✍️ ಅತ್ಥರುಲ್ಲಾಹ್ ಶರೀಫ್, ಬೆಂಗಳೂರು
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ತುಳು ಭಾಷೆಗೆ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ಕರ್ನಾಟಕ ಸರ್ಕಾರದ ಇತ್ತೀಚಿನ ನಿರ್ಧಾರವು ಪ್ರಶಂಸಾರ್ಹವಾಗಿದೆ. ಇದು ಭಾರತೀಯ ಒಕ್ಕೂಟ ವ್ಯವಸ್ಥೆಯ ಪ್ರಮುಖ ತತ್ವವನ್ನು ಗುರುತಿಸುತ್ತದೆ: ಭಾಷಾ ವೈವಿಧ್ಯತೆಯು ನಿರ್ವಹಿಸಬೇಕಾದ ಒಂದು ಸಮಸ್ಯೆಯಲ್ಲ, ಬದಲಾಗಿ ರಕ್ಷಿಸಬೇಕಾದ ಸಾಂಸ್ಕೃತಿಕ ಸಂಪತ್ತಾಗಿದೆ. ಈ ನಿರ್ಧಾರವು ಕರ್ನಾಟಕದಲ್ಲಿ ಮತ್ತೊಂದು ದೀರ್ಘಕಾಲದ ಭಾಷಾ ಬೇಡಿಕೆಯನ್ನು – ಅಂದರೆ ಉರ್ದುವಿಗೆ ಅಧಿಕೃತ ಮನ್ನಣೆ ನೀಡುವ ಬೇಡಿಕೆಯನ್ನು ಮರುಪರಿಶೀಲಿಸಲು ಅವಕಾಶ ಕಲ್ಪಿಸುತ್ತದೆ.
ಕನ್ನಡದ ಪ್ರಾಮುಖ್ಯತೆಯನ್ನು ಕಾಪಾಡಿಕೊಳ್ಳುವ ಜೊತೆಗೆ ತುಳುವಿಗೆ ಮನ್ನಣೆ ನೀಡುವ ಮೂಲಕ ಪ್ರಜಾಸತ್ತಾತ್ಮಕ ಸರ್ಕಾರವು ಭಾಷಾ ಆಕಾಂಕ್ಷೆಗಳನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂಬುದನ್ನು ತೋರಿಸುತ್ತದೆ. ಅದೇ ಮನೋಭಾವದಲ್ಲಿ ಉರ್ದುವನ್ನೂ ಕಾಣಲು ಕರ್ನಾಟಕದ ಧೋರಣೆಯನ್ನು ಮಾರ್ಗದರ್ಶನ ಮಾಡಬೇಕು.
ಸಂವಿಧಾನಿಕ ಸಾಧ್ಯತೆ
ಸಂವಿಧಾನವು ಸ್ವತಃ ಇಂತಹ ವಿಧಾನಕ್ಕೆ ಗಣನೀಯ ಅವಕಾಶವನ್ನು ಕಲ್ಪಿಸುತ್ತದೆ. ವಿಧಿ 345 ರಾಜ್ಯ ವಿಧಾನಸಭೆಗೆ ಎಲ್ಲಾ ಅಥವಾ ಕೆಲವು ಅಧಿಕೃತ ಉದ್ದೇಶಗಳಿಗಾಗಿ ರಾಜ್ಯದಲ್ಲಿ ಬಳಕೆಯಲ್ಲಿರುವ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಅಧಿಕೃತ ಭಾಷೆಗಳಾಗಿ ಅಂಗೀಕರಿಸಲು ಅಧಿಕಾರ ನೀಡುತ್ತದೆ. ವಿಧಿ 347 ನಿರ್ದಿಷ್ಟ ಸಂದರ್ಭಗಳಲ್ಲಿ ರಾಜ್ಯದ ಜನಸಂಖ್ಯೆಯ ಗಣನೀಯ ವಿಭಾಗದಿಂದ ಮಾತನಾಡುವ ಭಾಷೆಗೆ ಮನ್ನಣೆ ನೀಡಲು ಅವಕಾಶ ಕಲ್ಪಿಸುತ್ತದೆ.
ಉರ್ದು ಈಗಾಗಲೇ ಸಂವಿಧಾನದ ಎಂಟನೇ ಪರಿಚ್ಚೇದದಲ್ಲಿ ಸೇರಿಸಲಾದ 22 ಭಾಷೆಗಳಲ್ಲಿ ಒಂದಾಗಿದೆ. ಆದ್ದರಿಂದ, ಕರ್ನಾಟಕದಲ್ಲಿ ಉರ್ದುವಿಗೆ ಅಧಿಕೃತ ಮನ್ನಣೆ ನೀಡುವ ಬೇಡಿಕೆಯು ಸಂವಿಧಾನಬಾಹಿರವೂ ಅಲ್ಲ ಅಥವಾ ವಿಶೇಷ ಅಧಿಕಾರ ಸ್ಥಾನಕ್ಕಾಗಿ ಮಾಡಿದ ಮನವಿಯೂ ಅಲ್ಲ. ಇದು ರಾಜ್ಯದ ಬಹುಭಾಷಾ ಸ್ವರೂಪವು ಅದರ ಆಡಳಿತದಲ್ಲಿ ಹೇಗೆ ಪ್ರತಿಫಲಿಸಬೇಕು ಎಂಬ ಬಗೆಗಿನ ಪ್ರಶ್ನೆಯಾಗಿದೆ.
ಕರ್ನಾಟಕದ ಇತಿಹಾಸದ ಭಾಗ ಉರ್ದು
ಕರ್ನಾಟಕದಲ್ಲಿ ಉರ್ದುವಿನ ಉಪಸ್ಥಿತಿಯು ಇತ್ತೀಚಿನ ಬೆಳವಣಿಗೆಯಲ್ಲ. ಇದು ಈ ಪ್ರದೇಶದಲ್ಲಿ ಆಳವಾದ ಐತಿಹಾಸಿಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಬೇರುಗಳನ್ನು ಹೊಂದಿದೆ. ದಕ್ಕನ್ನ ಮಧ್ಯಕಾಲೀನ ಮತ್ತು ಆರಂಭಿಕ ಆಧುನಿಕ ಇತಿಹಾಸದಿಂದ ಹಿಡಿದು ಬೆಂಗಳೂರು, ಕಲಬುರಗಿ, ಬೀದರ್, ರಾಯಚೂರು, ಬಳ್ಳಾರಿ, ವಿಜಯಪುರ ಮತ್ತು ರಾಜ್ಯದ ಇತರ ಭಾಗಗಳ ಸಾಂಸ್ಕೃತಿಕ ಜೀವನದವರೆಗೆ ಉರ್ದು ಕರ್ನಾಟಕದ ಸಮ್ಮಿಶ್ರ ಭಾಷಾ ನೆಲೆಯ ಭಾಗವಾಗಿದೆ.
ಉರ್ದುವಿನ ಕೊಡುಗೆ ಮುಸ್ಲಿಂ ಸಮುದಾಯಕ್ಕೂ ಮೀರಿರುವಂತಹದ್ದಾಗಿದೆ. ಉರ್ದು ಭಾಷಾ ಪತ್ರಿಕೋದ್ಯಮ, ಕಾವ್ಯ, ಸಾಹಿತ್ಯ, ರಂಗಭೂಮಿ ಮತ್ತು ಶಿಕ್ಷಣವು ನಮ್ಮ ರಾಜ್ಯದ ಸಾಂಸ್ಕೃತಿಕ ಇತಿಹಾಸಕ್ಕೆ ಗಣನೀಯವಾಗಿ ಕೊಡುಗೆ ನೀಡಿವೆ. ಕನ್ನಡ ಮತ್ತು ಉರ್ದು ಕೂಡ ಶತಮಾನಗಳಿಂದ ಪರಸ್ಪರ ಸಂವಾದ ನಡೆಸಿ, ಪರಸ್ಪರ ಹಂಚಿಕೊಂಡಿರುವ ಸಾಂಸ್ಕೃತಿಕ ಶಬ್ದವಾಳಿ ಮತ್ತು ಸಾಮಾಜಿಕ ಅನುಭವವನ್ನು ಸೃಷ್ಟಿಸಿವೆ.
ಹಾಗಾಗಿ, ಉರ್ದುವನ್ನು ಕೇವಲ ಒಂದು ಧಾರ್ಮಿಕ ಸಮುದಾಯದ ಭಾಷೆಯಾಗಿ ಮಾತ್ರ ನೋಡುವುದು ಐತಿಹಾಸಿಕವಾಗಿ ಅಸಮರ್ಪಕವಾಗುತ್ತದೆ. ಕನ್ನಡ, ತುಳು, ಕೊಂಕಣಿ, ಮರಾಠಿ ಮತ್ತು ಕರ್ನಾಟಕದಲ್ಲಿ ಮಾತನಾಡುವ ಇತರ ಭಾಷೆಗಳಂತೆ, ಉರ್ದು ತನ್ನದೇ ಆದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಭಾಷಾ ಪರಂಪರೆಯನ್ನು ಪ್ರತಿನಿಧಿಸುತ್ತದೆ.
ಮನ್ನಣೆಗೆ ವ್ಯವಹಾರಿಕ ಅರ್ಥವಿರಬೇಕು
ಅಧಿಕೃತ ಭಾಷೆಯ ಸ್ಥಾನಮಾನವು ಕೇವಲ ಸಾಂಕೇತಿಕ ಘೋಷಣೆಯಾಗಿ ಉಳಿಯಬಾರದು. ಪ್ರಾಯೋಗಿಕ ಅನುಷ್ಠಾನದಲ್ಲಿ ಮಾತ್ರ ಅದರ ಮೌಲ್ಯ ಅವಲಂಬಿಸಿರುತ್ತದೆ.
ಆರಂಭಿಕ ಹಂತವಾಗಿ ಉರ್ದು ಗಣನೀಯವಾಗಿ ಬಳಕೆಯಲ್ಲಿರುವ ಪ್ರದೇಶಗಳಲ್ಲಿ ಮನ್ನಣೆಯ ಕುರಿತಾಗಿ ಗಮನಹರಿಸಬಹುದು. ಸಾಕಷ್ಟು ಬೇಡಿಕೆ ಇರುವ ಕಡೆಗಳಲ್ಲಿ ಸರ್ಕಾರದ ಅಧಿಸೂಚನೆಗಳು, ನಮೂನೆಗಳು, ಅರ್ಜಿಗಳು ಮತ್ತು ಸಾರ್ವಜನಿಕ ಸೇವಾ ಮಾಹಿತಿಗಳನ್ನು ಉರ್ದುವಿನಲ್ಲಿ ಲಭ್ಯವಾಗುವಂತೆ ಮಾಡಬಹುದು. ಉರ್ದು ಮಾತನಾಡುವ ಜನಸಂಖ್ಯೆಯ ಬಾಹುಳ್ಯ ಇರುವ ಪ್ರದೇಶಗಳಲ್ಲಿ ನಾಗರಿಕರು ಸರ್ಕಾರಿ ಕಚೇರಿಗಳಿಗೆ ಉರ್ದುವಿನಲ್ಲಿ ಮನವಿಗಳನ್ನು ಸಲ್ಲಿಸಲು ಅನುವು ಮಾಡಿಕೊಡಬಹುದು.
ಈ ರೀತಿಯ ಕ್ರಮಗಳು ಭಾಷೆಯ ಲಭ್ಯತೆಗೆ ಸಂಬಂಧಿಸಿದ ವಿಶಾಲವಾದ ಸಂವಿಧಾನಿಕ ಬದ್ಧತೆಗೆ ಅನುಗುಣವಾಗಿರುತ್ತವೆ. ಒಕ್ಕೂಟ ಅಥವಾ ರಾಜ್ಯದಲ್ಲಿ ಬಳಸುವ ಭಾಷೆಗಳಲ್ಲಿ ಕುಂದುಕೊರತೆಗಳ ನಿವಾರಣೆಗಾಗಿ ಮನವಿಗಳನ್ನು ಸಲ್ಲಿಸಲು ನಾಗರಿಕರು ಹಕ್ಕುದಾರರಾಗಿದ್ದಾರೆ ಎಂದು ವಿಧಿ 350 ಅವಕಾಶ ಒದಗಿಸುತ್ತದೆ. ವಿಧಿ 350A ಕೂಡ ರಾಜ್ಯಗಳು ಮತ್ತು ಸ್ಥಳೀಯ ಪ್ರಾಧಿಕಾರಗಳು ಭಾಷಾ ಅಲ್ಪಸಂಖ್ಯಾತರಿಗೆ ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣಕ್ಕಾಗಿ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಬೇಕು ಎಂದು ನಿರ್ದೇಶಿಸುತ್ತದೆ.
ಒಳಗೊಳ್ಳುವಿಕೆಯ ನೀತಿ
ಪ್ರಜಾಸತ್ತಾತ್ಮಕ ಮತ್ತು ಸಂವಿಧಾನಿಕ ವಿಧಾನಗಳ ಮೂಲಕ ಭಾಷಾ ಆಕಾಂಕ್ಷೆಗಳನ್ನು ಈಡೇರಿಸಬಹುದು ಎಂಬುದನ್ನು ಕರ್ನಾಟಕವು ತೋರಿಸಿಕೊಟ್ಟಿದೆ. ಅದೇ ತತ್ವವನ್ನು ಉರ್ದುವಿಗೂ ವಿಸ್ತರಿಸಬೇಕಿದೆ. ಈ ರೀತಿಯಾಗಿ ಮನ್ನಣೆ ನೀಡುವುದರಿಂದ ರಾಜ್ಯವು ತನ್ನ ಎಲ್ಲಾ ಭಾಷಾ ಸಮುದಾಯಗಳಿಗೆ ಸಮಾನವಾಗಿ ಸೇರಿದೆ ಎಂಬ ಬಲವಾದ ಸಂದೇಶವನ್ನು ಕಳುಹಿಸುತ್ತದೆ.
ಕನ್ನಡವು ಕರ್ನಾಟಕದ ಪ್ರಮುಖ ಅಧಿಕೃತ ಭಾಷೆಯಾಗಿ ಮುಂದುವರಿಯುವುದರ ಜೊತೆಗೆ; ಜನಸಂಖ್ಯೆ, ಬೇಡಿಕೆ ಮತ್ತು ಆಡಳಿತಾತ್ಮಕ ಕಾರ್ಯಸಾಧ್ಯತೆಗೆ ಅನುಗುಣವಾಗಿ ಉರ್ದುವಿಗೆ ಸೂಕ್ತ ಅಧಿಕೃತ ಸ್ಥಾನಮಾನ ದೊರೆಯುವಂತೆ ಮಾಡಬೇಕಿದೆ.
ಸಾಂಕೇತಿಕತೆಯಿಂದ ಸಮಾನ ಪೌರತ್ವದವರೆಗೆ
ಉರ್ದುವಿನ ಮೇಲಿನ ಜವಾಬ್ದಾರಿಯನ್ನು ಈ ಕೆಳಗಿನ ವಸ್ತುನಿಷ್ಠ ಮಾನದಂಡಗಳ ಮೇರೆಗೆ ಪರಿಶೀಲಿಸಬಹುದು: ಮಾತನಾಡುವವರ ಸಂಖ್ಯೆ, ಭೌಗೋಳಿಕ ಸಾಂದ್ರತೆ, ಐತಿಹಾಸಿಕ ಉಪಸ್ಥಿತಿ, ಶೈಕ್ಷಣಿಕ ಅವಶ್ಯಕತೆಗಳು, ಆಡಳಿತಾತ್ಮಕ ಕಾರ್ಯಸಾಧ್ಯತೆ ಮತ್ತು ಸಂವಿಧಾನಿಕ ಅವಕಾಶಗಳು.
2011ರ ಜನಗಣತಿ: ಕರ್ನಾಟಕದಲ್ಲಿ ಅಂದಾಜು 6.4 ಮಿಲಿಯನ್ ಉರ್ದು ಮಾತೃಭಾಷೆ ಮಾತನಾಡುವವರಿದ್ದಾರೆ. ಹೊಸ ಸಮೀಕ್ಷೆಯ ಭಾಷಾ ದತ್ತಾಂಶವು ಪ್ರಕಟವಾಗುವವರೆಗೆ ಜನಗಣತಿಯ ಈ ಅಂಕಿಅಂಶವೇ ಸೂಕ್ತ ಅಧಿಕೃತ ಮಾನದಂಡವಾಗಿ ಉಳಿದಿದೆ.
ಶಿಕ್ಷಣ ಸಂಸ್ಥೆಗಳು
ಕರ್ನಾಟಕದಲ್ಲಿ ಉರ್ದುವಿಗೆ ಅಧಿಕೃತ ಭಾಷೆಯ ಸ್ಥಾನಮಾನವನ್ನು ನೀಡುವುದರ ಪರ ವಾದವು ಅದರ ವ್ಯಾಪಕ ಶೈಕ್ಷಣಿಕ ಉಪಸ್ಥಿತಿಯಿಂದ ಮತ್ತಷ್ಟು ಗಟ್ಟಿಯಾಗುತ್ತದೆ. ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ 2024-25ರ ದತ್ತಾಂಶದ ಪ್ರಕಾರ, ರಾಜ್ಯದಲ್ಲಿ 3,934 ಸರ್ಕಾರಿ ಉರ್ದು ಮಾಧ್ಯಮ ಶಾಲೆಗಳು ಮತ್ತು 302 ಅನುದಾನಿತ ಉರ್ದು ಮಾಧ್ಯಮ ಸಂಸ್ಥೆಗಳಿವೆ. ಒಟ್ಟು ಸರ್ಕಾರಿ ಮತ್ತು ಅನುದಾನಿತ ಉರ್ದು ಮಾಧ್ಯಮ ಶಾಲೆಗಳ ಸಂಖ್ಯೆ 4,236 ತಲುಪುತ್ತದೆ. ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಾದ್ಯಂತ ಹರಡಿರುವ ಈ ವ್ಯಾಪಕ ಜಾಲವು, ಉರ್ದು ಕೇವಲ ಸಾಂಸ್ಕೃತಿಕ ಸ್ಮರಣೆಯ ಭಾಷೆಯಲ್ಲ, ಬದಲಿಗೆ ಕರ್ನಾಟಕದಲ್ಲಿ ಶಿಕ್ಷಣ ಮತ್ತು ಸಾರ್ವಜನಿಕ ಜೀವನದ ಜೀವಂತ ಭಾಷೆಯಾಗಿದೆ ಎಂಬುದನ್ನು ಒತ್ತಿಹೇಳುತ್ತದೆ.
ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು
ಜೂನ್ 7, 2026ರಂತೆ ಭಾರತದ ಪತ್ರಿಕಾ ರಿಜಿಸ್ಟ್ರಾರ್ ಜನರಲ್ ಪ್ರಕಾರ, ಕರ್ನಾಟಕದಲ್ಲಿ 231 ನೋಂದಾಯಿತ ಉರ್ದು ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಿವೆ. ಡೈಲಿ ಸಲಾರ್, ಸಲಾರ್ ವೀಕ್ಲಿ, ದಿ ಡೈಲಿ ಪಾಸ್ಬನ್, ನಶೇಮಾನ್ ವೀಕ್ಲಿ ಮತ್ತು ರಾಷ್ಟ್ರೀಯ ಸಹರ್ ದೈನಿಕವು ಬೆಂಗಳೂರಿನ ಪ್ರಮುಖ ಪ್ರಕಟಣೆಗಳಾಗಿವೆ. ಶಿವಮೊಗ್ಗ, ಬೆಳಗಾವಿ, ಕಲಬುರ್ಗಿ ಮತ್ತು ಬೀದರ್ ಉರ್ದು ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಪ್ರಕಟವಾಗುವ ಇತರ ಶೈಕ್ಷಣಿಕ ಕೇಂದ್ರಗಳಾಗಿವೆ.
ಒಳಗೊಳ್ಳುವ ಸ್ವರೂಪ
ಕರ್ನಾಟಕದಲ್ಲಿ ಉರ್ದುವಿನ ಇತಿಹಾಸವು ಈ ಭಾಷೆಯು ಕೇವಲ ಒಂದು ಸಮುದಾಯಕ್ಕೆ ಮಾತ್ರ ಪ್ರತ್ಯೇಕವಾಗಿ ಸೇರಿದೆ ಎಂಬ ಕಲ್ಪನೆಗೆ ಸವಾಲು ಹಾಕುತ್ತದೆ. ಹೆಸರಾಂತ ಕನ್ನಡ ಸಾಹಿತಿ ಡಾ. ಪಂಚಾಕ್ಷರಿ ಹಿರೇಮಠ ಅವರು ಕನ್ನಡ, ಉರ್ದು ಮತ್ತು ಹಿಂದಿಯಲ್ಲಿ ಬರೆದಿದ್ದಾರೆ. ಖುರ್ರತುಲೈನ್ ಹೈದರ್ ಅವರ ಉರ್ದು ಸಣ್ಣ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಕ್ಕಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಮುದ್ದಣ್ಣ ಮಂಝರ್, ರಾಘವೇಂದ್ರ ರಾವ್ ಜುಜ್ಬ್ ಮತ್ತು ಸಂವರ್ತ ಸಾಹಿಲ್ ಸೇರಿದಂತೆ ಇತರ ಕರ್ನಾಟಕದ ಲೇಖಕರು ಕೂಡ ಕನ್ನಡ ಮತ್ತು ಉರ್ದು ಎರಡರಲ್ಲೂ ಕೆಲಸ ಮಾಡುವ ಬರಹಗಾರರು ಎಂದು ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಲ್ಪಟ್ಟಿದ್ದಾರೆ.
ಇದಲ್ಲದೆ, ರಾಯಚೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಉರ್ದು ಪಠ್ಯಕ್ರಮವು ಮುದ್ದಣ್ಣ ಮಂಝರ್ ಅವರನ್ನು ಉರ್ದು ಕಾವ್ಯಕ್ಕೆ ಮುಸ್ಲಿಮೇತರ ಕೊಡುಗೆದಾರರಲ್ಲಿ ಒಬ್ಬರಾಗಿ ಸ್ಪಷ್ಟವಾಗಿ ಗುರುತಿಸುತ್ತದೆ.
ಕರ್ನಾಟಕದಲ್ಲಿ ಉರ್ದುವಿನ ಸಾಹಿತ್ಯಿಕ ಇತಿಹಾಸವು ಯಾವುದೇ ಏಕೈಕ ಧರ್ಮದ ಸಮುದಾಯದ ಸ್ವತ್ತು ಆಗಿರುವುದಕ್ಕಿಂತ ಹೆಚ್ಚಾಗಿ ರಾಜ್ಯದ ಸಮ್ಮಿಶ್ರ ಸಾಂಸ್ಕೃತಿಕ ಪರಂಪರೆಯ ಭಾಗವಾಗಿದೆ.
ಇದು ಪತ್ರಿಕೋದ್ಯಮ ಮತ್ತು ಸಾಹಿತ್ಯದಲ್ಲಿನ ಉಪಸ್ಥಿತಿಯ ಜೊತೆಗೆ, ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಉರ್ದು ಗಣನೀಯ ಸಾಂಸ್ಥಿಕ ಉಪಸ್ಥಿತಿಯನ್ನು ಹೊಂದಿದೆ ಎಂಬುದನ್ನು ತೋರಿಸುತ್ತದೆ.
ಅಂತಿಮವಾಗಿ, ಉರ್ದುವಿಗೆ ಮನ್ನಣೆ ನೀಡುವುದು ಕೇವಲ ಒಂದು ಸಮುದಾಯಕ್ಕೆ ನೀಡುವ ಪರಿಗಣನೆ ಅಲ್ಲ. ಇದು ಕರ್ನಾಟಕದ ದೀರ್ಘಕಾಲದ ಭಾಷಾ ಸಹಬಾಳ್ವೆಯ ಪರಂಪರೆಯ ದೃಢೀಕರಣವಾಗಿದೆ. ಹಾಗೆಯೇ ಭಾರತದ ವೈವಿಧ್ಯತೆಯು ಅಳಿಸಿಹಾಕಬೇಕಾದದ್ದಲ್ಲ, ಬದಲಿಗೆ ಪ್ರೋತ್ಸಾಹಿಸಬೇಕಾದದ್ದು ಎಂಬ ಸಂವಿಧಾನಿಕ ಭರವಸೆಯಾಗಿದೆ.












