ನರೇಂದ್ರ ಮೋದಿ: ಉತ್ಥಾನದಿಂದ ಪತನದತ್ತ…

0
424

✍️ ಲಕ್ಷ್ಮೀಶ ಗಬ್ಬಲಡ್ಕ
ಸದಸ್ಯರು, ದ.ಕ. ಜಿಲ್ಲಾ ಧಾರ್ಮಿಕ ಪರಿಷತ್

ಮಾತು ಬೆಳ್ಳಿ ಮೌನ ಬಂಗಾರ ಅನ್ನುವ ಮಾತು ಕೊಡುವ ಸಂದೇಶ ಬಹು ಮಹತ್ವದ್ದು. ಸತ್ಯಕಾಮರ ಇನ್ನೊಂದು ಮಾತು – ಮೌನ ಮತ್ತು ಮಾತಿನ ಬೇರೊಂದು ಎತ್ತರದ ಆಯಾಮವನ್ನು ತೋರಿಸುತ್ತದೆ. ಅದೇನೆಂದರೆ, ಮಾತು ಸ್ತನ, ಮೌನ ಹಾಲು. ಈ ಎರಡು ಅಭಿಪ್ರಾಯಗಳು ಮಾತು ಮತ್ತು ಮೌನದ ಬೆಲೆಯನ್ನು ತೋರಿಸುತ್ತವೆ.

ವಿಲಕ್ಷಣ ಸಂಗತಿ ಏನೆಂದರೆ, ಭಾರತದ ದೀರ್ಘವಾದ ಪರಂಪರೆಯ ಸಕಲ ಮೌಲ್ಯಗಳ ಸಾಕಾರ ರೂಪು ಅಂತ ಮಾನ್ಯ ಪ್ರಧಾನಿ ಮೋದಿಯವರನ್ನು ನಂಬುವ, ನಂಬಿಸುವ ಈ ಕಾಲಘಟ್ಟದಲ್ಲಿ ಮೋದಿಯವರು ಈ ಎರಡೂ ಅಭಿಪ್ರಾಯಗಳಿಗೆ ಅತೀತರಾಗಿ ನಡೆದುಕೊಳ್ಳುತ್ತಾ ಇದ್ದಾರೆ. ಅಧಿಕಾರಸ್ಥರ ಕುರಿತು ಭಾರತದ ಬಹು ಪ್ರಾಚೀನ ನಂಬಿಕೆ ಹೀಗಿದೆ- “ನ ವಿಷ್ಣು ಪೃಥಿವೀ ಪತಿ”. ಅಂದರೆ ವಿಷ್ಣುವಿನ ಅಂಶ ಇಲ್ಲದವ ರಾಜನಾಗಲಾರ. ಅಂದರೆ, ಉನ್ನತ ಮಟ್ಟದ ಸದ್ಗುಣಗಳ ಅಭಿವ್ಯಕ್ತಿ ಆಡಳಿತಗಾರನಲ್ಲಿ ಇರಬೇಕು. ಮೋದಿಯವರ ಆಳ್ವಿಕೆಯ ಪ್ರಾರಂಭದ ದಿನದಿಂದಲೇ ಗಮನಿಸಿ ಕೊಂಡು ಬನ್ನಿ. ಅವರೆಂದಾದರೂ ಮಾತಾಡಬೇಕಾದ ಸಂದರ್ಭದಲ್ಲಿ ಮಾತಾಡಿದ್ದಾರೆಯೇ? ಚುನಾವಣಾ ಭಾಷಣಗಳಲ್ಲಿ ಏಕಮುಖವಾಗಿ ಅಬ್ಬರಿಸುವ ಅವರೇಕೆ ಅನಿವಾರ್ಯ ಸಂದರ್ಭಗಳಲ್ಲಿ ಮೌನವಾಗುತ್ತಾರೆ? ಸಂಸತ್ತಿನ ಭಾಷಣಗಳಲ್ಲಿ ದೇಶದ ವರ್ತಮಾನದ ಮತ್ತು ಭೂತಕಾಲದ ಎಲ್ಲಾ ಸಮಸ್ಯೆಗಳಿಗೆ ಕಾಂಗ್ರೆಸ್ ಮತ್ತು ನೆಹರೂ ಆಡಳಿತವನ್ನು ಹಳಿಯುತ್ತಾ, ನಾನೊಬ್ಬನೇ ನಾನೊಬ್ಬನೇ ಅಂತ ಎದೆಗೆ ಕೈಯನ್ನು ಅಪ್ಪಳಿಸಿಕೊಳ್ಳುವ ವೀರಾವೇಶ, ಭಾರತದ ನಿಷ್ಪಾಪಿ ಜನರ ಆಕ್ರಂದನಕ್ಕೆ ಕಣ್ಣೀರು ಒರೆಸುವೆ ಅಂತ ಅದು ಹೃದಯದ ವರ್ತನೆಯಾಗಿ ಬರುತ್ತಾ ಇಲ್ಲ.

ನಿಮ್ಮ ಗಮನಕ್ಕೆ ಒಂದು ವಿಚಾರ ತರಲು ಬಯಸುವೆ. ಮೋದಿಯವರು ಪ್ರಥಮ ಬಾರಿಗೆ ಪ್ರಧಾನಿಯಾದಾಗ ಅಮೆರಿಕಕ್ಕೆ ಹೋಗಿದ್ದರು. ಅಮೆರಿಕಾದ ಅಧ್ಯಕ್ಷರ ಕೈಯನ್ನು ಹಿಡಿದುಕೊಂಡು ಸಂಭ್ರಮಿಸಿದ ಸನ್ನಿವೇಶ ನೋಡಿದಾಗ ಅಂಗನವಾಡಿ ಮಕ್ಕಳು ಜಾತ್ರೆಯಲ್ಲಿ ಸಂಭ್ರಮ ಪಟ್ಟ ಹಾಗೇ ಇತ್ತು. ಅದೇ ಸಂದರ್ಭ ಆಂಧ್ರದ ಮುಖ್ಯಮಂತ್ರಿಯಾಗಿದ್ದ ಜಗನ್ ರೆಡ್ಡಿಯವರು ಮುರುಕಲು ಜೋಪಡಿ ಮನೆಯ ಕೆದರಿದ ಕೂದಲಿನ, ಸಿಂಬಳ ಸುರಿಯುವ ಮಗುವನ್ನು ಮುದ್ದಾಡಿದ ಫೋಟೋ ಒಂದು ಇಲ್ಲಿ ವೈರಲ್ ಆಗಿತ್ತು. ನಾನಾಗ ಒಂದು ಬರಹ ಬರೆದಿದ್ದೆ: ಮಾನ್ಯತೆ ರಹಿತ ಬದುಕನ್ನು ಕಂಡಿದ್ದ ಮೋದಿಯವರು ಕೀಳರಿಮೆಯಿಂದ ಬಳಲುತ್ತಾ ಇದ್ದಾರೆ. ಹಾಗಾಗಿ ದೊಡ್ಡವರ ಜೊತೆ ಗುರುತಿಸಿಕೊಳ್ಳುವ ಮೂಲಕ ಬಾಲ್ಯದಲ್ಲಿ ಸಿಗದೇ ಇದ್ದದ್ದನ್ನು ಈ ಮೂಲಕ ಪಡೆದುಕೊಳ್ಳುತ್ತಾ ಇದ್ದಾರೆ. ಜಗನ್ ಸಕಲ ಸಮೃದ್ಧಿಯ ಬಾಲ್ಯ ಅನುಭವಿಸಿದವರು, ಅವರಿಗೆ ಬಡವರ ಜೊತೆ ಇರುವುದು ಕೂಡಾ ಒಂದು ಹೆಚ್ಚುಗಾರಿಕೆ ಅಂತ ಅಭಿಪ್ರಾಯಪಟ್ಟಿದ್ದೆ. ಆಳುವ ನಾಯಕ ಕೀಳರಿಮೆಯಿಂದ ಕೂಡಿದ್ದರೆ ಏನಾಗುತ್ತದೆ ಅನ್ನುವುದಕ್ಕೆ ಉದಾಹರಣೆಯೇ ರಸಾತಳಕ್ಕೆ ಇಳಿದಿರುವ ವಿದೇಶಿ ನೀತಿಗಳು, ಉಪಕ್ರಮಗಳು. ಮನೆಯಲ್ಲಿ ಅಬ್ಬರಿಸುವ, ಹೊರಗಡೆ ಪೇಲವ ಆಗಿರುವ ಉತ್ತರಕುಮಾರನ ನೆನಪು ಮೋದಿಯವರ ವರ್ತನೆಯ ಮೂಲಕ ಅನುಭವಕ್ಕೆ ಬರುತ್ತದೆ.

ಎಲ್ಲಿಯೋ ಒಬ್ಬ ಅಶ್ವತ್ಥ ಎಲೆಯಲ್ಲಿ ಬಿಡಿಸುವ ಚಿತ್ರದ ಬಗ್ಗೆಯೇ 20 ನಿಮಿಷ ಮನ್ ಕೀ ಬಾತ್! ಬೇಸಗೆಯಲ್ಲಿ ಆರೋಗ್ಯ ಕಾಪಾಡುವ ಸಲಹೆಗಳ ಮನದ ಮಾತಿನ ಸಾಮ್ರಾಟರು; ಕಾರ್ಗಿಲ್ ಸ್ಫೋಟ, ಸೈನಿಕರ ಸಾವು, ರಾಜ್ಯಪಾಲ ಸತ್ಯಪಾಲರ ಮಾತುಗಳಿಗೆ ಮೌನ ತಾಳುತ್ತಾರೆ. ಏಕಾಏಕಿ ಘೋಷಣೆ ಮಾಡಿದ ಲಾಕ್ ಡೌನ್‌ನ ಕಾರಣ ಸಾವಿರಾರು ಜನ ಬೀದಿಗೆ ಬಿದ್ದದ್ದು, ಲಕ್ಷಾಂತರ ಉದ್ಯೋಗ ಕಳೆದುಕೊಂಡದ್ದು, ಸಾವಿರಾರು ಮೈಲು ದೂರ ಲಕ್ಷಾಂತರ ಜನ ಹಸುಗೂಸು ಕಟ್ಟಿ ಕೊಂಡು ನಡೆಯಬೇಕಾದ ಸ್ಥಿತಿಗೆ ಅವರು ಮಾತಾಡಲಿಲ್ಲ. ಚಂಡೀಗಢ ಮೇಯರ್ ಚುನಾವಣೆ ಅಕ್ರಮ ಆದಾಗ ಮಾತಾಡಲಿಲ್ಲ. ಮಣಿಪುರದ ಸ್ತ್ರೀಯರನ್ನು ನಡುಬೀದಿಯಲ್ಲಿ ಬೆತ್ತಲೆ ಮೆರವಣಿಗೆ ಮಾಡಿದ್ದಾಗ ಮಾತಾಡದೆ, ಅಲ್ಲಿಗೆ ಭೇಟಿ ಕೊಡದೇ ಇದ್ದ ಪ್ರಧಾನಿ, ಚುನಾವಣೆ ಪ್ರಚಾರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಣೆಯ ಸಿಂಧೂರ, ಕುತ್ತಿಗೆಯ ಮಂಗಳಸೂತ್ರ ಹೋಗುತ್ತದೆ ಅಂತ ಭಾಷಣ ಮಾಡುವುದು ಅವರೆಷ್ಟು ಬೌದ್ಧಿಕವಾಗಿ ಜಾರಿದ್ದಾರೆ ಅನ್ನುವುದನ್ನು ಸೂಚಿಸುತ್ತದೆ. ಹೀಗೆ ಆಯ್ಕೆ ಮಾಡಿದ ವಿಚಾರದಲ್ಲಿ ಬಾಯಿ ಬಿಡುವ, ಬಾಯಿ ಮುಚ್ಚುವ ಪ್ರಧಾನಿ ಅಯೋಧ್ಯೆ ದೇವಸ್ಥಾನ ಲೂಟಿಯ ಪ್ರಕರಣದಲ್ಲಿ ಬಾಯಿ ಬಿಡುತ್ತಾರೆ ಅಂತ ಭಾವಿಸುವುದು ನಮ್ಮ ಅತಿರೇಕದ ನಿರೀಕ್ಷೆ ಆಗಿಬಿಡುತ್ತದೆ.

ಘಜ್ನಿ ಘೋರಿಗಳ ಹೊಡೆತ ದಿಂದ ನಾಶವಾದ, ರೂಪಾಂತರ ಹೊಂದಿದ್ದ ದೇವಾಲಯದ ಪುನರ್ ನಿರ್ಮಾಣದ ಸಂಭ್ರಮದಲ್ಲಿ ರಾಷ್ಟ್ರಪತಿಗಳು ಇದ್ದರು. ಅಯೋಧ್ಯಾ ಚಳುವಳಿ ನಿಶ್ಚಿತವಾಗಿ ಭಾರತದಲ್ಲಿ ಹಿಂದೂ ಧಾರ್ಮಿಕ ಒರತೆಯನ್ನು ಹೆಚ್ಚು ಮಾಡಿತ್ತು ಮತ್ತು ಅದರ ಮೂಲಕ ಬಿಜೆಪಿ ನೆಲೆ ಗಟ್ಟಿ ಮಾಡಿತು ಅನ್ನುವುದು ಸತ್ಯ. ಅಡ್ವಾಣಿ ಇದರ ನಿರ್ಣಾಯಕ ವ್ಯಕ್ತಿ. ಎಲ್ಲರೂ ಗ್ರಹಿಸಿದ್ದರು, ಅಡ್ವಾಣಿ ಕೆಸರುಕಲ್ಲು ಹಾಕುತ್ತಾರೆ ಅಂತಾ. ಆದರೆ ಅಲ್ಲಿಯೂ ಇವರೇ. ಉದ್ಘಾಟನೆ ಅಡ್ವಾಣಿ ಮಾಡಿಯಾರು ಅಂತ ಕೆಲವರು ಅಂದುಕೊಂಡರು. ಆದರೆ ಅಲ್ಲಿಯೂ ಇವರೇ. ರಾಷ್ಟ್ರಪತಿ ಪ್ರಮುಖ ಪಾತ್ರ ನಿರ್ವಹಣೆ ಮಾಡಿಯಾರು, ರಾಷ್ಟ್ರಪತಿಗಳು ಪ್ರಜಾಪಿತ ಬ್ರಹ್ಮಕುಮಾರಿ ಆತ್ಮಜ್ಞಾನ ಸಾಧನೆಯನ್ನೂ ಮಾಡುತ್ತಾರೆ, ಹಾಗಾಗಿ ರಾಷ್ಟ್ರಪತಿಗಳು ಪ್ರಧಾನ ಭೂಮಿಕೆಯಲ್ಲಿ ಇರಬಹುದು ಅಂದರೆ… ಅಲ್ಲಿಯೂ ಇವರೇ. ಪ್ರತಿಷ್ಠಾ ಸಂದರ್ಭದ ಪವಿತ್ರ ಪ್ರಾಣಿಯೂ ಇವರೇ.

ಇವರು ವಿವಾಹಿತ. ಹಾಗಾಗಿ ಧರ್ಮಪತ್ನಿ ಸಮೇತ ಪ್ರತಿಷ್ಠಾ ಕಾರ್ಯದಲ್ಲಿ ಪಾಲ್ಗೊಳ್ಳುವುದು ಧಾರ್ಮಿಕ ನಿಯಮ. ಆ ನಿಯಮ ಪಾಲನೆ ಆಗಲಿಲ್ಲ. ಅಲ್ಲಿ ಎಲ್ಲಾ ಕಡೆ ರಾಮನನ್ನು ಮೀರಿಸಿ… ರಾಮನ ಪ್ರತಿಷ್ಠೆಗಿಂತ ಹೆಚ್ಚಾಗಿ ತನ್ನ ಪ್ರತಿಷ್ಠೆಯ ಪ್ರದರ್ಶನ ಆಯಿತು. ಸಂಸತ್ತಿನಲ್ಲಿ ಅಯೋಧ್ಯಾ ಶ್ರೀರಾಮ ದೇವಾಲಯದ ಟ್ರಸ್ಟ್ ಮತ್ತು ಟ್ರಸ್ಟಿನ ಘೋಷಣೆ ಆಯಿತು. ಯಾರು ಮಾಡಿದರು ಅಂತ ಕೇಳಿದರೆ, ಇವರೇ ಮಾಡಿದ್ದು. ಮೊನ್ನೆ ಧ್ವಜ ಸ್ತಂಭ ಸ್ಥಾಪನೆ ಆಯಿತು. ಅಲ್ಲಿಯೂ ಇವರೇ. ಶ್ರೀರಾಮನ ಮಂದಿರ ಸ್ಥಾಪನೆಯ ಎಲ್ಲಾ ಲಾಭದಾಯಕ ಸಂಗತಿಗಳನ್ನು ತನ್ನ ಖಾತೆಗೆ ಜಮಾ ಮಾಡಿ ಕೊಳ್ಳುವುದರಲ್ಲಿ ಮುಂದಾಗುವ ಪ್ರಧಾನಿಗಳು ಮಂದಿರ ಲೂಟಿ ಕುರಿತು ಮೌನೇಶ. ಇವರೇ ಆದೇಶ ಹೊರಡಿಸಿದ, ಇವರೇ ಕೆಸರುಕಲ್ಲು ಹಾಕಿದ, ಇವರೇ ಉದ್ಘಾಟನೆ ಪ್ರತಿಷ್ಠೆಯ ಪವಿತ್ರಪಾಣಿಯಾಗಿ, ಇವರೇ ಆಡಳಿತ ಸಮಿತಿ ಮತ್ತು ಸದಸ್ಯರನ್ನು ನೇಮಿಸಿ, ಇವರೇ ಧ್ವಜ ಹಾರಾಡಿಸಿ.. ಎಲ್ಲದರಲ್ಲೂ ಇವರೇ ಇದ್ದು.. ಅಲ್ಲಿ ಅಧರ್ಮವನ್ನು ಇವರ ವ್ಯಕ್ತಿಗಳೇ ಮಾಡಿದಾಗ ಇವರ ಮೌನ ಬಂಗಾರವಾಗಲು ಹೇಗೆ ಸಾಧ್ಯ? ಎದೆಯ ಹಾಲಾಗಲು ಹೇಗೆ ಸಾಧ್ಯ?

ನಿಶ್ಚಿತವಾಗಿ ಬಿಜೆಪಿಯನ್ನು ಅಧಿಕಾರ ಗದ್ದುಗೆಯಲ್ಲಿ ಕುಳ್ಳಿರಿಸಿದ್ದು ಶ್ರೀರಾಮ ಜನ್ಮಭೂಮಿ ಆಂದೋಲನ. ಭಾರತ ಹೇಳಿ ಕೇಳಿ ಭಾವುಕ ಜನರ ದೇಶ. ಇಲ್ಲಿ ಮೆದುಳಿನ ಎಡಭಾಗ ಉಪಯೋಗ ಮಾಡುವ ಜನರಿಗಿಂತ ಹೆಚ್ಚು ಬಲಭಾಗ ಉಪಯೋಗ ಮಾಡುವ ಜನಗಳು ಇದ್ದಾರೆ. ಹಾಗಾಗಿ ಭಾವನಾತ್ಮಕ ಸಂಗತಿಗಳು ಜನರ ಸಂಪತ್ತನ್ನೂ, ಬದುಕನ್ನೂ, ಜೀವವನ್ನೂ ತ್ಯಾಗ ಮಾಡಿಸಲು ಕಾರಣವಾಗುತ್ತವೆ. ಪ್ರಿಂಟ್ ಮೀಡಿಯಾ ಮಾತ್ರ ದೇಶದ ಜನರನ್ನು ತಲುಪುತ್ತಿದ್ದ ಕಾಲದಲ್ಲಿ ಧಾರ್ಮಿಕ ಲೇಪ ಹೊದ್ದ ರಾಜಕೀಯ ಚಳುವಳಿ ಇಡೀ ಸಮಾಜವನ್ನು ಪ್ರಭಾವಿಸಿತ್ತು. ಹಿಂದೂ ಮತ್ತು ಇಸ್ಲಾಮ್ ಧರ್ಮದ ಅನುಯಾಯಿಗಳಲ್ಲಿ ಪರಸ್ಪರ ಅಪನಂಬಿಕೆ, ಅಪವಾದ, ಕ್ರೋಧ ಮತ್ತು ಪ್ರತೀಕಾರ ಹೆಚ್ಚಿಸಿತ್ತು. ಬಹು ಸಂಖ್ಯೆಯ ಹಿಂದೂ ಧಾರ್ಮಿಕರು ಬಿಜೆಪಿ ಮತ್ತು ಸಂಘದ ನಾಯಕರನ್ನು ಆರಾಧನಾ ಮಟ್ಟಕ್ಕೆ ಏರಿಸಿ ನಂಬುತ್ತಿದ್ದರು. ಹೀಗಿರಬೇಕಾದರೆ ಮಂದಿರ ನಿರ್ಮಾಣ ಮೋದಿಯವರ ಅವಧಿಯಲ್ಲಿ ಆಗಿರುವುದು ಸಣ್ಣ ಸಂಗತಿ ಖಂಡಿತಾ ಅಲ್ಲ. ಮೋದಿಯವರು ಜನರ ಮನಸ್ಸಿನಲ್ಲಿ ತಾವೊಬ್ಬ ಅತಿ ಮಾನುಷ ಎಂದೂ… ವಿಷ್ಣುವಿನ ಅಂಶ ಇರುವವನೇ ರಾಜ ಅನ್ನುವ ನಂಬಿಕೆಗೆ ಅನ್ವರ್ಥ ಆಗುವಂತೆ ಬಿಂಬಿಸಿಕೊಳ್ಳುವಲ್ಲಿ ಯಶಸ್ಸನ್ನು ಪಡೆದರು.

ಆದರೆ ನಿಜವಾದ ದೈವಾಂಶ ಹೇಗಿರುತ್ತಾನೋ ಅನ್ನುವುದಕ್ಕೆ ಸಂಪೂರ್ಣ ವ್ಯತಿರಿಕ್ತ ನಡೆ ಮೋದಿಯವರದು. ಉತ್ತರದಾಯಿತ್ವ ಇಲ್ಲದ ನಡೆ ಇವರ ಅಭಿಮಾನಿಗಳಲ್ಲಿ ನಿಧಾನವಾಗಿ ಭ್ರಮನಿರಸನ ಉಂಟು ಮಾಡುತ್ತಿದೆ. ಅಡ್ವಾಣಿಯವರನ್ನು ಅಡಿಗಲ್ಲು ಹಾಕಲು ಕರೆಯದೆ ಇದ್ದಾಗಲೇ ಸಣ್ಣಗಿನ ಮಿಸುಕಾಟ ಆಗಿತ್ತು. ಈಗ ಅಂತರರಾಷ್ಟ್ರೀಯವಾಗಿ ಇವರು ಅಸಹಜವಾಗಿ ನಗುವುದು, ಮೈಮೇಲೆ ಬಿದ್ದು ತಬ್ಬಿಕೊಳ್ಳುವುದು, ಒಂದೊAದೇ ದೇಶಗಳನ್ನು ನಂಬಿಕಸ್ಥ ಜಾಗದಿಂದ ಕಳೆದುಕೊಳ್ಳುವುದು, ದೇಶ ವಿದೇಶಗಳಲ್ಲಿ ಟ್ರೋಲ್ ಆಗ್ತಾ ಇರುವುದು, ತೈಲ ವಿಷಯ, ಉದ್ಯೋಗ ವಿಷಯ ಇತ್ಯಾದಿಗಳಲ್ಲಿ ಘೋರ ವಿಫಲತೆ ಕಾಣುತ್ತಾ ಇರುವಾಗಲೇ ಮಂದಿರ ಲೂಟಿ ಇವರ ಹೆಗಲ ಮೇಲೆ ಮಣ ಭಾರವಾಗಿ ಕುಳಿತಿದೆ. ಎಂದಿನಂತೆ ಇವರದು ಅಸಹನೀಯ ಮೌನ ವಿದೇಶ ಯಾತ್ರೆ.

ಒಂದು ಯುವ ಪೀಳಿಗೆ ಭರವಸೆ ಮತ್ತು ನಿರೀಕ್ಷೆಗಳಿಂದ ಇವರ ಹಿಂದೆ ಬಂತು. ಆದರೆ ಭಾರತೀಯ ಯುವ ಮನಸ್ಸು ಈಗ ಪ್ರಾಕ್ಟಿಕಲ್ ಆಗಿ ಯೋಚಿಸುತ್ತಿದೆ. ಭವಿಷ್ಯದ ಕುರಿತು ಹೆಚ್ಚು ಸ್ಪಷ್ಟತೆ ಇದೆ. ಭ್ರಾಮಕ ಯೋಚನೆ ಬದುಕನ್ನು ಹಾಳು ಮಾಡುವುದರ ಅರಿವು ಪಡೆದಿದೆ. ಹಿಂದೂ ಮುಸ್ಲಿಂ ವಿಚಾರದಲ್ಲಿ ಇನ್ನು ಜನರನ್ನು ಕೆರಳಿಸಿ ಬೀದಿಗೆ ಇಳಿಸಲು ಸಾಧ್ಯವಿಲ್ಲ ಅನ್ನುವು ದರ ಅರಿವು ಉಂಟಾಗಿದೆ. ಧಾರ್ಮಿಕತೆ ಮತ್ತು ರಾಜಕೀಯ ಹಿಂದುತ್ವದ ವ್ಯತ್ಯಾಸ ಗೊತ್ತಾಗುತ್ತಿದೆ. ಮುಸ್ಲಿಂ ಪ್ರಜ್ಞಾವಂತರು ಕೂಡಾ ತಮ್ಮ ಸಮಾಜದ ಯುವಕರು ಮತೀಯ ಮೂಲಭೂತವಾದದ ಕಡೆಗೆ ಹೊರಳದಂತೆ ಜಾಗೃತಿ ಮೂಡಿಸಿ ಯಶಸ್ವಿ ಆಗುತ್ತಾ ಇದ್ದಾರೆ. ಈ ಎಲ್ಲಾ ಕಾರಣಗಳಿಂದ ಮೋದಿಯವರ ಮೌನ, ವಿಫಲತೆ ಮುಂದಿನ ದಿನಗಳಲ್ಲಿ ಸಂಘಪರಿವಾರದ ಬಿಜೆಪಿ ಪಾಲಿಗೆ ರಿವರ್ಸ್ ಖಂಡಿತಾ. ಶುದ್ಧ ಧಾರ್ಮಿಕ ಮನೋಧರ್ಮದ ಹಿಂದೂಗಳು ಟ್ರಸ್ಟ್ ನೋಂದಾವಣೆ ಆಗಬೇಕು, ಗುರು ದಕ್ಷಿಣೆ ಲೆಕ್ಕಾಚಾರ ಕೊಡಬೇಕು ಅಂತ ಬಯಸುತ್ತಾ ಇದ್ದಾರೆ. ಸ್ವತಃ ಪೇಜಾವರ ಸ್ವಾಮಿಗಳ ಟ್ರಸ್ಟ್ ನೋಂದಾ ವಣೆ ಆಗಬೇಕು ಅನ್ನುವ, ದೇವಾಲಯಕ್ಕೆ ಕೊಡುವ ಬದಲು ಬಡವರಿಗೆ ಮನೆ ಕಟ್ಟಲು ಸಂಪತ್ತು ಕೊಡಿ ಅನ್ನುವ ಮಾತುಗಳು ಟ್ರಸ್ಟ್ ವಿರುದ್ಧ, ಬಿಜೆಪಿ ವಿರುದ್ಧ ಹಿಂದೂ ಧಾರ್ಮಿಕರು ಅದೆಷ್ಟು ರೇಜಿಗೆ ಹೊಂದಿದ್ದಾರೆ ಅನ್ನುವುದನ್ನು ಸೂಚಿಸುತ್ತದೆ.

ಕೊನೆಯದಾಗಿ, ಇಳಿಜಾರಿನಲ್ಲಿ ಹೋಗುವ ವಾಹನದ ಇಂಧನ ಖಾಲಿಯಾಗಿದೆ. ಆದರೆ ಏರಿದ್ದು ಎತ್ತರದ ರಸ್ತೆ. ಹಾಗಾಗಿ ಏರಿದಕ್ಕಿಂತ ಹೆಚ್ಚು ದೂರದ ಇಳಿಜಾರು ಇಂಧನ ಇಲ್ಲದೆ ವಾಹನ ಹೋಗುತ್ತದೆ. ಒಂದಷ್ಟು ದೂರ ಹೋದ ಮೇಲೆ ನಿಲ್ಲಲೇ ಬೇಕು. ಇಳಿಜಾರು ಮುಗಿ ಯುತ್ತಾ ಬಂದಿದೆ. ಮೋದಿಯವರ ಅವಧಿಯಲ್ಲಿ ಆಗುತ್ತಿರುವುದು ಅಷ್ಟೇ.