ವಿ.ಡಿ. ಸಾವರ್ಕರ್ ಗೋಪೂಜೆಯನ್ನು ಟೀಕಿಸಿದ್ದರು, ಅವುಗಳನ್ನು ಕೇವಲ ‘ಉಪಯುಕ್ತ’ ಪ್ರಾಣಿ ಎಂದು ಪರಿಗಣಿಸಿದ್ದರು: ಸತ್ಯಕಿ ಸಾವರ್ಕರ್ ಹೇಳಿಕೆ

0
200

ಸನ್ಮಾರ್ಗ ವಾರ್ತೆ

ಲೈವ್ ಲಾ ವರದಿ ಮಾಡಿರುವಂತೆ, ಹಿಂದುತ್ವ ಸಿದ್ಧಾಂತಿ ವಿನಾಯಕ ದಾಮೋದರ ಸಾವರ್ಕರ್ ಅವರು ಹಸುಗಳನ್ನು ಕೇವಲ “ಉಪಯುಕ್ತ” ಪ್ರಾಣಿಗಳೆಂದು ಪರಿಗಣಿಸಿದ್ದರು ಮತ್ತು ಗೋಪೂಜೆಯ ಕಲ್ಪನೆಯನ್ನು ಟೀಕಿಸಿದ್ದರು ಎಂದು ಅವರ ಮೊಮ್ಮಗ(Grandnephew) ಸತ್ಯಕಿ ಸಾವರ್ಕರ್ ಮಂಗಳವಾರ ಪುಣೆ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದಾರೆ.

ಒಂದು ಪ್ರಾಣಿಯನ್ನು ದೇವತೆಯಾಗಿ ಪರಿಗಣಿಸುವುದು “ಮಾನವೀಯತೆಗೆ ಮಾತ್ರವಲ್ಲದೆ ದೈವತ್ವದ ಪರಿಕಲ್ಪನೆಗೆ ಎಸಗುವ ಅವಮಾನವಾಗಿದೆ” ಎಂದು ವಿ.ಡಿ. ಸಾವರ್ಕರ್ ನಂಬಿದ್ದರು ಎಂದು ಅವರ ಮೊಮ್ಮಗ ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯ ಸಂದರ್ಭದಲ್ಲಿ ವಿಶೇಷ ಎಂಪಿ/ಎಸ್‌ಎಲ್ಎ (MP/MLA) ನ್ಯಾಯಾಲಯದ ಮುಂದೆ ನಡೆದ ವಿಚಾರಣೆಯ ವೇಳೆ ಸತ್ಯಕಿ ಸಾವರ್ಕರ್ ಈ ಹೇಳಿಕೆ ನೀಡಿದ್ದಾರೆ.

ವಿಚಾರಣೆಯ ಸಮಯದಲ್ಲಿ, ರಾಹುಲ್‌ ಗಾಂಧಿಯವರ ಪರ ವಕೀಲರು ‘ವಿಜ್ಞಾನ-ನಿಷ್ಠ ನಿಬಂಧ’ (Vigyan-Nishtha Nibandha) ಎಂಬ ಶೀರ್ಷಿಕೆಯ ಪುಸ್ತಕವನ್ನು ತಂದರು ಎಂದು ಕಾನೂನು ಸುದ್ದಿ ಮಾಧ್ಯಮ ವರದಿ ಮಾಡಿದೆ. ಈ ಪುಸ್ತಕವನ್ನು ತಮ್ಮ ಮುತ್ತಜ್ಜ (Granduncle) ಬರೆದಿದ್ದಾರೆ ಎಂದು ಸತ್ಯಕಿ ಸಾವರ್ಕರ್ ಒಪ್ಪಿಕೊಂಡಿದ್ದಾರೆ.

ನಾಯಿ, ಕುದುರೆ ಅಥವಾ ಕತ್ತೆಯಷ್ಟೇ ಹಸು ಮಾನವಕುಲಕ್ಕೆ ಉಪಯುಕ್ತವಾಗಿದೆ ಮತ್ತು ಆ ಪ್ರಾಣಿಗಳಂತೆ ಅವುಗಳನ್ನು ಪೂಜಿಸುವ ಬದಲು ರಕ್ಷಿಸಬೇಕು ಎಂದು ವಿ.ಡಿ ಸಾವರ್ಕರ್‌ ಬರೆದಿದ್ದಾರೆ ಎಂಬುದನ್ನು ಸತ್ಯಕಿ ಸಾವರ್ಕರ್ ಒಪ್ಪಿಕೊಂಡಿದ್ದಾರೆ.

ವಿ.ಡಿ. ಸಾವರ್ಕರ್ ಹೀಗೆ ಬರೆದಿದ್ದರು: “ಪ್ರಾಣಿಯು ದೇವರಾಗುತ್ತದೆ, ಆದರೆ ದೇವಸಮಾನನಾದ ಮನುಷ್ಯನನ್ನು ಪ್ರಾಣಿಯಂತೆ ಕಾಣಲಾಗುತ್ತದೆ. ಧರ್ಮದ ಮುದ್ರೆಯ ಅಡಿಯಲ್ಲಿ, ಕೇವಲ ಅಸಂಗತತೆ, ಅತಾರ್ಕಿಕತೆ ಮತ್ತು ಮೂರ್ಖತೆಯು ಹೇಗೆ ಬುದ್ಧಿವಂತಿಕೆ, ಸದ್ಗುಣ ಮತ್ತು ಪಾವಿತ್ರ್ಯತೆಯಂತೆ ಕಾಣಿಸಿಕೊಳ್ಳುತ್ತದೆ ಮತ್ತು ಮಾನವನ ತರ್ಕಶಕ್ತಿಯೇ ಹೇಗೆ ನಾಶವಾಗುತ್ತದೆ ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಯಾವುದು ಇರಬಹುದು?”

ವಿ.ಡಿ. ಸಾವರ್ಕರ್ ಅವರು ತಮ್ಮ ಪುಸ್ತಕದಲ್ಲಿ, ಹಸುವು ಉಪಯುಕ್ತವಾಗುವುದನ್ನು ನಿಲ್ಲಿಸಿದಾಗ ಮತ್ತು ಕೆಲವು ಸಂದರ್ಭಗಳಲ್ಲಿ ಅವು ಹಾನಿಕಾರಕವಾದಾಗ, ಅದರ ವಧೆಯು ಅನಿವಾರ್ಯವಾಗಬಹುದು ಎಂದು ಬರೆದಿದ್ದ ಪುಸ್ತಕದ ಭಾಗವನ್ನು ರಾಹುಲ್‌ ಗಾಂಧಿಯವರ ಪರ ವಕೀಲರು ಉಲ್ಲೇಖಿಸಿದ್ದಾರೆ ಎಂದು ಲೈವ್ ಲಾ ವರದಿ ಮಾಡಿದೆ.

ತಮ್ಮ ಪುಸ್ತಕದಲ್ಲಿ ವಿ.ಡಿ. ಸಾವರ್ಕರ್ ಅವರು, ರೂಪಕ ಅರ್ಥದಲ್ಲಿ ಹಸುವನ್ನು ಗೋಮಾತಾ ಅಥವಾ ತಾಯಿ ಹಸು ಎಂದು ಕರೆಯಬಹುದಾದರೂ, ಆ ಅಭಿವ್ಯಕ್ತಿಯನ್ನು ಅಕ್ಷರಶಃ ಅರ್ಥೈಸಿಕೊಳ್ಳಬಾರದು ಎಂದು ವಾದಿಸಿದ್ದಾರೆ. ಗೋಮೂತ್ರ ಮತ್ತು ಸಗಣಿಯನ್ನು “ಪವಿತ್ರ” ಪದಾರ್ಥಗಳೆಂದು ಪರಿಗಣಿಸಿ ಅವುಗಳನ್ನು ಸೇವಿಸುವ ಪದ್ಧತಿಯನ್ನೂ ಅವರು ಟೀಕಿಸಿದ್ದಾರೆ.

ಮಾರ್ಚ್ 2023 ರಲ್ಲಿ ಲಂಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿ.ಡಿ ಸಾವರ್ಕರ್‌ ಬಗ್ಗೆ ಸುಳ್ಳು ಮತ್ತು ದುರುದ್ದೇಶಪೂರ್ವಕ ಟೀಕೆಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ರಾಹುಲ್‌ ಗಾಂಧಿ ವಿರುದ್ಧ ಸತ್ಯಕಿ ಸಾವರ್ಕರ್ ಅವರು ಏಪ್ರಿಲ್ 2023 ರಲ್ಲಿ ಸಲ್ಲಿಸಿದ ದೂರಿನಿಂದ ಈ ಪ್ರಕರಣ ಹುಟ್ಟಿಕೊಂಡಿದೆ.