ಸನ್ಮಾರ್ಗ ವಾರ್ತೆ
ವಿಶಾಖಪಟ್ಟಣದಲ್ಲಿ ಭಾರತೀಯ ನೌಕಾಪಡೆಯ ಅಧಿಕಾರಿಗಳು ಹನಿಟ್ರ್ಯಾಪ್ಗೆ ಸಿಲುಕಿ ರಕ್ಷಣಾ ರಹಸ್ಯಗಳನ್ನು ಸೋರಿಕೆ ಮಾಡಿದ್ದರು ಎಂಬ ಮಾಹಿತಿ ಇತ್ತೀಚೆಗೆ ಹೊರಬಿದ್ದಿತ್ತು. ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ತಾನಿ ಮಹಿಳಾ ಏಜೆಂಟ್ಗಳ ಹನಿಟ್ರ್ಯಾಪ್ಗೆ ಬಿದ್ದು ನೌಕಾಪಡೆಯ ಅತ್ಯಂತ ಗೌಪ್ಯ ಮಾಹಿತಿಯನ್ನು ಹಂಚಿಕೊಂಡಿದ್ದ ಪೂರ್ವ ನೌಕಾಪಡೆಯ ನಾವಿಕ ಪ್ರದೀಪ್ ಮುಖರ್ಜಿ ಮತ್ತು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಚಾಲಕ ಅನ್ನಂ ಸಾಯಿ ವರಪ್ರಸಾದ್ ಅವರನ್ನು ಆಂಧ್ರಪ್ರದೇಶ ಕೌಂಟರ್ ಇಂಟೆಲಿಜೆನ್ಸ್ ಸೆಲ್ ಬಂಧಿಸಿದೆ. ಪಾಕಿಸ್ತಾನಿ ಗುಪ್ತಚರ ಕಾರ್ಯಕರ್ತರಿಗೆ ಕಡಲ ಭದ್ರತಾ ಮಾಹಿತಿಯನ್ನು ಸೋರಿಕೆ ಮಾಡಿದಕ್ಕೆ ಸಂಬಂಧಿಸಿದಂತೆ ಇದುವರೆಗೆ 13 ನೌಕಾಪಡೆ ಅಧಿಕಾರಿಗಳನ್ನು ವಿಚಾರಣೆ ನಡೆಸಲಾಗಿದೆ. 18 ಜನರು ಶಂಕೆಯಲ್ಲಿದ್ದಾರೆ.
ಆದರೆ ಇದು ಪ್ರತ್ಯೇಕ ಘಟನೆಯಲ್ಲ ಎಂದು ವರದಿಗಳು ಸೂಚಿಸುತ್ತಿವೆ. 2019 ರ ಡಿಸೆಂಬರ್ನಲ್ಲಿ ‘ಆಪರೇಷನ್ ಡಾಲ್ಫಿನ್ಸ್ ನೋಸ್’ (Operation Dolphin’s Nose) ಭಾಗವಾಗಿ ಆಂಧ್ರಪ್ರದೇಶ ಸಿಐಸಿ (CIC) ಇದೇ ರೀತಿಯ ಗೂಢಚಾರಿಕೆ ಜಾಲವನ್ನು ಪತ್ತೆ ಹಚ್ಚಿತ್ತು. ಪಾಕಿಸ್ತಾನಿ ಗುಪ್ತಚರ ಇಲಾಖೆಯೊಂದಿಗೆ ನಂಟು ಹೊಂದಿದ್ದಾರೆ ಹಾಗೂ ಆನ್ಲೈನ್ ಮೂಲಕ ಮಹಿಳೆಯರೊಂದಿಗೆ ಸಲುಗೆ ಬೆಳೆಸಿ ಪಾಕಿಸ್ತಾನಕ್ಕೆ ಸಂವೇದನಾತ್ಮಕ ಮಾಹಿತಿಯನ್ನು ರವಾಯಿಸಿದ್ದಾರೆ ಎಂಬ ಆರೋಪದ ಮೇಲೆ ಏಳು ನೌಕಾಪಡೆ ನಾವಿಕರು ಮತ್ತು ಮುಂಬೈ ಮೂಲದ ಹವಾಲಾ ಆಪರೇಟರ್ ಸೇರಿದಂತೆ ಹದಿನೈದು ಜನರನ್ನು ಬಂಧಿಸಲಾಗಿತ್ತು.
ಕಳೆದ ಮೇ ತಿಂಹಳಲ್ಲಿ, ರಕ್ಷಣಾ ಮಾಹಿತಿ ಮತ್ತು ದಾಖಲೆಗಳನ್ನು ಪಾಕಿಸ್ತಾನಿ ಏಜೆಂಟ್ಗೆ ಸೋರಿಕೆ ಮಾಡಿದ ಆರೋಪದ ಮೇಲೆ ದೆಹಲಿಯಲ್ಲಿ ವಾಯುಪಡೆಯ ವಿಂಗ್ ಕಮಾಂಡರ್ ಅವರನ್ನು ಬಂಧಿಸಲಾಗಿತ್ತು. ಸಾಮಾಜಿಕ ಜಾಲತಾಣಗಳ ಮೂಲಕ ಅವರಿಗೆ ಹನಿಟ್ರ್ಯಾಪ್ ಮಾಡಲಾಗಿದ್ದು, ಮಾಹಿತಿ ರವಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಧಿಕೃತ ರಹಸ್ಯ ಕಾಯ್ದೆಯಡಿ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಕಳೆದ ವರ್ಷದ ಮಾರ್ಚ್ನಲ್ಲಿ, ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳವು (ATS) ಫಿರೋಜಾಬಾದ್ ಮತ್ತು ಕಾನ್ಪುರದ ಆಯುಧ ಕಾರ್ಖಾನೆಗಳ ಉದ್ಯೋಗಿಗಳು ಪಾಕಿಸ್ತಾನಿ ಗುಪ್ತಚರ ಇಲಾಖೆಗೆ ಗೌಪ್ಯ ಮಾಹಿತಿಯನ್ನು ಸೋರಿಕೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಿತ್ತು. ನೇಹಾ ಶರ್ಮಾ ಎಂಬ ಹೆಸರಿನ ನಕಲಿ ಫೇಸ್ಬುಕ್ ಪ್ರೊಫೈಲ್ ಮೂಲಕ ಅವರಿಗೆ ಹನಿಟ್ರ್ಯಾಪ್ ಮಾಡಲಾಗಿತ್ತು. ಮಹಾರಾಷ್ಟ್ರದಲ್ಲಿ ನೌಕಾಪಡೆಯ ಗುತ್ತಿಗೆದಾರರೊಬ್ಬರಿಗೆ ಕೆಲಸ ಮಾಡುತ್ತಿದ್ದ ಇಂಜಿನಿಯರ್ ಕೂಡ ಇದೇ ರೀತಿ ಸಿಲುಕಿ ನಂತರ ಬಂಧನಕ್ಕೊಳಗಾಗಿದ್ದರು.
2023 ರಲ್ಲಿ ಮಹಾರಾಷ್ಟ್ರ ಎಟಿಎಸ್ನಿಂದ ಡಿಆರ್ಡಿಒ (DRDO) ವಿಜ್ಞಾನಿ ಪ್ರದೀಪ್ ಕುರುಳ್ಕರ್ ಅವರ ಬಂಧನವು ಸಂಚಲನ ಮೂಡಿಸಿತ್ತು. ಬ್ರಹ್ಮೋಸ್ ಕ್ಷಿಪಣಿ ಯೋಜನೆಗೆ ಸಂಬಂಧಿಸಿದ ರಕ್ಷಣಾ ಮಾಹಿತಿ ಮತ್ತು ರಹಸ್ಯ ವರದಿಗಳನ್ನು ವಾಟ್ಸಾಪ್ ಸಂದೇಶಗಳು ಹಾಗೂ ವೀಡಿಯೊ ಕರೆಗಳ ಮೂಲಕ ಸಾರಾ ದಾಸ್ ಗುಪ್ತಾ ಎಂಬವರು ಪಾಕಿಸ್ತಾನಿ ಏಜೆಂಟ್ಗೆ ರವಾಯಿಸಿರುವ ಪ್ರಕರಣ ಇದಾಗಿದೆ.
2022 ರ ಜುಲೈನಲ್ಲಿ, ರಾಜಸ್ಥಾನ ಪೊಲೀಸರು ಮಿಲಿಟರಿ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದ ಮೇಲೆ ಸೈನಿಕ ಶಾಂತಿಮೋಯ್ ರಾಣಾ ಅವರನ್ನು ಬಂಧಿಸಿದ್ದರು. ನಕಲಿ ಪ್ರೊಫೈಲ್ಗಳನ್ನು ಬಳಸಿ ಸಾಮಾಜಿಕ ಜಾಲತಾಣಗಳ ಮೂಲಕ ಈ ಮಾಹಿತಿಯನ್ನು ಸೋರಿಕೆ ಮಾಡಲಾಗಿತ್ತು. ಇದೇ ರೀತಿಯ ಪ್ರಕರಣದಲ್ಲಿ ದೆಹಲಿಯಲ್ಲಿ ವಾಯುಪಡೆಯ ಅಧಿಕಾರಿ ದೇವಿಂದ್ರ ಶರ್ಮಾ ಅವರನ್ನೂ ಬಂಧಿಸಲಾಗಿತ್ತು.
2018 ರಲ್ಲಿ, ಪಾಕಿಸ್ತಾನಕ್ಕಾಗಿ ಗೂಢಚಾರಿಕೆ ನಡೆಸಿದ ಆರೋಪದ ಮೇಲೆ ಬ್ರಹ್ಮೋಸ್ ಏರೋಸ್ಪೇಸ್ ಇಂಜಿನಿಯರ್ ನಿಶಾಂತ್ ಅಗರ್ವಾಲ್ ಅವರನ್ನು ಬಂಧಿಸಲಾಗಿತ್ತು. ಸಾಮಾಜಿಕ ಜಾಲತಾಣದ ಹನಿಟ್ರ್ಯಾಪ್ ಮೂಲಕ ದಾಖಲೆಗಳನ್ನು ಸೋರಿಕೆ ಮಾಡಲಾಗಿತ್ತು. 2024 ರಲ್ಲಿ ನಾಗ್ಪುರ ನ್ಯಾಯಾಲಯವು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು, ಆದರೆ ಪಾಕಿಸ್ತಾನಗಕ್ಕೆ ಡೇಟಾ ರವಾಯಿಸಲಾಗಿದೆ ಎಂಬುದನ್ನು ಪ್ರಾಸಿಕ್ಯೂಷನ್ ಸಾಬೀತುಪಡಿಸಲು ಸಾಧ್ಯವಾಗಿಲ್ಲ ಎಂದು ಬಾಂಬೆ ಹೈಕೋರ್ಟ್ ಆ ಶಿಕ್ಷೆಯನ್ನು ರದ್ದುಗೊಳಿಸಿತು. ದಾಖಲೆಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ನ್ಯಾಯಾಲಯವು ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತು.












