ನಮ್ಮ ‘ಜೆನ್ ಝಿ’ಗಳಿಗೆ ‘ತುರ್ತು ಪರಿಸ್ಥಿತಿ’ ಅಲ್ಲ ಉತ್ತಮ ಪ್ರಜಾಸತ್ತಾತ್ಮಕ ವಾತಾವರಣ ಸಿಗಬೇಕು: ಶಶಿ ತರೂರ್

0
151

ಸನ್ಮಾರ್ಗ ವಾರ್ತೆ

ಮುಂಬೈ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಯನ್ನು ಒತ್ತಾಯಿಸಿ ಕಾಕ್ರೋಚ್ ಜನತಾ ಪಾರ್ಟಿ ಕರೆ ನೀಡಿದ್ದ ಜಂತರ್ ಮಂತರ್ ಪ್ರತಿಭಟನೆಯನ್ನು ತಡೆಯಲು ದೆಹಲಿಯಲ್ಲಿ ಪೊಲೀಸ್ ಮತ್ತು ಸೇನಾಪಡೆಯನ್ನು ನಿಯಮಿಸಿರುವುದನ್ನು ಹಾಗೂ ಕಠಿಣ ನಿರ್ಬಂಧಗಳನ್ನು ವಿಧಿಸಿರುವುದನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ತೀವ್ರವಾಗಿ ಟೀಕಿಸಿದ್ದಾರೆ. ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸದೆ ಜಾರಿಗೊಳಿಸಲಾಗಿದೆ ಮತ್ತು ನಮ್ಮ ಯುವ ಪೀಳಿಗೆಗೆ (ಜೆನ್ ಝಿ) ಇಂತಹ ‘ಎಮರ್ಜೆನ್ಸಿ’ಗಿಂತ ಉತ್ತಮವಾದ ಪ್ರಜಾಸತ್ತಾತ್ಮಕ ವಾತಾವರಣ ಸಿಗಬೇಕು ಎಂದು ಅವರು ಮುಕ್ತವಾಗಿ ಹೇಳಿದ್ದಾರೆ.

ರಾತ್ರಿ 2 ಗಂಟೆಗೆ ದೆಹಲಿಗೆ ಹಿಂತಿರುಗಿದ ನಂತರ ತಾನು ಕಂಡ ದೃಶ್ಯಗಳು ಬೆಚ್ಚಿಬೀಳಿಸುವಂತಿದ್ದವು ಎಂದು ಶಶಿ ತರೂರ್ ತಿಳಿಸಿದ್ದಾರೆ. ಪ್ರಮುಖ ಚೌಕಗಳಲ್ಲಿ ದೊಡ್ಡ ಕಾಂಕ್ರೀಟ್ ಬ್ಯಾರಿಕೇಡ್‌ಗಳನ್ನು ನಿರ್ಮಿಸಿರುವುದು, ರಸ್ತೆಗಳಲ್ಲಿ ಸಾಲುಗಟ್ಟಿ ನಿಂತಿರುವುದು, ಸುಮಾರು 22,000 ಪೊಲೀಸ್ ಮತ್ತು ಅರೆಸೇನಾ ಸಿಬ್ಬಂದಿಯ ನಿಯೋಜನೆ, 250 ರೈಲುಗಳ ರದ್ದು ಮತ್ತು 45 ಮೆಟ್ರೋ ನಿಲ್ದಾಣಗಳ ಮುಚ್ಚುವಿಕೆಯು ರಾಜಧಾನಿಯಲ್ಲಿ ಅಭೂತಪೂರ್ವ ಬಿಕ್ಕಟ್ಟನ್ನು ಸೃಷ್ಟಿಸಿದೆ ಎಂದು ಅವರು ಬೆಟ್ಟು ಮಾಡಿದರು.

“ದೆಹಲಿಯಲ್ಲಿ ಮಹಿಳೆಯರಿಗೆ ತೊಂದರೆಯಾಗುತ್ತಿರುವಾಗ, ಶಾಂತಿಯುತವಾಗಿ ಪ್ರತಿಭಟನೆ ಮಾಡಲು ಬರುವ ಜನರ ವಿರುದ್ಧ ಸರ್ಕಾರವು ಯಾವ ತುರ್ತು ಮತ್ತು ಭದ್ರತಾ ಕ್ರಮಗಳನ್ನು ತೋರಿಸುತ್ತಿದೆ?” ಎಂದು ತರೂರ್ ಪ್ರಶ್ನಿಸಿದರು. ಮಧ್ಯ ದೆಹಲಿಯಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿರುವುದನ್ನು ಜನರ ಸಂಚಾರ ಸ್ವಾತಂತ್ರ್ಯ ಮತ್ತು ಸಂವಹನ ಹಕ್ಕುಗಳನ್ನು ನಿರ್ಬಂಧಿಸುವ ಕಠಿಣ ಕ್ರಮ ಎಂದು ಅವರು ಬಣ್ಣಿಸಿದ್ದಾರೆ.

“ಚುನಾವಣಾ ಪ್ರಕ್ರಿಯೆಯ ಮೇಲೆ ಸಂಪೂರ್ಣ ವಿಶ್ವಾಸ ಹೊಂದಿರುವ ಸರ್ಕಾರವು ಜನರ ಪ್ರಶ್ನೆಗಳಿಂದ ಓಡಿಹೋಗಬಾರದು, ಬದಲಿಗೆ ಅವುಗಳನ್ನು ಸ್ವಾಗತಿಸಬೇಕು. ಸರ್ಕಾರದಿಂದ ಜನರಿಗೆ ಬೇಕಾಗಿರುವುದು ಸ್ಪಷ್ಟ ಉತ್ತರಗಳೇ ಹೊರತು ಲಾಠಿಚಾರ್ಜ್ ಅಲ್ಲ” ಎಂದು ಶಶಿ ತರೂರ್ ಸ್ಪಷ್ಟಪಡಿಸಿದರು.

ಪ್ರಸ್ತುತ ವಶದಲ್ಲಿರುವವರನ್ನು ತಕ್ಷಣವೇ ಬಿಡುಗಡೆ ಮಾಡಬೇಕಾಗುತ್ತದೆ. ಸೋಮವಾರ ಪ್ರತಿಭಟನಾಕಾರರು ಮತ್ತೆ ಬೀದಿಗಿಳಿದರೆ ಸರ್ಕಾರ ಏನು ಮಾಡಲು ಹೊರಟಿದೆ ಎಂದೂ ಅವರು ಪ್ರಶ್ನಿಸಿದರು. “ಪ್ರಜಾಪ್ರಭುತ್ವದ ಶಕ್ತಿಯನ್ನು, ಸರ್ಕಾರವನ್ನು ಪ್ರಶ್ನಿಸುವವರೊಂದಿಗೆ ಅದು ಹೇಗೆ ನಡೆದುಕೊಳ್ಳುತ್ತದೆ ಎಂಬುದರ ಮೂಲಕ ಅಳೆಯಲಾಗುತ್ತದೆ. ಬ್ಯಾರಿಕೇಡ್‌ಗಳನ್ನು ಹಾಕುವುದು ಮತ್ತು ಮುಚ್ಚುವುದು ಚುನಾವಣಾ ಆಯೋಗದ ಮೇಲೆ ಜನರ ನಂಬಿಕೆಯನ್ನು ಮರುಸ್ಥಾಪಿಸಲು ಸಾಧ್ಯವಿಲ್ಲ” ಎಂದೂ ಹೇಳಿದರು.