✍️ ಏ.ಕೆ. ಕುಕ್ಕಿಲ
- ಹೋ ಚಿ ಮಿನ್ ಟ್ರೆÊಲ್
ಇವತ್ತು ಇರಾನಿನ ಪಾಲಿಗೆ ಹುರ್ಮುಝ್ ಜಲಸಂಧಿ ಎಷ್ಟು ಮಹತ್ವಪೂರ್ಣವೋ 1965ರಲ್ಲಿ ವಿಯೆಟ್ನಾಂನ ಪಾಲಿಗೂ ಈ ಸರಬರಾಜು ಮಾರ್ಗ ಅಷ್ಟೇ ಮಹತ್ವದ್ದಾಗಿತ್ತು.
ಆಪರೇಶನ್ ರೋಲಿಂಗ್ ಥಂಡರ್ ಎಂಬ ಹೆಸರಿನಲ್ಲಿ 1965 ಮಾರ್ಚ್ 2ರಂದು ಉತ್ತರ ವಿಯೆಟ್ನಾಂ ಮೇಲೆ ಅಮೇರಿಕ ಭಯಾನಕ ಬಾಂಬ್ ದಾಳಿ ಪ್ರಾರಂಭಿಸಿತು. ಆಗ ಅಮೇರಿಕದ ಜೊತೆ ದಕ್ಷಿಣ ವಿಯೆಟ್ನಾಮೂ ಸೇರಿಕೊಂಡಿತ್ತು. ಈ ದಾಳಿ ನಡೆದಿರುವುದು ಒಂದೆರಡು ದಿನಗಳ ಕಾಲ ಅಲ್ಲ. ನಿರಂತರ ಮೂರೂವರೆ ವರ್ಷಗಳ ವರೆಗೆ ಬಾಂಬ್ ಸುರಿಮಳೆ ನಡೆಯಿತು. ಒಟ್ಟು 6,43,000 ಬಾಂಬ್ಗಳನ್ನು ಉತ್ತರ ವಿಯೆಟ್ನಾಂ ಮೇಲೆ ಸುರಿಸಲಾಯಿತು ಎಂಬುದು ಅಧಿಕೃತ ಮಾಹಿತಿ. ಈ ಬಾಂಬ್ಗಳ ಗುರಿ ಏನಾಗಿತ್ತೆಂದರೆ, ಹೋ ಚಿ ಮಿನ್ ಟ್ರೈಲ್ ಎಂಬ ಹೆಸರಿನ ಬೃಹತ್ ರಾಜಮಾರ್ಗವನ್ನು ನಾಶಪಡಿಸುವುದು ಮತ್ತು ಉತ್ತರ ವಿಯೆಟ್ನಾಂನ ಆಡಳಿತವನ್ನು ನಾಶ ಮಾಡಿ ದಕ್ಷಿಣ ವಿಯೆಟ್ನಾಂಗೆ ಇಡೀ ವಿಯೆಟ್ನಾಂನ ಆಡಳಿತವನ್ನು ಒಪ್ಪಿಸುವುದಾಗಿತ್ತು.
ಈ ಇಡೀ ಬೆಳವಣಿಗೆಯ ಹಿಂದೆ ಒಂದು ರೋಚಕ ಕತೆ ಇದೆ.
1945ರಿಂದಲೂ ಫ್ರಾನ್ಸ್ನ ವಸಾಹತಾಗಿ ಬಳಲುತ್ತಿದ್ದ ವಿಯೆಟ್ನಾಮನ್ನು ವಸಾಹತುಮುಕ್ತಗೊಳಿಸುವ ಹೋರಾಟವೊಂದು ಹೋ ಚಿ ಮಿನ್ ಎಂಬವರ ನಾಯಕತ್ವದಲ್ಲಿ ತಲೆ ಎತ್ತಿತು. ಇವರು ಕಮ್ಯುನಿಸ್ಟ್ ವಿಚಾರಧಾರೆಯಿಂದ ಪ್ರಭಾವಿತರಾಗಿದ್ದರು. ಈ ಸ್ವಾತಂತ್ರ್ಯ ಹೋರಾಟವನ್ನು ವಿಯೆಟ್ನಾಮಿನ್ ಎಂದೂ ಕರೆಯುತ್ತಾರೆ. ಇವರಿಗೆ ಕಮ್ಯುನಿಸ್ಟ್ ರಶ್ಯಾ ಮತ್ತು ಚೀನಾಗಳ ಬೆಂಬಲವಿತ್ತು. 1954ರಲ್ಲಿ ನಡೆದ ನಿರ್ಣಾಯಕ ಹೋರಾಟದಲ್ಲಿ ಫ್ರಾನ್ಸ್ಗೆ ಸೋಲಾಯಿತು. ಮಾತ್ರವಲ್ಲ, ಜಿನೀವಾದಲ್ಲಿ ಒಪ್ಪಂದವೂ ನಡೆಯಿತು. ಈ ಒಪ್ಪಂದದ ಪ್ರಕಾರ ವಿಯೆಟ್ನಾಮನ್ನು ಉತ್ತರ ವಿಯೆಟ್ನಾಂ ಮತ್ತು ದಕ್ಷಿಣ ವಿಯೆಟ್ನಾಂ ಎಂದು ವಿಭಜಿಸಲಾಯಿತು. ಅಂದಹಾಗೆ,
ಭಾರತವನ್ನು ವಿಭಜಿಸಿ ಇಲ್ಲಿಂದ ಕಾಲ್ಕಿತ್ತ ಬ್ರಿಟಿಷರನ್ನು ನೆನಪಿಸಿಕೊಳ್ಳಿ. ಸಾಮ್ರಾಜ್ಯಶಾಹಿಗಳು ಎಂದೂ ಯಾವ ರಾಷ್ಟ್ರವನ್ನೂ ಉದ್ಧಾರ ಮಾಡಿದ್ದಿಲ್ಲ. ಇಲ್ಲೂ ಅದುವೇ ನಡೆಯಿತು. ಆದರೆ, ಈ ಒಪ್ಪಂದದಲ್ಲಿ ಒಂದು ಅಂಶವನ್ನು ಸೇರಿಸಲಾಗಿತ್ತು. 1956ರಲ್ಲಿ ಚುನಾವಣೆ ಯನ್ನು ನಡೆಸಿ ಈ ಎರಡೂ ರಾಷ್ಟ್ರಗಳನ್ನು ಒಂದುಗೂಡಿಸಬೇಕು ಎಂಬುದೇ ಈ ಆದೇಶ. ಹಾಗಂತ, ಒಂದಾಗಿದ್ದ ದೇಶವನ್ನು ಎರಡಾಗಿ ವಿಭಜಿಸಿ 12 ವರ್ಷಗಳ ಬಳಿಕ ಒಂದಾಗಿಸುವುದು ಎಂಬುದೇ ವಿಕಲ ಆಲೋಚನೆ. ಒಂದಾಗಿದ್ದ ರಾಷ್ಟ್ರವು ಎರಡಾಗಿ ವಿಭಜನೆಯಾಗುವುದೆಂದರೆ, ಪರಮ ವೈರತ್ವವನ್ನು ರೂಢಿಸಿಕೊಳ್ಳುವುದು ಎಂದೇ ಅರ್ಥ. ಹೀಗೆ ವೈರತ್ವವನ್ನು ಬೆಳೆಸಿಕೊಂಡ ರಾಷ್ಟçಗಳು ಆ ಬಳಿಕ ಒಂದಾಗುವುದು ಬಿಡಿ, ಸುಖವಾಗಿರುವುದಕ್ಕೂ ಸಾಧ್ಯವಿಲ್ಲ. ಸದಾ ತಮ್ಮ ತಮ್ಮಲ್ಲೇ ಕಿತ್ತಾಡಿಕೊಳ್ಳುತ್ತಾ ವಿಭಜಿಸಿದವರ ಉz್ದÉÃಶವನ್ನು ಈಡೇರಿಸಿಕೊಳ್ಳುತ್ತಾ ಸಾಗುವುದು ಇದರ ಅಂತಿಮ ಫಲಿತಾಂಶವಾಗಿ ರುತ್ತದೆ. ಭಾರತ ಮತ್ತು ಪಾಕಿಸ್ತಾನಗಳು ಹಾಗೂ ಪಾಕಿಸ್ತಾನ ಮತ್ತು ಬಾಂಗ್ಲಾಗಳು ಇದಕ್ಕೆ ಉತ್ತಮ ಉದಾಹರಣೆ.
ಆದರೆ,
ಒಪ್ಪಂದದಂತೆ 1956ರಲ್ಲಿ ಚುನಾವಣೆ ನಡೆಯಲೇ ಇಲ್ಲ. ಉತ್ತರ ವಿಯೆಟ್ನಾಂನಲ್ಲಿ ಹೋ ಚಿ ಮಿನ್ ಅವರ ನೇತೃತ್ವದ ಕಮ್ಯೂನಿಸ್ಟ್ ಸರಕಾರ ಆಡಳಿತ ನಡೆಸುವಾಗ ದಕ್ಷಿಣ ವಿಯೆಟ್ನಾಂನಲ್ಲಿ ಕಮ್ಯುನಿಸ್ಟ್ ವಿರೋಧಿ ಬಂಡವಾಳಶಾಹಿ ಸರಕಾರ ಇತ್ತು. ದಕ್ಷಿಣ ವಿಯೆಟ್ನಾಂಗೆ ಅಮೇರಿಕದ ಬೆಂಬಲವಿದ್ದರೆ, ಉತ್ತರ ವಿಯೆಟ್ನಾಂಗೆ ರಷ್ಯಾ-ಚೀನಾಗಳ ಬೆಂಬಲವಿದೆ. ಒಪ್ಪಂದ ದಂತೆ, 1950ರಲ್ಲಿ ಚುನಾವಣೆ ನಡೆಯಲೇ ಇಲ್ಲ.
ಒಪ್ಪಂದದಂತೆ ಏಕ ವಿಯೆಟ್ನಾಂನ ರಚನೆಯೇ ತಮ್ಮ ಹಕ್ಕು ಎಂಬ ನಿಲುವು ಹೋ ಚಿ ಮಿನ್ ಅವರದ್ದಾಗಿತ್ತು. ಫ್ರಾನ್ಸ್ನಿಂದ ವಿಯೆಟ್ನಾಮನ್ನು ಮುಕ್ತಗೊಳಿ ಸಿದ್ದೂ ಇವರದೇ ನಾಯಕತ್ವದಲ್ಲಾಗಿತ್ತು. ಆದರೆ ಉತ್ತರದ ಕಮ್ಯುನಿಸ್ಟ್ ಚಿಂತನೆಯು ದಕ್ಷಿಣಕ್ಕೂ ಹರಡುವುದನ್ನು ತಡೆಯುವುದು ಅಮೇರಿಕ ಮತ್ತಿತರ ರಾಷ್ಟ್ರಗಳ ಗುರಿಯಾಗಿತ್ತು. ಈ ನಡುವೆ ಜಿನೇವಾ ಒಪ್ಪಂದದಂತೆ ಏಕ ವಿಯೆಟ್ನಾಂ ರಚನೆಯ ಗುರಿಯನ್ನು ಸಾಧಿಸುವ ಛಲದೊಂದಿಗೆ 1965ರಲ್ಲಿ ಹೋ ಚಿ ಮಿನ್ ನೇತೃತ್ವದ ಉತ್ತರ ವಿಯೆಟ್ನಾಂ ದಕ್ಷಿಣ ವಿಯೆಟ್ನಾಂ ಮೇಲೆ ದಾಳಿ ನಡೆಸಿತು. ಆದರೆ ಈ ದಾಳಿಯನ್ನು ಅಮೇರಿಕ ತನಗೆದುರಾದ ದಾಳಿ ಎಂಬಂತೆ ಸ್ವೀಕರಿಸಿತು. ತನ್ನ ಪ್ರತಿಷ್ಠೆಗೆ ಸವಾಲು ಎಂದು ಲೆಕ್ಕ ಹಾಕಿತು. ತನ್ನ ಸಾಮಂತ ರಾಷ್ಟ್ರದ ಮೇಲಿನ ದಾಳಿಗೆ ಪ್ರತೀಕಾರ ತೀರಿಸುವುದಕ್ಕಾಗಿ ಸೇನೆಯನ್ನು ಕಳುಹಿಸಿತು. ಯುದ್ಧ ವಿಮಾನಗಳನ್ನು ಬಳಸಿತು. ಈ ಸಂದರ್ಭದಲ್ಲಿ ಅಮೇರಿಕದ ಕಣ್ಣಿಗೆ ಬಿದ್ದದ್ದೇ ಹೋ ಚಿ ಮಿನ್ ಟ್ರೈಲ್ ಎಂಬ ಬೃಹತ್ ಸಾಗಾಟ ಜಾಲ.
ಉತ್ತರದ ವಿಯೆಟ್ನಾಂನ ಅತ್ಯಂತ ಪ್ರಮುಖ ಸರಬರಾಜು ಮಾರ್ಗ ಇದಾ ಗಿತ್ತು. ವಿಯೆಟ್ನಾಮಿಗರು ಇದನ್ನು ಡ್ರುಯಾಂಗ್ ಟ್ರೂಂಗ್ ಸಾನ್ ಅಥವಾ ಟ್ರೂಂಗ್ ಸಾನ್ ಸ್ಟ್ರಾಟಜಿಕ್ ಸಪ್ಲೈ ರೂಟ್ ಎಂದು ಕರೆಯುತ್ತಿದ್ದರು. ಪರ್ವತಗಳು, ದಟ್ಟ ಕಾಡುಗಳು, ನದಿಗಳು, ಕಣಿವೆಗಳ ಮೂಲಕ ಹಾದು ಹೋಗುವ ರಸ್ತೆಗಳು ಇದಾಗಿತ್ತು. ಹಾಗಂತ,
ಇದು ಏಕೈಕ ರಸ್ತೆಯಲ್ಲ. ಕಾಲು ದಾರಿಗಳೂ ಇದ್ದುವು. ಬೈಕ್ ಪಥಗಳು ಮತ್ತು ಟ್ರಕ್ ರಸ್ತೆಗಳೂ ಇದ್ದುವು. ಇದು ಹಲವು ವಿಧದ ರಸ್ತೆಗಳ ಬೃಹತ್ ಸಂಯೋಜನೆಯಾಗಿತ್ತು. ಸುಮಾರು 12 ಸಾವಿರದಿಂದ 16 ಸಾವಿರ ಕಿಲೋ ಮೀಟರ್ ಉದ್ದದ ಈ ರಸ್ತೆಯು ಲಾವೋಸ್ ಕಾಂಬೋಡಿಯಾದ ಮೂಲಕ ಹಾದು ಹೋಗಿ ದಕ್ಷಿಣ ವಿಯೆಟ್ನಾಂಗೂ ತಲುಪುತ್ತಿತ್ತು. ಹೋ ಚಿ ಮಿನ್ ನಾಯಕತ್ವದಲ್ಲಿ ಉತ್ತರ ವಿಯೆಟ್ನಾಂ 1959ರಲ್ಲಿ ಈ ರಸ್ತೆ ಕಾರ್ಯವನ್ನು ಪ್ರಾರಂಭಿಸಿತ್ತು. ಅಂದಹಾಗೆ,
ದಕ್ಷಿಣ ವಿಯೆಟ್ನಾಮಿನ ಮೇಲೆ 1965ರಲ್ಲಿ ಉತ್ತರ ವಿಯೆಟ್ನಾಂ ದಾಳಿ ನಡೆಸುವ ಸಮಯದಲ್ಲಿ ವಿಯೆಟ್ನಾಮಿನ್ ಎಂಬ ಗೆರಿಲ್ಲಾ ಪಡೆಯನ್ನು ದಕ್ಷಿಣಕ್ಕೆ ಕಳುಹಿಸುವ ಯುದ್ಧತಂತ್ರವನ್ನು ಹೋ ಚಿ ಮಿನ್ ಯಶಸ್ವಿಯಾಗಿ ನಿರ್ವಹಿಸಿ ದ್ದರು. ಈ ಗೆರಿಲ್ಲಾ ತಂಡವು ದಕ್ಷಿಣದ ಸರಕಾರದ ಮೇಲೆ ಅದಾಗಲೇ ದಾಳಿಯನ್ನು ನಡೆಸತೊಡಗಿತ್ತು. ದಕ್ಷಿಣದ ಅಮೆರಿಕನ್ ಸಾಮಂತ ಆಡಳಿತವನ್ನು ಸೋಲಿಸಿ ಏಕ ವಿಯೆಟ್ನಾಂ ಮಾಡುವುದು ಹೋ ಚಿ ಮಿನ್ ಅವರ ಉದ್ದೇಶವಾಗಿತ್ತಾದ್ದರಿಂದ ಈ ನೀತಿ ಅವರ ಮಟ್ಟಿಗೆ ಸಮರ್ಥಕವೂ ಆಗಿತ್ತು. ಈ ಗೆರಿಲ್ಲಾ ಪಡೆಗಳಿಗೆ ಮತ್ತು ದಕ್ಷಿಣ ವಿಯೆಟ್ನಾಂ ಮೇಲೆ ದಾಳಿ ನಡೆಸಿರುವ ಉತ್ತರ ವಿಯೆಟ್ನಾಂ ಪಡೆಗಳಿಗೆ ಶಸ್ತ್ರಾಸ್ತ್ರ, ಮದ್ದುಗುಂಡುಗಳು, ಆಹಾರ, ಔಷಧಿ ಮತ್ತಿತರ ಸಾಮಗ್ರಿಗಳನ್ನು ತಲುಪಿಸುವುದಕ್ಕೆ ರಾಜಮಾರ್ಗವಾಗಿ ಬಳಕೆಯಾದದ್ದೆ ಈ ಹೋ ಚಿ ಮಿನ್ ಟ್ರೈಲ್ ಎಂಬ ಬೃಹತ್ ಮಾರ್ಗ.
ಪ್ರತಿದಿನ ಈ ದಾರಿಯಾಗಿ ಟನ್ಗಟ್ಟಲೆ ಸಾಮಗ್ರಿಗಳು ಸರಬರಾಜು ಆಗುತ್ತಿತ್ತು. ಓರ್ವ ವ್ಯಕ್ತಿ ಉತ್ತರಿಂದ ದಕ್ಷಿಣಕ್ಕೆ ತಲುಪಲು ಒಂದು ತಿಂಗಳು ಹಿಡಿಯುತ್ತಿತ್ತು ಎಂಬುದೇ ಆ ದಾರಿ ಎಷ್ಟು ಜಿಗುಟಾಗಿತ್ತು ಎಂಬುದನ್ನು ಸೂಚಿಸುತ್ತದೆ. ಬೈಕ್ ಮೇಲೆ, ಟ್ರಕ್ಗಳ ಮೂಲಕ ಮತ್ತು ಕಾಲು ನಡಿಗೆಯಲ್ಲಿ ಇವುಗಳನ್ನು ಸರಬರಾಜು ಮಾಡಲಾಗುತ್ತಿತ್ತು. ದಕ್ಷಿಣ ವಿಯೆಟ್ನಾಂನ ಪರ ಯುದ್ಧಕ್ಕಿಳಿದ ಅಮೇರಿಕಕ್ಕೆ ತಲೆ ನೋವಾಗಿದ್ದೇ ಈ ರಾಜಮಾರ್ಗ. ಅಮೇರಿಕ ಈ ದಾರಿಗೆ ಬಾಂಬ್ ದಾಳಿ ನಡೆಸತೊಡಗಿತು. ರಾಸಾಯನಿಕಗಳನ್ನು ಬಳಸಿ ಈ ಕಾಡುದಾರಿಯನ್ನು ನಾಶಪಡಿಸಲು ಯತ್ನಿಸಿತು. ಸೆನ್ಸಾರ್ಗಳು, ವಿಮಾನಗಳು ಮತ್ತು ಹೆಲಿಕಾಪ್ಟರ್ಗಳನ್ನು ಬಳಸಿ ಈ ಸಂಪರ್ಕ ಜಾಲವನ್ನು ತಡೆಯಲು ಇನ್ನಿಲ್ಲದಂತೆ ಹೋರಾಡಿತು. ಆದರೆ,
ವಿಯೆಟ್ನಾಮಿಗಳು ತ್ವರಿತವಾಗಿ ರಸ್ತೆಯನ್ನು ದುರಸ್ತಿ ಮಾಡುತ್ತಿದ್ದರು. ಬೈಪಾಸ್ ರಸ್ತೆಯನ್ನು ಹೊಸದಾಗಿ ನಿರ್ಮಿಸುತ್ತಿದ್ದರು. ಇಂಜಿನಿಯರ್ಗಳನ್ನು ಒಳಗೊಂಡ 30 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಈ ರಸ್ತೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದ್ದರು. ಎಲ್ಲಿಯ ವರೆಗೆಂದರೆ, ನಾಪಾಮ್ ಮತ್ತು ಏಜೆಂಟ್ ಅರೇಂಜ್ ಎಂಬ ರಾಸಾಯನಿಕಗಳನ್ನು ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಹಾಗೂ ಬಾಂಬ್ಗಳನ್ನು ಅಮೇರಿಕನ್ ಸೇನೆ ಬಳಸಿತ್ತು. ಆದರೆ, ಉತ್ತರ ವಿಯೆಟ್ನಾಂ ಸೈನಿಕರು ಅಮೇರಿಕನ್ ಸೈನಿಕರ ಮೇಲೆ ಹಠಾತ್ ದಾಳಿ ನಡೆಸಿ ಕಾಡಿನಲ್ಲಿ ಮರೆಯಾಗುವ ತಂತ್ರವನ್ನು ಬಳಸಿದರು. ಇದರಿಂದಾಗಿ 56 ಸಾವಿರ ಅಮೇರಿಕನ್ ಸೈನಿಕರು ಸಾವಿಗೀಡಾದರು. ಭಾರೀ ಪ್ರಮಾಣದಲ್ಲಿ ಆರ್ಥಿಕ ನಷ್ಟ ಎದುರಾಯಿತು.
ಸೈನಿಕರ ಸಾವು ಅಮೆರಿಕದಲ್ಲಿ ದೊಡ್ಡಮಟ್ಟದಲ್ಲಿ ಪ್ರತಿಭಟನೆಗೆ ಕಾರಣವಾಯಿತು. ಇದರಿಂದಾಗಿ 1973ರಲ್ಲಿ ಅಧ್ಯಕ್ಷ್ಯ ನಿಕ್ಸನ್ ಅವರು ಸೇನಾ ಹಿಂತೆಗೆತಕ್ಕೆ ಮುಂದಾದರು. ಹೀಗೆ ರಾಜಕೀಯ ಗುರಿಯನ್ನು ಸಾಧಿಸಲಾಗದೇ 1973 ಜನವರಿ 27ರಂದು ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿ ಅಮೇರಿಕ ವಿಯೆಟ್ನಾಂ ಕಾಡಿನಿಂದ ಹೊರಬಂದಿತು. ಎಪ್ರಿಲ್ 30ರಂದು ಉತ್ತರ ವಿಯೆಟ್ನಾಂ ಸೇನೆಯು ದಕ್ಷಿಣದ ಮೇಲೆ ದಾಳಿ ನಡೆಸಿತಲ್ಲದೇ, ಅದನ್ನು ವಶಪಡಿಸಿಕೊಂಡು ಏಕ ವಿಯೆಟ್ನಾಂ ಬಯಕೆಯನ್ನು ಈಡೇರಿಸಿ ಕೊಂಡಿತು. ಇದನ್ನು ಕಂಡೂ ಅಮೆರಿಕ ಏನೂ ಮಾಡಲಾಗದ ಸ್ಥಿತಿಯಲ್ಲಿತ್ತು. ಅಂದಹಾಗೆ,
ಇರಾನ್ ಯುದ್ಧಕ್ಕೂ ಈ ವಿಯೆಟ್ನಾಂಗೂ ಸಾಮ್ಯತೆ ಇದೆ.
ಇರಾನಿನಲ್ಲಿ ಆಡಳಿತ ಬದಲಾಯಿಸು ತ್ತೇನೆ ಎಂದು ಹೊರಟ ಅಮೇರಿಕಕ್ಕೆ ಹೊಸ ಸವಾಲಾದದ್ದೇ ಹುರ್ಮುಝ್ ಜಲಸಂಧಿ. ಜಗತ್ತಿನ 30% ತೈಲ ಸಾಗಾಟ ನಡೆಯುತ್ತಿರುವುದು ಇದೇ ಜಲಸಂಧಿಯ ಮೂಲಕ. ವಿಯೆಟ್ನಾಂಗೆ ಹೋ ಚಿ ಮಿನ್ ಟ್ರೈಲ್ ಹೇಗೋ ಜಗತ್ತಿನ ಪಾಲಿಗೆ ಈ ಜಲಸಂಧಿಯೂ ಹಾಗೆಯೇ. ಇರಾನ್ ಈ ದಾರಿಯನ್ನು ಮುಚ್ಚುವ ಮೂಲಕ ಅಮೇರಿಕಕ್ಕೆ ಸಡ್ಡು ಹೊಡೆಯಿತು. ಹೋ ಚಿ ಮಿನ್ ಟ್ರೈಲ್ ಕಾಡುದಾರಿಯಾಗಿದ್ದರೆ, ಇದು ನೀರು ದಾರಿ. ಅಂತಿಮವಾಗಿ ಈ ಹೋ ಚಿ ಮಿನ್ ಟ್ರೈಲ್ ಅನ್ನು ಮುರಿಯಲಾಗದೇ ವಿಯೆಟ್ನಾಂ ಮುಂದೆ ಅಮೇರಿಕ ನಡು ಬಗ್ಗಿಸಿತ್ತು. ತನ್ನ 56 ಸಾವಿರಕ್ಕಿಂತಲೂ ಅಧಿಕ ಸೈನಿಕರನ್ನು ಅದು ಕಳಕೊಂಡಿತ್ತು. ಸುಮಾರು ಎಂಟು ವರ್ಷಗಳ ಕಾಲ ಹೋರಾಡಿ ಹೋರಾಡಿ ಕೊನೆಗೆ ಪ್ರತಿಷ್ಠೆಯನ್ನೇ ಮಣ್ಣುಪಾಲು ಮಾಡಿ ಕೊಂಡಿತ್ತು. ಮಾತ್ರವಲ್ಲ, ಅಮೇರಿಕದ ಐತಿಹಾಸಿಕ ಮುಖಭಂಗವಾಗಿ ವಿಯೆಟ್ನಾಂ ಯುದ್ಧವು ಅದನ್ನು ಸದಾ ಕಾಡುವಂತಾಯಿತು. ಅಂದು ಮರೆಯಲ್ಲಿ ನಿಂತು ಅಮೆರಿಕಕ್ಕೆ ಸಡ್ಡು ಹೊಡೆದದ್ದು ರಷ್ಯಾ ಮತ್ತು ಚೀನಾ. ವಿಯೆಟ್ನಾಂ ಎಂಬ ಪುಟ್ಟ ರಾಷ್ಟ್ರದ ಭುಜದಲ್ಲಿ ಬಂದೂಕಿಟ್ಟು ಈ ಎರಡೂ ರಾಷ್ಟ್ರಗಳು ಅಮೇರಿಕದ ಮೇಲೆ ಗುಂಡು ಹಾರಿಸುತ್ತಿ ದ್ದುವು. ಇರಾನ್ ಯುದ್ಧದಲ್ಲೂ ನಡೆಯುತ್ತಿರುವುದು ಇದುವೇ. ಇರಾನ್ ಯುದ್ಧ ನಡೆಸುತ್ತಿರುವಂತೆ ಕಂಡರೂ ಮರೆಯಲ್ಲಿ ನಿಂತು ಇರಾನ್ಗೆ ಧೈರ್ಯ ಮತ್ತು ಶಸ್ತ್ರಾಸ್ತ್ರ ಬಲವನ್ನು ಒದಗಿಸುತ್ತಿರುವುದೇ ಈ ಎರಡು ರಾಷ್ಟ್ರಗಳು. ಅಷ್ಟಕ್ಕೂ,
ಅಂದು ಅಮೇರಿಕದ ಕೊರಳಿಗೆ ಹೋ ಚಿ ಮಿನ್ ಟ್ರೈಲ್ ಎಂಬ ರಾಜ ಮಾರ್ಗವು ಉರುಳು ಹಾಕಿದಂತೆಯೇ ಇಂದು ಹುರ್ಮುಝ್ ಎಂಬ ರಾಜ ಮಾರ್ಗವು ಮತ್ತೊಮ್ಮೆ ಅಮೇರಿಕದ ಕೊರಳಿಗೆ ಉರುಳಾಗುತ್ತದೆಯೋ? ಹೇಳಲಾಗದು.












