ಉತ್ತರ ಪ್ರದೇಶದಲ್ಲಿ ಮುಸ್ಲಿಮರ ಮೇಲಿನ ವ್ಯವಸ್ಥಿತ ದೌರ್ಜನ್ಯಗಳ ಕುರಿತು ಕ್ರಮ ಕೈಗೊಳ್ಳುವಂತೆ ವಿಶ್ವಸಂಸ್ಥೆಗೆ ದೂರು

0
201

ಸನ್ಮಾರ್ಗ ವಾರ್ತೆ

ಮಾನವ ಹಕ್ಕುಗಳ ಸಂಘಟನೆಯಾದ ರೆಡ್ರೆಸ್ (REDRESS) ಮತ್ತು ವರ್ಲ್ಡ್‌ ಆರ್ಗನೈಝೇಶನ್‌ ಆಗೇನ್ಸ್ಟ್‌ ಟಾರ್ಚರ್‌ (OMCT) ಎಂಬ ಸಂಸ್ಥೆಗಳು ಈ ವಾರದ ಆರಂಭದಲ್ಲಿ ಉತ್ತರ ಪ್ರದೇಶದಲ್ಲಿ ಮುಸ್ಲಿಮರನ್ನು ನಡೆಸಿಕೊಳ್ಳುತ್ತಿರುವ ರೀತಿಯ ಕುರಿತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಜಂಟಿ ದೂರು ಸಲ್ಲಿಸಿವೆ.

ಸೆಪ್ಟೆಂಬರ್ 22 ರಂದು ನೀಡಿದ ಹೇಳಿಕೆಯಲ್ಲಿ, ಭಾರತೀಯ ತಜ್ಞರೊಂದಿಗೆ ನಿಕಟ ಸಹಯೋಗದಲ್ಲಿ ಈ ದೂರನ್ನು ಸಿದ್ಧಪಡಿಸಲಾಗಿದೆ ಎಂದು ರೆಡ್ರೆಸ್ ತಿಳಿಸಿದೆ. ಅಲ್ಲದೆ, ಭದ್ರತಾ ಕಾರಣಗಳಿಗಾಗಿ ಗುರುತುಗಳನ್ನು ಗೌಪ್ಯವಾಗಿಡಲಾದ ಮಾನವ ಹಕ್ಕುಗಳ ಸಂಘಟನೆಗಳ ಪ್ರಮುಖ ದಸ್ತಾವೇಜನ್ನು ಮತ್ತು ಕೆಲಸವನ್ನು ಇದು ಆಧರಿಸಿದೆ.

2022 ಮತ್ತು 2026 ರಲ್ಲಿ ಭಾರತದಲ್ಲಿ ಮುಸ್ಲಿಮರ ವಿರುದ್ಧ ಎಸಗಲಾಗಿದೆ ಎನ್ನಲಾದ ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆಗಳ ಕುರಿತಾದ ಎರಡು ಪ್ರತ್ಯೇಕ ತನಿಖೆಗಳಲ್ಲಿ ಸ್ವತಂತ್ರ ಅಂತಾರಾಷ್ಟ್ರೀಯ ತಜ್ಞರ ಸಮಿತಿಯ (Panel of Independent International Experts – PIIE) ತೀರ್ಪುಗಳನ್ನು ಸಹ ಇದು ಆಧರಿಸಿದೆ.

ಎಲ್ಲಾ ರೀತಿಯ ವರ್ಣಭೇದ ನೀತಿ ನಿರ್ಮೂಲನಾ ಸಮಾವೇಶದ (India’s compliance with the Convention on the Elimination of All Forms of Racial Discrimination – ICERD) ಅನುಸರಣೆಯ ಕುರಿತು ವಿಶ್ವಸಂಸ್ಥೆಯ ವರ್ಣಭೇದ ನೀತಿ ನಿರ್ಮೂಲನಾ ಸಮಿತಿಯ (UN Committee on the Elimination of Racial Discrimination – CERD) ಅಂತಿಮ ಅವಲೋಕನಗಳ ನಂತರ ಈ ದೂರು ಸಲ್ಲಿಸಲಾಗಿದೆ.

ಭಾರತದಲ್ಲಿ ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರ ವಿರುದ್ಧದ ತಾರತಮ್ಯ ಮತ್ತು ಹಿಂಸಾಚಾರದ ಧೋರಣೆಗಳ ಬಗ್ಗೆ ಸಮಿತಿಯು ಗಂಭೀರ ಕಳವಳ ವ್ಯಕ್ತಪಡಿಸಿದೆ. ಭಾರತದಲ್ಲಿ ಕಾನೂನು ಜಾರಿ ಸಂಸ್ಥೆಗಳ ಮೇಲೆ ಆರೋಪಿಸಲಾಗಿರುವ ನ್ಯಾಯಾಂಗೇತರ ಹತ್ಯೆ ಮತ್ತು ಹಿಂಸಾಚಾರ ಸಂಬಂಧಿತ ಸಾವುಗಳನ್ನು ಬೆಟ್ಟು ಮಾಡುವ ವಿಶ್ವಸಂಸ್ಥೆಯ ತಜ್ಞರ ಫೆಬ್ರವರಿ 2026 ರ ಮಧ್ಯಪ್ರವೇಶದ ನಂತರ ಈ ದೂರು ಬಂದಿದೆ.

ಉತ್ತರ ಪ್ರದೇಶದಲ್ಲಿ ಸರ್ಕಾರ ಮತ್ತು ಸರಕಾರೇತರ ಶಕ್ತಿಗಳಿಂದ ಮುಸ್ಲಿಮರ ವಿರುದ್ಧ ಎಸಗಲ್ಪಟ್ಟಿರುವ ಘೋರ ಮತ್ತು ವಿಶ್ವಾಸಾರ್ಹವಾಗಿ ದೃಢಪಡಿಸಿದ ಮಾನವ ಹಕ್ಕುಗಳ ಉಲ್ಲಂಘನೆಯ ಸ್ಥಿರ ಮಾದರಿಗಳನ್ನು ಈ ದೂರು ಗುರುತಿಸುತ್ತದೆ. ಇದರಲ್ಲಿ ‘ಎನ್‌ಕೌಂಟರ್‌ಗಳು’ ಎಂದು ಕರೆಯಲ್ಪಡುವ ಪದ್ಧತಿಯಲ್ಲಿ ಪೊಲೀಸರಿಂದ ಮುಸ್ಲಿಮರ ಕಾನೂನುಬಾಹಿರ ಹತ್ಯೆಗಳೂ ಸೇರಿವೆ.

ಭಾರತದಲ್ಲಿ ಮುಸ್ಲಿಮರ ವಿರುದ್ಧದ ಹಕ್ಕು ಉಲ್ಲಂಘನೆಗಳ ತನಿಖೆ ನಡೆಸಲು ಸ್ವತಂತ್ರ ತನಿಖಾ ಸಂಸ್ಥೆಯನ್ನು ಸ್ಥಾಪಿಸುವ PIIE ನ ಶಿಫಾರಸುಗಳನ್ನು ಪರಿಗಣಿಸಲು ಮತ್ತು ಭವಿಷ್ಯದ ಕಾರ್ಯವಿಧಾನಗಳಿಗಾಗಿ ಸಾಕ್ಷ್ಯಗಳನ್ನು ಸಂರಕ್ಷಿಸಲು ಅಂತಾರಾಷ್ಟ್ರೀಯ ವ್ಯವಸ್ಥೆಯನ್ನು ಪರಿಗಣಿಸಲು ಈ ದೂರು ಮಂಡಳಿಯನ್ನು ಆಹ್ವಾನಿಸುತ್ತದೆ.

ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ಹಕ್ಕು ಉಲ್ಲಂಘನೆಗಳನ್ನು ಮೇಲ್ವಿಚಾರಣೆ ಮಾಡಲು, ದಾಖಲಿಸಲು ಮತ್ತು ಮಾನವ ಹಕ್ಕುಗಳ ಮಂಡಳಿ ಹಾಗೂ ವಿಶ್ವಸಂಸ್ಥೆಯ ಮಹಾಸಭೆಗೆ ವರದಿ ಮಾಡಲು ಭಾರತಕ್ಕಾಗಿ ವಿಶೇಷ ವರದಿಗಾರರನ್ನು ನೇಮಿಸಲು ಇದು ಕರೆ ನೀಡುತ್ತದೆ.

ಉತ್ತರ ಪ್ರದೇಶ ಮತ್ತು ದೇಶಾದ್ಯಂತ ಮುಸ್ಲಿಮರ ವಿರುದ್ಧದ ಹಿಂಸೆ, ದುರ್ನಡತೆ ಮತ್ತು ಇತರ ಗಂಭೀರ ಹಕ್ಕು ಉಲ್ಲಂಘನೆಗಳ ಆರೋಪಗಳ ಕುರಿತು ಪರಿಣಾಮಕಾರಿ ತನಿಖೆಗಳನ್ನು ನಡೆಸುವ ಮೂಲಕ ಮತ್ತು ಅಪರಾಧಿಗಳನ್ನು ಹೊಣೆಗಾರರನ್ನಾಗಿ ಮಾಡುವ ಮೂಲಕ ಜವಾಬ್ದಾರಿ ನಿಭಾಯಿಸುವಂತೆ ಭಾರತ ಸರ್ಕಾರಕ್ಕೆ ಇದು ಮತ್ತಷ್ಟು ಒತ್ತಾಯಿಸುತ್ತದೆ.

ಅಂತಾರಾಷ್ಟ್ರೀಯ ಕಾನೂನು ಮತ್ತು ಮಾನದಂಡಗಳಿಗೆ ಅನುಗುಣವಾಗಿ, ಪೊಲೀಸರು, ಜೈಲು ಸಿಬ್ಬಂದಿ, ಭದ್ರತಾ ಸಿಬ್ಬಂದಿ ಮತ್ತು ನ್ಯಾಯಾಂಗ ಅಧಿಕಾರಿಗಳ ನಿಯಮಿತ ಪಠ್ಯಕ್ರಮದಲ್ಲಿ ಮಾನವ ಹಕ್ಕುಗಳು ಮತ್ತು ಹಿಂಸಾಚಾರ ವಿರೋಧಿ ತರಬೇತಿಯನ್ನು ಸಂಯೋಜಿಸಬೇಕು ಎಂದು ಇದು ಆಗ್ರಹಿಸುತ್ತದೆ.