ಪಶ್ಚಿಮ ಬಂಗಾಳ | ಅಸ್ಸಲಾಮು ಅಲೈಕುಮ್‌, ಇನ್ಶಾ ಅಲ್ಲಾಹ್‌, ಜಝಾಕಲ್ಲಾಹ್‌ ಹೇಳಿದ್ದಕ್ಕೆ ಮುಸ್ಲಿಂ ಐಪಿಎಸ್ ಅಧಿಕಾರಿಯನ್ನು ವರ್ಗಾವಣೆ ಮಾಡಿದ ಸರ್ಕಾರ

0
330

ಸನ್ಮಾರ್ಗ ವಾರ್ತೆ

ಅಂತರ್ಜಾಲದಲ್ಲಿ ಪ್ರಕಟವಾದ ವೀಡಿಯೊಂದರಲ್ಲಿ ಇಸ್ಲಾಮಿಕ್ ಶುಭಕೋರಿಕೆಗಳನ್ನು ಬಳಸಿದ್ದಕ್ಕಾಗಿ ಹಿಂದುತ್ವ ಸಂಘಟನೆಗಳ ಟೀಕೆಗೊಳಗಾದ ಎರಡು ದಿನಗಳ ನಂತರ, ಇಂಡಿಯನ್ ಪೊಲೀಸ್ ಸರ್ವೀಸ್ (ಐಪಿಎಸ್) ಅಧಿಕಾರಿ ಬುಷ್ರಾ ಬಾನೊ ಅವರನ್ನು ಪಶ್ಚಿಮ ಬಂಗಾಳ ಸರ್ಕಾರ ಸೋಮವಾರ ವರ್ಗಾವಣೆ ಮಾಡಿದೆ ಎಂದು ‘ದಿ ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ಭಾನುವಾರ ಪೋಸ್ಟ್ ಮಾಡಲಾದ ವೀಡಿಯೊದಲ್ಲಿ, ಉತ್ತರ ಪ್ರದೇಶದ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ರೆಸಿಡೆನ್ಸಿಯಲ್ ಕೋಚಿಂಗ್ ಅಕಾಡೆಮಿಯು ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (ಯುಪಿಎಸ್‌ಸಿ) ಪರೀಕ್ಷೆಗೆ ತಯಾರಿ ನಡೆಸಲು ತನಗೆ ಹೇಗೆ ಸಹಾಯ ಮಾಡಿತು ಎಂಬುದರ ಕುರಿತು ಬಾನೊ ಮಾತನಾಡಿದ್ದರು.

‘ದಿ ಜೈಪುರ ಡೈಲಾಗ್ಸ್’ ಮತ್ತು ‘ಹಿಂದೂ ಲೀಗಲ್ ಫಂಡ್’ ಸೇರಿದಂತೆ ಕೆಲವು ಸಾಮಾಜಿಕ ಜಾಲತಾಣ ಖಾತೆಗಳು, ಮುಸ್ಲಿಂ ಐಪಿಎಸ್ ಅಧಿಕಾರಿಯು “ಅಸ್ಸಲಾಮು ಅಲೈಕುಮ್” (ನಿಮ್ಮ ಮೇಲೆ ಶಾಂತಿ ಇರಲಿ), “ಇನ್ಶಾ ಅಲ್ಲಾ” (ದೇವನ ಇಚ್ಛೆ) ಮತ್ತು “ಜಝಾಕಲ್ಲಾಹ್” (ದೇವನು ನಿಮಗೆ ಪ್ರತಿಫಲ ನೀಡಲಿ) ಎಂಬರ್ಥದ ಪದಗಳನ್ನು ಬಳಸಿದ್ದಕ್ಕಾಗಿ ಟೀಕಿಸಿದ್ದವು.

ಅವರು “ವಂದೇ ಮಾತರಂ” ಅಥವಾ “ಜೈ ಹಿಂದ್” ಎಂದು ಹೇಳಿಲ್ಲ ಎಂದು ಆ ಸಂಘಟನೆಗಳು ದೂರಿದ್ದವು.

“ಭಾರತೀಯ ಸರ್ಕಾರವನ್ನು ಪ್ರತಿನಿಧಿಸುವ ಸೇವೆ ಸಲ್ಲಿಸುತ್ತಿರುವ ಅಧಿಕಾರಿಯು ತಟಸ್ಥತೆಯನ್ನು ಕಾಯ್ದುಕೊಳ್ಳಬೇಕು ಮತ್ತು ಸಾರ್ವಜನಿಕವಾಗಿ ಮಾತನಾಡುವಾಗ ರಾಷ್ಟ್ರೀಯ ಅಭಿವ್ಯಕ್ತಿಗಳನ್ನು ಬಳಸಬೇಕು” ಎಂದು ‘ಹಿಂದೂ ಲೀಗಲ್ ಫಂಡ್’ ಹೇಳಿತ್ತು.

ಪಶ್ಚಿಮ ಬಂಗಾಳದ ಗೃಹ ಕಾರ್ಯಗಳಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ ಎಂದು ಆ ಗುಂಪು ತಿಳಿಸಿತ್ತು.

2021ರ ಬ್ಯಾಚ್‌ನ ಅಧಿಕಾರಿಯಾಗಿರುವ ಬಾನೊ, ಪಶ್ಚಿಮ ಮೇದಿನಿಪುರ ಜಿಲ್ಲೆಯ ಖರಗ್‌ಪುರದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು. ಸೋಮವಾರ ಬಾನೊ ಅವರನ್ನು ರಾಜ್ಯ ಸಶಸ್ತ್ರ ಪೊಲೀಸರ 4ನೇ ಬೆಟಾಲಿಯನ್‌ನ ಉಪ ಕಮಾಂಡಿಂಗ್ ಅಧಿಕಾರಿಯಾಗಿ ನೇಮಿಸಲಾಯಿತು.

ಅದೇ ಆದೇಶದ ಭಾಗವಾಗಿ ಇಲಾಖೆಯ ಇಬ್ಬರು ಇತರ ಅಧಿಕಾರಿಗಳನ್ನು ಸಹ ವರ್ಗಾವಣೆ ಮಾಡಲಾಗಿದೆ. ಸರ್ಕಾರದ ಈ ನಿರ್ಧಾರವನ್ನು ವಿರೋಧ ಪಕ್ಷಗಳು ಟೀಕಿಸಿವೆ.

ದೆಹಲಿಯಲ್ಲಿ ನಡೆದ ಬ್ರಿಕ್ಸ್‌ (BRICS) ಶೃಂಗಸಭೆಯಲ್ಲಿ ಭಾರತೀಯ ಜನತಾ ಪಾರ್ಟಿ ಸರ್ಕಾರವು ‘ಪ್ರಾರ್ಥನಾ ಕೋಣೆ’ಯನ್ನು ಸೃಷ್ಟಿಸುವ ಮೂಲಕ “ಜಾತ್ಯತೀತತೆಯ ಅರ್ಹತೆಗಳನ್ನು ಪ್ರದರ್ಶಿಸುತ್ತಿದ್ದರೆ”, ರಾಜ್ಯ ಮಟ್ಟದಲ್ಲಿ ಮತ್ತೊಂದು ಸರ್ಕಾರವು “ಮುಸ್ಲಿಂ ಮಹಿಳಾ ಐಪಿಎಸ್ ಅಧಿಕಾರಿಯನ್ನು… ಕೇವಲ ‘ಅಸ್ಸಲಾಮು ಅಲೈಕುಮ್’ ಮತ್ತು ‘ಜಝಾಕಲ್ಲಾಹ್’ ಎಂದಿದ್ದಕ್ಕಾಗಿ ಬದಿಗಿರಿಸಿದೆ” ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಹೇಳಿದ್ದಾರೆ.

ರಾಜ್ಯ ಸರ್ಕಾರವು “ಗೋದಿ ಮೀಡಿಯಾ” ಹರಡುತ್ತಿರುವ ದ್ವೇಷವನ್ನು ಮತ್ತಷ್ಟು ಮುಂದೆ ಕೊಂಡೊಯ್ಯುತ್ತಿದೆ ಎಂದು ಮೊಯಿತ್ರಾ ತಿಳಿಸಿದ್ದಾರೆ.