ಸನ್ಮಾರ್ಗ ವಾರ್ತೆ
ಮುಂಬೈ: ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವತ್ ಅವರು ಇರಾನ್ ಅಧ್ಯಕ್ಷ ಮಸೂದ್ ಪೆಷೆಶ್ಕಿಯಾನ್ ಅವರ ಭಾರತ ಭೇಟಿಯನ್ನು ಶ್ಲಾಘಿಸಿದ್ದಾರೆ. ಬ್ರಿಕ್ಸ್ ಶೃಂಗಸಭೆಗಾಗಿ ಅವರು ದೆಹಲಿಗೆ ಆಗಮಿಸಿರುವ ಹಿನ್ನೆಲೆಯಲ್ಲಿ ರಾವತ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಚೀನಾದ ಸೈನ್ಯವು ಲಡಾಖ್ ಮತ್ತು ಗಲ್ವಾನ್ಗೆ ಪ್ರವೇಶಿಸಲು ಕಾರಣವೇನು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿಯವರು ಕ್ಸಿ ಜಿನ್ಪಿಂಗ್ ಅವರನ್ನು ಕೇಳಬೇಕು ಮತ್ತು ಭಾರತೀಯ ಭೂಪ್ರದೇಶದಿಂದ ಅವರನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಬೇಕು ಎಂದು ಅವರು ಹೇಳಿದರು.
ಭಾರತ ಮತ್ತು ಚೀನಾ ನಡುವೆ ಹಲವಾರು ಸುತ್ತಿನ ಮಾತುಕತೆಗಳು ನಡೆದಿದ್ದರೂ ಕಳೆದ ಎರಡು ವರ್ಷಗಳಲ್ಲಿ ಸಾಧಿಸಿದ್ದೇನು ಎಂದು ರಾವತ್ ಪ್ರಶ್ನಿಸಿದರು. ಲಡಾಖ್ ಮತ್ತು ಗಲ್ವಾನ್ ಭಾರತದ ಭೂಪ್ರದೇಶ ಎಂದು ಅವರು ಸ್ಪಷ್ಟಪಡಿಸಿದರು.
ಇದೇ ವೇಳೆ, ಪೆಷೆಶ್ಕಿಯಾನ್ ದೆಹಲಿಗೆ ಆಗಮಿಸಿದ ರೀತಿಯನ್ನು ರಾವತ್ ಕೊಂಡಾಡಿದರು. “ಪೆಷೆಶ್ಕಿಯಾನ್ ಸಿಂಹದಂತೆ ದೆಹಲಿಗೆ ಆಗಮಿಸಿದರು. ಇಸ್ರೇಲ್ ಮತ್ತು ಅಮೆರಿಕದ ವಿರುದ್ಧ ಇರಾನ್ ತನ್ನ ಶಕ್ತಿ, ಧೈರ್ಯ ಮತ್ತು ಆತ್ಮಗೌರವವನ್ನು ತೋರಿಸಿದೆ. ಇರಾನ್ ಅಧ್ಯಕ್ಷರನ್ನು ನಾನು ಸಿಂಹದಂತೆ ಕಾಣುತ್ತೇನೆ” ಎಂದು ರಾವತ್ ಹೇಳಿದರು.
“ಉಳಿದವರೆಲ್ಲರೂ ವ್ಯಾಪಾರಿಗಳು. ಚೀನಾ ಒಬ್ಬ ವ್ಯಾಪಾರಿ, ಅಮೆರಿಕ ಕೂಡ ಒಬ್ಬ ವ್ಯಾಪಾರಿಯೇ” ಎಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾವತ್ ತಿಳಿಸಿರುವುದಾಗಿ ವರದಿಯಾಗಿದೆ.












