‘ಚುನಾವಣೆಗಳು ನ್ಯಾಯಸಮ್ಮತವಾಗಿದ್ದರೆ, 2027 ರಲ್ಲಿ ಬಿಜೆಪಿ 50 ಸ್ಥಾನಗಳನ್ನು ಸಹ ಗೆಲ್ಲುವುದಿಲ್ಲ’: ರಾಮ್ ಗೋಪಾಲ್ ಯಾದವ್

0
156

ಸನ್ಮಾರ್ಗ ವಾರ್ತೆ

ಇಟಾವಾ: 2027 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳು ನಿಷ್ಪಕ್ಷಪಾತವಾಗಿ ನಡೆದರೆ, ಆಡಳಿತರೂಢ ಬಿಜೆಪಿಗೆ 50 ಸ್ಥಾನಗಳು ಸಹ ಸಿಗುವುದಿಲ್ಲ ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಹೇಳಿದ್ದಾರೆ. ರಾಜ್ಯದಲ್ಲಿ ಸಮಾಜವಾದಿ ಪಕ್ಷವನ್ನು ಅಧಿಕಾರಕ್ಕೆ ತರಲು ಮತದಾರರು ಈಗಾಗಲೇ ನಿರ್ಧರಿಸಿದ್ದಾರೆ ಎಂದು ಅವರು ಹೇಳಿದರು.

“ಚುನಾವಣೆಗಳು ನ್ಯಾಯಸಮ್ಮತವಾಗಿದ್ದರೆ, 2027 ರಲ್ಲಿ ಬಿಜೆಪಿಗೆ 50 ಸ್ಥಾನಗಳು ಸಹ ಸಿಗುವುದಿಲ್ಲ. ಮುಂಬರುವ ಚುನಾವಣೆಯನ್ನು ಜನರು ತಮ್ಮ ಕೈಗೆ ತೆಗೆದುಕೊಂಡಿದ್ದಾರೆ ಮತ್ತು ಸಮಾಜವಾದಿ ಪಕ್ಷವನ್ನು ಅಧಿಕಾರಕ್ಕೆ ತರಲು ನಿರ್ಧರಿಸಿದ್ದಾರೆ” ಎಂದು ಯಾದವ್ ಇಟಾವಾದಲ್ಲಿ ಮಾಧ್ಯಮಗಳಿಗೆ ತಿಳಿಸಿದರು.

“ಹಿಂದಿನ ಚುನಾವಣೆಗಳಲ್ಲಿ ಸ್ಪಷ್ಟ ರಿಗ್ಗಿಂಗ್ (ಅಕ್ರಮ) ನಡೆದಿದೆ, ಅದಕ್ಕಾಗಿಯೇ ಜನರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಚುನಾವಣಾ ಆಯೋಗಕ್ಕೆ ಇದನ್ನು ಖಚಿತಪಡಿಸಿಕೊಳ್ಳುವ ಧೈರ್ಯವಿದೆಯೇ ಎಂಬ ಸಂದೇಹ ನಮಗಿದೆ. ಚುನಾವಣಾ ಆಯೋಗವು ನಿಷ್ಪಕ್ಷಪಾತವಾಗಿದ್ದರೆ ಮಾತ್ರ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ಸಾಧ್ಯ” ಎಂದು ಯಾದವ್ ಎತ್ತಿ ತೋರಿಸಿದರು.

ಬಿಜೆಪಿಯ ಸಾರ್ವಜನಿಕ ಸಭೆಗಳನ್ನೂ ಯಾದವ್ ಟೀಕಿಸಿದರು. ಪಕ್ಷದ ರಾಲಿಯಲ್ಲಿ ಪಾಲ್ಗೊಳ್ಳುವವರು ಸಾಮಾನ್ಯ ಜನರಲ್ಲ, ಬದಲಿಗೆ ಹಣ ನೀಡಿ ಕರೆತರಲಾಗುವ ಅಂಗನವಾಡಿ ಕಾರ್ಯಕರ್ತರು, ಸರ್ಕಾರಿ ಶಿಕ್ಷಕರು ಮತ್ತು ಆಶಾ ಕಾರ್ಯಕರ್ತರು ಎಂದು ಅವರು ಆರೋಪಿಸಿದರು. ಜನರ ಪರವಾಗಿ ಯಾವುದೇ ಕಾನೂನುಗಳನ್ನು ಮಾಡದೆ, ಜನರ ಕಿಸೆಯನ್ನು ಲೂಟಿ ಮಾಡಲು ಸರ್ಕಾರ ಎಲ್ಲ ಕಾನೂನುಗಳನ್ನು ಮಾಡುತ್ತಿದೆ ಎಂದು ಆರೋಪಿಸಿದರು.

ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಂತೆಯೇ ರಾಜಕೀಯ ಪಕ್ಷಗಳು ಈಗಾಗಲೇ ಸಿದ್ಧತೆಗಳನ್ನು ಪ್ರಾರಂಭಿಸಿವೆ. ಯುಪಿಯಲ್ಲಿ ಬಿಜೆಪಿ ತನ್ನ ಸಾಂಸ್ಥಿಕ ಚಟುವಟಿಕೆಗಳನ್ನು ತೀವ್ರಗೊಳಿಸಿದೆ. ಸಮಾಜವಾದಿ ಪಕ್ಷವೂ ಚುನಾವಣೆಗೆ ಸಿದ್ಧತೆಗಳನ್ನು ತೀವ್ರಗೊಳಿಸಿದೆ.

ಯುಪಿಯ 10 ರಾಜ್ಯಸಭಾ ಸ್ಥಾನಗಳಿಗೆ ಮತ್ತು ಉತ್ತರಾಖಂಡದ ಒಂದು ಸ್ಥಾನಕ್ಕೆ ಅಕ್ಟೋಬರ್ 16 ರಂದು ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ. ಮತದಾನ ನಡೆದ ಅಂದೇ ಮತ ಎಣಿಕೆಯೂ ನಡೆಯಲಿದೆ.