ಪ್ರವಾದಿ ದೌತ್ಯದ ಸಂದೇಶ ಸೈಯದ್ ಮೌದೂದಿ ಕಂಡಂತೆ

0
192

✍️ ಅಬೂ ಅನೀಸ್, ಕಲ್ಲಾಪು

ಪ್ರವಾದಿ ಮುಹಮ್ಮದ್(ಸ)ರ ದೌತ್ಯದ ಸಂದೇಶಗಳ ಸರ್ವಾಂಗೀಣತೆ ಮತ್ತು ಮುಸ್ಲಿಮರ ಆಂತರಿಕ ವಿಚಾರ ಸಂಘರ್ಷಗಳನ್ನು ಮುಂದಿರಿಸಿಕೊಂಡು ಸೈಯದ್ ಅಬುಲ್‌ ಆಲಾ ಮೌದೂದಿ(ರ) ರಚಿಸಿದ ʻಮುಸಲ್ಮಾನ್ ಔರ್‌ ಮೌಜೂದಾ ಸಿಯಾಸಿ ಕಷ್‌ಮಕಷ್‌’ ಮತ್ತು ʻರಸಾಇಲ್ ವ ಮಸಾಇಲ್’ ಕೃತಿಗಳ ಪ್ರಸ್ತುತತೆಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

ಸೈಯದ್‌ ಅಬುಲ್ ಅಲಾ ಮೌದೂದಿ 1979ರ ಸೆಪ್ಟೆಂಬರ್ 22 ರಂದು ಈ ಲೋಕಕ್ಕೆ ವಿದಾಯ ಹೇಳಿದರು. ಇದೀಗ ಅವರ ನಿಧನದ 47ನೇ ವರ್ಷದಲ್ಲಿದ್ದೇವೆ. ಈ ಸಂದರ್ಭದಲ್ಲಿ ಅವರ ವಿಚಾರಗಳ ಪುನರ್ಮಂಥನ ಮಹತ್ವಪೂರ್ಣವಾಗಿದೆ.

ಪ್ರವಾದಿ ಮುಹಮ್ಮದ್(ಸ) ಅವರು ಅರೇಬಿಯಾದ ಬರಡು ಭೂಮಿಯಲ್ಲಿ ಮತ್ತು ಅರಾಜಕ ಪರಿಸರದಲ್ಲಿ ಜನಿಸಿದರು. ತನ್ನ 40ನೇ ಪ್ರಾಯದಲ್ಲಿ ಸರ್ವಶಕ್ತನಾದ ಅಲ್ಲಾಹನವತಿಯಿಂದ ಪ್ರವಾದಿಯಾಗಿ ನಿಯುಕ್ತರಾದರು. ಸರ್ವಾಂಗೀಣ ಏಳಿಗೆ ಮತ್ತು ಬದುಕಿನ ನೀತಿ ಬದ್ಧ ಆವಶ್ಯಕತೆಗಳನ್ನು ಸಂದೇಶದ ರೂಪದಲ್ಲಿ ಜನರ ಮುಂದಿರಿಸಿದರು. ತನ್ನ ಸಂದೇಶಗಳನ್ನು ವಿರೋಧಿಸುತ್ತಿದ್ದ ಜನರನ್ನು ಅವರು ಶತ್ರುಗಳಾಗಿ ಕಾಣಲಿಲ್ಲ. ಬದಲಾಗಿ ತನ್ನ ಕಾರ್ಯಕ್ಷೇತ್ರದ ಫಲಾಪೇಕ್ಷಿಗಳಾಗಿ ಕಂಡರು. ಜನರ ಲೌಕಿಕ ಮತ್ತು ಪಾರತ್ರಿಕ ಯಶಸ್ಸಿನ ಬಗ್ಗೆ ಚಿಂತಿತರಾಗಿದ್ದರು. ದೇವವಾಣಿ(ವಹ್ಯ್)ಯ ಮೂಲಕ ಪಡೆದ ದೇವಾಜ್ಞಾದೇಶಗಳನ್ನು ಆ ಮುಗ್ಧ, ಅರಾಜಿಕ ಹೃದಯದಲ್ಲಿ ಬಿತ್ತುವ ದೌತ್ಯವನ್ನು ಅವರು ಕೈಗೊಂಡರು.

ಸಕಾಲಿಕ ಭಾಷೆಯಲ್ಲಿ ಹೇಳುವುದಾದರೆ ಅವರು ತನ್ನನ್ನು ಒಬ್ಬ ಅರೇಬಿಯನ್ ರಾಷ್ಟ್ರೀಯವಾದಿ ಆಗಿ ಅಥವಾ ಅಪ್ಪಟ ದೇಶಭಕ್ತವನಾಗಿ ಬಿಂಬಿಸಲಿಲ್ಲ. ತನ್ನ ಜನತೆಯನ್ನು ವಿದೇಶಿ ಆಡಳಿತಗಾರರಿಂದ ವಿಮುಕ್ತಗೊಳಿಸುವುದು ಮತ್ತು ತನ್ನ ಜನರನ್ನು ಸುಭದ್ರ ಸೈನಿಕ ಶಕ್ತಿಯನ್ನಾಗಿ ಮಾಡುವುದು ಕೂಡಾ ಅವರ ದೌತ್ಯದ ಉದ್ದೇಶವಾಗಿರಲಿಲ್ಲ. ಬದಲಾಗಿ, ಸತ್ಯ ಮತ್ತು ಮಿಥ್ಯೆಯನ್ನು ಒರೆಗೆ ಹಚ್ಚಿ ಬದುಕಿಗೆ ಉಪಯುಕ್ತ ಶಾಂತಿ-ನೆಮ್ಮದಿಯನ್ನು ತರುವ ಸತ್ಯಪಥವನ್ನು ತನ್ನ ದೌತ್ಯೋದ್ದೇಶವನ್ನಾಗಿಸಿದರು.

ಪ್ರವಾದಿವರ್ಯರು(ಸ) ಒಬ್ಬ ರಾಷ್ಟ್ರವಾದಿಯಾಗಿದ್ದರೆ ಕೇವಲ ಅರೇಬಿಯಾದ ಜನತೆಯನ್ನು ರಾಷ್ಟ್ರೀಯವಾಗಿ ಬಡಿದೆಬ್ಬಿಸುವತ್ತ ತನ್ನ ದೌತ್ಯವನ್ನು ಸೀಮಿತಗೊಳಿಸುತ್ತಿದ್ದರು. ಆದರೆ ಅದು ಹಾಗಾಗಿರಲಿಲ್ಲ. ತನ್ನ ಪ್ರದೇಶದ ಸರಹದ್ದುಗಳನ್ನು ದಾಟಿ ಹೊರಗಿರುವ ಪರ್ಶಿಯಾ(ಇರಾನ್) ಮತ್ತು ರೋಮನ್ ಸಾಮ್ರಾಜ್ಯದ ಜನತೆಯ ಲೌಕಿಕ ಮತ್ತು ಪಾರಮಾರ್ಥಿಕ ಯಶಸ್ಸನ್ನು ಬಯಸಿದ್ದರಲ್ಲದೆ; ಕ್ರೂರ ಆಡಳಿತಗಾರರಿಂದ ಅವರನ್ನು ವಿಮೋಚನೆಗೊಳಿಸುವುದು, ತನ್ಮೂಲಕ ಒಂದು ಶಾಂತಿ ನೆಮ್ಮದಿಯ ಸಮಾಜವನ್ನು ಕಟ್ಟಿ ಬೆಳೆಸುವ ಸೂತ್ರವು ಅವರ ಕೈಯಲ್ಲಿತ್ತು.

ಅದರಂತೆ ಅವರು ಅರೆಬಿ ಜನತೆಯನ್ನು ಲೋಕದಲ್ಲಿ ಔನ್ಯತ್ಯವನ್ನು ಪಡೆಯುವಂತಹ ಒಂದು ಸಮುದ್ರ ಮಾರ್ಗದರ್ಶನವು ಅವರಲ್ಲಿತ್ತು. ಆ ಮೂಲಕ ವಿಶ್ವ ಜನತೆಗೆ ಮಾದರಿಯಾಗ ಬಲ್ಲಂತಹ ಒಂದು ನಂಬಿಕೆ ಮತ್ತು ವೈಚಾರಿಕ ಸೂತ್ರಗಳು ಅವರ ದೌತ್ಯೋದ್ದೇಶವಾಗಿತ್ತು. ಅದನ್ನೇ ಅವರು ವಿಶ್ವ ಜನತೆಯ ಮುಂದಿರಿಸಲು ಕಟಿಬದ್ಧರಾದರು. ಅಲ್ಲದೇ, ತನ್ನ ದೇಶ ಮತ್ತು ಜನತೆಯ ಏಳಿಗೆಯನ್ನು ಮಾತ್ರ ಬಯಸುವಂತಹ ಮುದುಡಿದ ಭಾವನೆಗಳು ಗರಿಕೆದರುವುದು ಅವರ ಕಾರ್ಯಕ್ಷೇತ್ರವಾಗಿರಲಿಲ್ಲ.

ವಾಸ್ತವದಲ್ಲಿ ಇಂದಿನಂತೆ ಸಮತಾವಾದ(ಕಮ್ಯೂನಿಸ್ಟ್) ಚಿಂತನೆಗಳಾಗಲಿ ಅಥವಾ ವರ್ಗ ಹೋರಾಟದ ಪರಿಸ್ಥಿತಿಯಾಗಿಲಿ ಮತ್ತು ಆಧುನಿಕ ಭೌತಿಕ ಚಿಂತನೆಗಳಿಂದ ಜನಮನವನ್ನು ಒಡೆದು ಗೊಂದಲಕ್ಕೀಡಾಗಿಸುವ ಮತ್ತು ಅದನ್ನೇ ಎತ್ತರಕ್ಕೇರಿಸುವ ಮನೋಗತಿಗಳು ಅಲ್ಲಿ ಜೀವ ಹಿಡಿದಿರಲಿಲ್ಲ. ಆದರೆ ಮನುಷ್ಯತ್ವವನ್ನು ಕಳಕೊಂಡ ರೀತಿ-ನೀತಿ; ಶಾಂತಿ, ನೆಮ್ಮದಿ ಮತ್ತು ಸಹಿಷ್ಣತೆಯ ಗಡಿರೇಖೆಯನ್ನು ದಾಟಿದ ವೈಚಾರಿಕ ಅರಾಜಕತೆಯನ್ನು ಅಪ್ಪಿಕೊಂಡಿರುವ ಜನಸ್ತೋಮವು ಪ್ರವಾದಿಗಳ ಕಾರ್ಯಕ್ಷೇತ್ರವಾಗಿತ್ತು.

ಇಂದಿನಂತೆ ಅಂದು ಹಲವು ಕುಲಗೋತ್ರಗಳು, ದ್ವೇಷಾತ್ಮಕ ಕುಲ ಮಹಿಮೆಗಳು ಸಾಮಾಜಿಕ ಸಿಂಧುತ್ವವನ್ನು ಪಡೆದಿದ್ದವು. ಹಿಂದುಳಿದ ಗುಲಾಮರುಗಳನ್ನು ಪ್ರಾಣಿಗಳಿಗಿಂತಲೂ ಕಡೆಗಣಿಸಲಾಗುತ್ತಿತ್ತು. ಲೈಂಗಿಕ ಅತಿರೇಕಗಳು ಶ್ರೀಮತರ ಬದುಕಿನ ವ್ಯಾಪಕ ಅಂಶವಾಗಿತ್ತು. ಜನರನ್ನು ದೈವ-ದೇವತೆಗಳ ಹೆಸರಲ್ಲಿ ಭಯಭೀತರನ್ನಾಗಿಸಿಕೊಂಡು ವೈಚಾರಿಕ ಕೂಪಕ್ಕೀಡಾಗಿಸಲಾಗುತ್ತಿತ್ತು. ಮಾತ್ರವಲ್ಲ ಶೋಷಣೆಗಳಿಂದ ಪುಳಕಿತರಾದ ಶ್ರೀಮಂತ ಸರದಾರರು, ನಿಶ್ಚಿಂತರಾಗಿ ಸುಖಪಡುವ ಧರ್ಮಾಧಿಕಾರಿಗಳು ಮತ್ತು ಪಾರುಪತ್ಯಗಾರರು ಸಮಾಜದಲ್ಲಿ ಶ್ರೇಷ್ಠತೆಯನ್ನು ಪಡೆದವರಾಗಿದ್ದರು.

ಪ್ರವಾದಿಗಳ ದೌತ್ಯೋದ್ದೇಶದಲ್ಲಿ ಕೇವಲ ಶೋಷಿತರನ್ನು ಮಾತ್ರವಲ್ಲ ಶೋಷಕರನ್ನೂ ಜಾಗೃತರನ್ನಾಗಿ ಮಾಡುವ ಸಮಗ್ರ ತತ್ವಾದರ್ಶಗಳು ಸುಪ್ತವಾಗಿದ್ದವು. ಶೋಷಣೆ-ದೂಷಣೆಗಳಿಗೆ ಅದೇ ಮಟ್ಟದಲ್ಲಿ ಉತ್ತರ ನೀಡುವುದು ಅವರ ಕೆಲಸವಾಗಿರಲಿಲ್ಲ. ಹೃದಯಾಂತರಾಳದಿಂದ ಮಾಯವಾಗಿದ್ದ ಸತ್ಯಾರ್ಥವನ್ನು ಹೊರ ತೆಗೆಯುವ ಅನಿವಾರ್ಯತೆ ಪ್ರವಾದಿವರ್ಯರ(ಸ) ದೌತ್ಯದ ಮೂಲಭೂತ ಅಂಶವಾಗಿತ್ತು. ಪ್ರವಾದಿಗಳು ಅದನ್ನು ತನ್ನ ದೌತ್ಯದ ಧ್ಯೇಯವಾಗಿ ಹಮ್ಮಿಕೊಂಡರು. ಹೇಳಿರಿ- ಜನರೇ ಅಲ್ಲಾಹನಲ್ಲದೆ ಅನ್ಯ ಆರಾಧ್ಯನಿಲ್ಲ ನೀವು ಯಶ ಹೊಂದುವಿರಿ. ಈ ಉಕ್ತಿಯಲ್ಲಿ ಮಾನವರ ಲೌಕಿಕ, ಪಾರತ್ರಿಕ ಬದುಕಿನ ಸರ್ವಾಂಗೀಣ ಮೌಲ್ಯಗಳ ಬಿಜಾಂಕುರವಾಯಿತು.

ಅರೇಬಿಯನ್ ರಾಷ್ಟ್ರವಾದ, ಸಮತಾವಾದ, ವರ್ಗ ಹೋರಾಟ, ಬಂಡವಾಳಶಾಹಿ ಶೋಷಣಾತ್ಮಕ ಒಡೆತನ, ಭೌತಿಕವಾದ, ಮ್ಯಾಟಿರಿಯಲಿಸಂ, ಅನಿಯಂತ್ರಿತ ಲೈಂಗಿಕತೆ, ಜೂಜು, ಮದ್ಯಪಾನ ಇವೆಲ್ಲವು ಶೀಘ್ರದಲ್ಲೇ ಮೂಲೋತ್ಪಾಟನೆಗೊಂಡವು. ಒಂದು ಅತ್ಯುತ್ತಮ ನಾಗರಿಕ ಸಮಾಜವು ಸಂಜಾತವಾಯಿತು. ಈ ಬದಲಾವಣೆಯ ಹಿಂದಿರುವ ಪ್ರೇರಣೆಯು ಯಾವುದು? ಕೇವಲ ಒಂದು ಲೌಕಿಕ ಕಾನೂನಿನ ಎಚ್ಚರಿಕೆ ಮತ್ತು ನಿಬಂಧನೆಗಳಾಗಿರಲಿಲ್ಲ. ಹೊರತು ದೇವಭಯ ಮತ್ತು ನಿಷ್ಠೆಯ ಉಲ್ಲಂಘನೆಯು ಮಹಾಪರಾಧವಾಗಿ ಪರಿಗಣಿಸಲ್ಪಟ್ಟಿತು. ಮಾತ್ರವಲ್ಲ ಪಾರತ್ರಿಕವಾಗಿ ಘೋರ ದಂಡನೆಗೆ ಈಡಾಗುವ ಭೀತಿಯು ಸಂಕಲ್ಪವಾಗಿ ಬಡಿದೆಬ್ಬಿಸುತ್ತಿದ್ದವು. ಈ ರೀತಿಯಾಗಿ ದೇವವಿಶ್ವಾಸ ಮತ್ತು ದೇವನ ಆಜ್ಞಾನುಸರಣೆಯನ್ನು ಮೈಗೂಡಿಸಿಕೊಂಡಿರುವ ಒಂದು ನಾಗರಿಕ ಸಮಾಜ; ಮುಂದಕ್ಕೆ ಅವು ಇಸ್ಲಾಮೀ ರಾಷ್ಟ್ರದ ನೀತಿ ಸಂಹಿತೆಯಾಗಿ ಚಾಲನೆಗೆ ಬಂತು.

ಪ್ರವಾದಿ ಮುಹಮ್ಮದ್‌ರು(ಸ) ಒಬ್ಬ ಮತಾಚಾರ್ಯರಲ್ಲ ಮತ್ತು ಕೇವಲ ಊಟ, ವ್ಯಸನ, ವಸತಿಗಳಿಗಾಗಿ ಹೋರಾಡುವ ಭೌತಿಕವಾದಿ ನಾಯಕನೂ ಆಗಿರಲಿಲ್ಲ. ಮಾನವ ಬದುಕಿನ ಸಮಗ್ರ ಮತ್ತು ಸಂಯೋಜಕ ರೂಪವನ್ನು ಅವರು ಸಾಕ್ಷಾತ್ಕರಿಸಿದರು. ಅತ್ಯಾಚಾರ, ಅನಾಚಾರಗಳು ಮೂಲೋತ್ಪಾಟನೆಗೊಂಡವು. ಮಾತ್ರವಲ್ಲ ಆರ್ಥಿಕ, ಸಾಮಾಜಿಕ ಮತ್ತು ವೈಚಾರಿಕ ಶೋಷಣೆಗಳು ನೆಲಕೆಚ್ಚಿದವು. ಕುಡಿತ ವೇಶ್ಯಾವಾಟಿಕೆ ಮುಂತಾದ ಅನೈತಿಕತೆಗಳನ್ನು ವ್ಯಕ್ತಿ ಸ್ವಾತಂತ್ರ್ಯದ ಪಟ್ಟಿಯಿಂದ ಹೊರಗಿಡಲಾಯಿತು. ಬಡ್ಡಿ ವ್ಯವಹಾರಗಳನ್ನು ನಿಷೇಧಿಸಲಾಯಿತು. ಕಲಬೆರಕೆ, ತೂಕ, ಅಳತೆಯಲ್ಲಿ ವಂಚನೆ ದೇವನ ಕ್ರೋಧಕ್ಕೆ ಬಲಿಯಾಗುವುದು ಮಾತ್ರವಲ್ಲ ಆಡಳಿತಗಾರರಿಂದ ಲೌಕಿಕವಾಗಿಯೂ ದಂಡನಾರ್ಹ ಅಪರಾಧಗಳಾಗುವುದು. ಅನಿಯಂತ್ರಿತ ಲೈಂಗಿಕ ಸಂಪರ್ಕಗಳು ಮಹಾನ್ ದಂಡನೆಗೆ ಒಳಗಾದವು. ವಿಧವೆಯರ ಏಳಿಗೆ, ಅವರ ಪುನರ್ ವಿವಾಹವನ್ನು ಎತ್ತಿ ಹಿಡಿಯಲಾಯಿತು. ದಾರಿದ್ರ್ಯಕ್ಕೆ ಹೆದರಿ ಸ್ವಪೋಷಕರಿಂದಲೇ ಅಕಾಲ ವಧೆಗೆ ಈಡಾಗುತ್ತಿದ್ದ ಹೆಣ್ಮಕ್ಕಳ ಬಾಳನ್ನು ಬೆಳಗಲಾಯಿತು. ಇವೆಲ್ಲವು ಒಂದು ಧರ್ಮಾಧಾರಿತ ಇಸ್ಲಾಮೀ ಸತ್ಕ್ರಾಂತಿಯ ಫಲಶ್ರುತಿಯಾಗಿ ಮುಂದಕ್ಕೆ ವಿಶ್ವದಲ್ಲೆಡೆಯಲ್ಲೂ ವಿರಾಜಮಾನವಾಯಿತು.

ಪ್ರವಾದಿ ಮುಹಮ್ಮದ್(ಸ)ರ ಸತ್ಕ್ರಾಂತಿಯು ವಿಶ್ವ ಜನತೆಯನ್ನು ಕೇವಲ ಎರಡು ವಿಭಾಗಗಳನ್ನಾಗಿ ವಿಂಗಡಿಸಿದೆ. ಒಂದು ಸರ್ವೇಶ್ವರನನ್ನು ಮಾತ್ರ ಆರಾಧಿಸುವ ಮತ್ತು ಆತನ ಆಜ್ಞಾದೇಶಗಳನ್ನು ಪಾಲಿಸುವ ವಿಭಾಗ ಇನ್ನೊಂದು ದೇವೇತರರನ್ನು ಆರಾಧಿಸುವ ಮತ್ತು ಯಾವುದೇ ದೈವಿಕ ಆಜ್ಞಾದೇಶಗಳನ್ನು ದೃಷ್ಟಿಸಂಹಿತೆಯಾಗಿ ಅಳವಡಿಸದ ವಿಭಾಗ. ಎರಡನೇ ವಿಭಾಗದಲ್ಲಿ ನಾಸ್ತಿಕರೂ ಒಳಗೊಂಡಿದ್ದಾರೆ. ಆದರೂ ಲೌಕಿಕವಾದ ವ್ಯವಸ್ಥೆಗೆ ಪೂರಕವಾಗಿ ಈ ಉಭಯ ವಿಭಾಗಗಳು ಸಮಾನ ಫಲಾನುಭವಿಗಳಾಗಿದ್ದಾರೆ. ಲೋಕ ವ್ಯವಸ್ಥೆಯನ್ನು ಸಂಪನ್ಮೂಲಗಳನ್ನು ಸಮಾನವಾಗಿ ಅನುಭವಿಸುವ ಮತ್ತು ಭೋಗಿಸುವ ಅವಕಾಶವನ್ನು ಹೊಂದಿದ್ದಾರೆ.

ಮೌಲಾನ ಅಬುಲ್ ಅಲಾ ಮೌದೂದಿ ಅವರ ಇಸ್ಲಾಮೀ ಆಂದೋಲನದ ತಳಹದಿಗಳು ಇದೆ ಆಗಿವೆ. ಬಹುತ್ವದ ಸಮಾಜವನ್ನು ಹಿಡಿದು ನಿಂತು ಪ್ರತ್ಯೇಕತೆಗೆ ಪ್ರೇರಣೆಯಾಗುವ ವಿಚಾರಗಳನ್ನು ಅವರು ದೂರ ಇಟ್ಟರು. ನ್ಯಾಯ, ನೀತಿ ಪಾಲನೆಯಲ್ಲೂ ಧರ್ಮ ವಿಧರ್ಮೀಯರೆನ್ನದೆ ನಿಖರವಾದ ನ್ಯಾಯದಾನವನ್ನು ನೀಡುವ ಹಕ್ಕಿಗಾಗಿ ಮತ್ತು ಅವಕಾಶಗಕ್ಕಾಗಿ ಅವರು ಪ್ರತಿಪಾದಿಸಿದ್ದರು. ಪವಿತ್ರ ಕುರ್‌ಆನ್ ತಾಕೀತು ಮಾಡಿದಂತೆ “ವಿಶ್ವಾಸಿಗಳೇ, ದೇವನಿಗಾಗಿ ಸತ್ಯದಲ್ಲೇ ನೆಲೆ ನಿಲ್ಲುವವರು, ನ್ಯಾಯದ ಪರ ಸಾಕ್ಷಿ ಹೇಳುವವರು ಆಗಿರಿ. ಒಂದು ವಿಭಾಗದ ಮೇಲಿರುವ ಕ್ರೋಧವು ನಿಮ್ಮನ್ನು ನ್ಯಾಯದಿಂದ ವಿಮುಖರಾಗುವಷ್ಟು ರೇಗಿಸದಿರಲಿ. ಅದ್ಲ್(ನ್ಯಾಯ) ಪಾಲಿಸಿರಿ. ಇದು ದೇವನಿಷ್ಠೆಗೆ ಅನುಗುಣವಾಗಿದೆ.” (5:8) 

ಈ ರೀತಿ ನ್ಯಾಯ ನೀತಿಯ ಧ್ವಜವಾಹಕರಾಗಿರಿ. ಅದರಂತೆ ಇಸ್ಲಾಮೀ ಮೌಲ್ಯಗಳನ್ನು ಸಂಯೋಜಿಸಿಕೊಂಡಿರುವ ಒಂದು ಇಸ್ಲಾಮೀ ಸಮಾಜದ ನಿರ್ಮಾಣ ಅಗತ್ಯವಾಗಿತ್ತು. ಮೌಲಾನ ಸೈಯದ್‌ ಮೌದೂದಿಯವರ ಆಂದೋಲನ ತಳಹದಿ ಇದುವೇ ಆಗಿದೆ.

ಸಮಾಜ ಮತ್ತು ಸಮುದಾಯದಿಂದ ಹಿಡಿದು ಪ್ರತ್ಯೇಕವಾಗಿ ತಮ್ಮ ವಿಚಾರಗಳ ಉತ್ಕೃಷ್ಟತೆಯನ್ನು ಸಾಧಿಸುವ ಸ್ಪರ್ಧೆಯಲ್ಲಿ ಸಮಗ್ರ ಇಸ್ಲಾಮೀ ಭಾವನೆಗಳಿಗೆ ಭಂಗವುಂಟಾಗದಂತೆ ಸುಭದ್ರವಾದ ಇಸ್ಲಾಮೀ ಸಮಾಜದ ರೂಪರೇಖೆಯನ್ನು ಸಾದರಪಡಿಸಿದರು.

ಇಸ್ಲಾಮೀ ಕರ್ಮ(ಫಿಕ್ಹ್) ಶಾಸ್ತ್ರಗಳ ಸಮಗ್ರತೆಯನ್ನು ತನ್ನ ಸಾಹಿತ್ಯ, ಕೃತಿ, ಪ್ರಭಾಷಣಗಳಲ್ಲಿ ಪ್ರಕಟಪಡಿಸಿದ್ದಾರೆ. ಕರ್ಮಶಾಸ್ತ್ರಗಳಲ್ಲಿ ಅವರು ಪ್ರವಾದಿಯವರ(ಸ) ದೌತ್ಯಗಳ ಬೆಳಕಿನಲ್ಲಿ ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡರು. ಮಝ್‌ಹಬಿನ ಇಮಾಮ್‌ಗಳ ಅನುಸರಣೆಯನ್ನು ಕಡೆಗಣಿಸಿ ಅನುಷ್ಠಾನಗಳಲ್ಲೆಲ್ಲಾ ಏಕರೂಪತೆಯನ್ನು ತರುವ ವಿಫಲ ಮರೀಚಿಕೆಗಳತ್ತ ಅವರು ಗಮನಹರಿಸಲಿಲ್ಲ. ತರ್ಕ-ವಿತರ್ಕಗಳಿಗೆ ಬಲಿ ಬಿದ್ದು ಕವಲೊಡೆದು ಇಸ್ಲಾಮೀ ಏಕತೆಯನ್ನು ನೀರಸಗೊಳಿಸುವ ಗುಂಪುಗಾರಿಕೆಗಳನ್ನು ಮೌದೂದಿ ವಿರೋಧಿಸಿದರು. ತೌಹೀದೇತರರೆಂದು ಬೊಟ್ಟು ಮಾಡಿ ಆರಾಧನಾಲಯ ಪ್ರತ್ಯೇಕಿಸುವುದು ಅವರ ಏಜೆಂಡಾದಲ್ಲಿಲ್ಲ. ಯಾಕೆಂದರೆ, ಅನಸ್(ರ) ಅವರಿಂದ ವರದಿಯಾದಂತೆ: ಪ್ರವಾದಿಯವರು(ಸ) ಹೇಳಿದರು, “ನಮ್ಮೊಂದಿಗೆ ನಮಾಝ್ ಮಾಡುವವನು ನಮ್ಮ ಕಿಬ್ಲಾದ ಕಡೆಗೆ ಮುಖಮಾಡುವವನು ಮತ್ತು ನಾವು ದಿಬ್ಹ ಮಾಡಿದ ಪ್ರಾಣಿಯನ್ನು ತಿನ್ನುವವನು ಮುಸ್ಲಿಮನಾಗಿದ್ದಾನೆ. ಅವನ ಹೊಣೆ ಅಲ್ಲಾಹ್‌ ಮತ್ತು ಅವನ ಪ್ರವಾದಿಯ ಮೇಲಿದೆ. ಆದ್ದರಿಂದ ಅವನ ಬಗೆಗಿರುವ ಅಲ್ಲಾಹನ ವಚನವನ್ನು ಭಂಗಗೊಳಿಸದಿರಿ.” (ಬುಖಾರಿ) ಇಸ್ಲಾಮೀ ಏಕತೆಯ ಬೆಳಕಿನಲ್ಲಿ ಇದೊಂದು ಪ್ರಭಾವಿ ಪ್ರವಾದಿ ವಚನವಾಗಿದೆ.