ಮದ್ಯದಂಗಡಿ ಆರಂಭಿಸುವಂತೆ ಒತ್ತಾಯಿಸಿ ನಾಗರಿಕರಿಂದ ಪ್ರತಿಭಟನೆ: ಮಹಿಳೆಯರೂ ಭಾಗಿ

0
854

ಬಳ್ಳಾರಿ: ಗಣಿ ಹಗರಣಕ್ಕೆ ತುತ್ತಾಗಿ ದೇಶದ ಗಮನಸೆಳೆದ ಬಳ್ಳಾರಿಯಲ್ಲಿ ಹುಬ್ಬೇರುವ ಪ್ರತಿಭಟನೆಯೊಂದು ನಡೆದಿದೆ. ಮದ್ಯದಂಗಡಿ ತೆರೆದು ಮದ್ಯಪಾನ ಪ್ರಿಯರ ಬಯಕೆಯನ್ನು ನೆರವೇರಿಸಬೇಕೆಂದು ಸಾರ್ವಜನಿಕರು ಪಂಚಾಯ್ತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಇವರಲ್ಲಿ ಪುರುಷರ ಜೊತೆ ಮಹಿಳೆಯರೂ ಇದ್ದಾರೆ ಅನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಇಲ್ಲಿನ ಹೂವಿನಹಡಗಲಿ ತಾಲೂಕಿನ ಸೋವೇನಹಳ್ಳಿ ಗ್ರಾಮ ಪಂಚಾಯಿತಿ ಕಛೇರಿಯ ಮುಂಭಾಗದಲ್ಲಿ ಈ ಪ್ರತಿಭಟನೆ ನಡೆದಿದೆ. ಮದ್ಯದಂಗಡಿ ತೆರೆಯುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಗ್ರಾಮದಲ್ಲಿ ಹಿಂದೆ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿತ್ತು ಎನ್ನಲಾಗಿದ್ದು, ಈ ಕಾರಣದಿಂದಾಗಿ ಈ ಅಕ್ರಮವನ್ನು ನಿಲ್ಲಿಸುವುದಕ್ಕಾಗಿ ಗ್ರಾಮಕ್ಕೆ ಒಂದು ವೈನ್ ಶಾಪ್ ಮಂಜೂರಾಗಿತ್ತು. ಅಲ್ಲದೆ, ಇದರ ಆರಂಭಕ್ಕೆ ಎಲ್ಲಾ ಸಿದ್ಧತೆಗಳು ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಸೋವೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಿಕರು ಗ್ರಾಮದಲ್ಲಿ ಮದ್ಯದ ಅಂಗಡಿ ತೆರೆಯುವುದಕ್ಕೆ ವಿರೋಧ ವ್ಯಕ್ತಪಡಿಸಿದರಿಂದಾಗಿ ಈ ಪ್ರಕ್ರಿಯೆಗೆ ತಡೆ ಉಂಟಾಗಿತ್ತು. ಇದು ಮದ್ಯಪ್ರೇಮಿಗಳಲ್ಲಿ ಸಿಟ್ಟಿಗೆ ಕಾರಣವಾಗಿದ್ದು, ಹೀಗಾಗಿ ಇಂದು ಗ್ರಾಮ ಪಂಚಾಯತಿ ಮುಂದೆ ಅವರು ಪ್ರತಿಭಟನೆ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ.