ಸನ್ಮಾರ್ಗ ವಾರ್ತೆ
ವೆಸ್ಟ್ ಬ್ಯಾಂಕ್: ಆಕ್ರಮಿತ ವೆಸ್ಟ್ ಬ್ಯಾಂಕ್ನಲ್ಲಿ ಇಸ್ರೇಲಿಗರರು ಎರಡು ಮಸೀದಿಗಳಿಗೆ ಬೆಂಕಿ ಹಚ್ಚಿದ್ದಾರೆ. ಎರಡು ಪ್ರತ್ಯೇಕ ಸ್ಥಳಗಳಲ್ಲಿ ದಾಳಿಕೋರರು ಮಸೀದಿಗಳಿಗೆ ಬೆಂಕಿ ಹಚ್ಚಿ, ಗೋಡೆಗಳ ಮೇಲೆ ಜನಾಂಗೀಯ ನಿಂದನೆಯ ಬರಹಗಳನ್ನು ಬರೆದಿದ್ದಾರೆ.
ವೆಸ್ಟ್ ಬ್ಯಾಂಕಿನಲ್ಲಿ ಇತ್ತೀಚೆಗೆ ನಡೆದ ಘರ್ಷಣೆಗಳ ನಂತರ ವಸಾಹತುಗಾರರ ಈ ನಡೆ ಬಂದಿದ್ದು, ಈ ಘರ್ಷಣೆಗಳಲ್ಲಿ ಎರಡು ಮಸೀದಿಗಳು ಬೆಂಕಿಯಿಂದಾಗಿ ಗಂಭೀರವಾಗಿ ಹಾನಿಗೊಳಗಾಗಿವೆ.
ಈ ಪ್ರದೇಶದಲ್ಲಿ ಇಸ್ರೇಲಿ ವಸಾಹತುಗಾರರ ನಿರಂತರ ಪ್ರಚೋದನೆಗಳ ಮುಂದುವರಿದ ಭಾಗವಾಗಿಯೇ ಫೆಲೆಸ್ತೀನ್ ಜನರು ಈ ಘಟನೆಯನ್ನು ಕಾಣುತ್ತಿದ್ದಾರೆ. ಜನಾಂಗೀಯ ದ್ವೇಷವನ್ನು ಕೆರಳಿಸುವ ಭಿತ್ತಿಬರಹಗಳು ಈ ಪ್ರದೇಶದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗಳಿಗೆ ಕಾರಣವಾಗಿವೆ.
ಆಕ್ರಮಿತ ಪ್ರದೇಶಗಳಲ್ಲಿ ಪ್ರಾರ್ಥನಾ ಮಂದಿರಗಳ ಮೇಲೆ ನಡೆಯುತ್ತಿರುವ ಇಂತಹ ದಾಳಿಗಳು ಪ್ರತ್ಯೇಕವಾದದ್ದಲ್ಲ ಎಂದು ಫೆಲೆಸ್ತೀನ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಧಿಕೃತ ಅಂಕಿಅಂಶಗಳ ಪ್ರಕಾರ, 2025ರಿಂದೀಚೆಗೆ ಇಸ್ರೇಲಿ ವಸಾಹತುಗಾರರು 45ಕ್ಕೂ ಹೆಚ್ಚು ಮಸೀದಿಗಳ ಮೇಲೆ ದಾಳಿ ನಡೆಸಿದ್ದಾರೆ ಅಥವಾ ಬೆಂಕಿ ಹಚ್ಚಿದ್ದಾರೆ.
ಪ್ರಾರ್ಥನಾ ಮಂದಿರಗಳ ಮೇಲೆ ನಡೆಯುತ್ತಿರುವ ಈ ಸರಣಿ ದಾಳಿಗಳು ವೆಸ್ಟ್ ಬ್ಯಾಂಕ್ನಲ್ಲಿ ಭದ್ರತೆ ಮತ್ತು ಶಾಂತಿಯನ್ನು ಸಂಪೂರ್ಣವಾಗಿ ಹಾಳುಮಾಡುತ್ತಿವೆ ಎಂದು ಹೇಳಿರುವ ಫೆಲೆಸ್ತೀನ್ ನಾಯಕತ್ವವು, ಕೃತ್ಯ ಎವೆಗಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.












