ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡದಿದ್ದರೆ ಅಕ್ಟೋಬರ್ 2ರಿಂದ ರಾಷ್ಟ್ರವ್ಯಾಪಿ ಪ್ರತಿಭಟನೆ: ಸಿಜೆಪಿ ಘೋಷಣೆ

0
213

ಸನ್ಮಾರ್ಗ ವಾರ್ತೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಶನಿವಾರದೊಳಗೆ ರಾಜೀನಾಮೆ ನೀಡದಿದ್ದರೆ ಅಕ್ಟೋಬರ್ 2ರಂದು ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ಪ್ರಾರಂಭಿಸುವುದಾಗಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಶುಕ್ರವಾರ ತಿಳಿಸಿದೆ.

ಈ ಆಂದೋಲನವು ಮುಂಬೈನಲ್ಲಿ ಪ್ರಾರಂಭವಾಗಿ ನಂತರ ಇತರ ನಗರಗಳಿಗೆ ವಿಸ್ತರಿಸಲಿದೆ ಎಂದು ಅಭಿಯಾನದ ಸಂಸ್ಥಾಪಕ ಅಭಿಜಿತ್ ದೀಪ್ಕೆ ತಿಳಿಸಿದ್ದಾರೆ. “ಈ ವರ್ಷ ಗಾಂಧಿ ಜಯಂತಿಯಂದು, ಪ್ರಜಾಪ್ರಭುತ್ವವನ್ನು ಉಳಿಸಲು ಪ್ರತಿಜ್ಞೆ ಮಾಡೋಣ” ಎಂದು ಅವರು ಹೇಳಿದರು.

ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕುರಿತಾದ ನಿರ್ಧಾರಗಳಿಗೆ ಸಂಬಂಧಿಸಿದಂತೆ ಇಬ್ಬರು ಚುನಾವಣಾ ಆಯುಕ್ತರು 10 ತಿಂಗಳಲ್ಲಿ 14 ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಬುಧವಾರ ನಡೆಸಿದ ತನಿಖೆಯಿಂದ ಬಹಿರಂಗಗೊಂಡಿದ್ದು, ಇದರ ನಂತರ ಕುಮಾರ್ ವಿರುದ್ಧ ಅಪರಾಧ ಮೊಕದ್ದಮೆ ಕ್ರಮ ಜರುಗಿಸುವಂತೆಯೂ ಸಿಜೆಪಿ ಒತ್ತಾಯಿಸುತ್ತಿದೆ.

ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಎಸ್.ಐ.ಆರ್. (SIR) ಸಂಬಂಧಿತ ನಿರ್ಧಾರಗಳಿಗೆ ಔಪಚಾರಿಕವಾಗಿ ಆಕ್ಷೇಪ ವ್ಯಕ್ತಪಡಿಸಿದ್ದು, ಕೆಲವು ನಿರ್ಧಾರಗಳನ್ನು ತಮ್ಮ ಗಮನಕ್ಕೆ ತಾರದೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.

ಹೊಸ ಮತದಾರರ ನೋಂದಣಿ ಮತ್ತು ನಮೂನೆ 6 (Form 6) ರಲ್ಲಿನ ಬದಲಾವಣೆಗಳು, ಪಶ್ಚಿಮ ಬಂಗಾಳದಲ್ಲಿ ಮತದಾರರ ಸೇರ್ಪಡೆಯ ವಿರುದ್ಧದ ಮೇಲ್ಮನವಿಗಳು ಮತ್ತು ಗೋವಾದಲ್ಲಿ ಮತದಾರರ ದತ್ತಾಂಶ ನಿರ್ವಹಣೆ ಮುಂತಾದ ವಿಷಯಗಳಿಗೆ ಸಂಬಂಧಿಸಿ ಈ ಆಕ್ಷೇಪಗಳಿವೆ ಎಂದು ವರದಿಯಾಗಿದೆ.

ಒಂದು ಲಿಖಿತ ಆಕ್ಷೇಪಣೆಯಲ್ಲಿ, ಆಯೋಗದ ಇಬ್ಬರೂ ಆಯುಕ್ತರ ಸಲಹೆಗೆ ವಿರುದ್ಧವಾಗಿ ಚುನಾವಣಾ ಆಯೋಗವು ವರ್ತಿಸಿದೆ ಎಂದು ಸಂಧು ಅವರು ತಿಳಿಸಿದ್ದಾರೆ ಎಂದು ಉಲ್ಲೇಖಿಸಲಾಗಿದ್ದು, ಈ ಕ್ರಮವನ್ನು “ಅಧಿಕೃತವಲ್ಲದ ಮತ್ತು ಕಾನೂನುಬಾಹಿರ” ಎಂದು ಬಣ್ಣಿಸಲಾಗಿದೆ. ಡಿಜಿಟಲ್ ಮತದಾರರ ಪಟ್ಟಿ ಡೇಟಾಬೇಸ್‌ಗೆ ಪ್ರವೇಶ ಪಡೆಯುವ ಕುರಿತಂತೆಯೂ ಇಬ್ಬರು ಚುನಾವಣಾ ಆಯುಕ್ತರು ಕಳವಳ ವ್ಯಕ್ತಪಡಿಸಿದ್ದರು.

ಜ್ಞಾನೇಶ್‌ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕುವಂತೆ ವಿರೋಧ ಪಕ್ಷವೂ ಒತ್ತಾಯಿಸಿದೆ.

ಗುರುವಾರ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ಜ್ಞಾನೇಶ್‌ ಕುಮಾರ್ ತಮ್ಮ ಹುದ್ದೆಯಿಂದ ರಾಜೀನಾಮೆ ನೀಡಿ “ಅಪ್ರೂವರ್ (ಅಪರಾಧ ಒಪ್ಪಿಕೊಳ್ಳುವ ಸಾಕ್ಷಿ) ಆಗಬೇಕು” ಎಂದು ಹೇಳಿದರು.

‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ತನಿಖೆಯ ಕುರಿತು ಜ್ಞಾನೇಶ್‌ ಕುಮಾರ್ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದಾಗ್ಯೂ, ವರದಿ ಪ್ರಕಟವಾದ ನಂತರ, ಮತದಾರರ ಹಕ್ಕುಗಳನ್ನು ರಕ್ಷಿಸಲು “ಕರಡು ಹಂತಗಳಲ್ಲಿ ಆಯೋಗದ ಸದಸ್ಯರು ಎತ್ತಿರುವ ಕಾರ್ಯಾಚರಣೆಯ ಪ್ರಶ್ನೆಗಳು ಅಥವಾ ಆಕ್ಷೇಪಗಳಯ ಪ್ರಮಾಣಿತ ಆಡಳಿತಾತ್ಮಕ ಅಭ್ಯಾಸದ ಭಾಗವಾಗಿದೆ” ಎಂದು ಚುನಾವಣಾ ಆಯೋಗವು ಬುಧವಾರ ತಿಳಿಸಿದೆ.

“ಭಿನ್ನಾಭಿಪ್ರಾಯಗಳು ಮತ್ತು ಅವಲೋಕನಗಳು ಯಾವುದೇ ಸಂಸ್ಥೆಯಲ್ಲಿ ಚರ್ಚೆಯ ಸಾಮಾನ್ಯ ಭಾಗವಾಗಿದೆ. ಅವು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲಿನ ಪ್ರಕ್ರಿಯೆಯ ಭಾಗವಾಗಿರುತ್ತವೆ.” ಎಂದು ಚುನಾವಣಾ ಆಯೋಗ ತಿಳಿಸಿದೆ.