ್ರಿಕೆಯ ಏಳಿಗೆಯನ್ನು ಬಯಸುವ ಮತ್ತು ಇದರ ಅಭಿವೃದ್ಧಿಗಾಗಿ ಕೊಡುಗೆ ನೀಡುವ ಹೃದಯವಂತರಿಗೂ ಸನ್ಮಾರ್ಗದ ಈ ಯಶಸ್ಸಿನಲ್ಲಿ ಪಾಲು ಇದೆ. ಜೊತೆಗೇ ಸನ್ಮಾರ್ಗವನ್ನು ಮನೆಮನೆಗೆ ತಲುಪಿಸುವುದಕ್ಕಾಗಿ ಫಲಾಪೇಕ್ಷೆ ಇಲ್ಲದೇ ಕೆಲಸ ಮಾಡುವ ಎಲ್ಲರಿಗೂ ಈ ಸನ್ಮಾರ್ಗದ ಬೆಳವಣಿಗೆ ಮತ್ತು ಬದಲಾವಣೆಯಲ್ಲಿ ಪಾತ್ರ ಇದೆ. ನಿಜವಾಗಿ,
ಡಿಜಿಟಲ್ ಯುಗದ ಸವಾಲನ್ನು ಎದುರಿಸಲಾಗದೇ ಸದ್ದಿಲ್ಲದೇ ಮರೆಗೆ ಸರಿದ ಪತ್ರಿಕೆಗಳು ಅನೇಕ ಇವೆ. ಈ ಕಾಲದ ಓದುಗರ ಅಭಿರುಚಿ ಬದಲಾಗಿದೆ. ಓದುಗರು ಎಂಬ ವಿಶಾಲ ಗುಂಪಿನಲ್ಲಿ ಇವತ್ತು ವೀಕ್ಷಕ ಗುಂಪೂ ಸೃಷ್ಟಿಯಾಗಿದೆ. ಈ ಎರಡೂ ಗುಂಪಿನ ಪಾಲಿಗೆ ಇವತ್ತಿನ ಡಿಜಿಟಲ್ ಕಾಲದ ಮಾಹಿತಿ ರಾಶಿಯು ಒಂದು ಬಗೆಯ ಸವಾಲನ್ನೂ ಆಯ್ಕೆಯ ಗೊಂದಲವನ್ನೂ ಸೃಷ್ಟಿಸಿದೆ. ತಾವು ಓದುಗರೋ ವೀಕ್ಷಕರೋ ಎಂಬ ಗೊಂದಲದ ಜೊತೆಗೇ ಓದುಗರಾದರೆ ಎಂಥ ಓದುಗರು ಮತ್ತು ಎಷ್ಟು ಓದುಗರು ಎಂಬ ಇನ್ನೊಂದು ಗೊಂದಲಮಯ ಪ್ರಶ್ನೆಯನ್ನು ಈ ಗುಂಪು ಎದುರಿಸುತ್ತಿದೆ. ವೀಕ್ಷಕ ಗುಂಪಿನ ಮುಂದೆಯೂ ಇದೇ ರೀತಿಯ ಸವಾಲು ಇದೆ. ಇಂಥ ಸ್ಥಿತಿಯಲ್ಲಿ ಓದುಗ ವೃಂದವನ್ನು ಉಳಿಸಿಕೊಳ್ಳುವುದೂ ಒಂದು ಸವಾಲೇ. ಈ ಹಿನ್ನೆಲೆಯಲ್ಲಿ ನೋಡಿದರೆ ಸನ್ಮಾರ್ಗ ಯಶಸ್ವಿ ಪತ್ರಿಕೆ ಎಂದೇ ಹೇಳಬಹುದು. ಕಳೆದ 48 ವರ್ಷಗಳಲ್ಲಿ ಸೃಷ್ಟಿಸಿದ ಓದುಗ ವೃಂದ ಮತ್ತು ಹುಟ್ಟು ಹಾಕಿದ ಬರಹಗಾರರ ಸಂಖ್ಯೆಯನ್ನು ನೋಡಿದರೆ ತೃಪ್ತಿ ಪಡುವುದಕ್ಕೆ ಸಾಕಷ್ಟು ಕಾರಣಗಳಿವೆ.
ಈವರೆಗೆ ಓದುಗರಾದ ನೀವು 15 ರೂಪಾಯಿಗಳನ್ನು ತೆತ್ತು ಸನ್ಮಾರ್ಗ ಖರೀದಿಸುತ್ತಿದ್ದಿರಿ. ಇನ್ನು ಮುಂದೆ ಈ 15 ರೂಪಾಯಿಗೆ ಹೆಚ್ಚುವರಿ 5 ರೂಪಾಯಿಯನ್ನು ಸೇರಿಸಿಕೊಡಬೇಕು ಎಂದು ವಿನಂತಿಸುತ್ತಿದ್ದೇವೆ. ಇನ್ನು ಮುಂದೆ ಹೆಚ್ಚುವರಿ ಪುಟಗಳು ಮತ್ತು ವೈವಿಧ್ಯಮಯ ವಿಷಯಗಳೊಂದಿಗೆ ಸನ್ಮಾರ್ಗ ಪ್ರಕಟವಾಗುತ್ತಿದ್ದು, ಈ ಹೆಚ್ಚುವರಿ 5 ರೂಪಾಯಿ ನಿಮಗೆ ಭಾರವಾಗಲಾರದು ಎಂದು ಅಂದುಕೊಳ್ಳುತ್ತೇವೆ. ಸನ್ಮಾರ್ಗವನ್ನು ಈ ಹಿಂದಿನಂತೆಯೇ ಪ್ರೀತಿಸುತ್ತಿರಿ ಮತ್ತು ಬೆಂಬಲಿಸುತ್ತಿರಿ ಎಂಬ ವಿನಂತಿ ನಮ್ಮದು. ಸೃಷ್ಟಿಕರ್ತನು ಎಲ್ಲರನ್ನೂ ಅನುಗ್ರಹಿಸಲಿ.












