ಅಹ್ಮದಾಬಾದ್, ಜು. 9: ದನಕ್ಕೆ ಢಿಕ್ಕಿ ಹೊಡೆದು ಸಾಯಲು ಕಾರಣವಾದ ರೈಲು ಚಾಲಕನಿಗೆ ಗೋರಕ್ಷಕರು ಕ್ರೂರವಾಗಿ ಹೊಡೆದಿದ್ದಾರೆ. ಗ್ವಾಲಿಯರ್-ಅಹ್ಮದಾಬಾದ್ ಸೂಪರ್ ಫಾಸ್ಟ್ ರೈಲಿನ ಚಾಲಕರಾದ ಜಿಎ ಜ್ವಾಲ ಎಂಬವರಿಗೆ ಗೋರಕ್ಷಕರು ಹಲ್ಲೆ ನಡೆಸಿದ್ದು ಪಠಾಣ್‍ನ ಸಿದ್ಧಪುರ ಜಂಕ್ಷನ್ ಸಮೀಪ ರೈಲು ಹಾದು ಹೋಗುವಾಗ ರೈಲಿನಡಿಗೆ ದನ ಬಿದ್ದಿತ್ತು. ರೈಲು ಮಾಸ್ಟರ್ ಕೆಂಪು ಬಾವುಟ ತೋರಿಸಿದರೂ ಅದನ್ನು ಚಾಲಕ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ದನದ ಶವವನ್ನು ಟ್ರಾಕ್‍ನಿಂದ ತೆರವುಗೊಳಿಸಲು ಹೇಳುವ ವೇಳೆ ಬಿಪಿನ್ ಸಿಂಗ್ ರಾಜ್‍ಪೂತ್ ಎನ್ನುವ ಪ್ರಯಾಣಿಕ ಬಂದು ರೈಲು ಚಾಲಕನಿಗೆ ಹಲ್ಲೆ ನಡೆಸಿದ್ದಾನೆ. ನಂತರ 150 ಮಂದಿಯ ಗೋರಕ್ಷಾ ತಂಡ ಅಲ್ಲಿಗೆ ಬಂದು ಚಾಲಕನಿಗೆ ಬೆದರಿಕೆ ಹಾಕಿದೆ. ರೈಲು ಮುಂದಕ್ಕೆ ಹೊರಟು ಹೋದ ಬಳಿಕ ಮತ್ತೆರಡು ನಿಲ್ದಾಣಗಳಲ್ಲಿ ಚಾಲಕ ಜ್ವಾಲರಿಗೆ ಹಲ್ಲೆ ನಡೆಸಲಾಗಿದೆ. ಮೆಹ್ಸಾನದಲ್ಲಿ ಚಾಲಕ ಪೊಲೀಸರ ನೆರವು ಯಾಚಿಸಿದರು. ನಂತರ ಚಾಲಕನ್ನು ಗುಜರಾತ್ ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.












