ಪ್ರಕಾಶ್ ಅಂಬೇಡ್ಕರ್ ಅವರಿಂದ ಸಿಜೆಪಿ ಪ್ರತಿಭಟನೆಗೆ ಬೆಂಬಲ; ಕೇಂದ್ರದ ಸರ್ವಾಧಿಕಾರಿ ಧೋರಣೆಗೆ ಖಂಡನೆ

0
168

ಸನ್ಮಾರ್ಗ ವಾರ್ತೆ

ಮುಂಬೈ: ಚುನಾವಣಾ ಆಯೋಗದ ವಿರುದ್ಧ ದೆಹಲಿಯಲ್ಲಿ ಸಿಜೆಪಿ (ಕಾಕ್ರೋಚ್ ಜನತಾ ಪಾರ್ಟಿ) ನಡೆಸುತ್ತಿರುವ ಪ್ರತಿಭಟನೆಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಶಾಂತಿಯುತ ಪ್ರತಿಭಟನೆಯನ್ನು ಹತೋಟಿಗೆ ತರಲು ಕೇಂದ್ರ ಸರ್ಕಾರವು ಸರ್ವಾಧಿಕಾರಿ ಧೋರಣೆಯನ್ನು ತಳೆದಿದೆ ಎಂದು ಅವರು ಆರೋಪಿಸಿದ್ದಾರೆ.

ದಕ್ಷಿಣ ಮುಂಬೈನ ಹುತಾತ್ಮ ಚೌಕ್‌ನಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ವಂಚಿತ್ ಬಹುಜನ ಅಘಾಡಿಯ ಅಧ್ಯಕ್ಷರೂ ಆಗಿರುವ ಪ್ರಕಾಶ್ ಅಂಬೇಡ್ಕರ್, ಸಂಚಾರ ನಿರ್ಬಂಧಗಳು ಮತ್ತು ಪೊಲೀಸ್ ಕ್ರಮಗಳ ಮೂಲಕ ಪ್ರತಿಭಟನೆ ನಡೆಸುವ ಸಾಂವಿಧಾನಿಕ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಕೇಂದ್ರ ಸರಕಾರವನ್ನು ತೀವ್ರವಾಗಿ ಟೀಕಿಸಿದರು.

ಈ ವಿಷಯದಲ್ಲಿ ವಿರೋಧ ಪಕ್ಷಗಳನ್ನು ಒಂದೆಡೆ ಸೇರಿಸಲು ಸಾಧ್ಯವಾಗದಿದ್ದಕ್ಕಾಗಿ ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರು. ಚುನಾವಣಾ ಲಾಭದ ದೃಷ್ಟಿಯಿಂದ ಮಾತ್ರ ಇದನ್ನು ನೋಡಬಾರದು ಮತ್ತು ರಾಹುಲ್ ಗಾಂಧಿ ಅವರು ಎಲ್ಲಾ ವಿರೋಧ ಪಕ್ಷಗಳನ್ನು ಹಾಗೂ ಸಂಘಟನೆಗಳನ್ನು ಪ್ರತಿಭಟನೆಗೆ ಆಹ್ವಾನಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಮುಂದಿನ ಚುನಾವಣೆಯಲ್ಲಿ ಯಾರನ್ನು ಆಯ್ಕೆ ಮಾಡಬೇಕೆಂದು ಮತದಾರರು ತೀರ್ಮಾನಿಸುತ್ತಾರೆ ಎಂದು ಅವರು ಸೇರಿಸಿದರು.

ಜನರು ದೆಹಲಿಗೆ ತಲುಪುವುದನ್ನು ತಡೆಯಲು ಸಾರಿಗೆ ವ್ಯವಸ್ಥೆಯನ್ನು ಉದ್ದೇಶಪೂರ್ವಕವಾಗಿ ಕಡಿತಗೊಳಿಸಲಾಗುತ್ತಿದೆ ಎಂಬುದು ಪ್ರಕಾಶ್ ಅಂಬೇಡ್ಕರ್ ಅವರ ಮುಖ್ಯ ಆರೋಪವಾಗಿದೆ. ರೈಲುಗಳನ್ನು ರದ್ದುಗೊಳಿಸುವ ಮೂಲಕ ಮತ್ತು ಮೆಟ್ರೋ ನಿಲ್ದಾಣಗಳನ್ನು ಮುಚ್ಚುವ ಮೂಲಕ ಮುಷ್ಕರವನ್ನು ದುರ್ಬಲಗೊಳಿಸಲು ಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು. ರಾಜಕೀಯ ಪಕ್ಷಗಳಿಗೆ ಪ್ರತಿಭಟಿಸುವ ಹಕ್ಕಿದೆ ಮತ್ತು ಅದನ್ನು ಈ ರೀತಿ ನಿಗ್ರಹಿಸುವುದು ದೌರ್ಜನ್ಯಕ್ಕೆ ಸಮಾನವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಬ್ಯಾರಿಕೇಡ್‌ಗಳನ್ನು ನಿರ್ಮಿಸಿ ಜನರನ್ನು ತಡೆಯುವುದು, ಕಿಲೋಮೀಟರ್‌ಗಟ್ಟಲೆ ನಡೆಸುವಂತೆ ಮಾಡುವುದು ಹಾಗೂ ನೋಟೀಸ್ ಮತ್ತು ಬಂಧನಗಳ ಮೂಲಕ ಭಯ ಹುಟ್ಟಿಸುವುದು ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ ಎಂದು ಅವರು ಸೇರಿಸಿದರು.

“ನೀವು ಈ ದೇಶದ ಮಾಲೀಕರಲ್ಲ, ಐದು ವರ್ಷಗಳ ಅವಧಿಗೆ ಜನರಿಂದ ಆಯ್ಕೆಯಾದವರು. ನೀವು ಶಾಂತಿಯುತವಾಗಿ ಆಡಳಿತ ನಡೆಸಬೇಕು. ನೀವು ಸರ್ವಾಧಿಕಾರದ ಹಾದಿಯಲ್ಲಿ ಸಾಗಬಾರದು, ಹೋರಾಟ ನಡೆಸಲು ಅವಕಾಶ ನೀಡಬೇಕು ಮತ್ತು ಜನರು ಹೇಳುವುದನ್ನು ಕೇಳಬೇಕು” ಎಂದು ಅವರು ಸರ್ಕಾರಕ್ಕೆ ಆಗ್ರಹಿಸಿದರು.

ಬಂಧನದ ಭಯಕ್ಕೆ ಹೆದರಿ ಹಿಂದೆ ಸರಿಯದಂತೆ ಸಿಜೆಪಿ ಸಂಚಾಲಕ ಅಭಿಜಿತ್ ದಿಪ್ಕೆ ಅವರಿಗೆ ಪ್ರಕಾಶ್ ಅಂಬೇಡ್ಕರ್ ತಿಳಿಸಿದರು. ಮತದಾರರ ನೋಂದಣಿಗೆ ಬಳಸುವ ನಮೂನೆ 6 ರಲ್ಲಿ ಮಾಡಲಾದ ಬದಲಾವಣೆಗಳು ಮತ್ತು ಮತದಾರರ ಪಟ್ಟಿಯ ವಿಶೇಷ ಪರಿಶೀಲನೆಯಲ್ಲಿ ನಡೆದ ಅಕ್ರಮಗಳ ಹೊಣೆ ಹೊತ್ತು ಮುಖ್ಯ ಚುನಾವಣಾ ಆಯುಕ್ತರು ರಾಜೀನಾಮೆ ನೀಡಬೇಕೆಂದು ಸಿಜೆಪಿ ಪ್ರತಿಭಟನೆ ಒತ್ತಾಯಿಸುತ್ತಿದೆ. ಬಂಧನಕ್ಕೊಳಗಾದರೂ, ಎಫ್‌ಐಆರ್ ದಾಖಲಾದರೂ ಅಥವಾ ಜೈಲಿಗೆ ತೆರಳಬೇಕಾಗಿ ಬಂದರೂ ಕೊನೆಯವರೆಗೂ ಹೋರಾಟವನ್ನು ಮುಂದುವರಿಸುವಂತೆ ಅಭಿಜಿತ್‌ ದಿಪ್ಕೆ ಅವರಿಗೆ ಪ್ರಕಾಶ್ ಅಂಬೇಡ್ಕರ್ ಸಲಹೆ ನೀಡಿದರು.

ತುರ್ತು ಪರಿಸ್ಥಿತಿ ಮತ್ತು ಮಂಡಲ್ ಕಮಿಷನ್ ಪ್ರತಿಭಟನೆಗಳ ಸಮಯದಲ್ಲಿಯೂ ಇಷ್ಟೊಂದು ತೀವ್ರವಾದ ನಿಗ್ರಹ ನಡೆಯಲಿಲ್ಲ ಎಂದು ಅವರು ಬೆಟ್ಟು ಮಾಡಿದರು. ಇಂತಹ ಸರ್ವಾಧಿಕಾರಿ ಧೋರಣೆಗಳು ಮುಂದುವರಿದರೆ ಪ್ರಜಾಸತ್ತಾತ್ಮಕ ಸಂಸ್ಥೆಗಳಿಗೆ ಅಪಾಯ ಕಾಯ್ದಿದೆ ಮತ್ತು ಭಾರಿ ಅಶಾಂತಿಗೆ ಕಾರಣವಾಗಲಿದೆ ಎಂದು ಅವರು ಎಚ್ಚರಿಸಿದರು.