ಚಾಟ್‌ಜಿಪಿಟಿ ಮತ್ತು ವೆಬ್‌ಸೈಟ್‌ಗಳಿಂದ ಮಾಹಿತಿ ಸಂಗ್ರಹಿಸಿ ನಕಲಿ ಲೇಖಕರ ಹೆಸರಿನಲ್ಲಿ ಪುಸ್ತಕ ಪ್ರಕಟಿಸಿದ್ದ ಪ್ರಕಾಶಕನ ಬಂಧನ

0
2

ಸನ್ಮಾರ್ಗ ವಾರ್ತೆ

ಚೆನ್ನೈ: ನಕಲಿ ಲೇಖಕರ ಹೆಸರಿನಲ್ಲಿ ಪುಸ್ತಕಗಳನ್ನು ತಯಾರಿಸಿ ತಮಿಳುನಾಡಿನ ಸರ್ಕಾರಿ ಗ್ರಂಥಾಲಯಗಳಿಗೆ ವಿತರಿಸಿದ್ದ ಪ್ರಕಾಶನ ಸಂಸ್ಥೆಯ ಮಾಲೀಕ ಆರ್. ಮೋಹನ್ ಅವರನ್ನು ಬಂಧಿಸಲಾಗಿದೆ. ತಮಿಳುನಾಡು ಜಾಗೃತ ದಳವು (ಡಿವಿಎಸಿ) ಅಕಲ್ ವಿಳಕ್ಕು ಪಬ್ಲಿಷರ್ಸ್ ಮಾಲೀಕರನ್ನು ಬಂಧಿಸಿದೆ. ಅವರು ಚಾಟ್‌ಜಿಪಿಟಿ (ChatGPT) ಸೇರಿದಂತೆ ವೆಬ್‌ಸೈಟ್‌ಗಳು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಂದ ಮಾಹಿತಿಯನ್ನು ಸಂಗ್ರಹಿಸಿ, ಪುಸ್ತಕಗಳನ್ನು ಸಿದ್ಧಪಡಿಸಿ ನಕಲಿ ಹೆಸರುಗಳಲ್ಲಿ ಪ್ರಕಟಿಸಿದ್ದರು.

ಸೋಮವಾರ ತಮಿಳುನಾಡಿನ ಏಳು ಸ್ಥಳಗಳಲ್ಲಿ ನಡೆದ ಜಾಗೃತ ದಳದ ತಪಾಸಣೆಯಲ್ಲಿ ಕೊಯಮತ್ತೂರಿನ ಪೆರಿಯಾರ್ ಅರಿವುಳಗಂ ಗ್ರಂಥಾಲಯದ ಪುಸ್ತಕ ಸಂಗ್ರಹದಲ್ಲಿ ಅಕ್ರಮಗಳು ಕಂಡುಬಂದಿವೆ. ಖ್ಯಾತ ತಮಿಳು ಬರಹಗಾರ ಪೆರುಮಾಳ್ ಮುರುಗನ್ ಅವರು ನವೆಂಬರ್ 6 ರಂದು ಪೆರಿಯಾರ್ ಅರಿವುಳಗಂ ಗ್ರಂಥಾಲಯಕ್ಕೆ ಭೇಟಿ ನೀಡಿದಾಗ ಪುಸ್ತಕಗಳಲ್ಲಿನ ಅಕ್ರಮಗಳ ಬಗ್ಗೆ ತಿಳಿದುಬಂದಿತ್ತು. ಗ್ರಂಥಾಲಯದಲ್ಲಿ ವಾಸ್ತವಿಕ ದೋಷಗಳು, ತಪ್ಪಾದ ಐತಿಹಾಸಿಕ ಮಾಹಿತಿ, ಸಂಶಯಾಸ್ಪದ ಲೇಖಕತ್ವ ಮತ್ತು ಕಪೋಲಕಲ್ಪಿತ ವಿಷಯಗಳನ್ನು ಹೊಂದಿರುವ 1,800 ಕ್ಕೂ ಹೆಚ್ಚು ಪುಸ್ತಕಗಳಿವೆ ಎಂದು ಅವರು ಬೆಟ್ಟು ಮಾಡಿದ್ದರು. ಬಳಿಕ ಈ ವಿಷಯ ರಾಜಕೀಯ ವಿವಾದಕ್ಕೆ ತಿರುಗಿತ್ತು.

ನಕಲಿ ಲೇಖಕರ ಹೆಸರಿನಲ್ಲಿ ಪ್ರಕಟಿಸಲಾದ ಪುಸ್ತಕಗಳ ವಿಷಯವು ಅಸ್ಪಷ್ಟವಾಗಿದೆ, ದಾರಿತಪ್ಪಿಸುವಂತಿದೆ ಮತ್ತು ಓದುಗರಿಗೆ ಹೆಚ್ಚಿನ ಪ್ರಯೋಜನವಿಲ್ಲದಂತಿದೆ ಎಂದು ಜಾಗೃತ ದಳ ಕಂಡುಕೊಂಡಿದೆ. ಇತರ ಕೃತಿಗಳಿಂದ ನಕಲು ಮಾಡಲಾದ ವಿಷಯವೂ ಪುಸ್ತಕಗಳಲ್ಲಿ ಕಂಡುಬಂದಿದೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ಪುಸ್ತಕಗಳನ್ನು ಖರೀದಿಸಲು ನಿಗದಿತ ಕಾರ್ಯವಿಧಾನಗಳನ್ನು ಅನುಸರಿಸದೆ ಅಧಿಕಾರಿಗಳು ಮತ್ತು ಪ್ರಕಾಶಕರು ಶಾಮೀಲಾಗಿದ್ದಾರೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ.

ಅಕಲ್ ವಿಳಕ್ಕು ಪಬ್ಲಿಷರ್ಸ್ ಮತ್ತು ಫೀನಿಕ್ಸ್ ಪಬ್ಲಿಕೇಷನ್ಸ್ ಎಂಬ ಎರಡು ಸಂಸ್ಥೆಗಳು ಒಂದೇ ವಿಳಾಸದಿಂದ ಕಾರ್ಯನಿರ್ವಹಿಸುತ್ತಿದ್ದವು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಎರಡೂ ಸಂಸ್ಥೆಗಳಿಂದ 1,857 ಪುಸ್ತಕಗಳನ್ನು ಖರೀದಿಸಲು ಫೆಬ್ರವರಿಯಲ್ಲಿ ಆದೇಶ ಹೊರಡಿಸಲಾಗಿತ್ತು. ಜಾಗೃತ ದಳದ ಪ್ರಕಾರ, ಇದಕ್ಕಾಗಿ ಒಟ್ಟು 1,74,01,162 ರೂಪಾಯಿಗಳನ್ನು ಪಾವತಿಸಲಾಗಿದೆ. ಪುಸ್ತಕ ಸಂಗ್ರಹಕ್ಕಾಗಿ ರಚಿಸಲಾದ ಶಿಫಾರಸು ಸಮಿತಿಯು ಸುಮಾರು 26,000 ಪುಸ್ತಕಗಳನ್ನು ಶಿಫಾರಸು ಮಾಡಿತ್ತು. ಆದಾಗ್ಯೂ, ಸಮಿತಿಯ ಶಿಫಾರಸುಗಳಲ್ಲಿ ಇಲ್ಲದ ಪುಸ್ತಕಗಳನ್ನು ಸಮನ್ವಯ ಸಮಿತಿಯು ಸೇರಿಸಿದೆ ಮತ್ತು ಇದನ್ನು ದಾಖಲೆಗಳಲ್ಲಿ ಸೇರಿಸಲಾಗಿಲ್ಲ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.