✍️ ನಜೀರ್ ಅಹ್ಮದ್ ಕಾಝಿ, ಉಪನ್ಯಾಸಕರು ವಿಜಯಪೂರ.
ಇತ್ತೀಚೆಗೆ ಬೇರೆ ಬೇರೆ ರಾಜ್ಯಗಳಿಂದ ಲಿಂಗಾನುಪಾತ ಇಳಿಕೆ ಬಗ್ಗೆ ಬಿಡುಗಡೆಯಾಗುತ್ತಿರುವ ವರದಿಗಳು ದೇಶದ ಆತಂಕವನ್ನು ಹೆಚ್ಚಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ʻಬೇಟಿ ಬಚಾವೋʼ ಘೋಷಣೆಗೆ ಸವಾಲು ಹಾಕಲಾಗಿದೆ. ವರದಿಗಳ ಪ್ರಕಾರ ದೇಶದ 21 ಅತೀ ದೊಡ್ಡ ರಾಜ್ಯಗಳ ಪೈಕಿ 17 ರಾಜ್ಯಗಳಲ್ಲಿ ಅಪಾಯಕಾರಿ ಮಟ್ಟದಲ್ಲಿ ಲಿಂಗಾನುಪಾತ ಇಳಿಕೆಯಾಗುವುದು ಕಂಡುಬಂದಿದೆ. ವಿಪರ್ಯಾಸವೆಂದರೆ ಮೋದಿಯವರ ತವರಾಗಿರುವ ಗುಜರಾತ ರಾಜ್ಯದಲ್ಲಿ ಈ ಅನುಪಾತ ಗಣನೀಯವಾಗಿ ಇಳಿಕೆಯಾಗಿದೆ. ಈ ಸೂಚ್ಯಂಕದಲ್ಲಿ 2012-14 ರಿಂದ 2013-15 ರವರೆಗೆ ಗುಜರಾತಿನಲ್ಲಿ 1000 ಪುರುಷರಿಗೆ 907 ಮಹಿಳೆಯರು ಇರಬೇಕಾಗಿತ್ತು. ಆದರೆ ಇದು ಕೆಳಮಟ್ಟಕ್ಕೆ ಇಳಿದು, 854 ಮಹಿಳೆಯರು ಮಾತ್ರ ಇದ್ದಾರೆ. ಅಂದರೆ ಶೇ 53 ರಷ್ಟು ಇಳಿಕೆಯಾಗಿದೆ.
ನರೇಂದ್ರ ಮೋದಿ ರಾಜ್ಯದ ಮುಖ್ಯಮಂತ್ರಿಯಾಗಿ ನಂತರ ದೇಶದ ಪ್ರಧಾನ ಮಂತ್ರಿಯಾಗಿ `ಬೇಟಿ ಬಚಾವೋʼ ಯೋಜನೆಯಲ್ಲಿ ವಿಫಲರಾಗಿದ್ದಾರೆ. ಇನ್ನುಳಿದ ಎರಡು ವರ್ಷಗಳಲ್ಲಿ ಇಡೀ ದೇಶದ ಹೆಣ್ಣುಮಕ್ಕಳನ್ನು ಉಳಿಸುವಲ್ಲಿ ಪ್ರಧಾನ ಮಂತ್ರಿ ಹೇಗೆ ಯಶಸ್ವಿಯಾದಾರು ಎಂಬ ಪ್ರಶ್ನೆ ನಮ್ಮೆಲ್ಲರನ್ನು ಕಾಡುತ್ತಿದೆ. ಗುಜರಾತ್ ನಂತರದ ಸ್ಥಾನವನ್ನು ಹರಿಯಾಣ ಪಡೆದುಕೊಂಡಿದೆ. ಇದಾದ ಬಳಿಕ ರಾಜಸ್ಥಾನ, ಉತ್ತರಾಖಂಡ, ಮಹಾರಾಷ್ಟ್ರ ಸರದಿಯಲ್ಲಿ ನಿಲ್ಲುತ್ತವೆ. ಕರ್ನಾಟಕದಲ್ಲಿಯೂ 11% ಇಳಿಕೆಯಾಗಿದೆ. ಸಾಧಾರಣವಾಗಿ ಇಂತಹ ಲಿಂಗಾನುಪಾತ ಇಳಿಕೆಗಳ ಕಾರಣಗಳ ಹಿಂದೆ ಉಳಿದ ಸಾಮಾಜಿಕ ಅಂಶಗಳೂ ಸುತ್ತಿಕೊಳ್ಳುತ್ತವೆ. ಇವುಗಳಲ್ಲಿ ಒಂದು ಕಾರಣ ಅನಕ್ಷರತೆ ಮತ್ತು ಬಡತನ, ಅದು ಎಲ್ಲಿ ಹೆಚ್ಚಿದೆಯೋ ಅಲ್ಲಿ ಇಂತಹ ಇಳಿಕೆಗಳು ಹೆಚ್ಚು ಹೆಚ್ಚಾಗಿ ಕಂಡುಬರುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಹೆರಿಗೆಯ ಸಂದರ್ಭದಲ್ಲಿ ಸಾಯುವ ಮಹಿಳೆಯರ ಸಂಖ್ಯೆ ಹೆಚ್ಚು, ಇಂದಿಗೂ ಹಳ್ಳಿಗಳಲ್ಲಿ ಆಸ್ಪತ್ರೆಗಳ ಸಹಾಯವಿಲ್ಲದೆ ಸೂಲಗಿತ್ತಿಯರ ಸಹಾಯದಿಂದ ಹೆರಿಗೆಗಳು ನಡೆಯುತ್ತಿವೆ. ಇಂತಹ ಸಮಯದಲ್ಲಿ ಮಹಿಳೆಯರಿಗೆ ಪ್ರಾಣಾಪಯ ಅಧಿಕ, ಸಣ್ಣ ಪ್ರಾಯದಲ್ಲೇ ಮಹಿಳೆಯರು ಸಾಯುವುದರಿಂದ ಮಹಿಳೆಯರ ಸಂಖ್ಯೆ ಇಳಿಮುಖವಾಗುತ್ತಿದೆ. ಅನುಪಾತ ಇಳಿಕೆಗೆ ಮುಖ್ಯ ಕಾರಣ ಏನು ತಿಳಿದುಕೊಳ್ಳೋಣ.
ಇವತ್ತು ಹೆಣ್ಣು ಭ್ರೂಣ ಹತ್ಯೆ ಅತಿಯಾಗುತ್ತಿದೆ. ಇದು ಹಳ್ಳಿಗಳಲ್ಲಿ ಸರ್ವಸಾಮಾನ್ಯ, ಯಾಕಂದರೆ ಅನಕ್ಷರತೆ ಕಾರಣ ಎನ್ನುವ ವಾದ ಕೆಲವರಿಗಿದೆ. ಆದರೆ ಹಳ್ಳಿಗಳಲ್ಲಿ ಅನಕ್ಷರತೆ ಇರಬಹುದು ಒಪ್ಪುತ್ತೇನೆ, ಗರ್ಭಪಾತ ಗ್ರಾಮೀಣ ಪ್ರದೇಶದ ನಂಬಿಕೆಗೆ ವಿರುದ್ಧವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಹುಟ್ಟುವ ಮಗು ಹೆಣ್ಣೋ, ಗಂಡೋ ಎಂದು ಪರೀಕ್ಷಿಸುವ ತಂತ್ರಜ್ಞಾನ (ಸೊನೋಗ್ರಫಿ) ಇರುವುದು ನಗರಪ್ರದೇಶಗಳಲ್ಲಿ, ವಿದ್ಯಾವಂತರೇ ಅದನ್ನು ಹೆಚ್ಚು ಬಳಸುತ್ತಿರುವುದು. ಹೆಣ್ಣು ಭ್ರೂಣ ಹತ್ಯೆ ಎಂದರೆ ಗರ್ಭದಲ್ಲಿರುವ ಮಗು ಹೆಣ್ಣು ಎಂದು ತಿಳಿದು ಅಕ್ರಮವಾಗಿ ಗರ್ಭಪಾತ ಮಾಡಿಸುವುದು. ಇದು ಸಾಮಾಜಿಕ ಅಸಮಾನತೆ, ಮೌಢ್ಯ ಮತ್ತು ಆಳವಾಗಿ ಬೇರೂರಿರುವ ಲಿಂಗ ತಾರತಮ್ಯದ ಪ್ರತೀಕವಾಗಿದೆ. ಈ ಪದ್ಧತಿಗೆ ಪ್ರಮುಖ ಕಾರಣಗಳು ಗಂಡು ಮಗುವಿನ ವ್ಯಾಮೋಹ, ವಂಶ ಮುಂದುವರಿಸಲು ಮತ್ತು ವೃದ್ಧಾಪ್ಯದಲ್ಲಿ ಪೋಷಕರನ್ನು ನೋಡಿಕೊಳ್ಳಲು ಗಂಡು ಮಗುವೇ ಬೇಕು ಎಂಬ ಪಿತೃಪ್ರಧಾನ ಸಮಾಜದ ಬಲವಾದ ನಂಬಿಕೆ.
ವರದಕ್ಷಿಣೆ ಪಿಡುಗು: ಮದುವೆಯ ಸಮಯದಲ್ಲಿ ವರದಕ್ಷಿಣೆ ನೀಡಬೇಕಾಗುತ್ತದೆ ಎಂಬ ಆತಂಕದಿಂದ ಹೆಣ್ಣುಮಕ್ಕಳನ್ನು ಆರ್ಥಿಕ ಹೊರೆ ಎಂದು ಪರಿಗಣಿಸುವುದು. 1500 ವರ್ಷಗಳ ಹಿಂದೆ ಇದ್ದ ಹೆಣ್ಣುಮಕ್ಕಳನ್ನು ಜೀವಂತವಾಗಿ ಹೂಳುವ ಕ್ರೂರ ಪದ್ಧತಿಯನ್ನು ಪ್ರವಾದಿ ಮುಹಮ್ಮದ್(ಸ) ರವರು ನಿಲ್ಲಿಸಿ ಒಂದು ಶಾಶ್ವತ ಪರಿಹಾರ ಕೊಟ್ಟರು. ಆ ಕಾಲದಲ್ಲಿ ಅರೇಬಿಯಾವು ಅಜ್ಞಾನ, ಅನಾಗರಿಕತೆ, ಅನ್ಯಾಯ, ಅನೀತಿ, ಅಶ್ಲೀಲತೆ, ಅವ್ಯವಹಾರಗಳಲ್ಲಿ ಮುಳುಗಿತ್ತು. ಅಲ್ಲಿಯ ಜನ ಅಜ್ಞಾನಿಗಳಾಗಿದ್ದರು, ಅವರು ಜೀವಂತ ಮಗುವನ್ನು ಹೂಳುತ್ತಿದ್ದರು. ಆದರೆ ಇವತ್ತಿನ ಆಧುನಿಕ ಜಗತ್ತಿನ ಮಾನವ ಮಗು ಹುಟ್ಟುವುದಕ್ಕಿಂತ ಮೊದಲೇ ಗರ್ಭಕೋಶದಲ್ಲಿ ಕೊಂದುಹಾಕುತ್ತಿದ್ದಾನೆ. ಕ್ರಾಂತಿಕಾರಿ ಬಸವಣ್ಣನವರು ಭ್ರೂಣ ಹತ್ಯೆ ಗೈದು ಆ ಮಗುವಿನ ಬದುಕುವ ಹಕ್ಕನ್ನು ಕಸಿದುಕೊಳ್ಳಬೇಡಿರಿ ಅಂತಾ ಹೇಳಿದ್ದಾರೆ. ಭಗವದ್ಗೀತೆ ಮತ್ತು ವೈದಿಕ ಹಿಂದೂ ಗ್ರಂಥಗಳು ಭ್ರೂಣ ಹತ್ಯೆಯನ್ನು ತೀವ್ರವಾಗಿ ವಿರೋಧಿಸುತ್ತವೆ, ಕುರ್ಆನ್ ಮತ್ತು ಬೈಬಲ್ಗಳೂ ಇದನ್ನು ವಿರೋಧಿಸುತ್ತವೆ. ಇವತ್ತು ಮನುಜನಿಗೆ ತಾಯಿಯಾಗಿ, ಗೆಳತಿಯಾಗಿ (ಗರ್ಲ್ಫ್ರೆಂಡ್), ಸಹೋದರಿಯಾಗಿ, ಮಡದಿಯಾಗಿ ಹೆಣ್ಣು ಬೇಕು. ಆದರೆ, ಮಗಳಾಗಿ ಹುಟ್ಟುವುದು ಬೇಡ. ಇದು ಎಂತಹ ಪುರುಷ ಪ್ರಧಾನ ಸಮಾಜ? ಇವತ್ತು ಹೆಣ್ಣು ಹುಟ್ಟಿದರೆ ನಿರಾಶೆ, ಅಪಶಕುನ, ಹುಣ್ಣು ತಗಲಿಸಿಕೊಂಡವರಂತೆ ಮುಖ ಸಿಂಡರಿಸುವವರು, ಯಾಕೆ ಈ ತಾರತಮ್ಯ? ಇಂತಹ ಪದ್ಧತಿಗೆ ಕೊನೆ ಎಂದು? ಇವತ್ತು ಹೆಣ್ಣು ಭ್ರೂಣ ಹತ್ಯೆಯು ಭಾರತದಲ್ಲಿ ಕಾನೂನುಬಾಹಿರ ಮತ್ತು ಶಿಕ್ಷಾರ್ಹ ಅಪರಾಧವಾಗಿದ್ದು PcPNDT (Pre-Conception and Pre-Natal Diagnostic Techniques (Prohibition of Sex Selection) Act.) ಕಾಯ್ದೆ ಜಾರಿಯಲ್ಲಿದೆ, ಆದರೆ ನಾಗರಿಕರಿಂದ, ವೈದ್ಯರಿಂದ, ವಿದ್ಯಾವಂತರಿಂದ ಸರಕಾರಕ್ಕೆ ಸರಿಯಾದ ಸಹಕಾರ ಸಿಗುತ್ತಿಲ್ಲ. ಕೇವಲ ಸರಕಾರವನ್ನು ದೂಷಿಸಿದರೆ ಸಾಲದು, ಇದು ದೇಶದ ಪ್ರತಿಯೊಬ್ಬ ನಾಗರಿಕರ ಹೊಣೆಯಾಗಿದೆ.












