ಯೋಗಿ ಸರಕಾರಕ್ಕೆ ಮಸೀದಿ ಉರುಳಿಸುವ ತರಾತುರಿ!

0
199

✍️ ಅರಫಾ ಮಂಚಿ

ಮಸೀದಿಗಳ ಮೇಲೆ ದ್ವೇಷ:

ಅಕ್ಟೋಬರ್ 8 ರಂದು ಬೆಳಿಗ್ಗೆ 5 ಗಂಟೆ ಹೊತ್ತಿಗೆ ಉತ್ತರಪ್ರದೇಶದ ಸಹರಾನ್‌ಪುರ ಕಲೆಕ್ಟರೇಟ್ ಆವರಣದಲ್ಲಿದ್ದ ಮಸೀದಿಯನ್ನು ಕೆಡವಿ ಹಾಕಲಾಗಿದೆ. ಸುಮಾರು ನೂರು ವರ್ಷ ಇತಿಹಾಸ ಇದ್ದ ಮಸೀದಿ ನೆಲಸಮಗೊಂಡಿದೆ.

ಸೆಪ್ಟೆಂಬರ್ 4 ರಂದು ಕೆಳ ನ್ಯಾಯಾಲಯ ಆದೇಶ ನೀಡಿದ ಮಾರನೇ ದಿನವೇ ಜಿಲ್ಲಾಡಳಿತ ಅತಿಬೆಳಿಗ್ಗೆ ಮಸೀದಿಯನ್ನು ಕೆಡವಿದೆ. ಸಹರಾನ್‌ಪುರದ ಮಸೀದಿ ಕಮಿಟಿ ತಮಗೆ ಮೇಲ್ಮನವಿಗೂ ಅವಕಾಶ ನೀಡಿಲ್ಲ ಎಂದು ಹೇಳುತ್ತಿದೆ. ಇದು ಖಂಡಿತ ಯೋಗಿ ಸರಕಾರದ ಮುಸ್ಲಿಂ ದೌರ್ಜನ್ಯಗಳ ಪಟ್ಟಿಗೆ ಹೊಸ ಸೇರ್ಪಡೆ. ಮಸೀದಿ ಬುಲ್ಡೋಝಿಂಗ್‌ ಮಾಡಲು ಜಿಲ್ಲಾಮ್ಯಾಜಿಸ್ಟ್ರೇಟ್ ಸ್ಪಷ್ಟ ಆದೇಶ ನೀಡಿರಲಿಲ್ಲ ಎಂಬುದು ಕೂಡ ಯುಪಿಯಾದ್ಯಂತ ಚರ್ಚೆಯಾಗುತ್ತಿದೆ. ಆದರೆ ಬಿಜೆಪಿ ಅಧಿಕಾರದಲ್ಲಿ ಇರುವ ಕಡೆ ಮುಸ್ಲಿಮರದ್ದಾಗಿದ್ದರೆ ಸಾಲುತ್ತದೆ. ಆದೇಶ ಮತ್ತು ಅದರ ಸ್ಪಷ್ಟತೆ – ಅಸ್ಪಷ್ಟತೆಗಳೆನು ಎಂಬ ಕಾನೂನು ಆಯಾಮ ಮುಖ್ಯವೇ ಆಗುವುದಿಲ್ಲ. ಅಧಿಕಾರಿಗಳು ಬೇಟೆಗಾರರಂತೆ ಕಾದು ಕುಳಿತಿರುತ್ತಾರೆ. ಇದು ಮುಖ್ಯವಾಗಿ ಯೋಗಿ ಸರಕಾರ ಇರುವ ಉತ್ತರಪ್ರದೇಶದ ಇಂದಿನ ಪರಿಸ್ಥಿತಿ. ಯೋಗಿ ಸರಕಾರ ಮಸೀದಿ ಒಡೆದದ್ದು ಇದೇ ಮೊದಲಲ್ಲ. ಅದೆಷ್ಟು ಆಗಿದೆ? ಮುಂಬರಲಿರುವ ವಿಧಾನಸಭಾ ಚುನಾವಣೆಗೆ ಹಿಂದೂ ವೋಟ್ ಸೆಟ್ ಮಾಡಲು ಮುಸ್ಲಿಮರ ಮೇಲೆ ಕ್ರೌರ್ಯ ಎಸಗಲಾಗುತ್ತಿದೆ. ಬಹುತೇಕ ಮುಂದಿನ ವರ್ಷ (2027) ಫೆಬ್ರವರಿ – ಮಾರ್ಚ್ ತಿಂಗಳಲ್ಲಿ ಯುಪಿ ವಿಧಾನಸಭೆಗೆ ಚುನಾವಣೆ ನಡೆಯುತ್ತದೆ. ಇಲೆಕ್ಷನ್ ಗೆಲ್ಲುವುದಕ್ಕೆ ಅಜೆಂಡಾ ಸೆಟ್ ಮಾಡುವುದರ ಜೊತೆಗೆ ಯೋಗಿ ಮುಸ್ಲಿಮರು ಮತ್ತು ಅವರ ಧಾರ್ಮಿಕ ಕಟ್ಟಡಗಳ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ. ಮುಸ್ಲಿಮರ ಪ್ರಾಚೀನ ಇತಿಹಾಸವನ್ನೇ ಅಳಿಸಿಹಾಕಲು ಪಣತೊಟ್ಟಂತೆ ಯೋಗಿ ಸರಕಾರ ಯಂತ್ರೋಪಾಧಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಆ ಮೂಲಕ ಮುಸ್ಲಿಮರ ಮೇಲಿನ ದ್ವೇಷದ ಸ್ಪಷ್ಟ ರೂಪವನ್ನು ಜಗತ್ತಿಗೆ ಕಟ್ಟಿ ಕೊಡುತ್ತಿದೆ.

ಮಸೀದಿ ಉಳಿಸಿಕೊಳ್ಳಲು ಹೋರಾಟ

ನೋಟೀಸು ನೀಡಿದ ಜಿಲ್ಲಾಡಳಿತವನ್ನು ಪ್ರತಿವಾದಿಯನ್ನಾಗಿಸಿ ಸಹರಾನ್‌ಪುರದ ಮಸೀದಿ ಕಮಿಟಿ ಕೆಳ ಕೋರ್ಟಿನ ಮೊರೆ ಹೋಗಿತ್ತು. ಆದರೂ, ಮಸೀದಿ ಉಳಿಸಿಕೊಳ್ಳಲು ಸಾಧ್ಯವಾಗಿಲಿಲ್ಲ. ಈ ಸಹರಾನ್‌ಪುರ ಮಸೀದಿ ಮಾತ್ರ ಅಲ್ಲ. ಯುಪಿಯಲ್ಲಿ ಬಿಜೆಪಿ ಆಡಳಿತವು ಇಷ್ಟರಲ್ಲೇ ಸಾಲು ಸಾಲು ಮಸೀದಿಗಳನ್ನು ಕೆಡವಿದೆ. ಅನಧಿಕೃತ ಸರಕಾರಿ ಭೂಮಿಯಲ್ಲಿದೆ ಕಟ್ಟಲಾಗಿದೆ ಎಂದು ಆರೋಪಿಸಿ ಇದೇ ವರ್ಷ ಜೂನ್ 6ಕ್ಕೆ ಸಂಭಾಲ್‌ನ ಮುಸ್ತಫಾ ಖಾದ್ರಿ ಮಸೀದಿಯನ್ನು ಕೆಡವಲಾಗಿದೆ. 

ಸಹರಾನ್‌ಪುರ ಮಸೀದಿಯು ಕಲೆಕ್ಟರೇಟ್ ಆವರಣದಲ್ಲಿದೆ ಎಂಬುದು ಈಗೀನ ವಿವಾದ. ಆದರೆ ಆವರಣದೊಳಗೆ ಮೊದಲಿತ್ತಾ ನಂತರ ಬಂತಾ ಎಂಬ ವಿಚಾರವನ್ನೂ ಮಾನ್ಯ ಮಾಡಲಾಗಿಲ್ಲ. ಕೋರ್ಟು ಒಂದು ಆದೇಶ ಹೊರಡಿಸುತ್ತದೆ. ಕೂಡಲೇ ಮಸೀದಿಯನ್ನು ಕೆಡವಲಾಗುತ್ತದೆ. ಮೊರದಾಬಾದ್‌ನ ಐತಿಹಾಸಿಕ ಮಸೀದಿಯೊಂದರ ಮೇಲೆಯೂ ಯೋಗಿ ಸರಕಾರದ ತೂಗು ಕತ್ತಿ ಎಂದು ವರದಿಯಾಗಿದೆ. ಕಾನೂನು ಗುದ್ದಾಟದಲ್ಲಿರುವ ಮಥುರಾದ ಈದ್ಗಾ ಮಸೀದಿಯ ಕತೆಯೂ ಅಷ್ಟೇ. ಈ ಸರಕಾರ ಯಾವಾಗ ಬೇಕಿದ್ದರೂ ಡೆಮಾಲಿಶ್‌ ಮಾಡಬಹುದು. ಸಹರಾನ್‌ಪುರ ಸೇರಿದಂತೆ ಮಸೀದಿಗಳು ಮತ್ತು ಮುಸ್ಲಿಮರ ವಿಷಯಗಳಲ್ಲಿ ಕೋರ್ಟು, ಬ್ಯೂರಕ್ರಸಿ ಮತ್ತು ಶಾಸಕಾಂಗ ಎಲ್ಲವೂ ಮುಸಲ್ಮಾನರ ವಿರುದ್ಧ ತಿರುಗಿ ನಿಂತಿದೆ. ಮುಸ್ಲಿಂ ಸಮುದಾಯದ ಅಸ್ತಿತ್ವವನ್ನೇ ಕೆಡಹುವತ್ತ ಅವುಗಳ ಪರಸ್ಪರ ಪೂರಕ ಪ್ರಕ್ರಿಯೆಗಳಾಗಿ ವರ್ತಿಸುವುದು ರಹಸ್ಯವಾಗೇನೂ ಇಲ್ಲ.

ಒಂದು ವರ್ಷದ ಅವಧಿಯಲ್ಲಿ ಮಸೀದಿ, ಮಝಾರ್, ಮದ್ರಸಾ ಮುಂತಾದ 500ಕ್ಕೂ ಹೆಚ್ಚು ಇಸ್ಲಾಮಿಕ್‌ ಸಂರಚನೆಗಳನ್ನು ಕೆಡವಲಾಗಿದೆ ಎಂದು ಹ್ಯೂಮನ್ ರೈಟ್ಸ್ ವಾಚ್‌ಡಾಗ್ ವರದಿ ಹೇಳಿದೆ. ಉತ್ತರಪ್ರದೇಶದಲ್ಲಿ ವಾರಣಾಸಿ, ಸಂಭಾಲ್, ಗಾಝಿಯಾಬಾದ್, ಬಾರಾಬಂಕಿ, ಈಗ ಸಹರಾನ್‌ಪುರ. ಇನ್ನು ಮೊರದಾಬಾದ್‌ನ ಮಸೀದಿ ಮೇಲೆ ಬುಲ್ಡೋಝರ್ ಪಂಜ ಕಾಯುತ್ತಿದೆ ಎಂದು ವರದಿಯಾಗಿದೆ. 1992ರಲ್ಲಿ ಕರಸೇವಕರಿಂದ ಬಾಬರಿ ಮಸೀದಿ  ಕೆಡವಲ್ಪಟ್ಟಿತು. 2014ರಲ್ಲಿ ಸಂಘಪರಿವಾರ ಅಧಿಕಾರಕ್ಕೆ ಬಂದು ಬ್ಯೂರೊಕ್ರಸಿ ಮೂಲಕ ಅನಧಿಕೃತತೆ, ಅಕ್ರಮ ನಿರ್ಮಾಣ ಇತ್ಯಾದಿ ಮುದ್ರೆಯೊತ್ತಿ ಮಸೀದಿಗಳನ್ನು ಕೆಡುವುತ್ತಾ ಇದೆ. ಒಟ್ಟಿನಲ್ಲಿ ಮುಸ್ಲಿಮರು ಮತ್ತು ಅವರ ಅಸ್ತಿತ್ವದ ಮೇಲೆ ಯೋಗಿ ಹಗೆ ಸಾಧಿಸುತ್ತಿದ್ದಾರೆ. ರಾಜಕೀಯ ಬೇಳೆ ಬೇಯಿಸುವುದಕ್ಕೆ ಮಸೀದಿ, ಮಂದಿರ, ಮಝಾರ್, ಸ್ಕೂಲ್‌ಗಳನ್ನು ಅಹುತಿ ಪಡೆಯಲಾಗುತ್ತಿದೆ ಎಂಬುವುದು ಸ್ಪಷ್ಟ. ಇದು ಜನಾಂಗೀಯ ದ್ವೇಷ. ಬಿಜೆಪಿ ನೇತೃತ್ವದ ಅವಧಿಯಲ್ಲಿ ಬ್ಯೂರೋಕ್ರಸಿಗೆ ಮುಸ್ಲಿಮರ ಮೇಲೆ ಎಂಥ ಅಸಹನೆಯಿದೆ? ದೇಶಾದ್ಯಂತ ಬಿಜೆಪಿರಾಜ್ ಇರುವಲ್ಲೆಲ್ಲಾ ಮಸೀದಿ – ಮದ್ರಸಾ ಬುಲ್ಡೋಝಿಂಗ್ ಘಟನೆಯು ಜಗತ್ತಿಗೆ ಪುರಾವೆಯಾಗಿ ನಿಲ್ಲುತ್ತದೆ. ಇದು ಜನಾಂಗವೊಂದರ ನಿರ್ಮೂಲನಾ ಯಜ್ಞದಂತೆ ಗುರುತಾಗುವಂಥದ್ದಾಗಿದೆ.

ಭಾರತದಲ್ಲಿ ಜನಾಂಗೀಯ ತಾರತಮ್ಯ ಮತ್ತು ಕ್ರೌರ್ಯಗಳನ್ನು ಗುರುತಿಸಿದ ವಿಶ್ವಸಂಸ್ಥೆ:

ವಿಶ್ವ ಸಂಸ್ಥೆಯ ಜನಾಂಗೀಯ ತಾರತಮ್ಯ ನಿರ್ಮೂಲನಾ ಸಮಿತಿ (ಸಿಇಆರ್‌ಡಿ) ಪ್ರಕಟಿಸಿರುವ ವರದಿಯು ಭಾರತದಲ್ಲಿ ಪರಿಶಿಷ್ಟ ವರ್ಗ, ಪರಿಶಿಷ್ಟ ಜಾತಿ, ರೋಹಿಂಗ್ಯನ್ನರು, ಮುಸ್ಲಿಮರು, ನಿರಾಶ್ರಿತರು, ವಲಸಿಗರು ಮುಂತಾದ ದೊಡ್ಡದಾದೊಂದು ವಿಭಾಗವು ಮಾನವ ಹಕ್ಕು ಉಲ್ಲಂಘನೆ ಎದುರಿಸುತ್ತಿದೆ ಎಂದು ಗುರುತಿಸಿದೆ.

ದ್ವೇಷ ಭಾಷಣಗಳು ಮತ್ತು ದ್ವೇಷಪೂರಿತ ಕೃತ್ಯಗಳ ವಿರುದ್ಧ ಕ್ರಮ ಜರುಗಿಸಬೇಕಾದ ಅಗತ್ಯವನ್ನು ಕೂಡ ಅದು ಮೋದಿ ಸರಕಾರಕ್ಕೆ ಸೂಚಿಸಿದೆ. ಆದರೆ, ಬಿಜೆಪಿ ಅಧಿಕಾರದಲ್ಲಿರುವವಲ್ಲೆಲ್ಲ ಸಂಘಿಗಳ ವಿರುದ್ಧ ಕ್ರಮ ಜರುಗುತ್ತದೆ ಮತ್ತು ಜರುಗಿದರೂ ಪರಿಣಾಮಕಾರಿ ಆಗಿರುತ್ತದೆ ಎಂದು ಭಾವಿಸುವುದು ದಡ್ಡತನವಾಗುತ್ತದೆ. 

ಸಿಇಆರ್‌ಡಿ ವರದಿಯ ಪ್ರಕಾರ ಭಾರತದಲ್ಲಿ ಜನಾಂಗೀಯ ದ್ವೇಷ, ದಾಳಿ, ಬಲಪ್ರಯೋಗ, ಕೊಲೆಕೃತ್ಯ, ಸೂಕ್ತ ಕ್ರಮ ಜರುಗಿಸದೆ ಸುದೀರ್ಘ ಕಾಲದವರೆಗೆ ಜೈಲಿನಲ್ಲಿಡುವುದು, ಕಿರುಕುಳ, ದೌರ್ಜನ್ಯ ಮತ್ತು ಲೈಂಗಿಕ ದೌರ್ಜನ್ಯ ಇತ್ಯಾದಿ ಗಂಭೀರ ಕಾನೂನು ಉಲ್ಲಂಘನೆಗಳು ನಡೆಯುತ್ತಿದೆ. 

ಎನ್‌ಆರ್‌ಸಿ ಮೂಲಕವಾಗಿ, ವೋಟರ್ ಲಿಸ್ಟ್‌ ಪರಿಷ್ಕರಣೆಯ ಮುಖವಾಡದಲ್ಲಿ ಸಾಮೂಹಿಕವಾಗಿ ಹೊರಗೆ ಹಾಕುತ್ತಿರುವುದು ಈಗಾಗಲೇ ಬಹು ಚರ್ಚಿತ ವಿಷಯ. ಎಫ್‌ಸಿಆರ್‌ಎ, ಯುಎಪಿಎ, ಅಫ್ಸಪಾ ಮುಂತಾದ ಕಾನೂನು ಉಪಯೋಗಿಸಿ ಸಾಮಾಜಿಕ ಸೇವಾ ಸಂಘಟನೆಗಳು ಕೆಲಸ ಮಾಡದಂತೆ ತಡೆಯಲಾಗುತ್ತಿದೆ ಎಂದು ಹೇಳಲಾಗುತ್ತಿದೆ. 1928ರ ಅಂತಾರಾಷ್ಟ್ರೀಯ ಕನ್ವೆನ್ಶನ್‌ನಲ್ಲಿ ಭಾರತ ಭಾಗಿಯಾಗಿತ್ತು. ಇಂತಹ ಅಪರಾಧ ಕೃತ್ಯಗಳ ಕುರಿತಂತೆ ವಿವರವಾದ ಮತ್ತು ನವೀಕೃತ ವರದಿ ಸಲ್ಲಿಸಿಲ್ಲ ಎಂದು ವಿಶ್ವಸಂಸ್ಥೆಯ ಜನಾಂಗೀಯ ತಾರತಮ್ಯ ನಿರ್ಮೂಲನೆ ಸಮಿತಿ ಹೇಳಿದೆ. ಈಗಿನ ಸರಕಾರ ಸಲ್ಲಿಸುವುದಾದರೂ ಏನು? ಮಸೀದಿ, ಮಝಾರ್, ಚರ್ಚ್‌ಗಳ ಮೇಲೆ ದಾಳಿ ಮಾಡಿದ್ದನ್ನೇ? ಅಥವಾ ಕೆಡವಿದ್ದನ್ನೇ?

ಜಮೀಯ್ಯತ್ ಮತ್ತು ಜಮಾಅತೆ ಇಸ್ಲಾಮೀ:

ಜಮೀಯ್ಯತುಲ್ ಉಲೇಮಾ ಸಂಘಟನೆಯ ಮಹಮೂದ್ ಮದನಿಯವರು ಪ್ರತಿಕ್ರಿಯಿಸುತ್ತಾ, ಸಹರಾನ್‌ಪುರ ಜಿಲ್ಲಾಡಳಿತದ ನಡವಳಿಕೆಯು ಮೂಲಭೂತ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಿವಾದ ಕಲೆಕ್ಟರೇಟಿಗೆ ಸಂಬಂಧಿಸಿದ್ದು ಕಲೆಕ್ಟರ್ ಮಸೀದಿ ಧ್ವಂಸಕ್ಕೆ ಆದೇಶ ನೀಡಲು ಹೇಗೆ ಸಾಧ್ಯವಾಯಿತು? ಎಂಬ ಆತಂಕವನ್ನು ವ್ಯಕ್ತಪಡಿದ್ದಾರೆ. ಜಮಾಅತೆ ಇಸ್ಲಾಮಿ ಹಿಂದ್‌ನ ಉಪಾಧ್ಯಕ್ಷರಾದ ಮಲಿಕ್ ಮೊಹ್ತಸಿಮ್ ಖಾನ್‌ ರವರು ಪ್ರಜಾಪ್ರಭುತ್ವಕ್ಕೆ ಕಳಂಕ ಎಂದು ಕರೆದಿದ್ದಾರೆ. ಐತಿಹಾಸಿಕ ಮಸೀದಿಯ ಧ್ವಂಸವನ್ನು ನಿರ್ಲಜ್ಜ ಮತ್ತು ಕ್ಷಮಿಸಲಾಗದ ದಬ್ಬಾಳಿಕೆ ಹಾಗೂ ರಾಜಕೀಯ ದಾಸ್ಯತನದ ಕೃತ್ಯವಾಗಿದೆ ಎಂದೂ ಹೇಳಿದ್ದಾರೆ. ಸಹರಾನ್‌ಪುರದ ಅಧಿಕಾರಿಗಳು ಪಕ್ಷಪಾತ, ಧರ್ಮಾಂಧ ಮತ್ತು ಕೋಮುವಾದಿ ನಿಲುವನ್ನು ಪ್ರಪಂಚದ ಮುಂದೆ ಪ್ರದರ್ಶಿಸಿದ್ದಾರೆ. ಇದರಿಂದ ಅವರೇನು ಸಾಧಿಸಿದರು? ಧಿಕ್ಕಾರಿಗಳ ಗರ್ವಭಂಗ ಆಗೇ ಆಗುತ್ತೆ. ಇದು ಜಗತ್ತಿನ ನಿಯಮ.

ಉತ್ತರಪ್ರದೇಶದ ಸಮಾಜವಾದಿ ಪಾರ್ಟಿ ಅಧ್ಯಕ್ಷ ಅಖಿಲೇಶ್ ಯಾದವ್‌ ರವರು ಇತರ ಧರ್ಮಗಳನ್ನು ಗೌರವಿಸದಿರುವವರಿಗೆ, ಇತರರ ನಂಬಿಕೆಗಳ ಮೇಲೆ ಆಟ ಆಡುವವರಿಗೆ ಎಂದಿಗೂ ಒಬ್ಬ ಸನಾತನಿ ಆಗಲು ಸಾಧ್ಯವಿಲ್ಲ. ನಿಜವಾಗಿ ಹಿಂದೂ ಇತರರ ನಂಬಿಕೆಯನ್ನು ತಿರಸ್ಕರಿಸುವವನಲ್ಲ. ವಸುದೈವಕುಟುಂಬಕಂ ಎಂಬ ಸಂಕಲ್ಪವನ್ನು ಸನಾತನ ಧರ್ಮ ನಮಗೆ ಕಲಿಸಿದ್ದು. ಇದು ಸನಾತನ ಮೌಲ್ಯವಾದುದರಿಂದ ಯಾವನೇ ನೈಜ ಸನಾತನಿಗೋ ಹಿಂದೂವಿಗೋ ಇತರ ಧರ್ಮವಿಭಾಗಗಳ ನಂಬಿಕೆಯನ್ನು ನಾಶಪಡಿಸಲು ಸಾಧ್ಯವಾಗುವುದಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ. 

ಬಿಎಸ್‌ಪಿಯ ಮುಖ್ಯಸ್ಥೆ ಮಾಯಾವತಿಯವರು, ಸಹರಾನ್‌ಪುರ ಜಿಲ್ಲೆಯ ಮಸೀದಿ ಸಹಿತ ಉತ್ತರಪ್ರದೇಶದುದ್ದಕ್ಕೂ ದಿನಾಲೂ ಮಸೀದಿಗಳನ್ನು ಅವಸರವಸರವಾಗಿ ಅನಧಿಕೃತವೆಂದು ಘೋಷಿಸಲಾಗುತ್ತದೆ. ನಂತರ ಅದನ್ನು ಕೆಡವಿಹಾಕಲಾಗುತ್ತಿದೆ. ಸರಕಾರದ ಈ ಪ್ರಚಾರ ಸರಿಯಲ್ಲ. ಪ್ರತಿಕೂಲ ಪರಿಸ್ಥಿತಿಯನ್ನು ದೂರ ಮಾಡಲು ಸರಕಾರ ಈ ಕ್ರಮವನ್ನು ಕೂಡಲೇ ನಿಲ್ಲಿಸಬೇಕು. ಸಮಸ್ಯೆ ಪರಿಹಾರಕ್ಕೆ ಬೇರೆ ಮಾರ್ಗಗಳನ್ನು ಹುಡುಕಿಕೊಳ್ಳಬೇಕು. ಇತರ ಧರ್ಮ ವಿಶ್ವಾಸಿಗಳ ಆರಾಧನಾಲಯಗಳನ್ನು ಸಮಾನ ರೀತಿಯಲ್ಲಿ ಗೌರವಿಸಿ ಸಂರಕ್ಷಿಸಬೇಕು ಎಂದು ಸರಕಾರಕ್ಕೆ ಸೂಚಿಸಿದ್ದಾರೆ.

ಹೈದರಾಬಾದಿನ ಸಂಸದ ಉವೈಸಿಯವರೂ ಕೆಂಡಮಂಡಲವಾಗಿ ಖಂಡಿಸಿದ್ದಾರೆ. ಆದರೂ ಮಸೀದಿಗಳು ಅನಧಿಕೃತತೆಯ ಮುದ್ರೆಯೊತ್ತಿ ಉರುಳಿಸುತ್ತ ಹೋಗಲಾಗುತ್ತಿದೆ. ಏನಿದ್ದರೂ ಅಕ್ರಮಗಳೆಲ್ಲದ್ದಕ್ಕೂ ಒಂದು ಅಂತ್ಯವೆಂಬುವುದು ಇರುತ್ತದೆ. ಅದು ಇತಿಹಾಸದ ಸತ್ಯ. ಆದ್ದರಿಂದ ಅಕ್ರಮಿ ಸರಕಾರ ಆಗಲಿ ಸಂಘಿಗಳೇ ಆಗಿರಲಿ. ಹಾಗಂತ 2027ರ ಯುಪಿ ವಿಧಾನಸಭಾ ಚುನಾವಣೆ ನಂತರ ಈ ಯೋಗಿ ಸರಕಾರ ಇರುತ್ತದಾ? ಏನು ಗ್ಯಾರಂಟಿ?