ಸನ್ಮಾರ್ಗ
ಜೆರುಸಲೆಮ್: ಶಿನ್ ಬೆತ್ ಆಂತರಿಕ ಭದ್ರತಾ ಸಂಸ್ಥೆಯ ಮಾಜಿ ಮುಖ್ಯಸ್ಥ ರೊನೆನ್ ಬಾರ್ ರವರಿಗೆ ಅಕ್ಟೋಬರ್ 7 ರ ದಾಳಿಯ ಬಗ್ಗೆ ತಿಳಿದಿದ್ದರೂ ತನಗೆ ತಿಳಿಸಲಾಗಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆರೋಪಿಸಿದ್ದಾರೆ. ಈ ಆರೋಪದವಿರೋಧಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ರೊನೆನ್ ಬಾರ್ ಸೋಮವಾರ ತಿಳಿಸಿದ್ದಾರೆ. ನೆತನ್ಯಾಹು ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅವರು ಹೇಳಿದರು.
ಅಕ್ಟೋಬರ್ 7 ರ ದಾಳಿಯ ಬಗ್ಗೆ ಪ್ರಧಾನಿಗಳಿಗೆ ಮಾಹಿತಿ ನೀಡಿಲ್ಲ ಎಂದು ಇಸ್ರೇಲಿ ಗುಪ್ತಚರ ಸಂಸ್ಥೆಯ ಮೇಲೆ ನೆತನ್ಯಾಹು ಆರೋಪಿಸಿದ್ದಾರೆ, ಈ ದಾಳಿಯ ಬಗ್ಗೆ ರೊನೆನ್ ಬಾರ್ ವಾರಗಳ ಮುಂಚೆಯೇ ಎಚ್ಚರಿಕೆ ನೀಡಿದ್ದರು. ದಕ್ಷಿಣ ಇಸ್ರೇಲ್ನಲ್ಲಿ ಹಮಾಸ್ ನಡೆಸಿದ ಈ ದಾಳಿಯಲ್ಲಿ ಸುಮಾರು 1,200 ಜನರು ಸಾವನ್ನಪ್ಪಿದ್ದರು. ದಾಳಿಗೂ ದಿನಗಳು ಮತ್ತು ವಾರಗಳ ಮೊದಲು ಅರಬ್ ನಾಯಕರು ಇಸ್ರೇಲಿ ಪ್ರಧಾನಿಗೆ ಸಂಭವನೀಯ ದಾಳಿಯ ಬಗ್ಗೆ ಎಚ್ಚರಿಕೆ ನೀಡಿದ್ದರು ಎಂಬ ಮಾಧ್ಯಮ ವರದಿಗಳ ಪ್ರಮುಖ ವಿವಾದದ ಮಧ್ಯೆ ಪ್ರಧಾನಿ ಮತ್ತು ಮಾಜಿ ಗೂಢಚಾರಿ ಮುಖ್ಯಸ್ಥರ ನಡುವಿನ ಸಾರ್ವಜನಿಕ ವಾಗ್ವಾದ ಉಂಟಾಗಿದೆ.
ಈ ಮಧ್ಯೆ, ದಾಳಿಯ ಸ್ವಲ್ಪ ಮೊದಲು ನೆತನ್ಯಾಹು ಅವರಿಗೆ ಎಚ್ಚರಿಕೆ ನೀಡಲು ಕರೆ ಮಾಡಿದ್ದರು ಎಂಬ ಮಾಧ್ಯಮ ವರದಿಗಳನ್ನು ಸಾರ್ವಜನಿಕವಾಗಿ ನಿರಾಕರಿಸುವಂತೆ ನೆತನ್ಯಾಹು ಅವರು ಯುಎಇ ಅಧ್ಯಕ್ಷ ಶೇಕ್ ಮೊಹಮ್ಮದ್ ಬಿನ್ ಝಾಯೆದ್ ಅವರನ್ನು ಕೋರಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ವಿವಾದ ಮತ್ತು ಪ್ರತಿಭಟನೆಗಳ ನಡುವೆ ನೆತನ್ಯಾಹು ಭಾನುವಾರ ಯುಎಇಗೆ ತುರ್ತು ಭೇಟಿ ನೀಡಿ ಮೊಹಮ್ಮದ್ ಬಿನ್ ಝಾಯೆದ್ ಅವರನ್ನು ಭೇಟಿಯಾದರು. ಪ್ರಧಾನಿ ಕಚೇರಿಯು ಸೋಮವಾರ ಈ ಭೇಟಿಯನ್ನು ದೃಢಪಡಿಸಿದೆ ಆದರೆ ಭೇಟಿಯ ಉದ್ದೇಶವನ್ನು ನಿರ್ದಿಷ್ಟಪಡಿಸಿಲ್ಲ.
ಹಮಾಸ್ ದಾಳಿಯ ಕೆಲವು ದಿನಗಳ ಮೊದಲು ಈಜಿಪ್ಟ್ನ ಅಂದಿನ ಗುಪ್ತಚರ ಮುಖ್ಯಸ್ಥ ಅಬ್ಬಾಸ್ ಕಮಾಲ್ ತಮಗೆ ನೇರವಾಗಿ ಕರೆ ಮಾಡಿದ್ದರು ಎಂಬ ವರದಿಗಳನ್ನು ನೆತನ್ಯಾಹು ನಿನ್ನೆ ನಿರಾಕರಿಸಿದ್ದಾರೆ. ತಮಗೆ ಮುಂಗಡ ಎಚ್ಚರಿಕೆಗಳು ಬಂದಿವೆ ಎಂಬ ವರದಿಗಳನ್ನು ನೆತನ್ಯಾಹು ತಳ್ಳಿಹಾಕಿದ್ದಾರೆ ಮತ್ತು ಅಕ್ಟೋಬರ್ 7 ರ ಜವಾಬ್ದಾರಿಯನ್ನು ತಮ್ಮ ಮೇಲೆಯೇ ಹಾಕುವ ಅಭಿಯಾನವನ್ನು ಎಡಪಂಥೀಯ ಮಾಧ್ಯಮಗಳು ನಡೆಸುತ್ತಿವೆ ಎಂದು ಆರೋಪಿಸಿದ್ದಾರೆ. ಬದಲಿಗೆ, ದಾಳಿಯ ಹಿಂದಿನ ರಾತ್ರಿ ತನಗೆ ಮಾಹಿತಿ ನೀಡಲಿಲ್ಲ ಎಂದು ಶಿನ್ ಬೆತ್ ಮಾಜಿ ಮುಖ್ಯಸ್ಥ ರೊನೆನ್ ಬಾರ್ ಅವರನ್ನು ದೂರಿದರು.
ಅಕ್ಟೋಬರ್ 7 ರ ಹಿಂದಿನ ರಾತ್ರಿ ಬಾರ್, ಅಂದಿನ ಐಡಿಎಫ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಹೆರ್ಜಿ ಹಲೆವಿ ಮತ್ತು ಮಿಲಿಟರಿ ಗುಪ್ತಚರ ಮುಖ್ಯಸ್ಥ ಮೇಜರ್ ಜನರಲ್ ಅಹರೋನ್ ಹಲೆವಿ ಅವರು ಹಮಾಸ್ ದಾಳಿಯ ಎಲ್ಲಾ ಸೂಚನೆಗಳನ್ನು ಚರ್ಚಿಸಿದ್ದರು ಎಂದು ನೆತನ್ಯಾಹು ದಾವೆ ಮಾಡಿದ್ದಾರೆ. ಪ್ರಧಾನಿಗಳಿಗೆ ಕರೆ ಮಾಡದಿರಲು, ಆ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಸೈನ್ಯವನ್ನು ಎಚ್ಚರಿಸದಿರಲು ಮತ್ತು ನೋವಾ ಸಂಗೀತ ಉತ್ಸವದಿಂದ ಜನರನ್ನು ಸ್ಥಳಾಂತರಿಸದಿರಲು ಬಾರ್ ನಿರ್ಧರಿಸಿದ್ದರು ಎಂದು ನೆತನ್ಯಾಹು ಆರೋಪಿಸಿದ್ದಾರೆ. ಆದಾಗ್ಯೂ, ಹಮಾಸ್ ದಾಳಿಗೂ ಮುನ್ನವೇ ಶಿನ್ ಬೆತ್ ಮುಖ್ಯಸ್ಥ ರೊನಾನ್ ಬಾರ್ ಮತ್ತು ಐಡಿಎಫ್ ಮುಖ್ಯಸ್ಥ ಹೆರ್ಜಿ ಹಲೆವಿ ನಡುವೆ ಯಾವುದೇ ಸಭೆ ಅಥವಾ ಚರ್ಚೆ ನಡೆದಿಲ್ಲ ಎಂದು ಸಾರ್ವಜನಿಕ ಪ್ರಸಾರಕರಾದ ‘ಕಾನ್’ ವರದಿ ಮಾಡಿದೆ.
ನೆತನ್ಯಾಹು ಅವರ ಆರೋಪಗಳು ಬಂದ ಕೆಲವು ಗಂಟೆಗಳ ನಂತರ, ಬಾರ್ ಅವರು ನೆತನ್ಯಾಹು ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಬೆದರಿಕೆ ಹಾಕಿದರು. ನೆತನ್ಯಾಹು ಅವರ ಆರೋಪಗಳು ಆಧಾರರಹಿತವಾಗಿವೆ ಎಂದು ಶಿನ್ ಬೆತ್ ಮಾಜಿ ಮುಖ್ಯಸ್ಥರು ಹೇಳಿದರು. ಮುಂಬರುವ ಭಾರಿ ದಾಳಿಯ ಬಗ್ಗೆ ಅವರು ನೆತನ್ಯಾಹು ಅವರಿಗೆ ದೊಡ್ಡ ಪ್ರಮಾಣದ ವಿವರಗಳೊಂದಿಗೆ ಎಚ್ಚರಿಕೆ ನೀಡಿದ್ದರು. ಆದರೆ ಪ್ರಧಾನಿಯವರು ಆ ಎಚ್ಚರಿಕೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದರು ಮತ್ತು ಗಡಿಯಲ್ಲಿ ಭದ್ರತೆಯನ್ನು ಬಲಪಡಿಸಲು ಹಾಗೂ ಶತ್ರುಗಳ ವಿರುದ್ಧ ರಕ್ಷಣೆಯನ್ನು ಮರುನಿರ್ಮಾಣ ಮಾಡಲು ನೀಡಿದ ಅವರ ಸೂಚನೆಗಳನ್ನು ಕಡೆಗಣಿಸಿದರು ಎಂದು ಬಾರ್ ಹೇಳಿದರು. ರಾಜ್ಯ ತನಿಖಾ ಆಯೋಗಕ್ಕೆ ತಾನು ಇದೆಲ್ಲವನ್ನೂ ಬಹಿರಂಗಪಡಿಸುವುದಾಗಿ ಅವರು ತಿಳಿಸಿದರು. ಎಲ್ಲಾ ದೋಷವನ್ನು ತಮ್ಮ ಮೇಲೆಯೇ ಹಾಕುವ ಪ್ರಧಾನಿಯವರ ಪ್ರಯತ್ನಗಳ ನಡುವೆ ಇನ್ನು ಮುಂದೆ ಮೌನವಾಗಿರಲು ಸಾಧ್ಯವಿಲ್ಲ ಎಂದು ಅವರು ಸೇರಿಸಿದರು.
ಅಕ್ಟೋಬರ್ 7 ರ ಭದ್ರತಾ ಲೋಪಗಳಿಗೆ ಇಸ್ರೇಲಿ ಭದ್ರತಾ ಅಧಿಕಾರಿಗಳನ್ನು ದೂಷಿಸುವ ಅಭ್ಯಾಸ ನೆತನ್ಯಾಹು ಅವರಿಗಿದೆ. ಗಾಝಾದಿಂದ ಚಿಂತಾಜನಕ ಸಿಗ್ನಲ್ಗಳ ಬಗ್ಗೆ ಭದ್ರತಾ ಮುಖ್ಯಸ್ಥರು ಚರ್ಚಿಸುತ್ತಿದ್ದ ಆ ದಿನದಂದು ಬೆಳಿಗ್ಗೆ ತಮಗೆ ಎಚ್ಚರಗೊಳಿಸಿದ್ದರೆ, ತಾನು ತಕ್ಷಣದ ಕ್ರಮಕ್ಕೆ ಆದೇಶಿಸುತ್ತಿದ್ದೆ ಮತ್ತು ದಾಳಿಯನ್ನು ತಡೆಯುತ್ತಿದ್ದೆ ಎಂದು ನೆತನ್ಯಾಹು ವಾದ ಮಾಡಿದ್ದಾರೆ.
ದಾಳಿಗೂ ವಾರಗಳ ಮೊದಲು ಇಸ್ರೇಲಿ ಗುಪ್ತಚರ ಸಂಸ್ಥೆಗೆ ಎಚ್ಚರಿಕೆ ಬಂದಿತ್ತು ಎಂದು ಇಸ್ರೇಲ್ನ ಮಾಜಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಕೂಡ ಬಹಿರಂಗಪಡಿಸಿದ್ದಾರೆ. ಶಿನ್ ಬೆತ್ ಮೂಲಕ ರಹಸ್ಯ ಚಾನಲ್ ಮೂಲಕ ಹಮಾಸ್ ಸಂದೇಶವು ಬಂದಿದೆ ಎಂದು ಗ್ಯಾಲಂಟ್ ಹೇಳಿದರು.












