ಬ್ರಿಜ್ ಭೂಷಣ್ ದೋಷಮುಕ್ತತೆಯನ್ನು ಪ್ರಶ್ನಿಸಿ ಸೆಷನ್ಸ್ ಕೋರ್ಟ್ ಮೆಟ್ಟಿಲೇರಿದ ಮಹಿಳಾ ಕುಸ್ತಿಪಟುಗಳು

0
228

ಸನ್ಮಾರ್ಗ ವಾರ್ತೆ

ಹೊಸ ದೆಹಲಿ: ಭಾರತೀಯ ಕುಸ್ತಿ ಫೆಡರೇಷನ್‌ನ ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ನಾಯಕ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ದೋಷಮುಕ್ತಗೊಳಿಸಿದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ನಾಲ್ವರು ಮಹಿಳಾ ಕುಸ್ತಿಪಟುಗಳು ದೆಹಲಿ ಸೆಷನ್ಸ್ ಕೋರ್ಟ್ ಅನ್ನು ಸಂಪರ್ಕಿಸಿದ್ದಾರೆ. ಬ್ರಿಜ್ ಭೂಷಣ್ ಮತ್ತು ಸಹ-ಆರೋಪಿ ವಿನೋದ್ ತೋಮರ್ ಅವರನ್ನು ದೋಷಮುಕ್ತಗೊಳಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ಆಗಸ್ಟ್ 3 ರಂದು ನೀಡಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಯನ್ನು ಸೆಷನ್ಸ್ ಕೋರ್ಟ್ ಶನಿವಾರ ವಿಚಾರಣೆ ನಡೆಸುವ ಸಾಧ್ಯತೆಯಿದೆ.

ಮೇಲ್ಮನವಿಗಳಲ್ಲಿ, ವಿಚಾರಣಾ ನ್ಯಾಯಾಲಯದ ತೀರ್ಪು ಕೇವಲ ಊಹಾಪೋಹಗಳ ಮೇಲೆ ಆಧಾರಿತವಾಗಿದೆ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ನಡವಳಿಕೆಯ ಬಗ್ಗೆ ಹಳೆಯ ಹಾಗೂ ಏಕಪಕ್ಷೀಯಪೂರ್ವಗ್ರಹಗಳನ್ನು ಅವಲಂಬಿಸಿದೆ ಎಂದು ಕುಸ್ತಿಪಟುಗಳು ಆರೋಪಿಸಿದ್ದಾರೆ. ಸಾಕ್ಷಿಗಳ ಹೇಳಿಕೆಗಳು ಮತ್ತು ಸಾಕ್ಷ್ಯಗಳು ಸೇರಿದಂತೆ ಒಟ್ಟಾರೆ ಅಂಶಗಳನ್ನು ಪರಿಶೀಲಿಸುವ ಬದಲು, ಕೇವಲ ನಗಣ್ಯ ಮತ್ತು ಪ್ರಾಮುಖ್ಯತೆ ಇಲ್ಲದ ವಿಷಯಗಳ ಮೇಲೆ ಮಾತ್ರ ಗಮನಹರಿಸಿ ಬ್ರಿಜ್ ಭೂಷಣ್ ವಿರುದ್ಧದ ಪ್ರಕರಣವನ್ನು ನ್ಯಾಯಾಲಯವು ಸಂಪೂರ್ಣವಾಗಿ ವಜಾಗೊಳಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಆರು ಮಹಿಳಾ ಕುಸ್ತಿಪಟುಗಳು ನೀಡಿದ ದೂರುಗಳ ಆಧಾರದ ಮೇಲೆ ದೆಹಲಿ ಪೊಲೀಸರು ಬ್ರಿಜ್ ಭೂಷಣ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಜೂನ್ 15, 2023 ರಂದು, ಮಹಿಳೆಯರ ಮರ್ಯಾದೆಗೆ ಭಂಗ ತರುವುದು (ಐಪಿಸಿ ಸೆಕ್ಷನ್ 354), ಲೈಂಗಿಕ ಕಿರುಕುಳ (354A), ಹಿಂಬಾಲಿಸುವುದು ಹಾಗೂ ಮಹಿಳೆಗೆ ಕಿರುಕುಳ ನೀಡುವುದು (354D) ಮತ್ತು ಅಪರಾಧ ಬೆದರಿಕೆ (506(1)) ವಿಭಾಗಗಳ ಅಡಿಯಲ್ಲಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದರು. ನಂತರ, ಮೇ 10, 2024 ರಂದು ವಿಚಾರಣಾ ನ್ಯಾಯಾಲಯವು ಬ್ರಿಜ್ ಭೂಷಣ್ ವಿರುದ್ಧ ಆರೋಪಗಳನ್ನು ನಿಗದಿಪಡಿಸಿತ್ತು.

ಆದಾಗ್ಯೂ, ಆಗಸ್ಟ್ 3, 2026 ರಂದು ನ್ಯಾಯಾಲಯವು ಬ್ರಿಜ್ ಭೂಷಣ್ ಮತ್ತು ವಿನೋದ್ ತೋಮರ್ ಅವರನ್ನು ದೋಷಮುಕ್ತಗೊಳಿಸಿತು. ಈ ಪ್ರಕರಣವು ಕಲ್ಪಿತ ಮತ್ತು ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿದ ವಿಚಾರಣಾ ನ್ಯಾಯಾಲಯ, ವರ್ಷಗಳ ನಂತರ ದಾಖಲಿಸಿದ ದೂರುಗಳು ಪೂರ್ವಯೋಜಿತವಾಗಿ ಸಿದ್ಧಪಡಿಸಿದವು ಎಂದು ಗಮನಿಸಿತ್ತು. 2023ರ ಜಂತರ್ ಮಂತರ್ ಪ್ರತಿಭಟನೆಯ ಮೊದಲು ಯಾರೂ ಇಂತಹ ಲೈಂಗಿಕ ಆರೋಪಗಳನ್ನು ಮಾಡಿರಲಿಲ್ಲ ಮತ್ತು ಅದೇ ಸ್ವಭಾವದ ದೂರುಗಳನ್ನು ನಂತರ ಸಿದ್ಧಪಡಿಸಲಾಗಿದೆ ಎಂದು ನ್ಯಾಯಾಲಯವು ಎತ್ತಿ ತೋರಿಸಿತ್ತು. ಆರೋಪಗಳು ಮಾಡಿದ ನಂತರವೂ ಸಂತ್ರಸ್ತೆಯರು ಬ್ರಿಜ್ ಭೂಷಣ್ ಅವರೊಂದಿಗೆ ಸ್ನೇಹವನ್ನು ಮುಂದುವರಿಸಿದ್ದಾರೆ ಮತ್ತು ಕೌಟುಂಬಿಕ ಕಾರ್ಯಕ್ರಮಗಳು ಹಾಗೂ ಮದುವೆಗಳಿಗೆ ಆಹ್ವಾನಿಸಿದ್ದಾರೆ ಎಂಬ ವಾದವನ್ನೂ ನ್ಯಾಯಾಲಯವು ದೋಷಮುಕ್ತಗೊಳಿಸಲು ಒಂದು ಕಾರಣವಾಗಿ ಪರಿಗಣಿಸಿತ್ತು. ಕುಸ್ತಿಪಟುಗಳು ಈಗ ಈ ಎಲ್ಲಾ ವಾದಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿ ಸೆಷನ್ಸ್ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.