ಮಲಪ್ಪುರಂ, ಜು. 9: ನಿರ್ಮಾಣ ಕಾರ್ಯದ ವರ್ಕ್ ಆರ್ಡರ್ ನೀಡುವ ಸಲುವಾಗಿ 5,000 ರೂಪಾಯಿ ಲಂಚವನ್ನು ಪಡೆದಿದ್ದ ಅಸಿಸ್ಟೆಂಟ್ ಇಂಜಿನಿಯರ್ ಗೆ ನಾಲ್ಕು ವರ್ಷ ಕಠಿಣ ಜೈಲುವಾಸ ಮತ್ತು 50,000 ರೂಪಾಯಿ ದಂಡವನ್ನು ವಿಧಿಸಿ ವಿಜಿಲೆನ್ಸ್ ಕೋರ್ಟು ಆದೇಶಿಸಿದೆ. ಎರ್ನಾಕುಳಂನ ಇಟಿ ರಾಜಪ್ಪ ಎಂಬವರು ತಿರುವನಾಯ ಗ್ರಾಮಪಂಚಾಯತ್ ಬಸ್ ಸ್ಟ್ಯಾಂಡ್ ನಿರ್ಮಾಣ ಕಾರ್ಯದ ವರ್ಕ್ ಆರ್ಡರ್ ನೀಡುವುದಕ್ಕಾಗಿ ಗುತ್ತಿಗೆದಾರನಿಂದ 5,000 ರೂಪಾಯಿ ಲಂಚ ಪಡೆದು ಸಿಕ್ಕಿಬಿದ್ದಿದ್ದರು.
2006 ನವೆಂಬರ್ ಹದಿನಾಲ್ಕರ೦ದು ಕೇಸಿಗೆ ಆಸ್ಪದವಾದ ಘಟನೆ ನಡೆದಿತ್ತು. ಭ್ರಷ್ಟಾಚಾರ ನಿಷೇಧ ಕಾನೂನಿನ ವಿವಿಧ ಕಲಂ ಪ್ರಕಾರ ಶಿಕ್ಷೆಯನ್ನು ಎರ್ನಾಕುಳಂ ವಿಜಿಲೆನ್ಸ್ ಕೋರ್ಟು ವಿಧಿಸಿದೆ. ಪ್ರಕರಣದಲ್ಲಿ ಮಲಪ್ಪುರಂ ವಿಜಿಲೆನ್ಸ್ ಯುನಿಟ್ ಮಾಜಿ ಇನ್ಸ್ ಪೆಕ್ಟರ್ ಪಿ.ಬಿ. ರಾಜೀವ್, ಪಿ.ಎಂ ಪ್ರದೀಪ್ ತನಿಖೆ ನಡೆಸಿದ್ದರು. ಡಿವೈಎಸ್ಪಿ ಅಬ್ದುಲ್ ರಷೀದ್ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಾಸಿಕ್ಯೂಶನ್ಗಾಗಿ ಅಡ್ವೊಕೇಟ್ ಸಿ.ಪಿ. ಸೂರಜ್ ವಾದ ಮಂಡಿಸಿದರು.












