ಮೋಹನ್ ಭಾಗವತ್ ಉತ್ತರ: ಹುಟ್ಟು ಹಾಕಿರುವ ಪ್ರಶ್ನೆಗಳು

0
468

ಸನ್ಮಾರ್ಗ ಸಂಪಾದಕೀಯ

ಆರೆಸ್ಸೆಸ್ ಏಕೆ ನೋಂದಣಿ ಮಾಡಿಕೊಂಡಿಲ್ಲ ಎಂಬುದಕ್ಕೆ ಅದರ ಮುಖ್ಯಸ್ಥ ಮೋಹನ್ ಭಾಗವತ್ 4 ಕಾರಣಗಳನ್ನು ಕೊಟ್ಟಿದ್ದಾರೆ.

  1. ಹಿಂದೂ ಧರ್ಮವೂ ನೋಂದಣಿ ಆಗಿಲ್ಲ.
  2. ಭಾರತ ಸ್ವತಂತ್ರವಾಗುವುದಕ್ಕಿಂತ ಮೊದಲೇ, 1925ರಲ್ಲಿ ಆರೆಸ್ಸೆಸ್ ಸ್ಥಾಪನೆಯಾಗಿದೆ. ಬ್ರಿಟಿಷ್ ಸರಕಾರದಲ್ಲಿ ನಾವು ನೋಂದಣಿ ಮಾಡಿಸಿಕೊಂಡಿಲ್ಲ. ಸ್ವಾತಂತ್ರ‍್ಯಾ ನಂತರವೂ ಭಾರತ ಸರಕಾರ ನಮ್ಮ ಸಂಸ್ಥೆಯ ನೋಂದಣಿಯನ್ನು ಕಡ್ಡಾಯಗೊಳಿಸಿಲ್ಲ.
  3. ಆರೆಸ್ಸೆಸ್ ಎಂಬುದು ವ್ಯಕ್ತಿಗಳ ಸಮೂಹ. ಆದ್ದರಿಂದ ನೋಂದಣಿ ಮಾಡಿಸಿಕೊಳ್ಳಬೇಕಿಲ್ಲ.
  4. ಸರಕಾರದಿಂದ ಧನಸಹಾಯ ಪಡೆಯುವವರು ಮಾತ್ರ ನೋಂದಣಿ ಮಾಡಿಸಿಕೊಳ್ಳಬೇಕು. ಆರೆಸ್ಸೆಸ್ ಸರಕಾರದಿಂದ ಧನಸಹಾಯ ಪಡೆಯುತ್ತಿಲ್ಲ. ನಿಜವಾಗಿ,

ಮೋಹನ್ ಭಾಗವತ್ ಅವರು ಕೊಟ್ಟಿರುವ ಈ ಉತ್ತರವು ಇನ್ನಷ್ಟು ಪ್ರಶ್ನೆಗಳಿಗೆ ಮತ್ತು ಹತ್ತು ಹಲವು ಅನುಮಾನಗಳಿಗೆ ಕಾರಣವಾಗಿದೆಯೇ ಹೊರತು ‘ಆರೆಸ್ಸೆಸ್ ಏಕೆ ರಿಜಿಸ್ಟೆçÃಶನ್ ಮಾಡಿಸಿಕೊಂಡಿಲ್ಲ’ ಎಂಬ ಮೂಲ ಪ್ರಶ್ನೆಗೆ ಸಮರ್ಪಕ ಉತ್ತರವನ್ನು ಒದಗಿಸಿಲ್ಲ.

ಆರೆಸ್ಸೆಸ್ ಸ್ಥಾಪನೆಯಾಗುವುದಕ್ಕಿಂತ ಮೊದಲೇ 1919ರಲ್ಲಿ ಜಮೀಯತೆ ಉಲೆಮಾಯೆ ಹಿಂದ್ ಎಂಬ ಭಾರತೀಯ ಮುಸ್ಲಿಮರ ಅತಿದೊಡ್ಡ ಸಂಘಟನೆ ಸ್ಥಾಪನೆಯಾಗಿತ್ತು. ಮೌಲಾನಾಗಳು ಸೇರಿ ಸ್ಥಾಪಿಸಿದ ಈ ಸಂಘಟನೆಯು ಸ್ವಾತಂತ್ರ‍್ಯ ಚಳವಳಿಯಲ್ಲಿ ಬಹು ಪ್ರಮುಖ ಪಾತ್ರ ವಹಿಸಿತ್ತು. ಶೈಕುಲ್ ಹಿಂದ್ ಮೌಲಾನಾ ಮಹಮೂದ್ ಹಸನ್ ದೇವ್‌ಬಂದಿಯವರು ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟವನ್ನು ಸಂಘಟಿಸಿದ್ದರು. ಜೈಲಿಗೂ ಹೋಗಿದ್ದರು. ರೇಶ್ಮಿ ರುಮಾಲ್ ಚಳವಳಿ ಎಂಬ ಉತ್ತರ ಭಾರತದಲ್ಲಿ ಬಹುಪ್ರಸಿದ್ಧ ಬ್ರಿಟಿಷ್ ವಿರೋಧಿ ಚಳವಳಿಯನ್ನು ಇವರು ರೂಪಿಸಿದರು. ಮುಫ್ತಿ ಕಿಫಾಯತುಲ್ಲಾ ದೆಹ್ಲವಿ ಎಂಬವರು ಅಸಹಕಾರ ಚಳವಳಿಯಲ್ಲಿ ಭಾಗಿಯಾಗಿ ಜೈಲು ಸೇರಿದರು. ಹಾಗಂತ,

ಸ್ವಾತಂತ್ರ‍್ಯಾ ನಂತರ ಈ ಸಂಘಟನೆ ಆರೆಸ್ಸೆಸ್‌ನಂತೆ ವಾದಿಸಲಿಲ್ಲ. ‘ಸ್ವಾತಂತ್ರ‍್ಯ ಚಳವಳಿಯಲ್ಲಿ ಭಾಗಿಯಾಗಿರುವುದರಿಂದ ತಾನು ನೋಂದಣಿ ಮಾಡಿಸಿಕೊಳ್ಳುವುದಿಲ್ಲ’ ಎಂದೂ ಅದು ಹೇಳಲಿಲ್ಲ. ತಾನು ಭಾರತೀಯರಿಗೆ ಉತ್ತರದಾಯಿ ಎಂದು ಅದು ಹೇಳಿಕೊಂಡಿತು. ಈ ನೆಲದ ಕಾನೂನಿಗೆ ಬದ್ಧ ಎಂದು ಅದು ಸಾರಿತು. ತಾನು ಸಂಗ್ರಹಿಸುತ್ತಿರುವ ಹಣಕಾಸು ಮಾಹಿತಿಯನ್ನು ದೇಶದ ಮುಂದಿಟ್ಟು, ತೆರಿಗೆ ಕಟ್ಟುವುದನ್ನು ಅದು ತನ್ನ ಜವಾಬ್ದಾರಿ ಎಂದು ತಿಳಿದುಕೊಂಡಿತು. ಇವತ್ತಿಗೂ ಈ ಸಂಘಟನೆ ದೇಶದಾದ್ಯಂತ ಸೇವಾ ಚಟುವಟಿಕೆ ನಡೆಸುತ್ತಿದೆ. ಆದರೆ,

ಮೋಹನ್ ಭಾಗವತ್ ಈ ಪ್ರಾಮಾಣಿಕತೆಯನ್ನು ಪ್ರದರ್ಶಿಸುತ್ತಲೇ ಇಲ್ಲ. ಜಗತ್ತಿನಲ್ಲಿಯೇ ಅತಿದೊಡ್ಡ ಸಂಘಟನೆ ಎಂದು ಆರೆಸ್ಸೆಸ್ ಹೇಳಿಕೊಳ್ಳುತ್ತಿದೆ. ಇದಕ್ಕೆ ಕೋಟ್ಯಂತರ ಕಾರ್ಯಕರ್ತರಿದ್ದಾರೆ. ದೇಶದಲ್ಲಿ ಸುಮಾರು 3000ದಷ್ಟು ತನ್ನದೇ ತಾಲೂಕುಗಳನ್ನು ಆರೆಸ್ಸೆಸ್ ಹೊಂದಿದೆ. ಆರೆಸ್ಸೆಸ್ ಚಟುವಟಿಕೆ ಇರುವ ದೇಶದ ಎಲ್ಲ ಬೂತ್ ಮತ್ತು ಗ್ರಾಮ ಮಟ್ಟದಲ್ಲಿ ಅಷಾಡಮಾಸದ ಒಂದು ದಿನ ಗುರುಪೂಜೆಯ ಹೆಸರಲ್ಲಿ ದಕ್ಷಿಣೆ ಪಡಕೊಳ್ಳಲಾಗುತ್ತದೆ. ಹೀಗೆ ದಕ್ಷಿಣೆಯ ರೂಪದಲ್ಲಿ ಅಗರ್ಭ ಶ್ರೀಮಂತರಿಂದ ಹಿಡಿದು ಬಡವರೂ ಹಣ ನೀಡುತ್ತಾರೆ. ಹೀಗೆ ಪ್ರತಿವರ್ಷ ಸಂಗ್ರಹವಾಗುವ ಹಣವು ಕೋಟ್ಯಂತರ ರೂಪಾಯಿಗಳಾಗಿರುತ್ತದೆ. ಇಷ್ಟೊಂದು ದೊಡ್ಡ ಮೊತ್ತವನ್ನು ಪ್ರತಿವರ್ಷ ಆರೆಸ್ಸೆಸ್ ಸಂಗ್ರಹಿಸುತ್ತಿದ್ದರೂ ಈ ದೇಶದ ಖಜಾನೆಗೆ ತೆರಿಗೆಯ ರೂಪದಲ್ಲಿ ನಯಾ ಪೈಸೆಯನ್ನೂ ಪಾವತಿಸುತ್ತಿಲ್ಲ. ‘ಗುರುದಕ್ಷಿಣೆಗೆ ತೆರಿಗೆ ಬೇಕಿಲ್ಲ’ ಎಂಬ ಸಬೂಬನ್ನು ಅದು ನೀಡುತ್ತಾ ಇದೆ. ಒಂದು ಕಡೆ ದೇಶಪ್ರೇಮ, ಸಂಸ್ಕೃತಿ, ಸಂಸ್ಕಾರ, ಹಿಂದೂ ಧರ್ಮದ ರಕ್ಷಣೆ ಎಂದು ಹೇಳುವುದು ಮತ್ತು ಇನ್ನೊಂದು ಕಡೆ, ಇದೇ ದೇಶದ ಅಭಿವೃದ್ಧಿಗೆ ಬಳಕೆಯಾಗಬೇಕಾದ ತೆರಿಗೆಯಿಂದ ತಪ್ಪಿಸಿಕೊಳ್ಳುವುದು ಯಾವ ಬಗೆಯ ದೇಶಭಕ್ತಿ? ಒಂದುವೇಳೆ,

ಮುಸ್ಲಿಮ್ ಮತ್ತು ಕ್ರೈಸ್ತ ಸಂಘಟನೆಗಳು ತಮ್ಮನ್ನು ಹೀಗೆಯೇ ವಾದಿಸಿದರೆ, ಕೇಂದ್ರ ಸರಕಾರ ಸುಮ್ಮನಿರುತ್ತದೆಯೇ? ‘ವ್ಯಕ್ತಿಗಳ ಸಮೂಹ’ ಎಂದು ಹೇಳಿ ತೆರಿಗೆಯಿಂದ ತಪ್ಪಿಸಿಕೊಂಡರೆ, ಕೇಂದ್ರ ಸರಕಾರ ಈಡಿ, ಐಟಿ ಅಧಿಕಾರಿಗಳಿಂದ ದಾಳಿ ಮಾಡಿಸಲಾರದೇ? ಈ ಸಂಘಟನೆಗಳನ್ನು ದೇಶದ್ರೋಹಿಯಂತೆ ಬಿಂಬಿಸಲಾರದೇ? ತಮಾಷೆ ಏನೆಂದರೆ,

‘ಸರಕಾರದಿಂದ ಧನಸಹಾಯ ಪಡಕೊಳ್ಳುತ್ತಿಲ್ಲವಾದ್ದರಿಂದ ರಿಜಿಸ್ಟ್ರೇಷ್ಟನ್‌ ಮಾಡಿಕೊಳ್ಳಬೇಕಿಲ್ಲ’ ಎಂದು ವಾದಿಸುವ ಮೋಹನ್ ಭಾಗವತ್ ಅವರಿಗೆ ಕೇಂದ್ರ ಸರಕಾರ ಝಡ್ ಪ್ಲಸ್ ಭದ್ರತೆಯನ್ನು ಒದಗಿಸುತ್ತದೆ. ಝಡ್ ಪ್ಲಸ್ ಅಂದರೆ 55 ಕಮಾಂಡೋಗಳೂ ಸೇರಿದಂತೆ 60ರಷ್ಟು ಯೋಧರು 24 ಗಂಟೆ ಕಾವಲು ಕಾಯುತ್ತಾರೆ. ಇದು ಬುಲೆಟ್ ಪ್ರೂಫ್ ವಾಹನ, ಎಸ್ಕಾರ್ಟ್ ಮತ್ತು ಮೂರು ಹಂತಗಳಲ್ಲಿ ರಕ್ಷಣೆ ಒಳಗೊಂಡಿರುತ್ತದೆ. 2015ರಿಂದ ಈ ಝಡ್ ಪ್ಲಸ್ ಭದ್ರತೆಯನ್ನು ಒದಗಿಸಲಾಗುತ್ತಿದ್ದು, 2024ರಲ್ಲಿ ಝಡ್ ಪ್ಲಸ್‌ನಿಂದ ಇನ್ನಷ್ಟು ಎತ್ತರಕ್ಕೆ ಏರಿಸಲಾಗಿದೆ. ಗೃಹಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ನೀಡಲಾಗುವ ಸಮಾನ ರೂಪದ ಭದ್ರತೆಯನ್ನು ಈಗ ಮೋಹನ್ ಭಾಗವತ್‌ರಿಗೂ ನೀಡಲಾಗುತ್ತಿದೆ. ಇದು ಪ್ರಧಾನಿಯ ನಂತರದ ಭದ್ರತಾ ವ್ಯವಸ್ಥೆ. ಈ ಝಡ್ ಪ್ಲಸ್ ಭದ್ರತೆಗಾಗಿ ಪ್ರತಿ ತಿಂಗಳು ಕೇಂದ್ರ ಸರಕಾರ 40ರಿಂದ 50 ಲಕ್ಷ ರೂಪಾಯಿಯನ್ನು ಖರ್ಚು ಮಾಡುತ್ತಿದೆ. ಇದು ಭಾರತೀಯರ ತೆರಿಗೆಯ ದುಡ್ಡು. ಒಂದುಕಡೆ,

ತೆರಿಗೆಯನ್ನೇ ಪಾವತಿಸದ ಆರೆಸ್ಸೆಸ್, ಇನ್ನೊಂದು ಕಡೆ, ಅದರ ಮುಖ್ಯಸ್ಥನ ಭದ್ರತೆಗೆ ಪ್ರತಿ ತಿಂಗಳು ದೇಶದ ಖಜಾನೆಯಿಂದ ಲಕ್ಷ ಲಕ್ಷ ರೂಪಾಯಿ ಖರ್ಚು- ಇದಕ್ಕಿಂತ ದೊಡ್ಡ ವಿಪರ್ಯಾಸ ಬೇರೇನಿದೆ? ತನಗಾಗಲಿ, ತನ್ನ ಇತರ ನಾಯಕರಿಗಾಗಲಿ ಅಥವಾ ತನ್ನ ಯಾವುದೇ ಕಾರ್ಯಕ್ರಮಗಳಾಗಲಿ ಭದ್ರತೆಯೇ ಬೇಡ, ಪೊಲೀಸ್ ಕಾವಲೇ ಬೇಡ ಎಂದು ಈ ಮೋಹನ್ ಭಾಗವತ್ ಈವರೆಗೂ ಹೇಳಿಲ್ಲ. ಹೀಗಿರುವಾಗ, ತೆರಿಗೆ ಪಾವತಿಯಿಂದ ಆರೆಸ್ಸೆಸ್ ಮುಕ್ತವಾಗುವುದು ಯಾವ ನ್ಯಾಯ? ಇದೇ ರಿಯಾಯಿತಿ ಯಾಕೆ ಬೇರೆ ಸಂಘಟನೆಗಳಿಗೆ ಸಿಗುತ್ತಿಲ್ಲ? ಅಂದಹಾಗೆ, ಇದೇ ಆರೆಸ್ಸೆಸ್ ನೇಪಾಳ ಸಹಿತ ವಿದೇಶಗಳಲ್ಲಿ ನೋಂದಣಿ ಮಾಡಿ ಕೊಳ್ಳಬಹುದಾದರೆ ಮತ್ತು ಅಲ್ಲಿಯ ಖಜಾನೆಗೆ ತೆರಿಗೆ ಪಾವತಿಸಬಹುದಾದರೆ ಭಾರತದಲ್ಲೇಕೆ ಇವು ಸಾಧ್ಯವಾಗುತ್ತಿಲ್ಲ? ಭಾರತೀಯರ ದುಡ್ಡನ್ನು ಗುರುದಕ್ಷಿಣೆಯ ರೂಪದಲ್ಲಿ ಪಡೆದುಕೊಳ್ಳುವ ಸಂಘಟನೆಯು ಅದರಿಂದ ಸಣ್ಣದೊಂದು ಅಂಶವನ್ನು ತೆರಿಗೆಯ ರೂಪದಲ್ಲಿ ಇದೇ ಭಾರತೀಯರ ಅಭಿವೃದ್ಧಿಗೆ ನೀಡಲು ಯಾಕೆ ಹಿಂಜರಿಯುತ್ತಿದೆ? ನಿಜವಾಗಿ,

ರಿಜಿಸ್ಟ್ರೇಷನ್‌ ಮಾಡಿಸಿಕೊಳ್ಳುವುದರಿಂದ ಆದಾಯ ತೆರಿಗೆ ಪಾವತಿಯೂ ಸೇರಿದಂತೆ ಕೆಲವು ಮೂಲಭೂತ ನಿಯಮಗಳಿಗೆ ಆರೆಸ್ಸೆಸ್ ಬದ್ಧವಾಗಬೇಕಾಗುತ್ತದೆ. ಸಂಗ್ರಹವಾಗುವ ಮೊತ್ತ, ಸದಸ್ಯರ ಸಂಖ್ಯೆ, ಕಾರ್ಯಚಟುವಟಿಕೆ ಇತ್ಯಾದಿಗಳ ಮಾಹಿತಿಯನ್ನು ಸರಕಾರಕ್ಕೆ ಸಲ್ಲಿಸಬೇಕಾಗುತ್ತದೆ. ಅಲ್ಲದೇ, ಇನ್ನೂ ಕೆಲವು ಜವಾಬ್ದಾರಿಗಳೂ ಅದರ ಹೆಗಲ ಮೇಲೆ ಬೀಳುತ್ತದೆ. ಆದ್ದರಿಂದಲೇ ಅದು ಹಿಂದೂ ಧರ್ಮವನ್ನು ಮುಂದು ಮಾಡಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ‘ಹೇಗೆ ಹಿಂದೂ ಧರ್ಮ ರಿಜಿಸ್ಟ್ರೇಷನ್‌ ಆಗಿಲ್ಲವೋ ಹಾಗೆಯೇ ಆರೆಸ್ಸೆಸ್ ಕೂಡ ರಿಜಿಸ್ಟ್ರೇಷನ್‌ ಆಗಿಲ್ಲ’ ಎಂದು ಭಾಗವತ್ ವಾದಿಸುತ್ತಿದ್ದಾರೆ. ಇದೇ ವಾದವನ್ನು ಮುಸ್ಲಿಮ್ ಮತ್ತು ಕ್ರೈಸ್ತ ಸಂಘಟನೆಗಳೂ ಮುಂದಿಟ್ಟರೆ ಏನಾಗಬಹುದು? ಆಗ, ಈ ಆರೆಸ್ಸೆಸ್ಸನ್ನು ಸಮರ್ಥಿಸುವವರು ಮುಸ್ಲಿಮ್ ಸಂಘಟನೆಗಳ ವಾದವನ್ನೂ ಸಮರ್ಥಿಸಬಲ್ಲರೇ? ಎಲ್ಲರೂ ತಮ್ಮನ್ನು ‘ವ್ಯಕ್ತಿಗಳ ಸಮೂಹ’ ಎಂದು ಹೇಳಿಕೊಂಡು ಕೋಟಿ ಕೋಟಿ ಹಣ ಸಂಗ್ರಹಿಸುತ್ತಾ ಮತ್ತು ತೆರಿಗೆಯಿಂದ ತಪ್ಪಿಸಿಕೊಳ್ಳುತ್ತಾ ಸಾಗಿದರೆ, ಆಗ ಇದೇ ಆರೆಸ್ಸೆಸ್ ಬೆಂಬಲಿಗರು ಏನು ಹೇಳಬಹುದು? ಕೇಂದ್ರ ಸರಕಾರದ ನಿಲುವು ಏನಿರಬಹುದು?

ಧರ್ಮ ಎಂದರೆ ಹಿಮಾಲಯದಂಥ ಬೃಹತ್ ಬೆಟ್ಟ. ಅದನ್ನು ರಿಜಿಸ್ಟ್ರೇಷನ್‌ ಮಾಡಬೇಕಿಲ್ಲ. ಆದರೆ ಅದರಲ್ಲಿ ಒಂದು ರೆಸಾರ್ಟ್ ಕಟ್ಟುವುದಾದರೆ ಅದನ್ನು ರಿಜಿಸ್ಟ್ರೇಷನ್‌ ಮಾಡಿಸಿಕೊಳ್ಳಬೇಕು. ಇಷ್ಟು ಸರಳ ಸಂಗತಿ ಮೋಹನ್ ಭಾಗವತ್‌ರಿಗೆ ಗೊತ್ತಿಲ್ಲವೇ?