ಇಸ್ಲಾಮಿಕ್ ನ್ಯಾಟೋ ಸೇರಲು ಸಿದ್ಧವಾಗಿರುವ ಬಾಂಗ್ಲಾದೇಶ

0
328

ಸನ್ಮಾರ್ಗ ವಾರ್ತೆ

ಇಸ್ಲಾಮಿಕ್ ನ್ಯಾಟೋ ಎಂದು ಹೇಳಲಾಗುವ ಮಕ್ಕಾ ರಕ್ಷಣಾ ಒಪ್ಪಂದದ ಭಾಗವಾಗಲು ಬಾಂಗ್ಲಾದೇಶ ನಿರ್ಧರಿಸಿದೆ. ಸೌದಿ ಅರೇಬಿಯಾ ಪಾಕಿಸ್ತಾನ ಮತ್ತು ಟರ್ಕಿಯನ್ನು ಒಳಗೊಂಡಿರುವ ಮಕ್ಕಾ ಜಂಟಿ ರಕ್ಷಣಾ ಒಪ್ಪಂದಕ್ಕೆ ಸೇರುವುದಾಗಿ ಬಾಂಗ್ಲಾದೇಶದ ಸಚಿವರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಅಂತಿಮ ನಿರ್ಧಾರವನ್ನು ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಬಾಂಗ್ಲಾದೇಶದ ಸರ್ಕಾರವು ಬಾಂಗ್ಲಾದೇಶ ಮೊದಲು ಎಂಬ ನೀತಿಯನ್ನು ಅನುಸರಿಸುತ್ತಿದೆ. ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರ ವಿಶೇಷ ಆಹ್ವಾನದ ಮೇರೆಗೆ ಬಾಂಗ್ಲಾ ಪ್ರಧಾನಿ ತಾರಿಕ್ ರೆಹಮಾನ್ ಅವರು ರಿಯಾದಿಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಸೌದಿ ಅರೇಬಿಯಾ ಪಾಕಿಸ್ತಾನ ಮತ್ತು ಟರ್ಕಿ ದೇಶಗಳು ಆಗಸ್ಟ್ 7ರಂದು ಸೌದಿ ಅರೇಬಿಯಾದ ಮಕ್ಕಾದಲ್ಲಿ ಈ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ್ದವು. ಸಾಮೂಹಿಕ ರಕ್ಷಣೆಯನ್ನು ಗುರಿಯಾಗಿಸಿಕೊಂಡ ಈ ಒಪ್ಪಂದದ ಪ್ರಕಾರ ಈ ಮೂರು ದೇಶಗಳಲ್ಲಿ ಯಾವುದಾದರೂ ಒಂದರ ಮೇಲೆ ಸಶಸ್ತ್ರ ದಾಳಿಯನ್ನು ಮೂರು ದೇಶಗಳ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಲಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯ ಬಿಸಿ ವಿಷಯವಾಗಿರುವ ಈ ಮಿಲಿಟರಿ ಮೈತ್ರಿಕೂಟವನ್ನು ಅನೇಕರು ಇಸ್ಲಾಮಿಕ್ ನ್ಯಾಟೋ ಎಂದು ಹೇಳಿದ್ದಾರೆ.