ಸನ್ಮಾರ್ಗ ವಾರ್ತೆ
ದಕ್ಷಿಣ ಕನ್ನಡ: ಸೆಂಟರ್ ಫಾರ್ ಎಜುಕೇಷನಲ್ ರಿಸರ್ಚ್ ಅಂಡ್ ಅನಾಲಿಸಿಸ್ (CERA) ಹಾಗೂ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ (SIO) ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಹಯೋಗದಲ್ಲಿ ಜುಲೈ 14, 2026 ರಂದು ಮಂಗಳೂರಿನಲ್ಲಿ ‘ಕರಾವಳಿ ಕರ್ನಾಟಕ ಇತಿಹಾಸ ಸಮ್ಮೇಳನ’ ಯಶಸ್ವಿಯಾಗಿ ಜರುಗಿತು. ಕರಾವಳಿ ಕರ್ನಾಟಕದ ಸಮೃದ್ಧ ಇತಿಹಾಸ, ಸಂಸ್ಕೃತಿ ಮತ್ತು ಸಾಮಾಜಿಕ ಪರಂಪರೆಯ ಕುರಿತು ಚರ್ಚಿಸಲು ಇತಿಹಾಸಕಾರರು, ಸಂಶೋಧಕರು, ಶಿಕ್ಷಣ ತಜ್ಞರು, ಪತ್ರಕರ್ತರು ಹಾಗೂ ಸಮಾಜಮುಖಿ ಚಿಂತಕರು ಈ ವೇದಿಕೆಯಲ್ಲಿ ಒಂದೆಡೆ ಸೇರಿದರು.

ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಶಾಂತಿ ಪ್ರಕಾಶನದ ವ್ಯವಸ್ಥಾಪಕರಾದ ಮುಹಮ್ಮದ್ ಕುಂಞಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸನ್ಮಾರ್ಗ ಪತ್ರಿಕೆಯ ಉಪಸಂಪಾದಕರಾದ ದಾನಿಶ್ ಚೆಂಡಾಡಿ ಹಾಗೂ ಎಸ್ಐಒ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಹಯ್ಯಾನ್ ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಅವರು, ಜನರ ಇತಿಹಾಸವನ್ನು ದಾಖಲಿಸುವ ಅಗತ್ಯತೆ, ಪ್ರಾದೇಶಿಕ ಪರಂಪರೆಯ ಸಂರಕ್ಷಣೆ, ಶೈಕ್ಷಣಿಕ ಸಂಶೋಧನೆಗೆ ಉತ್ತೇಜನ ಹಾಗೂ ಇತಿಹಾಸವನ್ನು ವಿಮರ್ಶಾತ್ಮಕವಾಗಿ ಅಧ್ಯಯನ ಮಾಡುವ ಮಹತ್ವವನ್ನು ಒತ್ತಿ ಹೇಳಿದರು.

ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದ ಖ್ಯಾತ ಪರಿಸರ ಮತ್ತು ಸಾಮಾಜಿಕ ಹೋರಾಟಗಾರ್ತಿ ಶ್ರೀಮತಿ ವಿದ್ಯಾ ದಿನಕರ್ ಅವರು, ರಾಣಿ ಅಬ್ಬಕ್ಕ ಅವರ ಐತಿಹಾಸಿಕ ಕೊಡುಗೆ, ಕರಾವಳಿ ಕರ್ನಾಟಕದ ಪ್ರತಿರೋಧದ ಇತಿಹಾಸ ಹಾಗೂ ಸ್ಥಳೀಯ ಇತಿಹಾಸವನ್ನು ಸಂಶೋಧನಾ ದೃಷ್ಟಿಯಿಂದ ದಾಖಲಿಸುವ ಅಗತ್ಯತೆಯ ಕುರಿತು ವಿವರವಾಗಿ ಮಾತನಾಡಿದರು.

CERA ಸಂಸ್ಥೆಯ ಚೇರ್ಮನ್ ಆದಿ ಅಲ್ ಹಸನ್ ಅವರು ಸಮ್ಮೇಳನದ ಅಧ್ಯಕ್ಷೀಯ ಭಾಷಣ ಮಾಡಿದರು. ಸಾಕ್ಷ್ಯಾಧಾರಿತ ಇತಿಹಾಸ ಸಂಶೋಧನೆಯ ಮಹತ್ವವನ್ನು ವಿವರಿಸಿದ ಅವರು, ಕರಾವಳಿ ಕರ್ನಾಟಕದ ವೈವಿಧ್ಯಮಯ ಪರಂಪರೆಯನ್ನು ಸಂರಕ್ಷಿಸುವುದು ಶಿಕ್ಷಣ ಸಂಸ್ಥೆಗಳು ಮತ್ತು ಸಂಶೋಧಕರ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಸಮ್ಮೇಳನದ ವಿವಿಧ ಶೈಕ್ಷಣಿಕ ಅಧಿವೇಶನಗಳಿಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಎಂ. ಚಂದ್ರ ಪೂಜಾರಿ, ಪತ್ರಕರ್ತರಾದ ನವೀನ್ ಸೂರಿಂಜೆ, ಕಾರ್ಕಳ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಮಹಮ್ಮದ್ ರಿಯಾಝ್ ಕಾರ್ಕಳ, ಶ್ರೀ ಭುವನೇಂದ್ರ ಕಾಲೇಜಿನ ಉಪನ್ಯಾಸಕ ರಾಮಾಂಜಿ ನಮ್ಮ ಭೂಮಿ ಹಾಗೂ MANUSHA ಸಂಸ್ಥೆಯ ಮಾಜಿ ಅಧ್ಯಕ್ಷ ಪ್ರೊ. ಜುಬೈರ್ ಅಧ್ಯಕ್ಷತೆ ವಹಿಸಿದ್ದರು.
ಸಮ್ಮೇಳನದಲ್ಲಿ ಕರಾವಳಿ ಕರ್ನಾಟಕದ ವ್ಯಾಪಾರ ಮತ್ತು ಆರ್ಥಿಕತೆ, ಸಾಮಾಜಿಕ ರಚನೆ ಮತ್ತು ಸಾಂಸ್ಕೃತಿಕ ಸಮನ್ವಯ, ಭಾಷಿಕ ಸಮುದಾಯಗಳ ರೂಪುಗೊಳ್ಳುವಿಕೆ, ವಿವಿಧ ಆಡಳಿತಗಾರರು ಹಾಗೂ ಅವರ ಆಡಳಿತ ಮತ್ತು ಸಾಮಾಜಿಕ ಪರಿಣಾಮ, ಮತ್ತು ಕರಾವಳಿ ಕರ್ನಾಟಕದ ಸಮಾಜ ಸುಧಾರಕರು ಎಂಬ ಐದು ವಿಷಯಾಧಾರಿತ ಕ್ಷೇತ್ರಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಯಿತು. ವಿವಿಧ ಭಾಗಗಳಿಂದ ಆಗಮಿಸಿದ್ದ ಸಂಶೋಧಕರು ಮತ್ತು ವಿದ್ವಾಂಸರು ತಮ್ಮ ಅಧ್ಯಯನಗಳನ್ನು ಮಂಡಿಸಿ, ಶೈಕ್ಷಣಿಕ ಚರ್ಚೆಗಳಲ್ಲಿ ಭಾಗಿಯಾದರು. ಈ ಸಂವಾದಗಳು ಕರಾವಳಿ ಕರ್ನಾಟಕದ ಐತಿಹಾಸಿಕ ಬೆಳವಣಿಗೆಯ ಕುರಿತು ಹೊಸ ಒಳನೋಟಗಳನ್ನು ನೀಡಿದ್ದಲ್ಲದೆ, ಅಧ್ಯಯನಕ್ಕೆ ಉತ್ತೇಜನ ನೀಡಿದವು.
ಕರಾವಳಿ ಕರ್ನಾಟಕದ ಬಹುತ್ವದ ಪರಂಪರೆ, ಕಡಲಾಧಾರಿತ ಇತಿಹಾಸ, ಬೌದ್ಧಿಕ ಕೊಡುಗೆಗಳು ಹಾಗೂ ಪ್ರದೇಶದ ಗುರುತಿನ ನಿರ್ಮಾಣದಲ್ಲಿ ವಿವಿಧ ಸಮುದಾಯಗಳ ಪಾತ್ರದ ಕುರಿತು ನಿರಂತರ ಸಂಶೋಧನೆಯ ಅಗತ್ಯತೆಯನ್ನು ಸಮ್ಮೇಳನ ಕರೆ ನೀಡಿತು. ಈ ಸಮ್ಮೇಳನವು ಮುಂದಿನ ದಿನಗಳಲ್ಲಿ ಕರಾವಳಿ ಕರ್ನಾಟಕದ ಇತಿಹಾಸದ ಕುರಿತು ದಾಖಲಾತಿ, ಪ್ರಕಟಣೆ ಹಾಗೂ ಶೈಕ್ಷಣಿಕ ಸಹಯೋಗಗಳಿಗೆ ಹೊಸ ಪ್ರೇರಣೆ ನೀಡಲಿದೆ ಎಂಬ ವಿಶ್ವಾಸವನ್ನು ಭಾಗವಹಿಸಿದವರು ವ್ಯಕ್ತಪಡಿಸಿದರು ಎಸ್.ಐ.ಓ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.












