ಗಾಂಧಿ ಕನಸಿದ ಭಾರತ ಮತ್ತು ಇಂದಿನ ವಾಸ್ತವ: ಅಕ್ಟೋಬರ್ 2ರ ಆತ್ಮಾವಲೋಕನ

0
249

✍️ ಎಂ.ಆರ್. ಮಾನ್ವಿ

ಅಕ್ಟೋಬರ್ 2ರ ಈ ಹೊತ್ತಿನಲ್ಲಿ ನಾವು ಗಾಂಧೀಜಿಯವರನ್ನು ಸ್ಮರಿಸುವುದು ಕೇವಲ ನಿಯಮಿತ ಆಚರಣೆಯಾಗಬಾರದು; ಅದು ನಮ್ಮ ಆತ್ಮಾವಲೋಕನದ ಕ್ಷಣವಾಗಬೇಕು.

ಅಕ್ಟೋಬರ್ 2 ಬಂತೆಂದರೆ ಸಾಕು, ಇಡೀ ದೇಶದಲ್ಲೊಂದು ಆಚರಣೆಯ ವಾತಾವರಣ ಸೃಷ್ಟಿಯಾಗುತ್ತದೆ. ಶಾಲೆ-ಕಾಲೇಜುಗಳಲ್ಲಿ ಭಾಷಣಗಳು ಮೊಳಗುತ್ತವೆ, ಸರ್ಕಾರಿ ಕಚೇರಿಗಳಲ್ಲಿ ಗಾಂಧೀಜಿಯವರ ಭಾವಚಿತ್ರಕ್ಕೆ ಹೂಮಾಲೆಗಳ ಅರ್ಪಣೆಯಾಗುತ್ತದೆ, ಸ್ವಚ್ಛತಾ ಅಭಿಯಾನಗಳು ನಡೆಯುತ್ತವೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅವರ ಮಹಾನ್ ಉಕ್ತಿಗಳು ಹರಿದಾಡುತ್ತವೆ.

ಆದರೆ, ಈ ಆಚರಣೆಗಳ ಗದ್ದಲ ಮುಗಿದ ನಂತರ ನಮಗೇ ನಾವು ಒಂದು ಸರಳ ಪ್ರಶ್ನೆ ಕೇಳಿಕೊಳ್ಳಬೇಕಿದೆ—ಗಾಂಧೀಜಿ ಇಂದು ಮರಳಿ ಬಂದರೆ, ಅವರು ಕನಸು ಕಂಡಿದ್ದ ಆ ಭಾರತ ಅವರಿಗೆ ಎಲ್ಲಾದರೂ ಸಿಗುತ್ತದೆಯೇ?

ಅವರು ಇಂದಿನ ಭಾರತಕ್ಕೆ ಬಂದಿದ್ದರೆ, ಮೊದಲು ಸಂಸತ್ ಭವನ, ವಿಧಾನಸೌಧ ಅಥವಾ ರಾಷ್ಟ್ರಪತಿ ಭವನವನ್ನು ಹುಡುಕಿಕೊಂಡು ಹೋಗುತ್ತಿರಲಿಲ್ಲ. ಬಹುಶಃ ಧೂಳು ತುಂಬಿದ ಹಳ್ಳಿಯ ದಾರಿಯಲ್ಲಿ ನಡೆದು, ಒಬ್ಬ ಸಾಮಾನ್ಯ ರೈತನ, ಕಾರ್ಮಿಕನ, ಬಡ ಮಹಿಳೆಯ ಅಥವಾ ಯುವ ವಿದ್ಯಾರ್ಥಿಯ ಮುಂದೆ ನಿಂತು ಮಾತನಾಡುತ್ತಿದ್ದರು. ಅವರ ಕಣ್ಣುಗಳನ್ನು ನೋಡಿ, ‘ನಾನು ಬಯಸಿದ ಭಾರತ ಇಲ್ಲಿದೆಯೇ?’ ಎಂದು ಹುಡುಕುತ್ತಿದ್ದರು.

ಇದು ಗಾಂಧೀಜಿಯವರೊಬ್ಬರ ಪ್ರಶ್ನೆಯಲ್ಲ; ಪ್ರಜಾಪ್ರಭುತ್ವದಲ್ಲಿ ನಾಗರಿಕರಾಗಿ ಬದುಕುತ್ತಿರುವ ನಾವೆಲ್ಲರೂ ಪ್ರತಿದಿನ ನಮಗೆ ಕೇಳಿಕೊಳ್ಳಬೇಕಾದ ಆತ್ಮಸಾಕ್ಷಿಯ ಪ್ರಶ್ನೆ.

ಸತ್ಯದ ಭಾರತ ಎಲ್ಲಿದೆ?

ಗಾಂಧೀಜಿಗೆ ‘ಸತ್ಯ’ ಎಂಬುದು ಕೇವಲ ಸುಳ್ಳು ಹೇಳದಿರುವುದಕ್ಕೆ ಸೀಮಿತವಾಗಿರಲಿಲ್ಲ. ಅದು ಅನುಭವ ಮತ್ತು ಪರೀಕ್ಷೆಗೆ ಒಡ್ಡುವ ಜೀವನ ವಿಧಾನವಾಗಿತ್ತು. ಇಂದಿನ ರಾಜಕೀಯ ಪರಿಸರದಲ್ಲಿ ಸರ್ಕಾರಗಳು ಬದಲಾಗಬಹುದು, ಪಕ್ಷಗಳು ಮತ್ತು ಘೋಷಣೆಗಳು ರೂಪಾಂತರಗೊಳ್ಳಬಹುದು. ಆದರೆ, ನಾಯಕರ ಮಾತು ಮತ್ತು ಕೃತಿಯ ನಡುವಿನ ಅಂತರ ಸದಾ ದೊಡ್ಡದಾಗುತ್ತಲೇ ಇದೆ.

ಚುನಾವಣೆಯ ಸಮಯದಲ್ಲಿ ಮಾತ್ರ ಪ್ರಜೆಗಳು ‘ಜನಾರ್ದನ’ರಾಗುತ್ತಾರೆ; ಆನಂತರ ಅವರ ಮೂಲಭೂತ ಸಮಸ್ಯೆಗಳು ಅದೇ ಸ್ಥಿತಿಯಲ್ಲಿ ಉಳಿಯುತ್ತವೆ. ಭರವಸೆಗಳನ್ನು ನೀಡುವುದು ಸುಲಭ, ಆದರೆ ಅದನ್ನು ಈಡೇರಿಸುವುದರಲ್ಲಿದೆ ಸತ್ಯನಿಷ್ಠೆಯ ನಿಜವಾದ ಪರೀಕ್ಷೆ.

ಮತ್ತೊಂದೆಡೆ, ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಮಾಧ್ಯಮವೇ ರಾಜಕೀಯ ಸಂವಹನದ ಮುಖ್ಯ ಅಸ್ತ್ರ. ಅರ್ಧಸತ್ಯ, ಸುಳ್ಳು ಸುದ್ದಿ ಮತ್ತು ತಪ್ಪು ಮಾಹಿತಿಗಳು ಬೆಂಕಿಯಂತೆ ಕ್ಷಣ ಮಾತ್ರದಲ್ಲಿ ಸಾವಿರಾರು ಜನರನ್ನು ತಲುಪುತ್ತವೆ. ಇಂತಹ ಸಮಯದಲ್ಲಿ ಗಾಂಧೀಜಿ ಇದ್ದಿದ್ದರೆ ಬಹುಶಃ ಹೀಗೆ ಕೇಳುತ್ತಿದ್ದರು: “ನೀವು ಸತ್ಯವನ್ನು ಹುಡುಕುತ್ತಿದ್ದೀರಾ, ಅಥವಾ ನಿಮ್ಮ ಪೂರ್ವಗ್ರಹ ಮತ್ತು ನಂಬಿಕೆಗೆ ಸರಿ ಹೊಂದುವ ಸುದ್ದಿಯನ್ನು ಮಾತ್ರ ಹುಡುಕುತ್ತಿದ್ದೀರಾ?”

ಅಹಿಂಸೆ ಎಂದರೆ ಕೇವಲ ಶಸ್ತ್ರ ತ್ಯಾಗವಲ್ಲ, ಗಾಂಧೀಜಿಯವರ ಅಹಿಂಸೆಯ ಕಲ್ಪನೆ ಆಳವಾದದ್ದು. ಕೈಯಲ್ಲಿ ಕಲ್ಲು ಅಥವಾ ಅಸ್ತ್ರ ಹಿಡಿಯದಿರುವುದು ಮಾತ್ರವೇ ಅಹಿಂಸೆಯಲ್ಲ; ಮಾತಿನಲ್ಲಿ ಮತ್ತೊಬ್ಬರನ್ನು ನಿಂದಿಸದಿರುವುದು, ಭಿನ್ನಾಭಿಪ್ರಾಯ ಹೊಂದಿರುವವರನ್ನು ವೈರಿಯೆಂದು ಭಾವಿಸದಿರುವುದೂ ಅಹಿಂಸೆಯ ಮಹತ್ವದ ಭಾಗ.

ಇಂದು ಸಾರ್ವಜನಿಕ ಚರ್ಚೆಗಳು ವೈಯಕ್ತಿಕ ದಾಳಿ ಮತ್ತು ದ್ವೇಷದ ಭಾಷೆಯಾಗಿ ಕೆಳಮಟ್ಟಕ್ಕೆ ಇಳಿಯುತ್ತಿವೆ. ಸಣ್ಣಪುಟ್ಟ ಘಟನೆಗಳೂ ಸಾಮಾಜಿಕ ಹಾಗೂ ಕೋಮು ಸಂಘರ್ಷಕ್ಕೆ ತಿರುಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇತ್ತೀಚೆಗೆ ದಕ್ಷಿಣ ಕನ್ನಡದ ಪುತ್ತೂರಿನ ಸ್ಥಳೀಯ ವಿವಾದವೊಂದು ಕೋಮು ಉದ್ವಿಗ್ನತೆಗೆ ಕಾರಣವಾದಾಗ, ಹೈಕೋರ್ಟ್ ‘ಸೌಹಾರ್ದತೆಯಿಂದ ಬದುಕುವುದೇ ಧರ್ಮ’ ಎಂಬರ್ಥದಲ್ಲಿ ನೀಡಿದ ಅಭಿಪ್ರಾಯವನ್ನು ನಾವು ಗಂಭೀರವಾಗಿ ಪರಿಗಣಿಸಬೇಕಿದೆ.

ಗಾಂಧೀಜಿ ನಮ್ಮ ನಡುವೆ ಇದ್ದಿದ್ದರೆ ಖಂಡಿತ ಹೇಳುತ್ತಿದ್ದರು: “ನಿಮ್ಮ ಎದುರಾಳಿ ನಿಮ್ಮ ಶತ್ರುವಲ್ಲ; ಆತನೂ ನಿಮ್ಮಂತೆಯೇ ಭಿನ್ನ ಅಭಿಪ್ರಾಯ ಹೊಂದಿರುವ ಈ ದೇಶದ ನಾಗರಿಕ.” ರಾಜಕೀಯ ಮತ್ತು ಪ್ರಜಾಪ್ರಭುತ್ವದ ಮೌಲ್ಯ.

ಗಾಂಧೀಜಿಗೆ ರಾಜಕೀಯ ಎಂಬುದು ಅಧಿಕಾರದ ಪೀಠವೇರುವ ತಂತ್ರವಾಗಿರಲಿಲ್ಲ, ಬದಲಿಗೆ ಅದು ಸಮಾಜ ಸೇವೆಯ ಪವಿತ್ರ ಸಾಧನವಾಗಿತ್ತು. ಇಂದಿನ ರಾಜಕೀಯದಲ್ಲಿ ಅಭಿವೃದ್ಧಿ, ಉದ್ಯೋಗ, ಶಿಕ್ಷಣ, ಪರಿಸರ ಮತ್ತು ಮೂಲ ಸೌಕರ್ಯಗಳ ಕುರಿತು ಚರ್ಚೆಗಳು ನಡೆಯುತ್ತಿವೆಯಾದರೂ, ಜನರ ನಡುವೆ ಪರಸ್ಪರ ನಂಬಿಕೆಯನ್ನು ಉಳಿಸುವ ರಾಜಕೀಯ ಇಲ್ಲವಾಗುತ್ತಿದೆ.

ಇತ್ತೀಚಿನ ಕರ್ನಾಟಕ ವಿಧಾನಮಂಡಲದ ಅಧಿವೇಶನದಲ್ಲಿ ಕಸ್ತೂರಿರಂಗನ್ ವರದಿ, ಬರ ಪರಿಸ್ಥಿತಿ ಮತ್ತು ‘ವಂದೇ ಮಾತರಂ’ ಗೀತೆಯ ಪಠಣದಂತಹ ವಿಷಯಗಳು ತೀವ್ರ ಚರ್ಚೆಗೆ ಗ್ರಾಸವಾಗಿದ್ದವು. ಕಸ್ತೂರಿರಂಗನ್ ವರದಿಯನ್ನು ಹಾಲಿ ರೂಪದಲ್ಲಿ ಪುರಸ್ಕರಿಸಬಾರದು ಎಂದು ಶಾಸನ ಸಭೆ ಒಮ್ಮತದ ನಿರ್ಣಯ ಕೈಗೊಂಡಾಗ, ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ಸಂರಕ್ಷಣೆ ಮತ್ತು ಅಲ್ಲಿನ ಜನರ ಜೀವನೋಪಾಯದ ಸಮತೋಲನದ ಪ್ರಶ್ನೆ ಮುನ್ನೆಲೆಗೆ ಬಂದಿತ್ತು. ಅದೇ ರೀತಿ, ದೇಶ ಪ್ರೇಮದ ಸಂಕೇತಗಳ ಚರ್ಚೆಯೂ ರಾಜಕೀಯ ಭಿನ್ನಾಭಿಪ್ರಾಯಕ್ಕೆ ವೇದಿಕೆಯಾಯಿತು.

ವಿಚಾರ ವಿನಿಮಯಗಳು ಪ್ರಜಾಪ್ರಭುತ್ವದ ಜೀವಾಳ ನಿಜ. ಆದರೆ ನಮ್ಮ ಭಿನ್ನಾಭಿಪ್ರಾಯಗಳು ಸಮಾಜವನ್ನು ಒಡೆಯುವ ಮಟ್ಟಕ್ಕೆ ಬೆಳೆಯಬೇಕೇ ಅಥವಾ ನಾಡಿನ ಸಮಸ್ಯೆಗಳನ್ನು ಪರಿಹರಿಸುವಷ್ಟು ರಚನಾತ್ಮಕವಾಗಿರಬೇಕೇ? ಎಂಬುದನ್ನು ನಿರ್ಧರಿಸಬೇಕಿದೆ.

ನ್ಯಾಯನಿಷ್ಠೆಯ ಮಂದಿರ ಮತ್ತು ವ್ಯವಸ್ಥೆಯ ಸವಾಲು

ಗಾಂಧೀಜಿ ಬಯಸಿದ ಭಾರತದಲ್ಲಿ ಕಾನೂನಿನ ಕಣ್ಣಿನಲ್ಲಿ ಎಲ್ಲರೂ ಸಮಾನರು. ಇಂದು ನಮ್ಮಲ್ಲಿ ಬಲಿಷ್ಠ ಸಂವಿಧಾನವಿದೆ, ಕಾನೂನುಗಳಿವೆ, ನ್ಯಾಯಾಲಯಗಳಿವೆ. ಆದರೆ, ಒಬ್ಬ ಸಾಮಾನ್ಯ ನಾಗರಿಕ ತನಗೆ ಸಿಗಬೇಕಾದ ನ್ಯಾಯಕ್ಕಾಗಿ ವರ್ಷಗಟ್ಟಲೆ ಅಲೆಯಬೇಕಾದರೆ ಅಥವಾ ಹಕ್ಕುಗಳಿಗಾಗಿ ಕಚೇರಿಗಳ ಮೆಟ್ಟಿಲು ಹತ್ತಬೇಕಾದರೆ, ಆತನಿಗೆ ವ್ಯವಸ್ಥೆಯ ಮೇಲಿರುವ ವಿಶ್ವಾಸ ಸಡಿಲಗೊಳ್ಳುತ್ತದೆ.

ಗಾಂಧೀಜಿ ಇಂದು ಬಂದಿದ್ದರೆ ಬೃಹತ್ ಆಡಳಿತ ಸೌಧಗಳನ್ನು ನೋಡಿ ಬೆರಗಾಗುತ್ತಿರಲಿಲ್ಲ. ಬದಲಿಗೆ, ಆ ಸೌಧದ ಹೊರಗೆ ನಿಂತಿರುವ ಬಡ ವ್ಯಕ್ತಿಗೆ ನ್ಯಾಯ ಎಷ್ಟು ಸುಲಭವಾಗಿ ಸಿಗುತ್ತಿದೆ ಎಂದು ವಿಚಾರಿಸುತ್ತಿದ್ದರು.

ಹೊಸ ರೂಪದ ವ್ಯಸನಗಳು ಮತ್ತು ಸಾಮಾಜಿಕ ದರೋಡೆ

ಸಾಮಾಜಿಕ ಸುಧಾರಣೆಯಲ್ಲಿ ಮದ್ಯನಿಷೇಧಕ್ಕೆ ಗಾಂಧೀಜಿ ಆದ್ಯತೆ ನೀಡಿದ್ದರು. ಇಂದು ವ್ಯಸನದ ಸ್ವರೂಪ ಬದಲಾಗಿದೆ. ಮದ್ಯದ ಜೊತೆಗೆ ಮಾದಕ ದ್ರವ್ಯಗಳು, ಆನ್‌ಲೈನ್ ಜೂಜು, ಮೊಬೈಲ್ ಮತ್ತು ಸಾಮಾಜಿಕ ಮಾಧ್ಯಮದ ಅತಿಯಾದ ಚಟಗಳು ಯುವ ಜನತೆಯನ್ನು ಆವರಿಸುತ್ತಿವೆ. “ನಿಮ್ಮ ಊರಿನಲ್ಲಿ ಮದ್ಯದ ಬಾಗಿಲು ಮುಚ್ಚಿದರೂ, ಮಕ್ಕಳ ಭವಿಷ್ಯ ಹಾಳುಮಾಡುವ ಡಿಜಿಟಲ್ ವ್ಯಸನದ ಬಾಗಿಲು ತೆರೆದಿದೆಯೇ?” ಎಂದು ಗಾಂಧೀಜಿ ಪ್ರಶ್ನಿಸಿದರೆ ನಮ್ಮ ಬಳಿ ಉತ್ತರವಿದೆಯೇ?

ಅಂತೆಯೇ, ದರೋಡೆ ಎಂದರೆ ಬರಿ ಹಣ ಕಸಿಯುವುದಲ್ಲ. ಶ್ರಮಿಕನಿಗೆ ಸೂಕ್ತ ಕೂಲಿ ನೀಡದಿರುವುದು, ಸಾರ್ವಜನಿಕರ ವಿಶ್ವಾಸವನ್ನು ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಳ್ಳವುದು ಕೂಡ ವ್ಯವಸ್ಥಿತ ದರೋಡೆಯೇ. ‘ಕಳ್ಳತನ ಎಷ್ಟು ಕಡಿಮೆಯಾಗಿದೆ’ ಎಂಬುದಕ್ಕಿಂತ ‘ಅನ್ಯಾಯ ಎಷ್ಟು ಕಡಿಮೆಯಾಗಿದೆ’ ಎಂಬುದೇ ಸಮಾಜದ ಪ್ರಗತಿಗೆ ಮಾನದಂಡ.

ಶಿಕ್ಷಣ ಮತ್ತು ಪರಿಸರ

ಗಾಂಧೀಜಿಯವರ ಪ್ರಕಾರ ಶಿಕ್ಷಣವೆಂದರೆ ಕೇವಲ ಅಂಕಗಳಿಕೆಯಲ್ಲ; ಮನುಷ್ಯತ್ವದ ವಿಕಸನ. ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (AI) ಇಂದಿನ ತರಗತಿಗಳನ್ನು ತಲುಪುತ್ತಿದ್ದರೂ, ಮೂಲಭೂತ ಸೌಕರ್ಯ ಮತ್ತು ಶಿಕ್ಷಕರ ಅಭಾವ ದೊಡ್ಡ ಸವಾಲಾಗಿದೆ. ಇತ್ತೀಚೆಗೆ ಚುನಾವಣಾ ಪಟ್ಟಿ ಪರಿಷ್ಕರಣೆ (SIR) ಕೆಲಸಗಳಿಗೆ ಸರ್ಕಾರಿ ಶಾಲಾ ಶಿಕ್ಷಕರನ್ನು ನಿಯೋಜಿಸಿದ್ದರಿಂದ ಬೋಧನಾ ಪ್ರಕ್ರಿಯೆಗೆ ತೊಡಕಾಗಿರುವ ವರದಿಗಳನ್ನು ನಾವು ನೋಡಿದ್ದೇವೆ. ಶಿಕ್ಷಕರೇ ಇಲ್ಲದ ತರಗತಿಯಲ್ಲಿ ಕುಳಿತು ಭವಿಷ್ಯದ ಭಾರತವನ್ನು ನಿರ್ಮಿಸುವುದು ಹೇಗೆ?

ಅಂತೆಯೇ, ಪರಿಸರದ ವಿಷಯದಲ್ಲೂ ಗಾಂಧೀಜಿಯವರ ‘ಸರಳ ಜೀವನ’ದ ಸಿದ್ಧಾಂತ ಪ್ರಸ್ತುತ. ಅಭಿವೃದ್ಧಿ ಎಂದರೆ ಪ್ರಕೃತಿಯನ್ನು ನಾಶಪಡಿಸುವುದಲ್ಲ; ಪ್ರಕೃತಿಯೊಂದಿಗೆ ಸಮತೋಲನದಿಂದ ಬಾಳುವುದು. ಕಸ್ತೂರಿರಂಗನ್ ವರದಿಯಂತಹ ವಿಷಯಗಳನ್ನು ಪಕ್ಷೀಯ ರಾಜಕೀಯಕ್ಕೆ ಬಳಸದೆ, ಮುಂಬರುವ ಪೀಳಿಗೆಯ ಉಳಿವಿಗಾಗಿ ಚಿಂತಿಸಬೇಕಿದೆ.

ಗಾಂಧೀಜಿ ಮರಳಿ ಬರಬೇಕಿಲ್ಲ…

ಗಾಂಧೀಜಿ ಇಂದು ಮರಳಿ ಬಂದರೆ ಟಿವಿ ಸ್ಟುಡಿಯೋಗಳ ಗದ್ದಲದ ಚರ್ಚೆಗಳಿಗಾಗಲಿ, ರಾಜಕೀಯ ವೇದಿಕೆಗಳಿಗಾಗಲಿ ಹೋಗುವುದಿಲ್ಲ. ಅವರು ಶಾಲೆಯೊಂದರ ತರಗತಿಗೆ, ರೈತನ ಹೊಲಕ್ಕೆ ಅಥವಾ ನಿರುದ್ಯೋಗಿ ಯುವಕನ ಬಳಿ ಹೋಗಿ ನಿಂತು, ಸುಮ್ಮನೆ ಕಣ್ಣು ಮುಚ್ಚಿ ಕೇಳಬಹುದು—“ಇದು ನಾನು ಕನಸು ಕಂಡ ಭಾರತವೇ?”

ಅವರು ಹುಡುಕುವ ಆ ಸತ್ಯದ, ಅಹಿಂಸೆಯ, ನ್ಯಾಯದ, ಪ್ರಕೃತಿ ಸ್ನೇಹಿ ಹಾಗೂ ಮಾನವೀಯತೆಯ ಭಾರತವನ್ನು ಮತ್ತೆ ನಿರ್ಮಿಸುವುದು ಗಾಂಧೀಜಿಯಲ್ಲ; ಅದು ನಮ್ಮ ಹೊಣೆ. ಅಕ್ಟೋಬರ್ 2ರಂದು ಅವರ ಪ್ರತಿಮೆಗೆ ಹಾರ ಹಾಕಿ ಭಾಷಣ ಮಾಡುವುದು ಸುಲಭ. ಆದರೆ, ಅವರ ಅತ್ಯಂತ ಸರಳ ಹಾಗೂ ಕಠಿಣವಾದ ಒಂದು ಪ್ರಶ್ನೆಗೆ ನಮ್ಮ ಬದುಕಿನಲ್ಲಿ ಉತ್ತರ ಕಂಡುಕೊಳ್ಳಬೇಕಿದೆ.

ಗಾಂಧೀಜಿ ವ್ಯಕ್ತಿಯಾಗಿ ಮರಳಿ ಬರಬೇಕಿಲ್ಲ; ಅವರು ಕನಸು ಕಂಡಿದ್ದ ಭಾರತ ನಮ್ಮ ಮನೆಗಳಿಂದ, ಶಾಲೆಗಳಿಂದ, ಸಮಾಜದಿಂದ ಹಾಗೂ ನಮ್ಮ ಮನಸ್ಸುಗಳಿಂದ ಮರಳಿ ಬರಬೇಕಿದೆ.