ಸನ್ಮಾರ್ಗ ವಾರ್ತೆ
ಹೊಸದೆಹಲಿ: ಪರೀಕ್ಷಾ ಅಕ್ರಮಗಳ ಕುರಿತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಪ್ರತಿಭಟನೆಯು ಭಾರಿ ಘರ್ಷಣೆಗೆ ತಿರುಗಿದ್ದು, ಪ್ರತಿಭಟನಾಕಾರರ ಮೇಲೆ ಪೊಲೀಸರು ಅಶ್ರುವಾಯುಗಳನ್ನು ಹಾರಿಸಿ ಭಾರಿ ಪ್ರಮಾಣದಲ್ಲಿ ಲಾಠಿಚಾರ್ಜ್ ನಡೆಸಿದ್ದಾರೆ.
ಮಳೆಗಾಲದ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಂಸತ್ ಮಾರ್ಚ್ ನಡೆಸಲು ಸಿಜೆಪಿ ಯೋಜನೆ ಹಾಕಿತ್ತಾದರೂ ಪೊಲೀಸರು ಅನುಮತಿ ನೀಡಿರಲಿಲ್ಲ. ಆದರೂ ಎಲ್ಲಾ ನಿರ್ಬಂಧಗಳನ್ನು ಉಲ್ಲಂಘಿಸಿ ಮಾರ್ಚ್ ನಡೆಸುವುದಾಗಿ ಸಿಜೆಪಿ ಘೋಷಿಸಿತ್ತು. ಇದರೊಂದಿಗೆ ಕ್ಷಿಪ್ರ ಕಾರ್ಯಾಚರಣೆ ಪಡೆ ಸಿಬ್ಬಂದಿ ಸೇರಿದಂತೆ ಪೊಲೀಸರು ಪ್ರತಿಭಟನಾಕಾರರನ್ನು ಹತ್ತಿಕ್ಕಲು ಮುಂದಾದರು. ಸಂಸತ್ತಿನ ಬಳಿ ಜನರು ಸೇರಿದರೆ ಅಥವಾ ಪ್ರತಿಭಟನೆ ನಡೆಸಿದರೆ ಪ್ರಕರಣ ದಾಖಲಿಸುವುದಾಗಿ ದೆಹಲಿ ಪೊಲೀಸ್ ಇಲಾಖೆ ನಿನ್ನೆ ಎಚ್ಚರಿಕೆ ನೀಡಿತ್ತು. ಜಂತರ್ ಮಂತರ್ನಿಂದ ಮೆರವಣಿಗೆಯಾಗಿ ಬಂದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರೂ, ಅವರು ಸಂಸತ್ತಿನಿಂದ 150 ಮೀಟರ್ ವ್ಯಾಪ್ತಿಯನ್ನು ತಲುಪಲು ಶಕ್ತರಾದ ಹಿನ್ನೆಲೆಯಲ್ಲಿ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ.
ಈ ಪ್ರತಿಭಟನೆಯಲ್ಲಿ ನೀಟ್ ಮರುಪರೀಕ್ಷೆಯ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬ ಸದಸ್ಯರು ಕೂಡ ಪಾಲ್ಗೊಂಡಿದ್ದರು. ರಾಷ್ಟ್ರ ರಾಜಧಾನಿಗೆ ಬಂದಿದ್ದ ಸಾವಿರಾರು ಜನರ ಪ್ರತಿಭಟನೆಯ ವೇಳೆ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪಕೆ ಹಾಗೂ ನಟ ಪ್ರಕಾಶ್ ರಾಜ್ ಮೇಲೆಯೂ ಪೊಲೀಸರು ಹಲ್ಲೆ ನಡೆಸಿದ್ದಾರೆ.
ಭದ್ರತಾ ದೃಷ್ಟಿಯಿಂದ ಈ ಪ್ರದೇಶದಾದ್ಯಂತ ಮೊಬೈಲ್ ಜಾಮರ್ಗಳನ್ನು ಅಳವಡಿಸಲಾಗಿದ್ದು, ಇಂಟರ್ನೆಟ್ ಸೇವೆಗಳನ್ನು ಸಹ ಕಡಿತಗೊಳಿಸಲಾಗಿದೆ. ಮಾರ್ಚ್ನ ಭಾಗವಾಗಿ ಜನಪಥ್, ರಾಜೀವ್ ಚೌಕ್, ಪಟೇಲ್ ಚೌಕ್, ಸೆಂಟ್ರಲ್ ಸೆಕ್ರೆಟರಿಯೇಟ್ ಮತ್ತು ಸೇವಾ ತೀರ್ಥ ಎಂಬ ಐದು ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗಿದೆ. ಮುಂದಿನ ಸೂಚನೆವರೆಗೆ ಈ ಮೆಟ್ರೋ ನಿಲ್ದಾಣಗಳಲ್ಲಿ ಸಂಚಾರವಿರುವುದಿಲ್ಲ ಎಂದು ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ ತಿಳಿಸಿದೆ.
ಇದೇ ವೇಳೆ, 20 ದಿನಗಳಿಗೂ ಅಧಿಕ ಕಾಲದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್, ತಮ್ಮ ಮೂರು ಪ್ರಮುಖ ಬೇಡಿಕೆಗಳು ಈಡೇರಿದರೆ ಮಾತ್ರ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸುವುದಾಗಿ ಎಕ್ಸ್ ವೇದಿಕೆಯಲ್ಲಿ ಹಂಚಿಕೊಂಡಿರುವ ಪತ್ರದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
https://x.com/GaurxSharma/status/2079118579925225895/photo/1












