ಪಾಕಿಸ್ತಾನದಲ್ಲಿ 40,000 ಭಯೋತ್ಪಾದಕರು- ಇಮ್ರಾನ್ ಖಾನ್

0
451

ವಾಷಿಂಗ್ಟನ್, ಜು. 25: ಪಾಕಿಸ್ತಾನದಲ್ಲಿ 30,000ದಿಂದ 40,000 ಭಯೋತ್ಪಾದಕರು ಈಗಲೂ ಇದ್ದಾರೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದರು. ತರಬೇತಿ ಪಡೆದ ಇಂತಹ ಸಂಘಟನೆಗಳು ಅಫ್ಘಾನಿಸ್ಥಾನ, ಕಾಶ್ಮೀರದಲ್ಲಿ ಭಯೋತ್ಪಾದನೆ ನಡೆಸುತ್ತಿದೆ ಎಂದು ಇಮ್ರಾನ್ ಖಾನ್ ಹೇಳಿದರು. ಭಾರತದಲ್ಲಿ ನಡೆಯುವ ಭಯೋತ್ಪಾದನಾ ದಾಳಿಯ ಹಿಂದೆ ಪಾಕಿಸ್ತಾನ ಕೇಂದ್ರವಾಗಿಟ್ಟು ಕಾರ್ಯಾಚರಿಸುವ ಭಯೋತ್ಪಾದನಾ ಸಂಘಟನೆಗಳ ಕೈವಾಡ ಇದೆ ಎನ್ನುವ ವಾದವನ್ನು ಇಮ್ರಾನ್ ಖಾನ್ ರ ಹೇಳಿಕೆ ಬಲಪಡಿಸುತ್ತಿದೆ.

ಹದಿನೈದು ವರ್ಷಗಳಿಂದ ಸರಕಾರಗಳು ಭಯೋತ್ಪಾದನಾ ಸಂಘಟನೆಗಳನ್ನು ನಿಯಂತ್ರಿಸಲು ಹೋಗಿಲ್ಲ. ಭಯೋತ್ಪಾದನಾ ಸಂಘಟನೆಗಳ ಕುರಿತು ಅಮೆರಿಕದೊಂದಿಗೆ ಪಾಕಿಸ್ತಾನ ಸತ್ಯವನ್ನೂ ಹೇಳಿಲ್ಲ ಎಂದು ಅವರು ಹೇಳಿದರು. ಕ್ಯಾಪಿಟಲ್ ಹಿಲ್‍ನಲ್ಲಿ ಅಮೆರಿಕ ಕಾಂಗ್ರೆಸ್ ಆತಿಥ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ವಿವರವನ್ನು ಇಮ್ರಾನ್ ಖಾನ್ ನೀಡಿದರು. ಅಮೆರಿಕ ಮತ್ತು ಪಾಕಿಸ್ತಾನ ಭಯೋತ್ಪಾದನೆಯ ವಿರುದ್ಧ ಜತೆಗೂಡಿ ಹೋರಾಡುತ್ತಿದೆ. ಸೆಪ್ಟಂಬರ್ ಹನ್ನೊಂದರ ವರ್ಲ್ಡ್ ಟ್ರೇಡ್ ಸೆಪ್ಟಂಬರ್ ದಾಳಿಯಲ್ಲಿ ಪಾಕಿಸ್ತಾನದ ಯಾವುದೇ ಕೈವಾಡವಿಲ್ಲ. ಅಲ್‍ಖಾಯಿದದ ಬೇರುಗಳು ಅಫ್ಘಾನಿಸ್ತಾನದಲ್ಲಿವೆ. ಪಾಕಿಸ್ತಾನದಲ್ಲಿ ತಾಲೀಬಾನ್ ಭಯೋತ್ಪಾದಕರೂ ಇಲ್ಲ. ಆದರೂ ಭಯೋತ್ಪಾದನೆಯ ವಿರುದ್ಧ ಯುದ್ಧದಲ್ಲಿ ನಾವು ಅಮೆರಿಕದೊಂದಿಗೆ ಸಹಕರಿಸುತ್ತೇವೆ ಎಂದು ಇಮ್ರಾನ್ ಹೇಳಿದರು. ಇದೇವೇಳೆ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರನ್ನು ಭೇಟಿಯಾಗಲು ಸಾಧ್ಯವಾಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.