✍️ ನೀಲಂಜನ್ ಮುಖೋಪಾಧ್ಯಾಯ ದೆಹಲಿ
ಲೇಖಕರು ಹಾಗೂ ಪತ್ರಕರ್ತರು
ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಾಗೂ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಪ್ರತಿಭಟನೆಯನ್ನು ಸರ್ಕಾರ ಹತ್ತಿಕ್ಕಿದ ರೀತಿ ಮತ್ತು ಕೈಗೊಂಡ ಕ್ರಮಗಳು, ಸಾರ್ವಜನಿಕರ ಒತ್ತಡ ಹಾಗೂ ಪ್ರತಿಭಟನೆಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ಹೊಂದಿರುವ ರಾಜಕೀಯ ನಿಲುವು ಹೇಗಿದೆ ಎಂಬುದನ್ನು ವಿಶ್ಲೇಷಿಸಲು ಮುಕ್ತ ಅವಕಾಶ ಒದಗಿಸುತ್ತವೆ.
ಸಾಮಾನ್ಯವಾಗಿ ಒತ್ತಡಗಳು ಎದುರಾದಾಗ ಪ್ರತಿಭಟನಾಕಾರರೊಂದಿಗೆ ನೇರವಾಗಿ ಮಾತನಾಡುವುದು ಮೋದಿಯವರ ಜಾಯಮಾನವಲ್ಲ; ಬದಲಿಗೆ, ಅಚಲ ಇಚ್ಛಾಶಕ್ತಿಯುಳ್ಳ “56 ಇಂಚಿನ ಎದೆಯ” ಗಂಡೆದೆಯ ನಾಯಕನೆಂಬ ತಮ್ಮ ವರ್ಚಸ್ಸನ್ನು ಬೆಂಬಲಿಗರಲ್ಲಿ ಮತ್ತಷ್ಟು ಗಟ್ಟಿಗೊಳಿಸುವುದೇ ಅವರ ಸಹಜ ಕ್ರಮವಾಗಿರುತ್ತದೆ. ಆದರೆ ಈ ಬಾರಿ, ಸಂಸತ್ತನ್ನು ಮುತ್ತಲು ಅನಿರೀಕ್ಷಿತವಾಗಿ ಜನ ದೊಡ್ಡಮಟ್ಟದಲ್ಲಿ ಸೇರಿದ್ದರಿಂದ ಮತ್ತು ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿದ್ದರಿಂದ, ಪ್ರತಿಭಟನಾಕಾರರೊಂದಿಗೆ ನಾಮಮಾತ್ರದ ಮಾತುಕತೆ ನಡೆಸುವ ಹೊಣೆಯನ್ನು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರಿಗೆ ವಹಿಸಲಾಯಿತು. ಆದರೂ ಏಕಕಾಲದಲ್ಲಿ ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಪ್ರಯೋಗಿಸಿರುವುದು ಯಾವುದನ್ನು ಎತ್ತಿ ತೋರಿಸುತ್ತದೆಂದರೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಬೇಡಿಕೆಯನ್ನು ಒಪ್ಪಿಕೊಳ್ಳುವ ಮೂಲಕ ಮೋದಿಯವರ ಇಮೇಜಿಗೆ ಧಕ್ಕೆಯಾಗಲು ಈ ಸರ್ಕಾರ ಬಿಡುವುದಿಲ್ಲ.
ಯಾವುದೇ ಹೆಚ್ಚಿನ ವಿನಾಯಿತಿ ನೀಡುವುದು ತನ್ನ ಬೆಂಬಲಿಗರಿಂದ ದೌರ್ಬಲ್ಯದ ಸಂಕೇತವಾಗಿ ನೋಡಲ್ಪಡುವ ಅಪಾಯವನ್ನು ಹೊಂದಿದೆ. ಡಿಜಿಟಲಾಗಿ ಮತ್ತು ವ್ಯಂಗ್ಯದ ಮೂಲಕ ಶುರುವಾದ ಪ್ರತಿಭಟನಾ ಚಳುವಳಿಗೆ ಮಾನ್ಯತೆಯನ್ನು ನೀಡಿ ಬಲವಾದ ರಾಜಕೀಯ ಶಕ್ತಿಯನ್ನಾಗಿ ಬೆಳೆಸಿದಂತಾಗುತ್ತದೆ. ಸೋಮವಾರದ(ಜೂನ್ 20) ಗದ್ದಲಗಳ ನಂತರವೂ ಪ್ರತಿಭಟನಾಕಾರರ ಉತ್ಸಾಹ ಕುಗ್ಗದೆ ಹಾಗೆಯೇ ಮುಂದುವರಿದಿದೆ. ಆಡಳಿತ ವ್ಯವಸ್ಥೆಯು ಇದಕ್ಕೆ ಹೇಗೆ ಸ್ಪಂದಿಸುತ್ತದೆ ಎಂಬುದೇ, ಮೋದಿ ಅವರು ಕೇವಲ ಬಾಯಿಮಾತಿನ ಧೋರಣೆಯಿಂದ ಆಚೆ ಬಂದು ಗಂಭೀರ ಹಾಗೂ ಕಾರ್ಯತಂತ್ರದ ಹೆಜ್ಜೆ ಇಡಲಿದ್ದಾರೆಯೇ ಅನ್ನುವುದನ್ನು ನಿರ್ಧರಿಸುವ ಪ್ರಮುಖ ಅಂಶವಾಗಿದೆ.
ಮೋದಿಯವರ ಪ್ರಾಯೋಗಿಕ ಮಾರ್ಗ
ಮೋದಿ ಅವರು ಒತ್ತಡಕ್ಕೆ “ಮಣಿದಿರುವುದು” ವಿರಳ ಎಂದು ಹಿಂದಿನ ಸಂಭವಗಳು ಸೂಚಿಸುತ್ತವೆ. ಆದರೆ, ಯಾವುದಾದರೂ ಪ್ರತಿಭಟನೆಯಿಂದ ತಮ್ಮ ಮುಖ್ಯ ಮತದಾರರಿಗೆ ತೊಂದರೆಯಾಗಬಹುದು ಎಂದಾಗಲಿ ಅಥವಾ ಅಧಿಕಾರದಲ್ಲಿ ಮುಂದುವರಿಯಲು ಅತ್ಯಂತ ಮುಖ್ಯವಾಗಿರುವವರು ತಮ್ಮ ಬೆಂಬಲವನ್ನು ವಾಪಸ್ ಪಡೆಯಬಹುದು ಎಂದಾಗಲಿ ಅನಿಸಿದಾಗ, ಅವರು ಪ್ರಾಯೋಗಿಕವಾದ ಅಥವಾ ರಾಜಿಯ ದಾರಿಯನ್ನು ಹಿಡಿದ ಸನ್ನಿವೇಶಗಳೂ ಇವೆ.
ಸಿಜೆಪಿ-ವಾಂಗ್ಚುಕ್ ಸವಾಲನ್ನು ಎದುರಿಸುವಲ್ಲಿ ಮೋದಿ ತೋರಿಸಿದ ಆರಂಭಿಕ ಕಠಿಣತೆಗೆ ತದ್ವಿರುದ್ಧವಾಗಿ, 2024ರಲ್ಲಿ ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್ಸಿ) ಸಂವಿಧಾನಬದ್ಧವಾಗಿ ಸಂರಕ್ಷಿಸಲ್ಪಟ್ಟಿರುವ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಉಲ್ಲಂಘಿಸಿ ಸರ್ಕಾರಿ ಹುದ್ದೆಗೆ ನೇರ ಪ್ರವೇಶಕ್ಕಾಗಿ(ಲ್ಯಾಟರಲ್ ಎಂಟ್ರಿ) ಜಾಹೀರಾತು ನೀಡಿದಾಗ ಆ “ಗಂಡೆದೆ ಗಟ್ಟಿ ನಾಯಕ”ನ ಇಮೇಜ್ ಎಲ್ಲೂ ಕಾಣಿಸಿಲ್ಲ. ಈ ಸಮುದಾಯಗಳಲ್ಲಿರುವ ಬಿಜೆಪಿಯ ಮತ ಬ್ಯಾಂಕ್ ಕೈತಪ್ಪಿ ಹೋಗಬಹುದು ಎಂಬ ಭಯದಿಂದಾಗಿ, ಯಾವುದಕ್ಕೂ ತಗ್ಗದ ಅದೇ ಮೋದಿ ತಲೆಬಾಗಿ ನಮಸ್ಕರಿಸಬೇಕಾಯಿತು.
ಕಳೆದ 12 ವರ್ಷಗಳಲ್ಲಿ, ಪ್ರತಿಭಟನೆಗಳು ಅಥವಾ ಸಾರ್ವಜನಿಕ ಒತ್ತಡಗಳನ್ನು ಎದುರಿಸಿದಾಗ ಮೋದಿ ಅವರು ಅನೇಕ ಬಾರಿ ದ್ವಿಮುಖ ಧೋರಣೆಯನ್ನು ತೋರಿದ್ದಾರೆ. ಒಂದು ಕಡೆ, ತಾವು ಯಾರಿಗೂ ಬಗ್ಗುವುದಿಲ್ಲ ಎಂದು ತೋರಿಸಿ ತಮ್ಮ ರಾಜಕೀಯ ಬೆಂಬಲಿಗರನ್ನು ಮತ್ತಷ್ಟು ಖುಷಿಪಡಿಸಲು ಅವರು ಮಾತಿನಲ್ಲೇ ಮಾಡುವ ವರಸೆಯಾದರೆ; ಮತ್ತೊಂದು ಕಡೆ, ಎಲ್ಲವನ್ನೂ ಸರಿಯಾಗಿ ಲೆಕ್ಕಹಾಕಿ, ಯೋಚಿಸಿ ಮಾಡುವ ತಂತ್ರಗಾರಿಕೆಯ ಕೆಲಸವಾಗಿದೆ.
ಯಾವಾಗಲೂ ತಪ್ಪದೆ ಮೋದಿಯವರ ಮಾತಿನ ವರಸೆ ಹೇಗಿರುತ್ತದೆಯೆಂದರೆ, ಅದು ಜನಪ್ರೀತಿ ಗಳಿಸುವಂತಹುದು, ಅತಿ ರಾಷ್ಟ್ರೀಯತೆಯಿಂದ ಕೂಡಿದ್ದು, ಭಾವನೆಗಳನ್ನು ಕೆರಳಿಸುವಂತಹುದು ಮತ್ತು ಭಾರತವು ಹೊರಗಿನ ಒತ್ತಡಗಳಿಗೆ ಬಗ್ಗದೆ ಬೆಳೆಯುತ್ತಿರುವ ಜಾಗತಿಕ ಮಹಾಶಕ್ತಿ (ವಿಶ್ವಗುರು) ಎಂದು ಸದಾ ಬಿಂಬಿಸುವಂತಹುದು. ಭಾರತವೇ ವಿಶ್ವಗುರು ಎಂಬ ಈ ಕೊನೆಯ ಮಾತಿಗೆ, ಮೋದಿಯವರ ಜೊತೆ ಕೆಲವು “ಭಿನ್ನಾಭಿಪ್ರಾಯಗಳು” ಇದ್ದರೂ (ವಿಶೇಷವಾಗಿ ಮೋದಿಯವರ ವರ್ಚಸ್ಸನ್ನು ಬಿಂಬಿಸುವ ವಿಷಯದಲ್ಲಿ), ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಆಶ್ಚರ್ಯಕರ ರೀತಿಯಲ್ಲಿ ಬೆಂಬಲ ನೀಡಿದ್ದಾರೆ.
ಮೋದಿಯವರ ತಂತ್ರಗಾರಿಕೆಯು ಕೆಲವೊಮ್ಮೆ (ಉದಾಹರಣೆಗೆ ಮೂರು ಕೃಷಿ ಮಸೂದೆಗಳನ್ನು ವಾಪಸ್ ಪಡೆದಾಗ) ಜನಗಳ ಪ್ರತಿಭಟನೆಯ ಬೇಡಿಕೆಗಳಿಗೆ ತಲೆಬಾಗುವಂತಿತ್ತು, ಆದರೆ ಅದನ್ನೆಲ್ಲ ಅವರು ತಮಗೆ ಸರಿ ಅನಿಸಿದ ಸಮಯದಲ್ಲಷ್ಟೇ ಮಾಡಿದರು. ಆದರೂ, ತಾವು ತೆಗೆದುಕೊಂಡ ನಿರ್ಧಾರವನ್ನು ವಾಪಸ್ ಪಡೆಯುವುದನ್ನು ಅಥವಾ ನೀತಿಗಳಲ್ಲಿ ರಿಯಾಯಿತಿ ನೀಡುವುದನ್ನು ಅವರು ಹೇಗೆ ತೋರಿಸಿಕೊಳ್ಳುತ್ತಾರೆಯೆಂದರೆ, ತಾವೂ ಕೂಡ ಇತರರ ಅಭಿಪ್ರಾಯಗಳನ್ನು ಗೌರವಿಸುವ ಮತ್ತು ಒಪ್ಪಿಕೊಳ್ಳುವ ಸೌಹಾರ್ದಯುತ ನಾಯಕ ಎಂದು ಬಿಂಬಿಸುವ ರೀತಿಯಲ್ಲಿ ಅದನ್ನು ರೂಪಿಸುತ್ತಾರೆ.
“ಮೋದಿ ಅವರು ಎಂದಿಗೂ ಜಗ್ಗುವುದಿಲ್ಲ, ಹಿಂದೆ ಸರಿಯುವುದಿಲ್ಲ” ಎಂಬ ಮಾತೊಂದು ಸುಳ್ಳು ಎಂಬುದು ಬಹಳ ಮೊದಲೇ ಸಾಬೀತಾಗಿತ್ತು – ಅಂದರೆ 2021ರಲ್ಲಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಕ್ಕಿಂತ ಆರು ವರ್ಷಗಳ ಹಿಂದೆಯೇ ಇದು ನಡೆದಿತ್ತು. 2014ರ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದ ಒಂದೇ ವರ್ಷದೊಳಗೆ, ಕಂಪನಿಗಳು ಅಥವಾ ಬಂಡವಾಳಶಾಹಿಗಳು ಸುಲಭವಾಗಿ ಭೂಮಿ ಪಡೆದುಕೊಳ್ಳಲು ಅನುಕೂಲವಾಗುವಂತೆ 1894ರ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಾಡಲು ಮೋದಿ ಸರ್ಕಾರ ಕೈಹಾಕಿತ್ತು. ಆದರೆ ಸಂಘ ಪರಿವಾರದ ಒಳಗಿನಿಂದಲೇ ಭಾರಿ ವಿರೋಧ ವ್ಯಕ್ತವಾಯಿತು. ಇದರ ಜೊತೆಗೆ, ಮೋದಿ ಸರ್ಕಾರವು “ಸೂಟ್-ಬೂಟ್ ಕಿ ಸರ್ಕಾರ” (ಧನಿಕರ ಸರ್ಕಾರ) ಎಂದು ವಿರೋಧ ಪಕ್ಷಗಳು ಮಾಡಿದ ಕಟು ಟೀಕೆಗಳೂ ಸೇರಿಕೊಂಡು, ಕೊನೆಗೆ ಆ ಪ್ರಯತ್ನವನ್ನು ದಾಟಲು ಸಾಧ್ಯವಾಗದ ದೊಡ್ಡ ಗೋಡೆಯಾಗಿ ನಿಂತಿತು.
ಈ ಘೋಷಣೆಯನ್ನು ಹುಟ್ಟುಹಾಕಿದವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ. ಇದು ತಮ್ಮ ಹೆಸರಾದ ನರೇಂದ್ರ ದಾಮೋದರದಾಸ ಮೋದಿ ಎಂಬುದನ್ನು ಬಟ್ಟೆಯ ಪ್ರತಿಯೊಂದು ಎಳೆಯಲ್ಲೂ ನೇಯ್ದುಕೊಂಡಿರುವ ಕಸ್ಟಮ್-ಮೇಡ್ ಪಿನ್ಸ್ಟ್ರೈಪ್ ಸೂಟ್ ಅನ್ನು ಧರಿಸುವ ಮೋದಿಯವರ ಅಹಂಕಾರದ ನಿರ್ಧಾರದ ಮೇಲಿನ ಒಂದು ವ್ಯಂಗ್ಯವಾಗಿತ್ತು. ಗಣರಾಜ್ಯೋತ್ಸವದ ಹಿಂದಿನ ದಿನ ನವದೆಹಲಿಯಲ್ಲಿ ಅಮೆರಿಕದ ಅಂದಿನ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಭೇಟಿಯಾದಾಗ ಮೋದಿ ಅದೇ ಸೂಟ್ ಧರಿಸಿದ್ದು ವಿಷಯವನ್ನು ಇನ್ನಷ್ಟು ಕೆಡಿಸಿತು. ಆಮೇಲೆ ಅವರಿಗೆ ಆ ಮಸೂದೆಯನ್ನು ಪೂರ್ತಿಯಾಗಿ ಕೈಬಿಡುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ.
ಇದಕ್ಕೆ ವ್ಯತಿರಿಕ್ತವಾಗಿ, ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯ ಬೇಡಿಕೆಯನ್ನು ಚರ್ಚಿಸುವುದೇ ಔಪಚಾರಿಕ ರಾಜಕೀಯ ಪಕ್ಷವೇ ಅಲ್ಲದ ಗುಂಪಿಗೆ ತಲೆಬಾಗಿದಂತೆ ಆಗುತ್ತದೆ. ಅಲ್ಲದೇ, ಅಷ್ಟು ಕಷ್ಟಪಟ್ಟು ಕಟ್ಟಿಕೊಂಡಿದ್ದ “ಯಾವತ್ತೂ ತಪ್ಪು ಮಾಡದ” ನಾಯಕನ ಇಮೇಜ್ ಅನ್ನು ಅದು ಚೂರುಚೂರು ಮಾಡಿಬಿಡುತ್ತಿತ್ತು.
ಪ್ರತಿಭಟನಾಕಾರರ ಕಡೆ ತಲೆಹಾಕದೆ ಇರುವುದರ ಮೂಲಕ, ಅದಕ್ಕೊಂದು ರಾಜಕೀಯ ಪರಿಹಾರ ಬೇಕೋ, ಆಡಳಿತದ ಕಡೆಯಿಂದ ಏನಾದರೂ ತಿದ್ದಿಕೊಳ್ಳಬೇಕೋ ಅಥವಾ ಚರ್ಚೆ ಮಾಡಬೇಕೋ ಎಂಬ ಗಂಭೀರ ಸಮಸ್ಯೆಯಾಗಿ ನೋಡುವ ಬದಲು, ಯುವಕರ ಈ ಆಕ್ರೋಶವನ್ನು ಕೇವಲ ಕಾನೂನು-ಸುವ್ಯವಸ್ಥೆ ಹಾಗೂ ವೈದ್ಯಕೀಯ ಪರೀಕ್ಷೆಯ ಮೌಲ್ಯಮಾಪನಕ್ಕೆ ಮಾತ್ರ ಸಂಬಂಧಿಸಿದ ಒಂದು ಸಾಧಾರಣ ವಿಷಯವನ್ನಾಗಿ ತೋರಿಸಲು ಸರ್ಕಾರ ಯತ್ನಿಸಿತು.
ಆದಾಗ್ಯೂ, ಸಿಜೆಪಿ ಮೊದಲ ಬಾರಿಗೆ ಕರೆ ನೀಡಿದಾಗ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಬೇಡಿಕೆಗಳಿಗೆ ಮಾತಿನ ಮೂಲಕ ಸ್ಪಂದಿಸದಿರುವ ಸರ್ಕಾರದ ಅಂತಃಪ್ರಜ್ಞೆಯ ನಿರ್ಧಾರವನ್ನು – ಸಿಜೆಪಿ ಮತ್ತು ಅದರ ಪ್ರತಿಭಟನೆಯ ಡಿಜಿಟಲ್ ವ್ಯಾಪಕತೆಯನ್ನು ನಿಯಂತ್ರಿಸಲು ಸರ್ಕಾರ ಮಾಡಿದ ಪ್ರಯತ್ನಗಳೊಂದಿಗೆ ಒಟ್ಟುಗೂಡಿಸಿ ಗ್ರಹಿಸಬೇಕಾಗಿದೆ.
ಅಲ್ಲದೆ, ದೆಹಲಿ ಪೊಲೀಸ್ ಕಮಿಷನರನ್ನು ಬದಲಾಯಿಸುವ ಸರ್ಕಾರದ ನಿರ್ಧಾರವನ್ನೂ ಸಹ ಪ್ರತಿಭಟನೆಯನ್ನು ಹತ್ತಿಕ್ಕುವ ತಂತ್ರದ ಭಾಗ ಎಂದೇ ಭಾವಿಸಬೇಕು. ಜುಲೈ 20ರಂದು ಸಂಸತ್ತಿನ ಕಡೆಗೆ ನಡೆಸಲು ಉದ್ದೇಶಿಸಿದ್ದ ಮೆರವಣಿಗೆಗಿಂತ ಮುಂಚಿತವಾಗಿ, ವಾಂಗ್ಚುಕ್ ಅವರನ್ನು ಪ್ರತಿಭಟನಾ ಸ್ಥಳದಿಂದ ಆಸ್ಪತ್ರೆಗೆ ಕರೆದೊಯ್ಯುವುದು ಅಷ್ಟು ತುರ್ತಾಗಿ ಸರ್ಕಾರದ ಕಣ್ಣಿಗೆ ಬಿತ್ತು. ಯಾವುದೇ ರಾಜಕೀಯ ಹಾಗೂ ನೈತಿಕ ಮೌಲ್ಯವಿಲ್ಲದ ಆ ಕಣ್ಣಾಮುಚ್ಚಾಲೆ ಕೃತ್ಯಕ್ಕೆ ಒಂದು ಒಳ್ಳೆಯ ಮುಖವಾಡ ಸಿಗಲಿ ಎಂದು ಅವರನ್ನು ಕರೆದೊಯ್ಯುವ ದೃಶ್ಯವನ್ನು “ಬಿಳಿ” ಪರದೆ ಹಾಕಿ ಮರೆಮಾಡಿ ನ್ಯಾಯಾಲಯದ ಆದೇಶ ಎಂದು ಹೇಳಿಕೊಳ್ಳಲಾಯಿತು. ಸೋಮವಾರ ಇಡೀ ದಿನ ಪೊಲೀಸರು ತೋರಿದ ದಬ್ಬಾಳಿಕೆಯು ಅದೇ ತಂತ್ರದ ಮುಂದುವರಿದ ಭಾಗವಾಗಿತ್ತು.
ಮೋದಿ ಅವರಿಗೆ ಸಿಜೆಪಿಯ ಬಗ್ಗೆ ಕವಡೆ ಕಾಸಿನಷ್ಟೂ ಕಾಳಜಿ ಇಲ್ಲ ಎಂದು ಸರ್ಕಾರ ಮೊದಲ ದಿನದಿಂದಲೂ ತೋರಿಸಿಕೊಳ್ಳುತ್ತಾ ಬಂದಿದೆ. ಆದರೂ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮಾತು ಆಡುವ ಮುನ್ನ ಅದರ ಅರ್ಥವನ್ನು ಯೋಚಿಸಬೇಕು ಎಂಬ ಮೂಲ ತತ್ವವನ್ನೇ ಮರೆತು ಮಾತನಾಡಿದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಅಹಂಕಾರದ ನುಡಿಗಳಿಗೆ ಆನ್ಲೈನ್ನಲ್ಲಿ ವ್ಯಂಗ್ಯವಾಗಿ ಸಿಡಿದು ಶುರುವಾದ ಈ ಚಳುವಳಿಯು ಕಾಡ್ಗಿಚ್ಚಿನಂತೆ ಹಬ್ಬುತ್ತಿರುವುದನ್ನು ಕಂಡು ಸರ್ಕಾರ ನಿಜಕ್ಕೂ ಆತಂಕಗೊಂಡಿತ್ತು.
ಪ್ರತಿಭಟನೆಯು ಮುಂದುವರಿದರೆ, ಶಕ್ತಿಯಲ್ಲಿಯೂ ಹೆಚ್ಚಾದರೆ, ಮೋದಿ ಅಭೂತಪೂರ್ವ ಸವಾಲನ್ನು ಎದುರಿಸಬೇಕಾಗುತ್ತದೆ.
ಯಾವುದೇ ರೀತಿಯ ಪ್ರತಿಭಟನೆಯನ್ನು ಎದುರಿಸಿದಾಗ, ಮೋದಿಯವರ ಸಹಜ ಪ್ರತಿಕ್ರಿಯೆಯು ಯಾವಾಗಲೂ ತಾತ್ಸಾರ ತೋರುವುದು ಅಥವಾ ಪ್ರತಿಭಟನೆಗಳು ತಾವಾಗಿಯೇ ನಿಲ್ಲುತ್ತವೆ ಎಂದು ಕಾಯುವುದಾಗಿರುತ್ತದೆ. ಇದರ ಜೊತೆಗೆ ಯಾವಾಗಲೂ ಪ್ರತಿಭಟನಾಕಾರರನ್ನು ಕಡೆಗಣಿಸುವ ಕೆಲಸ ತಪ್ಪುವುದಿಲ್ಲ – ಅಂದರೆ ಅವರನ್ನು ದಾರಿ ತಪ್ಪಿದ ಯುವಕರು, ರಾಜಕೀಯಕ್ಕಾಗಿ ಹೀಗೆ ಮಾಡುತ್ತಿರುವವರು, ತುಕ್ಡೆ-ತುಕ್ಡೆ ಗ್ಯಾಂಗ್, ಅರ್ಬನ್ ನಕ್ಸಲ್ಸ್, ದೇಶದ್ರೋಹಿಗಳು ಎಂದೆಲ್ಲಾ ಕರೆಯಲಾಗುತ್ತದೆ. ಈ ಸಲ ಹಾಗೆ ಮಾಡಲು ಆಗಲಿಲ್ಲ. ಯಾಕೆಂದರೆ, ಸಿಜೆಪಿ ಮೊದಲಿನಿಂದಲೂ ರಾಜಕೀಯ ಪಕ್ಷಗಳಿಂದ ದೂರವೇ ಇರಬೇಕು ಎಂದು ಗಟ್ಟಿಯಾಗಿ ನಿರ್ಧರಿಸಿತ್ತು.
ರಷ್ಯಾದಿಂದ ಕಚ್ಚಾ ತೈಲವನ್ನು ತರಿಸಿಕೊಳ್ಳುವುದು, ವಿರೋಧ ಪಕ್ಷಗಳ ಸರ್ಕಾರಗಳು ಮಾಡುವ ಕಲ್ಯಾಣ ಯೋಜನೆಗಳನ್ನು “ಉಚಿತ ಕೊಡುಗೆಗಳು (ರೇವಡಿ)” ಎಂದು ಜರಿಯುತ್ತಲೇ ಅಂಥದ್ದೇ ಯೋಜನೆಗಳನ್ನು ಪರಿಚಯಿಸುವುದು ಮುಂತಾಗಿ ಕೇಂದ್ರ ಸರ್ಕಾರದ ಹಲವು ನೀತಿಗಳು ಮೋದಿಯವರ ಇಬ್ಬಂದಿ ನಡವಳಿಕೆಗೆ ಸಾಕ್ಷಿಯಾಗಿವೆ. ಇಲ್ಲೆಲ್ಲಾ ಸರ್ಕಾರದ ಕಾರ್ಯತಂತ್ರಗಳು ಮೋದಿಯವರ ಬಾಯಿಮಾತಿನ ಧೋರಣೆಗೆ ತದ್ವಿರುದ್ಧವಾಗಿ ಇರುತ್ತವೆ.
ಬಲಿಷ್ಠ ಗಂಡೆದೆ ನಾಯಕನ(Macho leader) ಚಿತ್ರಣಕ್ಕೆ ವಿರುದ್ಧ
ಮನಮೋಹನ್ ಸಿಂಗ್ ಸರ್ಕಾರವು “ದುರ್ಬಲ”ವಾಗಿದೆ ಎಂಬ ಸಾರ್ವಜನಿಕ ಅನಿಸಿಕೆಯ ಹಿನ್ನೆಲೆಯಲ್ಲಿ ಮೋದಿ ಅಧಿಕಾರ ಸ್ವೀಕರಿಸಿದರು. ಒಕ್ಕೂಟ ಸರ್ಕಾರವನ್ನು ನಡೆಸುವ ಮಿತಿಗಳ ಬಗ್ಗೆ ಅಂದಿನ ಪ್ರಧಾನಿ ಸ್ವತಃ ಮನಮೋಹನ್ ಸಿಂಗ್ ಅಳಲು ತೋಡಿಕೊಂಡಿದ್ದರು. ಈ ಚಿತ್ರಣವನ್ನು ಮೋದಿಯವರು ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲಿ, ಪದೇ ಪದೇ ವ್ಯಂಗ್ಯದ ಮೂಲಕ ಮತ್ತಷ್ಟು ವೃದ್ಧಿಸಿದರು.
ಇದಕ್ಕೆ ವ್ಯತಿರಿಕ್ತವಾಗಿ, ಮೋದಿ ಅವರು ಯಾವುದೇ ಬಲಪ್ರಯೋಗವನ್ನು ಅಥವಾ ಕಾನೂನುಬದ್ಧ ಪ್ರತಿಭಟನೆಯನ್ನು ಸಹ ಸಹಿಸದ ಬಲಿಷ್ಠ ಗಂಡೆದೆ (ಮ್ಯಾಚೋ) ನಾಯಕನಾಗಿ ತಮ್ಮನ್ನು ತಾವು ಬಿಂಬಿಸಿಕೊಂಡರು. ಅಧಿಕಾರಕ್ಕೆ ಬಂದ ಮೇಲೆ ಅವರು ರಾಜಕೀಯವಾಗಿ ಎಷ್ಟೇ ಮೇಲುಗೈ ಸಾಧಿಸಿದ್ದರೂ ಸಹ, ತಮ್ಮ ಬೆಂಬಲಿಗರ ನಂಬಿಕೆ ಯಾವಾಗಲೂ ಹೀಗೆಯೇ ಉಳಿಯಬೇಕಾದರೆ, ತಾವು ಸದಾ ಎಲ್ಲವನ್ನೂ ಗೆಲ್ಲುವ ಮಹಾನಾಯಕ ಎಂಬ ಆ ಇಮೇಜನ್ನು ಕಾಪಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಅವರಿಗೆ ಎದುರಾಗಿದೆ.
ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಬೇಡಿಕೆಯೊಂದಿಗೆ ಯಾವುದೇ ರೀತಿಯ ಸಂವಾದ ನಡೆಸುವುದನ್ನು ವ್ಯವಸ್ಥೆಯ ದೌರ್ಬಲ್ಯ ಅಥವಾ ರಾಜೀ ಎಂದು ಮಾತ್ರ ಪರಿಗಣಿಸಲಾಗುವುದಿಲ್ಲ; ಅದು ಭವಿಷ್ಯಕ್ಕೆ ಒಂದು ಮಾದರಿಯಾಗಬಲ್ಲ “ಪೂರ್ವ ನಿದರ್ಶನವಾಗಿ” ಮೋದಿಯವರ ದಾಖಲೆಯಲ್ಲಿ ಶಾಶ್ವತವಾಗಿ ಉಳಿಯುತ್ತದೆ.
ವಾಂಗ್ಚುಕ್ ಅವರನ್ನು ಆಸ್ಪತ್ರೆಗೆ ಕರೆದೊಯ್ದ ನಂತರ ನಡೆದ ಬೆಳವಣಿಗೆಗಳು ಸರ್ಕಾರದ ಲೆಕ್ಕಾಚಾರದಂತೆ ನಡೆಯಲಿಲ್ಲ. ರಸ್ತೆಗಿಳಿದ ಪ್ರತಿಭಟನಾಕಾರರ ಬೃಹತ್ ಜನಸಮೂಹ ಮತ್ತು ಜನರ ಆಕ್ರೋಶವು ಸರ್ಕಾರಕ್ಕೆ ದೊಡ್ಡ ಶಾಕ್ ನೀಡಿತು. ಈಗ ಮುಂದಿನ ಸರಿಯಾದ ತಂತ್ರ ಏನೆಂದು ಯೋಚಿಸಲು ಮೋದಿ ಅವರು ಗಂಭೀರವಾಗಿ ತಲೆಕೆಡಿಸಿಕೊಳ್ಳಬೇಕಿದೆ. ಸಿಜೆಪಿಯ ಈ ಹೋರಾಟಕ್ಕೆ ಸಿಗುತ್ತಿರುವ ಜನ ಬೆಂಬಲವು ಬಿಜೆಪಿಯ ವೋಟ್ ಬ್ಯಾಂಕ್ ಅನ್ನು ಒಡೆಯುವ ಹಂತಕ್ಕೆ ಬಂದು ತಲುಪಿದೆ ಎಂದು ಪ್ರಧಾನಿಗಳಿಗೆ ಅನ್ನಿಸಿದರೆ ಮಾತ್ರ ಅವರು ಯಾವುದಾದರೂ ರಿಯಾಯಿತಿ ನೀಡಬಹುದು ಅಥವಾ ಅವರ ಬೇಡಿಕೆಗಳನ್ನು ಸ್ವೀಕರಿಸಬಹುದು ಎಂದು ನಿರೀಕ್ಷಿಸಬಹುದು.
ಮೋದಿ ಅವರು ಯಾವತ್ತೂ ತಮ್ಮ ಸಚಿವರನ್ನು ಕೈಬಿಟ್ಟಿರುವ ಉದಾಹರಣೆಗಳೇ ಇಲ್ಲ ಎಂದಲ್ಲ. ಭಾರತದಲ್ಲಿ ಕೋವಿಡ್-19ರ ವಿನಾಶಕಾರಿ ಎರಡನೇ ಅಲೆಯ ಸಮಯದಲ್ಲಿ ಉಂಟಾದ ಆಡಳಿತಾತ್ಮಕ ವೈಫಲ್ಯದ ಒಪ್ಪಿಗೆಯಾಗಿ ಮತ್ತು ತಿದ್ದುವ ಕ್ರಮವಾಗಿ ಆರೋಗ್ಯ ಸಚಿವ ಡಾ. ಹರ್ಷ್ ವರ್ಧನ್ ಹಾಗೂ ಅವರ ಅಧೀನ ಅಧಿಕಾರಿ ಅಶ್ವಿನಿ ಚೌಬೆ ಅವರ (ಬೇಡಿಕೆಯ ಮೇರೆಗೆ ನೀಡಲಾದ) ರಾಜೀನಾಮೆಗಳನ್ನು ವ್ಯಾಪಕವಾಗಿ ಚರ್ಚಿಸಲಾಗಿತ್ತು.
2021ರ ಜುಲೈ ತಿಂಗಳ ಈ ರಾಜೀನಾಮೆಗಳು ಮತ್ತು ಅಷ್ಟೇನೂ ಪರಿಚಯವಿಲ್ಲದ ಸಚಿವರು, ಮುಖ್ಯಮಂತ್ರಿಗಳು ಮತ್ತು ಪಕ್ಷದ ಅಧ್ಯಕ್ಷರು, ಸಾರ್ವಜನಿಕವಾಗಿ ದೊಡ್ಡ ಹೆಸರಿದ್ದ ಕೆಲವು ಸಚಿವರನ್ನು “ತೆಗೆದುಹಾಕಿದ” ಘಟನೆಗಳ ಜೊತೆಗೆ ಇವೂ ಸೇರಿಕೊಂಡು – ಮೋದಿ ಅವರನ್ನು ಒಬ್ಬ “ಪ್ರಜಾಸತ್ತಾತ್ಮಕ ಚಕ್ರವರ್ತಿ” ಎಂಬಂತೆ ಬಿಂಬಿಸುವ ಇಮೇಜನ್ನು ಮತ್ತಷ್ಟು ಗಟ್ಟಿಗೊಳಿಸಿದವು.
ಸಾರ್ವಜನಿಕವಾಗಿ ಹೆಸರುವಾಸಿಯಾಗಿದ್ದ ರವಿಶಂಕರ್ ಪ್ರಸಾದ್, ಪ್ರಕಾಶ್ ಜಾವಡೇಕರ್, ರಮೇಶ್ ಪೋಖ್ರಿಯಾಲ್ “ನಶಾಂಕ್”, ಡಿ.ವಿ. ಸದಾನಂದ ಗೌಡ ಮತ್ತು ಸಂತೋಷ್ ಗಂಗ್ವಾರ್ ಅವರಂತಹ ಸಚಿವರ ನಿರ್ಗಮನದೊಂದಿಗೆ, ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲು ವಿಫಲರಾಗುವವರಿಗೆ ಅಥವಾ ಸ್ವಂತ ಸ್ವತಂತ್ರ ಗುರುತನ್ನು ನಿರ್ಮಿಸಲು ಬಯಸುವವರಿಗೆ ಬಾಗಿಲು ತೋರಿಸಲು ಸಮರ್ಥರಾದ ನಾಯಕನೆಂಬ ತಮ್ಮ ಇಮೇಜನ್ನು ಮೋದಿ ಮತ್ತಷ್ಟು ರೂಪಿಸಿಕೊಂಡರು.
ಕೊರೊನಾದ ಎರಡನೇ ಅಲೆಯ ಭೀಕರ ಅಲೆಯನ್ನು ಸರ್ಕಾರವು ನಿಭಾಯಿಸಿದ ರೀತಿ ಸಂಪೂರ್ಣವಾಗಿ ವಿಫಲವಾಯಿತು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಹರ್ಷ್ ವರ್ಧನ್ ಅವರನ್ನು ಮಾತ್ರ ಹುದ್ದೆಯಿಂದ ತೆಗೆದುಹಾಕಿ, ಸರ್ಕಾರದ ವ್ಯವಸ್ಥೆ ಮೊದಲಿನಿಂದಲೂ (ಈಗ ಇರುವ ಹಾಗೆಯೇ) ಸಂಪೂರ್ಣವಾಗಿ ಒಂದೇ ಕಡೆ ಕೇಂದ್ರೀಕೃತವಾಗಿದ್ದರೂ ಸಹ, ಎಲ್ಲಾ ತಪ್ಪನ್ನು ಅವರೊಬ್ಬರ ಮೇಲೆಯೇ ಹಾಕಿ ಅವರನ್ನು ಬಲಿಪಶು ಮಾಡಲಾಯಿತು. ಆ ಬಿಕ್ಕಟ್ಟು ಕೈಮೀರಿ ಹೋಗಲು ಮೋದಿಯವರು ಹಾಗೂ ಅವರ ಹತ್ತಿರದ ಅಧಿಕಾರಿಗಳ ತಂಡವೂ ಕೂಡ ಹರ್ಷ್ ವರ್ಧನ್ ಅವರಷ್ಟೇ ನೇರವಾಗಿ ಜವಾಬ್ದಾರರಾಗಿದ್ದರು ಎಂಬುದು ಸ್ಪಷ್ಟ.
ಅದೇ ರೀತಿಯಲ್ಲಿ, ಹೊಸ ಇಂಟರ್ನೆಟ್ ನಿಯಮಗಳು ಹಾಗೂ ಪ್ರಮುಖ ಟೆಕ್ ಕಂಪನಿಗಳ ಜೊತೆಗಿನ ವಾಕ್ ಸ್ವಾತಂತ್ರ್ಯದ ವಿವಾದಗಳ ವಿಚಾರದಲ್ಲಿ ದೇಶ ಹಾಗೂ ವಿದೇಶಗಳಲ್ಲಿ ಹೆಚ್ಚಾಗುತ್ತಿದ್ದ ಬಿಕ್ಕಟ್ಟಿಗೆ ರವಿಶಂಕರ್ ಪ್ರಸಾದ್ ಅವರ ನಿರ್ಗಮನವೇ ಕಾರಣ ಎಂದು ಮಾಧ್ಯಮಗಳಿಗೆ ಒಂದಷ್ಟು ಸಂಗತಿಗಳನ್ನು ಸೋರಿಕೆ ಮಾಡುವ ಮೂಲಕ ತಳಕುಹಾಕಲಾಗಿತ್ತು.
ಹರ್ಷ ವರ್ಧನ್, ರವಿಶಂಕರ್ ಪ್ರಸಾದ್ ಹಾಗೂ ಜಾವಡೇಕರ್ ಅವರಂತಹ ಸಚಿವರ ನಿರ್ಗಮನವಾದಾಗ, “ಪ್ರಧಾನ ಮಂತ್ರಿಯವರು ವಿಫಲರಾಗಿದ್ದಾರೆ” ಎಂಬ ಮಾತು ಎಲ್ಲೂ ಕೇಳಿಬರಲಿಲ್ಲ. ಬದಲಾಗಿ, ಮೋದಿ ಅವರು “ತಕ್ಷಣವೇ ದಿಟ್ಟ ಕ್ರಮ ತೆಗೆದುಕೊಂಡರು” ಎಂದೇ ಬಿಂಬಿಸಲಾಯಿತು; ಅಲ್ಲದೆ, ಸರಿಯಾಗಿ ಕೆಲಸ ಮಾಡಿದರೆ ಮಾತ್ರ ಹುದ್ದೆಯಲ್ಲಿ ಮುಂದುವರಿಯಬಹುದು ಎಂಬ ಸಂದೇಶವನ್ನು ಎಲ್ಲರಿಗೂ ರವಾನಿಸಲಾಯಿತು.
ಆದರೆ ಒಂದಿಷ್ಟು ಸಚಿವರನ್ನು ಮನೆಗೆ ಕಳುಹಿಸುವುದಕ್ಕಿಂತ ಮುಖ್ಯವಾದ ಸಂಗತಿಯೆಂದರೆ, 2021ರ ಜುಲೈನಲ್ಲಿ ಸಂಪುಟವನ್ನು ಸಂಪೂರ್ಣವಾಗಿ ಬದಲಾಯಿಸಿದ್ದು. ಮೋದಿ ಅವರ ಕಾಲದಲ್ಲಿ ನಡೆದ ಅತಿ ದೊಡ್ಡ ಸಂಪುಟ ಪುನಾರಚನೆ ಇದಾಗಿದ್ದು, ಹೊಸದಾಗಿ 36 ಸಚಿವರು ಸೇರ್ಪಡೆಯಾದರು ಮತ್ತು 7 ಜನರಿಗೆ ಬಡ್ತಿ ಸಿಕ್ಕಿತು. ಇದರಲ್ಲಿ ಯುವಕರು, ತಂತ್ರಜ್ಞಾನ ನುರಿತವರು ಹಾಗೂ ಪ್ರಾದೇಶಿಕ ಪ್ರಭಾವಿ ನಾಯಕರೂ ಸೇರಿದ್ದರು. ಇದನ್ನು ಸರ್ವಾಧಿಕಾರಿ ಸಿಇಒ ಒಬ್ಬರು ಕಾರ್ಪೊರೇಷನ್ ಶೈಲಿಯಲ್ಲಿ ನಡೆಸಿದ ಬದಲಾವಣೆಗೆ ಹೋಲಿಸಲಾಯಿತು.
ಯಾರ ಶರತ್ತುಗಳ ಮೇಲೆ?
ಹಿಂದೆ, ಮೋದಿ ಅವರು ತಮ್ಮ ಇಮೇಜ್ ಅನ್ನು ಕಾಪಾಡಿಕೊಳ್ಳಲು ಬೇರೆಯವರನ್ನು ಬಲಿಪಶು ಮಾಡಿದ್ದರು. ಆದರೆ ಈಗಿನ ಪರಿಸ್ಥಿತಿಯಲ್ಲಿ ಮೋದಿ ಏನಾದರೂ ಸ್ವಲ್ಪ ಬಿಟ್ಟುಕೊಟ್ಟರೆ ಅಥವಾ ರಿಯಾಯಿತಿ ನೀಡಿದರೆ, ವಿರೋಧಿಗಳ ಒತ್ತಡಕ್ಕೆ ಮಣಿದು ಅವರು ತಲೆಬಾಗಿದ್ದಾರೆ ಎಂದೇ ಜನ ಅಂದುಕೊಳ್ಳುತ್ತಾರೆ. ಅಂಥದ್ದೊಂದು ರಾಜಕೀಯ ಸಂದೇಶ ಹೊರಹೋಗಲು ಬಿಟ್ಟರೆ, ಮೋದಿಯವರ “ಗಂಡೆದೆ ಗಟ್ಟಿ ನಾಯಕ” ಎಂಬ ಬಿಂಬಕ್ಕೆ ಪೆಟ್ಟು ಬೀಳುತ್ತದೆ. ಆದರೂ ಪ್ರತಿಭಟನೆಗೆ ಸಿಕ್ಕಿರುವ ಜನಬೆಂಬಲವನ್ನು ನೋಡಿದರೆ, ಒಂದು ವೇಳೆ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಎಂಬ ಮುಖ್ಯ ಬೇಡಿಕೆಗೆ ಮೋದಿ ತಲೆಬಾಗಲೇಬೇಕಾದರೆ, ಕೊನೆಗೆ ಪ್ರಧಾನ್ ಅವರನ್ನೇ ಆ ಎಲ್ಲ ತಪ್ಪಿಗೆ ಬಲಿಪಶು ಮಾಡುವುದರ ಮೂಲಕ ಮಾತ್ರ ಅದು ಸಾಧ್ಯವಾಗುತ್ತದೆ.
ಹಿಂದೆಯೂ ಮೋದಿ ಅವರು “ಹೊರಗಿನ” ಒತ್ತಡಕ್ಕೆ ಮಣಿದು ಸಚಿವರನ್ನು ನಿರ್ಗಮಿಸುವಂತೆ ಮಾಡಿದ್ದರು, ಆದರೆ ಅದಕ್ಕೂ ಈಗಿನ ಪರಿಸ್ಥತಿಗೂ ಇರುವ ವ್ಯತ್ಯಾಸವೆಂದರೆ, ಅಂದು ಅವರು ತಮ್ಮದೇ ಆದ ಆಯ್ಕೆಯ ಸಮಯದಲ್ಲಿ ಹಾಗೆ ಮಾಡಿದ್ದರು. ಉದಾಹರಣೆಗೆ, 2018ರಲ್ಲಿ ಮೀಟೂ (#MeToo) ಚಳುವಳಿಯ ಸಮಯದಲ್ಲಿ ಎಂ.ಜೆ. ಅಕ್ಬರ್ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳು ಕೇಳಿಬಂದಾಗ, ಮೋದಿ ಅವರು ಸುಮಾರು ಹತ್ತು ದಿನಗಳ ಕಾಲ ಕಾದರು. ಅಕ್ಬರ್ ಅವರು ಅಧಿಕೃತ ವಿದೇಶಿ ಪ್ರವಾಸದಿಂದ ಹಿಂತಿರುಗಲು ಮತ್ತು ಕಾನೂನಾತ್ಮಕ ಪ್ರತಿಕ್ರಿಯೆಯನ್ನು ದಾಖಲಿಸಲು ಅವಕಾಶ ನೀಡಿದರು. ಆ ಬಳಿಕವಷ್ಟೇ ಅವರಿಂದ ರಾಜೀನಾಮೆ ಪಡೆದರು.
ಕಿರಿಯ ಗೃಹ ಸಚಿವ ಅಜಯ್ ಮಿಶ್ರಾ ತೇನಿ ಅವರು ಅಕ್ಬರ್ಗಿಂತ ಹೆಚ್ಚು ಅದೃಷ್ಟಶಾಲಿಯಾಗಿದ್ದರು, ಏಕೆಂದರೆ ಅವರು ತಮ್ಮ ಕ್ಷೇತ್ರವಾದ ಖೇರಿಯಲ್ಲಿ ಸ್ವತಂತ್ರ ರಾಜಕೀಯ ಬೆಂಬಲವನ್ನು ಹೊಂದಿದ್ದರು. ರೈತರ ಆಂದೋಲನದ ಕೊನೆಯ ಘಟ್ಟದಲ್ಲಿ, ತೇನಿ ಅವರ ಮಗ ಆಶಿಶ್ ಮಿಶ್ರಾ ಅವರು ಪ್ರತಿಭಟನಾಕಾರರ ಮೇಲೆ ಉದ್ದೇಶಪೂರ್ವಕವಾಗಿ ಕಾರನ್ನು ಹರಿಸಿ ನಾಲ್ವರು ರೈತರು ಮತ್ತು ಒಬ್ಬ ಸ್ಥಳೀಯ ಪತ್ರಕರ್ತನನ್ನು ಹತ್ಯೆ ಮಾಡಿದರು. ಭಾರೀ ಆಕ್ರೋಶದ ಹೊರತಾಗಿಯೂ, 2024ರ ಲೋಕಸಭಾ ಚುನಾವಣೆಯ ನಂತರ ಅವರನ್ನು ಕೈಬಿಡುವವರೆಗೆ ತೇನಿ ತಮ್ಮ ಹುದ್ದೆಯನ್ನು ಉಳಿಸಿಕೊಂಡರು. ಎರಡೂ ಸಂದರ್ಭಗಳಲ್ಲಿ, ಮೋದಿ ಅವರು ಸಾರ್ವಜನಿಕ ಒತ್ತಡಕ್ಕೆ ಸ್ಪಂದಿಸಿದರು, ಆದರೆ ತಮ್ಮದೇ ಆದ ಶರತ್ತುಗಳ ಮೇಲೆ ಮತ್ತು ತಮಗೆ ಸೂಕ್ತವೆನಿಸಿದಾಗ ಮಾತ್ರ.
ಹಿಂದೆ ಹೇಳಿದಂತೆ, ವಾಂಗ್ಚುಕ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ ನಂತರ ಭಾರತದ ವಿವಿಧ ಭಾಗಗಳಲ್ಲಿ ಸ್ವಯಂಪ್ರೇರಿತ ಪ್ರತಿಭಟನೆಗಳು ನಡೆದಿರುವ ವರದಿಗಳು ಹೊರಬಂದಿವೆ. ಆದಾಗ್ಯೂ, ಇದು ಮೋದಿಯನ್ನು ತಕ್ಷಣವೇ ತಮ್ಮ ಮಾತಿನ ಧಾಟಿಯನ್ನು ಮೃದುಗೊಳಿಸುವಂತೆ ಒತ್ತಾಯಿಸುವ ಸಾಧ್ಯತೆಯಿಲ್ಲ. ಆದರೆ ಸರ್ಕಾರದ ಮುಂದಿನ ತಂತ್ರದ ಭಾಗವಾಗಿ, ಸಿಜೆಪಿ ಹೋರಾಟವು ಎಷ್ಟು ವಿಸ್ತರಿಸಿಕೊಳ್ಳುತ್ತಿದೆ ಎಂಬುದರ ಮೇಲೆ ಆನ್ಲೈನ್ನಲ್ಲೂ ಹಾಗೂ ದೇಶದ ಬೀದಿ-ಬೀದಿಗಳಲ್ಲಿ ಮತ್ತು ಪಾರ್ಕುಗಳಲ್ಲಿ ಆಡಳಿತಾತ್ಮಕ ಹಾಗೂ ರಾಜಕೀಯ ಕಣ್ಣಿಡುವುದನ್ನು ಸರ್ಕಾರ ಮುಂದುವರಿಸಲಿದೆ.
ಮೊದಲು ಪ್ರಧಾನಿಯವರು, ಆನ್ಲೈನ್ನಲ್ಲಿ ವ್ಯಕ್ತವಾಗುವ ಆಕ್ರೋಶ ಮತ್ತು ನೈತಿಕ ಬೆಂಬಲವು ನೇರವಾಗಿ ವೋಟಿಂಗ್ ಸಮಯದಲ್ಲಿ ಸರ್ಕಾರದ ಸೋಲಿಗೆ ಕಾರಣವಾಗುವುದಿಲ್ಲ ಎಂಬುದನ್ನು ಸರಿಯಾಗೇ ಲೆಕ್ಕಹಾಕಿದ್ದರು. ಆದರೆ, ಆ ಚಳುವಳಿಯನ್ನು ಹತ್ತಿಕ್ಕುವ ಬದಲು ಪ್ರಮುಖವಾದ ಒಂಟಿ “ಜಿರಳೆ”ಯನ್ನು ಆಚೆಹಾಕಿದ್ದರಿಂದ, ಚಳುವಳಿ ನಿಲ್ಲುವ ಬದಲಿಗೆ ಇನ್ನೂ ಹತ್ತು ಹಲವು “ಜಿರಳೆಗಳು” ಹುಟ್ಟಿಕೊಳ್ಳಲು ಕಾರಣವಾಯಿತು; ಇದು ಅಸಲಿ ಜಿರಳೆಗಳ ಸ್ವಭಾವವೂ ಹೌದು.
ಪ್ರತಿಭಟನಾ ಸ್ಥಳದಲ್ಲಿ ಕೇಳಿಬರುತ್ತಿರುವ ಘೋಷಣೆಗಳು ಕೇವಲ ಧರ್ಮೇಂದ್ರ ಪ್ರಧಾನ್ ಅವರನ್ನು ಕೆಳಗಿಳಿಸಿ ಎನ್ನುವಷ್ಟಕ್ಕೇ ನಿಂತಿಲ್ಲ. ಯಾವುದೇ ಸಂಘಟನೆಯ ಶಿಸ್ತಿಗೆ ಕಟ್ಟುಬೀಳದ, ಸಿಟ್ಟಿನಿಂದ ಕುದಿಯುತ್ತಿರುವ ಮತ್ತು ಹತಾಶರಾಗಿರುವ ಯುವಕರು ಈಗ ನೇರವಾಗಿ ಮೋದಿಯವರ ಹೆಸರನ್ನೂ ತಮ್ಮ ಮಾತಿನ ದಾಳಿಗೆ ಸಿಲುಕಿಸಿಕೊಂಡಿದ್ದಾರೆ. ಇದು ಪ್ರತಿಭಟನೆಯ ಅಲೆಯ ದಿಕ್ಕನ್ನು ಬದಲಾಯಿಸಲು ಮತ್ತು ಪ್ರತಿಭಟನಾಕಾರರ ಮೇಲೆ ಹಣೆಪಟ್ಟಿಗಳನ್ನು ಅಂಟಿಸಲು ಮೋದಿ ಮಾಡುವ ಪ್ರಯತ್ನಗಳನ್ನು ಮತ್ತಷ್ಟು ಕಠಿಣಗೊಳಿಸಲಿದೆ.
ಯಾವುದೇ ಗಂಡೆದೆ ಗಟ್ಟಿಗ ನಾಯಕನಂತೆ, ತಮ್ಮದೇ ಕ್ಷೇತ್ರದಿಂದ ಜನ ಕೈಕೊಟ್ಟು ಹೊರನಡೆಯುವ ಪರಿಸ್ಥಿತಿ ಬಂದಾಗ ಮಾತ್ರ ಮೋದಿ ಬಾಯಿಬಿಟ್ಟಿದ್ದಾರೆ. ಆದರೆ ಈ ಸಿಜೆಪಿಯು ಕಣ್ಮರೆಯ ಆಟವನ್ನು ಮುಗಿಸಿ, ಯಾವತ್ತು ನಿಜವಾದ ಹಾಗೂ ಲೆಕ್ಕಕ್ಕೆ ಸಿಗುವ ಚುನಾವಣಾ ಶಕ್ತಿಯಾಗಿ ಹೊರಹೊಮ್ಮುತ್ತದೆ ಎಂಬುದನ್ನು ಈಗಲೇ ಖಚಿತವಾಗಿ ಹೇಳಲುಸಾಧ್ಯವಿಲ್ಲ.
ಮೋದಿ ಅವರಿಗೆ ಸಮಾಧಾನವಿರುವ ಏಕೈಕ ಸಂಗತಿ ಏನೆಂದರೆ, ಇಂಥದ್ದೊಂದು ಪರಿಸ್ಥಿತಿ ಬಂದರೆ ಕೊನೆಗೆ ವಿರೋಧ ಪಕ್ಷಗಳಿಗೂ ಕೂಡ ಸಂಕಷ್ಟ ಎದುರಾಗುತ್ತದೆ. ಆದರೆ ಮೋದಿ ಅವರೇ ಇಲ್ಲಿ ಹೆಚ್ಚು ನಷ್ಟ ಅನುಭವಿಸುವವರಾಗಿರುವುದರಿಂದ, ಈಗ ಅವರು ಕೈಗೊಳ್ಳುವ ರಾಜಕೀಯ ತಂತ್ರಗಳು ಬಹಳ ವಿಭಿನ್ನವಾಗಿರಬೇಕು ಮತ್ತು ಇದುವರೆಗೆ ನಡೆದುಬಂದ ಹಳೆಯ ದಾರಿಯನ್ನು ಬಿಟ್ಟು ಹೊಸ ದಾರಿಯನ್ನು ಹಿಡಿಯಬೇಕಾಗುತ್ತದೆ.
ನೀಲಂಜನ್ ಮುಖೋಪಾಧ್ಯಾಯ: ದೆಹಲಿ-ಎನ್ಸಿಆರ್ನಲ್ಲಿ ನೆಲೆಸಿರುವ ಲೇಖಕ ಹಾಗೂ ಪತ್ರಕರ್ತರು. ರಾಮಮಂದಿರ ಯೋಜನೆಯ ಮೇಲಿನ ನಿರ್ಣಾಯಕ ಪುಸ್ತಕವಾದ “ದಿ ಡಿಮಾಲಿಷನ್, ದಿ ವರ್ಡಿಕ್ಟ್ ಅಂಡ್ ದಿ ಟೆಂಪಲ್: ದಿ ಡೆಫಿನಿಟಿವ್ ಬುಕ್ ಆನ್ ದಿ ರಾಮ್ ಮಂದಿರ್ ಪ್ರಾಜೆಕ್ಟ್” ಅವರ ಇತ್ತೀಚಿನ ಕೃತಿಯಾಗಿದೆ. ಅವರು “ನರೇಂದ್ರ ಮೋದಿ: ದಿ ಮ್ಯಾನ್, ದಿ ಟೈಮ್ಸ್” ಪುಸ್ತಕದ ಲೇಖಕರೂ ಆಗಿದ್ದಾರೆ.
ಕೃಪೆ: frontline.thehindu.com












