ಸನ್ಮಾರ್ಗ ವಾರ್ತೆ
ಪೆರಿಂತಲ್ಮಣ್ಣ: ಇಸ್ಲಾಮೀ ವಿದ್ವಾಂಸರು, ಸಮಾಜ ಸೇವಕರು ಮತ್ತು ಜಮಾಅತೆ ಇಸ್ಲಾಮಿ ಹಿರಿಯ ಮುಖಂಡರೂ ಆದ ಕೆ.ಕೆ. ಮಮ್ಮುನ್ನಿ ಮೌಲವಿ (82) ನಿಧನರಾಗಿದ್ದಾರೆ. ಕೇರಳಂ ಮತ್ತು ಹೊರ ರಾಜ್ಯಗಳಲ್ಲೂ ಹಲವಾರು ಅನಾಥಾಶ್ರಮಗಳು ಹಾಗೂ ಸಮಾಜ ಸೇವಾ ಸಂಸ್ಥೆಗಳ ಆಧಾರಸ್ತಂಭವಾಗಿದ್ದರು.
ಜಮಾಅತೆ ಇಸ್ಲಾಮಿ ಕೇರಳ ರಾಜ್ಯದ ಸಲಹಾ ಸಮಿತಿಗೆ ಮತ್ತು ಅಖಿಲ ಭಾರತ ಪ್ರತಿನಿಧಿ ಸಭೆಗೆ ದೀರ್ಘಕಾಲದವರೆಗೆ ಸದಸ್ಯರಾಗಿದ್ದರು. ಪೆರಿಂತಲ್ಮಣ್ಣ ಇಸ್ಲಾಮಿಕ್ ಮಿಷನ್ ಟ್ರಸ್ಟ್ನ ಕಾರ್ಯದರ್ಶಿಯಾಗಿ, ಶಾಂತಪುರಂ ಮಹಲ್ನ ಸಹಾಯಕ ಖಾಜಿಯಾಗಿ ಮತ್ತು ವಟನಪ್ಪಳ್ಳಿ ಅನಾಥಾಶ್ರಮ ಇಸ್ಲಾಮಿಯಾ ಕಾಲೇಜಿನ ಪ್ರಾಚಾರ್ಯರಾಗಿ ಹುದ್ದೆಗಳನ್ನು ಅಲಂಕರಿಸಿದ್ದರು. ‘ಮಲರ್ವಾಡಿ’ ಮಕ್ಕಳ ಮ್ಯಾಗಝೀನ್ ಸಿದ್ಧಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಮತ್ತು ದೀರ್ಘಕಾಲದ ವರೆಗೆ ಅದರ ಪ್ರಕಾಶಕರೂ ಆಗಿದ್ದರು.
ಶಾಂತಪುರಂ ಇಸ್ಲಾಮಿಯಾ ಕಾಲೇಜು, ವಡನಪ್ಪಳ್ಳಿ ಅನಾಥಾಶ್ರಮ, ಪಥಿರಿಪಾಲ ಮೌಂಟ್ ಸೀನಾ, ಪೆರುಂಪಿಲವು ಅನ್ಸಾರ್ ಸಂಸ್ಥೆಗಳು ಮತ್ತು ಅಳಿಕೋಡ್ ಇಸ್ಲಾಮಿಕ್ ಎಜುಕೇಷನಲ್ ಕಾಂಪ್ಲೆಕ್ಸ್ನ ಆಡಳಿತ ಮಂಡಳಿಗಳ ಸದಸ್ಯರಾಗಿದ್ದರು.
ಪಥಿರಿಪಾಲ ಬೈತುಶರಿಖಾ ಅಲ್ ಖೈರಿ ಟ್ರಸ್ಟ್, ಪೆರುಂಪಿಲವು ಅನ್ಸಾರಿ ಚಾರಿಟೇಬಲ್ ಟ್ರಸ್ಟ್, ವಡನಪ್ಪಳ್ಳಿ ಅನಾಥಾಶ್ರಮ ಸಮಿತಿ, ಅಲ್ ಇಸ್ಲಾಹ್ ಆಫೀಸ್, ಅಳಿಕೋಡ್ ಇಸ್ಲಾಮಿಕ್ ಎಜುಕೇಷನಲ್ ಕಾಂಪ್ಲೆಕ್ಸ್, ಪೆರಿಂಗಾಡಿ ಅಲ್ ಫಲಾಹ್, ತುವುರ್ ಹೀರ ಇಂಗ್ಲಿಷ್ ಸ್ಕೂಲ್ ಮುಂತಾದ ಸಂಸ್ಥೆಗಳ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ‘ವಿಷನ್ 2026’ ಯೋಜನೆಯ ಉಪಾಧ್ಯಕ್ಷರಾಗಿ, ಭಾರತದ ಹಿಂದುಳಿದ ಪ್ರದೇಶಗಳಿಗೆ ಪ್ರಯಾಣ ಬೆಳೆಸಿ ಶೈಕ್ಷಣಿಕ ಮತ್ತು ಸೇವಾ ಯೋಜನೆಗಳನ್ನು ಆರಂಭಿಸಿದರು.
ಕಲಕಂಡಂಥಿಲ್ ಮುಹಮ್ಮದ್ ಮತ್ತು ಕದಂಥೋಡಿ ಮರಿಯಾಕುಟ್ಟಿ ದಂಪತಿಯ ಮಗನಾಗಿ 1944ರಲ್ಲಿ ಮಲಪ್ಪುರಂ ಜಿಲ್ಲೆಯ ಮುಲ್ಲಿಯಾಕುರ್ಸಿಯಲ್ಲಿ ಜನಿಸಿದರು. 1955-1965ರವರೆಗೆ ಶಾಂತಪುರಂ ಇಸ್ಲಾಮಿಯಾ ಕಾಲೇಜಿನಲ್ಲಿ ಅಧ್ಯಯನ ಮಾಡಿ ಎಫ್ಡಿ ಮತ್ತು ಬಿಎಸ್ಎಸ್ಸಿ ಪದವಿಗಳನ್ನು ಪಡೆದರು. ಕಾರಯಾದ ಮದರಸಾ, ಚಾವಕ್ಕಾಡ್ ಮುತ್ತುವಟ್ಟೂರ್ ಮಹಲ್ ಇಮಾಮ್ ಮತ್ತು ಮೂವಾಟ್ಟುಪುಳ ಮದರಸಾತು ಬನಾತ್ ಪ್ರಾಚಾರ್ಯರಾಗಿ ಕೆಲಸ ಮಾಡಿದರು. 1977ರಿಂದ ಅವರು ಎರ್ನಾಕುಲಂ, ಆಲಪ್ಪುಳ, ಕೊಲ್ಲಂ, ತಿರುವನಂತಪುರಂ, ಕೊಟ್ಟಾಯಂ, ಇಡುಕ್ಕಿ, ಪಥನಂತಿಟ್ಟ, ತ್ರಿಶೂರ್ ಮತ್ತು ಪಾಕ್ಕಾಡ್ ಜಿಲ್ಲೆಗಳಲ್ಲಿ 10 ವರ್ಷಗಳ ಕಾಲ ಜಮಾಅತೆ ಇಸ್ಲಾಮಿ ಪ್ರಾದೇಶಿಕ ಸಂಚಾಲಕರಾಗಿ ಸೇವೆ ಸಲ್ಲಿಸಿದರು.
ಮಸೀದಿ ನಿರ್ಮಾಣ, ಶೈಕ್ಷಣಿಕ ಕೇಂದ್ರಗಳ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ಸಾರ್ವಜನಿಕ ಸೇವಾ ಕ್ಷೇತ್ರಗಳ ಅನೇಕ ಯೋಜನೆಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಮೃತರ ಪತ್ನಿ ಖದೀಜಾ ಹಾಗೂ ಹಫ್ಸತ್, ನಜಿಮಾ, ಸಾಜಿದಾ, ನಜ್ಮುನ್ನಿಸಾ, ನದೀರಾ, ಮುಬಾರಕಾ, ಯಾಸಿರ್, ಅಬ್ದುರಬ್ಬ್ ಮತ್ತು ಬಿಲಾಲ್ ಮಕ್ಕಳಾಗಿದ್ದರು.












