ಸನ್ಮಾರ್ಗ ವಾರ್ತೆ
ಬೆಳಗಾವಿ: ಖಾನಾಪುರ ತಾಲೂಕಿನ ಹಿರೇಹಟ್ಟಿಹೊಳಿ ಗ್ರಾಮದಲ್ಲಿ 2019 ರಲ್ಲಿ ಬಂದಂತಹ ಪ್ರವಾಹ ಪೀಡಿತ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಹ್ಯೂಮಾನಿಟೇರಿಯನ್ ರಿಲೀಫ್ ಸೊಸೈಟಿ (HRS) ವತಿಯಿಂದ ಸುಮಾರು 28 ಮನೆಗಳನ್ನು ನಿರ್ಮಿಸುವ ಹಿರೇಹಟ್ಟಿಹೊಳಿ ಪುನರ್ವಸತಿ ಯೋಜನೆಗೆ ನವೆಂಬರ್ 16ರಂದು ಚಾಲನೆ ನೀಡಲಾಯಿತು.
ಜಮಾಅತೆ ಇಸ್ಲಾಮೀ ಹಿಂದ್ನ ಕೇಂದ್ರ ಸಲಹಾ ಸಮಿತಿ ಸದಸ್ಯರಾದ ಮೌಲಾನಾ ಇಕ್ಬಾಲ್ ಮುಲ್ಲಾ ಅವರು ವಸತಿ ಯೋಜನೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಬೆಳಗಾವಿ ವಿಧಾನ ಪರಿಷತ್ ಸದಸ್ಯ ಶ್ರೀ ಚನ್ನರಾಜ ಹಟ್ಟಿಹೊಳಿ, “ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರು, ನಿರ್ಗತಿಕರು ಹಾಗೂ ವಿವಿಧ ಕಾರಣಗಳಿಂದ ಸಂಕಷ್ಟಕ್ಕೆ ಸಿಲುಕಿ ವಸತಿ ಸೌಲಭ್ಯವಿಲ್ಲದೆ ಬದುಕುತ್ತಿರುವ ಕುಟುಂಬಗಳಿಗೆ ಸೂರು ಕಲ್ಪಿಸುವುದು ಅತ್ಯಂತ ಪುಣ್ಯದ ಕಾರ್ಯವಾಗಿದೆ. ಪ್ರತಿಯೊಬ್ಬರೂ ಗೌರವಯುತವಾಗಿ ಬದುಕಲು ಸುರಕ್ಷಿತವಾದ ಮನೆಯ ಅಗತ್ಯವಿದೆ. ಸಂತ್ರಸ್ತ ಕುಟುಂಬಗಳ ಬದುಕಿನಲ್ಲಿ ಹೊಸ ಭರವಸೆ ಮೂಡಿಸುವ ನಿಟ್ಟಿನಲ್ಲಿ ಹ್ಯೂಮಾನಿಟೇರಿಯನ್ ರಿಲೀಫ್ ಸೊಸೈಟಿ ಕೈಗೊಂಡಿರುವ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀ ರುದ್ರಸ್ವಾಮೀಜಿ ಮಠ, ಬಿಳಕಿ-ಅವರೊಳ್ಳಿಯ ಶ್ರೀ ಶ್ರೀ ಚನ್ನಬಸವ ದೇವರು, ಮೌಲಾನ ಮುಷ್ತಾಕ್ ಅಶ್ರಫಿ – ಇಮಾಮ್ ಮತ್ತು ಖತೀಬ್, ನ್ಯೂ ಗಾಂಧಿ ನಗರ ಮಸೀದಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಯೋಜನೆಗೆ ಶುಭ ಹಾರೈಸಿದರು.
HRS ಕರ್ನಾಟಕದ ರಾಜ್ಯ ನಿರ್ದೇಶಕರಾದ ಕೆ.ಎಂ. ಅಶ್ರಫ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ HRS ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮರಕಡ, ಸಹಾಯಕ ಕಾರ್ಯದರ್ಶಿ ಹೈದರ್ ಅಲಿ, HRS ಬೆಳಗಾವಿ ವಲಯದ ವಲಯ ನಾಯಕ ಅಬ್ದುಲ್ ರಶೀದ್ ನದಾಫ್, HRS ಕರ್ನಾಟಕದ ಕಮಾಂಡರ್ ಅಮೀರ್ ಸಿದ್ದೀಕ್ ಹಾಗೂ HRS ಬೆಳಗಾವಿಯ ಗ್ರೂಪ್ ಲೀಡರ್ ಯಾಸೀನ್ ಮಕಾಂದಾರ್ ಉಪಸ್ಥಿತರಿದ್ದರು.














