ಸನ್ಮಾರ್ಗ ವಾರ್ತೆ
ಹೊಸ ದೆಹಲಿ: ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಮುರಳಿ ಮನೋಹರ್ ಜೋಶಿ ಅವರು ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ನೀತಿಗಳು ಮತ್ತು ಆಡಳಿತಾತ್ಮಕ ಪ್ರಾಶಸ್ತ್ಯಗಳನ್ನು ತೀವ್ರವಾಗಿ ಟೀಕಿಸಿದ್ದಾರೆ. ನಿರಂತರ ಪ್ರಶ್ನೆ ಪತ್ರಿಕೆ ಸೋರಿಕೆ, ಬಜೆಟ್ ಕಡಿತ, ಸರ್ಕಾರಿ ಶಾಲೆಗಳ ಮುಚ್ಚುವಿಕೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ಅನಿಯಂತ್ರಿತ ವಾಣಿಜ್ಯೀಕರಣವನ್ನು ಉಲ್ಲೇಖಿಸಿ ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ನಿರಂತರ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಬಲವಾಗಿ ಟೀಕಿಸಿದ ಜೋಶಿ, ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಕಾಲದಲ್ಲಿ ಅಂತಹ ಸೋರಿಕೆಗಳು ಏಕೆ ಸಂಭವಿಸುತ್ತಿರಲಿಲ್ಲ ಎಂದು ಪ್ರಶ್ನಿಸಿದರು.
“ನಾನು ಅತ್ಯಂತ ವಿನಮ್ರತೆಯಿಂದ ಕೇಳುತ್ತಿದ್ದೇನೆ-ವಾಜಪೇಯಿ ಜೀ ಅವರ ಆಳ್ವಿಕೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಗಳು ಏಕೆ ನಡೆಯುತ್ತಿರಲಿಲ್ಲ? ಈಗ ಬ್ಯಾಂಕ್ಗಳಲ್ಲಿ ಭ್ರಷ್ಟಾಚಾರವಿದೆ, ವ್ಯಾಪಾರಗಳಲ್ಲಿ ಭ್ರಷ್ಟಾಚಾರವಿದೆ ಮತ್ತು ಸರ್ಕಾರವೇ ಸ್ವತಃ ಭ್ರಷ್ಟಾಚಾರದಲ್ಲಿ ಮುಳುಗಿದೆ. ಹೀಗಿರುವಾಗ ಬಡ ವಿದ್ಯಾರ್ಥಿಗಳನ್ನು ಏಕೆ ದೂಷಿಸಬೇಕು? ಹಿರಿಯರು ಮಾಡಿದ್ದನ್ನೇ ಅವರೂ ಅನುಸರಿಸುತ್ತಾರೆ.”
ಶಿಕ್ಷಣ ಕ್ಷೇತ್ರವು ಕೇಂದ್ರ ಸರ್ಕಾರದ ಅಗ್ರ ಆದ್ಯತೆಯಾಗಿಲ್ಲ ಎಂದು ಜೋಶಿ ಆರೋಪಿಸಿದರು. ಮೂಲಭೂತ ಅಭಿವೃದ್ಧಿ ಎಂದರೆ ಕೇವಲ ರಸ್ತೆಗಳನ್ನು ನಿರ್ಮಿಸುವುದಲ್ಲ ಎಂಬುದನ್ನು ಅವರು ನೆನಪಿಸಿದರು. ರಸ್ತೆಗಳನ್ನು ನಿರ್ಮಿಸುವುದು ಮಾತ್ರ ಸಾಕಾಗುವುದಿಲ್ಲ, ನಮಗೆ ಅರ್ಹ ಎಂಜಿನಿಯರ್ಗಳನ್ನು ಉತ್ಪಾದಿಸುವ ಸಂಸ್ಥೆಗಳೂ ಬೇಕು. ಸರ್ಕಾರಿ ಶಾಲೆಗಳ ಮುಚ್ಚುವಿಕೆ ಮತ್ತು ಉನ್ನತ ಶಿಕ್ಷಣದ ವಾಣಿಜ್ಯೀಕರಣವು ದೇಶದ ಭವಿಷ್ಯಕ್ಕೆ ಕುತ್ತು ತರಲಿದೆ ಎಂದು ಅವರು ಎಚ್ಚರಿಸಿದರು.
ವೈದ್ಯಕೀಯ ಚಿಕಿತ್ಸೆ ಮತ್ತು ಶಿಕ್ಷಣವನ್ನು ಲಾಭದಾಯಕ ವ್ಯವಹಾರವನ್ನಾಗಿ ಮಾಡುವುದು ಸ್ವೀಕಾರಾರ್ಹವಲ್ಲ ಮತ್ತು ಜನರ ಅಗತ್ಯಗಳನ್ನು ಶೋಷಿಸುವ ಇಂತಹ ಪದ್ಧತಿಗಳು ಭಾರತೀಯ ಸಂಸ್ಕೃತಿಗೆ ಅನುಗುಣವಾಗಿಲ್ಲ ಎಂದು ಅವರು ತಿಳಿಸಿದರು. ಉನ್ನತ ಶಿಕ್ಷಣ ಮತ್ತು ಉದ್ಯೋಗಾವಕಾಶಗಳ ನಡುವಿನ ಅಂತರವು ಕಳವಳಕಾರಿಯಾಗಿದೆ ಎಂದು ಜೋಶಿ ಬೆಟ್ಟು ಮಾಡಿದರು. ಸ್ನಾತಕೋತ್ತರ ಮತ್ತು ಪಿಎಚ್ಡಿ ಪದವೀಧರರು ಪುರಸಭೆಯ ಕಚೇರಿಗಳಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡುವುದನ್ನು ಮತ್ತು ಬಿ.ಎಡ್ ಪದವೀಧರರು ನೈರ್ಮಲ್ಯ ಕಾರ್ಮಿಕರಾಗಿ ಕೆಲಸ ಮಾಡುವುದನ್ನು ನೋಡಿದಾಗ ನನಗೆ ತುಂಬಾ ನೋವಾಯಿತು ಎಂದು ಅವರು ಸ್ಮರಿಸಿದರು. ಹೊಸ ಕಾಲೇಜುಗಳನ್ನು ಸ್ಥಾಪಿಸುವುದನ್ನು ಹೊರತುಪಡಿಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉದ್ಯೋಗಗಳನ್ನು ಒದಗಿಸಲು ಸರ್ಕಾರದ ವಿಫಲತೆಯನ್ನು ಅವರು ಟೀಕಿಸಿದರು.
ಶಿಕ್ಷಣದಲ್ಲಿನ ಅಸಮಾನತೆಯನ್ನು ತೊಡೆದುಹಾಕಲು ಏಕರೂಪದ ಸಮುದಾಯಿಕ ಶಾಲೆ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಮುರಳಿ ಮನೋಹರ್ ಜೋಶಿ ಸಲಹೆ ನೀಡಿದರು. ಅಗತ್ಯವಿದ್ದರೆ ಇದಕ್ಕಾಗಿ ಸಂವಿಧಾನ ತಿದ್ದುಪಡಿ ತರಬೇಕು. ಅಧಿಕಾರಿಗಳ ಮಕ್ಕಳು, ಶ್ರೀಮಂತರು ಅಥವಾ ಬಡವರು ಎಂಬ ಭೇದವಿಲ್ಲದೆ ಪ್ರತಿಯೊಬ್ಬರೂ ಒಂದೇ ಮಟ್ಟದಲ್ಲಿ ಒಂದೇ ಶಾಲೆಗಳಲ್ಲಿ ಕಲಿಯಬೇಕು ಎಂದು ಅವರು ಒತ್ತಾಯಿಸಿದರು. ಹಿಂದಿನ ರಾಜೀವ್ ಗಾಂಧಿ ಯುಗದಲ್ಲಿ ತಯಾರಿಸಿದ ನೀತಿಯಾಗಿದೆ ಎಂಬ ಒಂದೇ ಕಾರಣಕ್ಕಾಗಿ ಶಿಕ್ಷಣ ನೀತಿಗಳಲ್ಲಿ ಅನಗತ್ಯ ಬದಲಾವಣೆಗಳನ್ನು ಮಾಡುವ ಅಗತ್ಯವಿಲ್ಲ ಎಂದೂ ಅವರು ಹೇಳಿದರು ಎಂದು ವರದಿಯಾಗಿದೆ.












