ದ ಕ ಜಿಲ್ಲೆಯಾದ್ಯಂತ ಭಾರಿ ಮಳೆ; ನಾಳೆಯವರೆಗೆ ಭಾರಿ ಗಾಳಿ, ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

0
1208

ಮಂಗಳೂರು, ಜು. 18: ದ ಕ ಜಿಲ್ಲೆಯಾದ್ಯಂತ ಗುರುವಾರ ಮುಂಜಾನೆಯಿಂದ ಭಾರಿ ಮಳೆ ಸುರಿಯತೊಡಗಿದ್ದು, ಮಳೆಗಾಲದ ವಾತಾವರಣ ಉಂಟಾಗಿದೆ. ಈವರೆಗೆ ಜಿಲ್ಲೆಯಲ್ಲಿ ಮಳೆ ಆಗಾಗ ಬಂದು ಹೋಗುತ್ತಿದ್ದು, ನಡುನಡುವೆ ಬಿಸಿಲೂ ಇರುತ್ತಿತ್ತು. ಜಿಲ್ಲೆಯ ನಾಗರಿಕರು ಇದು ಮಳೆಗಾಲವೋ ಬೇಸಿಗೆ ಕಾಲವೋ ಎಂದು ನಿಟ್ಟುಸಿರು ಬಿಡುತ್ತಿದ್ದ ವೇಳೆಯಲ್ಲೇ ಧಾರಾಕಾರ ಮಳೆ ಸುರಿಯಲು ಪ್ರಾರಂಭವಾಗಿದೆ. ಮಳೆಯಿಂದಾಗಿ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಶಾಲಾ ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ನಡುವೆ ಜು; 19 ರವರೆಗೆ ಕರಾವಳಿಯ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಕರಾವಳಿ ಭಾಗದಲ್ಲಿ ಗಂಟೆಗೆ 45 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದೂ ಹೆಲೇರುವುದಾಗಿ ವರದಿಯಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಹೈ ಅಲರ್ಟ್ ಘೋಷಿಸಲಾಗಿದೆ. ಅದೇವೇಳೆ, ಭಾರಿ ಮಳೆಯಾಗುವ ಸಾಧ್ಯತೆಯ ಕಾರಣದಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಮಳೆಗೆ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ನಗರದ ಕೇಂದ್ರ ರೈಲ್ವೆ ನಿಲ್ದಾಣದೊಳಗೆ ನೀರು ನುಗ್ಗಿದೆ. ಕುದ್ರೋಳಿ ಸಮೀಪ ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತು ಜನರಿಗೆ ತೊಂದರೆಯಾಗಿದೆ ಎಂದು ವರದಿಯಿದೆ. ಬಂದರ್ ನೆಲ್ಲಿಕಾಯಿ ರಸ್ತೆಯು ಈಗಾಗಲೇ ಅಸ್ತವ್ಯಸ್ತಗೊಂಡಿದ್ದು, ಇದರ ಮೇಲೆ ಮಳೆಯ ನೀರೂ ಸೇರಿಕೊಂಡು ಅಕ್ಷರಶಃ ತೋಡಿನಂತಾಗಿದೆ. ವಾಹನಗಳು ನೃತ್ಯ ಮಾಡಿದಂತೆ ಚಲಿಸುತ್ತಿರುವುದನ್ನು ಸಾರ್ವಜನಿಕರು ಅಸಹಾಯಕತೆಯಿಂದ ನೋಡುವಂತಾಗಿದೆ. ಬಂಟ್ವಾಳ, ಬೆಳ್ತಂಗಡಿ, ಧರ್ಮಸ್ಥಳ, ಪುತ್ತೂರು ಮುಂತಾದ ಒಳನಾಡು ಪ್ರದೇಶಗಳಲ್ಲಿ ಭಾರಿ ಮಳೆಯಾಗಿರುವುದಾಗಿ ವರದಿಯಿದ್ದು, ನೀರು ರಸ್ತೆ, ಇನ್ನಿತರ ಕಡೆ ನಿಂತಿರುವ ಬಗ್ಗೆ ಮಾಹಿತಿಯಿದೆ.