ಕಲ್ಲಡ್ಕದ ಅನುಗ್ರಹ ಮಹಿಳಾ ಕಾಲೇಜಿನಲ್ಲಿ ಸಿಎ ಫೌಂಡೇಶನ್ ಕೋರ್ಸ್ ಆರಂಭ

0
413

ಸನ್ಮಾರ್ಗ ವಾರ್ತೆ

ಕಲ್ಲಡ್ಕದ ಅನುಗ್ರಹ ಮಹಿಳಾ ಕಾಲೇಜಿನಲ್ಲಿ ಸಿ.ಎ.ಫೌಂಡೇಶನ್ ಕೋರ್ಸ್‌ನ ಉದ್ಘಾಟನಾ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದಲ್ಲಿ ಮಂಗಳೂರಿನ ಕೆವಿಸಿ ಅಕಾಡೆಮಿಯ ಫ್ಯಾಕಲ್ಟಿ ಮೆಂಬರ್ ಕುಮಾರಿ ಶ್ರದ್ಧಾ ರವರು ವಿದ್ಯಾರ್ಥಿಗಳಿಗೆ ಸಿ.ಎ. ಫೌಂಡೇಶನ್ ಕೋರ್ಸ್‌ಗೆ ಸಂಬಂಧಿಸಿದ ಮಾಹಿತಿಯನ್ನು ಪರಿಚಯಿಸಿದರು. ಹಾಗೂ ಸಿ.ಎ.ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಸಮರ್ಪಣೆ ಮತ್ತು ಬದ್ಧತೆ ಅತ್ಯಂತ ಮುಖ್ಯವಾಗಿದ್ದು, ವಿದ್ಯಾರ್ಥಿಗಳು ನಿರಂತರ ಅಧ್ಯಯನ, ಶಿಸ್ತು ಹಾಗೂ ಪರಿಶ್ರಮದೊಂದಿಗೆ ಪರೀಕ್ಷೆಗೆ ಸಿದ್ಧರಾದರೆ ಯಶಸ್ಸು ಸಾಧ್ಯ ಎಂದರು. ಸಿಎ ಕೋರ್ಸ್‌ನ ಸ್ವರೂಪ, ಪರೀಕ್ಷಾ ವಿಧಾನ ಹಾಗೂ ವಿದ್ಯಾರ್ಥಿಗಳು ಅನುಸರಿಸಬೇಕಾದ ಅಧ್ಯಯನ ಕ್ರಮಗಳ ಕುರಿತು ಅವರು ಮಾತನಾಡಿದರು.

ಸಿ.ಎ.ಫೌಂಡೇಶನ್ ಕೋರ್ಸಿಗೆ ನೋಂದಾಯಿಸಿಕೊಂಡ ವಿದ್ಯಾರ್ಥಿನಿಯರಿಗೆ ಕಲಿಕೆಗೆ ಪೂರಕವಾಗುವ ಪುಸ್ತಕಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಯಾಸಿನ್ ಬೇಗ್ ರವರು, ವಿದ್ಯಾರ್ಥಿನಿಯರ ಶೈಕ್ಷಣಿಕ ಯಶಸ್ಸಿಗೆ ಶಿಸ್ತು ಅತ್ಯಗತ್ಯ ಎಂದು ಹೇಳಿದರು. ಕಲಿಕೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಮಯಪಾಲನೆ, ನಿಯಮಿತ ಅಧ್ಯಯನ ಮತ್ತು ಶಿಸ್ತನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಮತ್ತು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಗುರಿಗಳನ್ನು ಸಾಧಿಸಲು ಅಗತ್ಯವಿರುವ ಎಲ್ಲಾ ಪೂರಕ ಶೈಕ್ಷಣಿಕ ಹಾಗೂ ಅನುಕೂಲಕರ ವಾತಾವರಣವನ್ನು ಕಾಲೇಜು ಒದಗಿಸಲಿದೆ. ವಿದ್ಯಾರ್ಥಿಗಳು ಕಾಲೇಜು ಒದಗಿಸುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಪ್ರಥಮ ಬಿ. ಎ. ವಿದ್ಯಾರ್ಥಿನಿ ಕುಮಾರಿ ಸಲ್ಮಾ ನವಾಲ್ ಕಿರಾಅತ್ ಪಠಿಸಿ, ತೃತೀಯ ಬಿ. ಎ. ವಿದ್ಯಾರ್ಥಿನಿ ಕುಮಾರಿ ಶಮ ಶಹರಿನ್ ಸ್ವಾಗತಿಸಿ, ತೃತೀಯ ಬಿ. ಕಾಂ. ವಿದ್ಯಾರ್ಥಿನಿ ಮರಿಯಂ ಸಾದ ಶಿರಿನ್ ಧನ್ಯವಾದ ಸಲ್ಲಿಸಿದರು. ದ್ವಿತೀಯ ಬಿ. ಕಾಂ. ವಿದ್ಯಾರ್ಥಿನಿ ಕುಮಾರಿ ಬಸ್ರಾ ಬಾನು ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಡಾ. ಹೇಮಲತಾ ಬಿ. ಡಿ., ಪದವಿ ವಿಭಾಗದ ಸಂಯೋಜಕಿ ಶ್ರೀಮತಿ ಆಬಿದ ಬಿ., ಮೌಲ್ಯ ಶಿಕ್ಷಣ ವಿಭಾಗದ ಮುಖ್ಯಸ್ಥೆ ಹಾಗೂ ಸಲಹಾ ಸಮಿತಿಯ ಸದಸ್ಯೆ ಶ್ರೀಮತಿ ಸಲೀಮಾ ಎಂ., ಸಲಹಾ ಸಮಿತಿಯ ಸದಸ್ಯೆ ಶ್ರೀಮತಿ ನವ್ಯ ಹಾಗೂ ಬೋಧಕ ಸಿಬ್ಬಂದಿ, ಪೋಷಕರು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.